ಮಂಗಳವಾರ, ಮಾರ್ಚ್ 18, 2008

ನೀವು ಇಷ್ಟು ಓಲ್ಡ್ .....

ನನ್ನನ್ನು ನೋಡಿದವರು ಯಾರೂ ನನಗೆ ವಯಸ್ಸು ೩೪ ಎಂದರೆ ನಂಬಲು ಸಾಧ್ಯವೇ ಇಲ್ಲ. ಹುಬ್ಬೇರಿಸುವವರೇ ಹೆಚ್ಚು. ಸಂಶಯದ ನಗು ಬೀರುವವರು ಇನ್ನೂ ಹೆಚ್ಚು. ೨೫ರ ತರುಣನಂತೆ ನಾನೇನು ಕಾಣುತ್ತಿಲ್ಲ ಬದಲಾಗಿ ೪೫ರ ವಯಸ್ಕನಂತೆ ಕಾಣುತ್ತೇನೆ! ಮದುವೆಯ ಮೊದಲು, ನಾನಿನ್ನೂ ಅವಿವಾಹಿತ ಎಂದರೆ 'ತಮಾಷೆ ಮಾಡ್ಬೇಡಿ' ಎನ್ನುವವರೇ ಎಲ್ಲರೂ.

ಬೆಂಗಳೂರಿನಿಂದ ಪ್ರಶಾಂತ್ ಮತ್ತು ಶ್ರೀಕಾಂತ್ ಉಡುಪಿಗೆ ಬಂದಿದ್ದರು. ಭೇಟಿಯಾಗೋಣವೆಂದಾಗ ಅವರು ತಂಗಿದ್ದ ಹೋಟೇಲಿಗೆ ತೆರಳಿ ಕಾಯತೊಡಗಿದೆ. ನನ್ನನ್ನು ಕಂಡು ಅವರಿಬ್ಬರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಯೋಚಿಸತೊಡಗಿದೆ. ನಾನು 'ರಾಜೇಶ್' ಇರಲಾರೆನು ಎಂದು ಬೇರೆ ಯಾರಿಗಾದರೂ ಅವರ ಕಣ್ಣುಗಳು ಹುಡುಕಬಹುದು ಅಥವಾ ಇಲ್ಲಿ ಬೇರೆ ಯಾರೂ ಇಲ್ಲ ಆದ್ದರಿಂದ ಇತನೇ ರಾಜೇಶ್ ಎಂದು ಅವರು ನನ್ನನ್ನು ಮಾತನಾಡಿಸಬಹುದು ಎಂಬ ೨ ಸಾಧ್ಯತೆಗಳ ಬಗ್ಗೆ ಯೋಚಿಸತೊಡಗಿದೆ.

ಹಾಗೇನೇ ಆಯಿತು. ಮೊದಲು ಬಂದ ಪ್ರಶಾಂತ್, ನನ್ನನ್ನು ಕಂಡು, ನಾನು ರಾಜೇಶ್ ಇರಲಾರೆನು ಎಂದು ನೇರವಾಗಿ ಕೌಂಟರ್ ಸಮೀಪ ರೂಮಿನ ಕೀ ಕೊಡಲು ತೆರಳಿದರು. ಅವರ ಹಿಂದೆ ಬಂದ ಶ್ರೀಕಾಂತ್, ಅಲ್ಲಿ ನನ್ನ ಹೊರತಾಗಿ ಬೇರೆ ಯಾರೂ ಇರಲಿಲ್ಲವಾದ್ದರಿಂದ....ನಿಧಾನವಾಗಿ ಒಂದೆರಡು ಹೆಜ್ಜೆ ಇಟ್ಟು...'ರಾಜೇಶ್...?' ಎಂದು ತನ್ನ ಬಹಳ ಮೃದು ದನಿಯಲ್ಲಿ ಕೇಳಿದರು. 'ಹೌದು..ರಾಜೇಶ್' ಎಂದು ಕೈ ಕುಲುಕಿದೆ. ಅಷ್ಟರಲ್ಲಿ ಸಮೀಪ ಬಂದ ಪ್ರಶಾಂತ್,'ನೀವು ಇಷ್ಟು ಓಲ್ಡ್ ಎಂದು ನಾನು ಕಲ್ಪಿಸಿರಲಿಲ್ಲ.....ನಿಮ್ಮ ವಾಯ್ಸ್ ಕೂಡಾ ತುಂಬಾ ಯಂಗ್ ಇದೆ...ಅದ್ದರಿಂದ ಫೋನಿನಲ್ಲಿ ಮಾತನಾಡುವಾಗ ನೀವು ಇಷ್ಟು ಓಲ್ಡ್ ಎಂಬ ಕಲ್ಪನೆ ಬರಲು ಸಾಧ್ಯವೇ ಇಲ್ಲ' ಎಂದರು.

ಇದೇನೂ ನನಗೆ ಹೊಸತಲ್ಲ. ನನ್ನ ಬಳಿ ದೂರವಾಣಿಯಲ್ಲಿ ಮಾತನಾಡಿ ನಂತರ ಭೇಟಿಯಾದಾಗ ಅವಾಕ್ಕಾಗುವುದು, ನನ್ನ 'ವೆರಿ ವೆರಿ ಸೀನಿಯರ್ ಅಂಕಲ್ ಲುಕ್' ಕಂಡು ಮದುವೆ ಹೆಣ್ಣುಗಳು ಪಲಾಯನ ಮಾಡಿದ್ದು, ಹೆಣುಮಕ್ಕಳ ಹೆತ್ತವರು, ನನ್ನ ಹೆತ್ತವರಲ್ಲಿ 'ನಿಮ್ಮ ಮಗನಿಗೆ ನಿಜವಾಗ್ಲೂ ಇಷ್ಟೇ ವಯಸ್ಸಾ' ಎಂದು ಸಂಶಯ ವ್ಯಕ್ತಪಡಿಸಿದ್ದು, ಇತ್ಯಾದಿಗಳನ್ನು ಕಳೆದ ಐದಾರು ವರ್ಷದಿಂದ ನೋಡಿ ಆನಂದಿಸುತ್ತಾ ಇದ್ದೇನೆ. ಆನಂದಿಸದೇ ಬೇರೆ ವಿಧಾನವೇ ಇಲ್ಲವೇ!!!

ಆದರೂ 'ವಾಯ್ಸ್ ಯಂಗ್' ಎಂದಾಗ ಮಾತ್ರ ಹಬ್ಬ.

8 ಕಾಮೆಂಟ್‌ಗಳು:

Hegde ಹೇಳಿದರು...

'ಹುಣಸೆ ಮುಪ್ಪಾದರೆ ಹುಳಿ ಮುಪ್ಪೆ?' ಎಂಬಂತೆ ಇದ್ದು ಬಿಡಿ.

Srikanth - ಶ್ರೀಕಾಂತ ಹೇಳಿದರು...

ನೀವು ನನ್ನನ್ನು ಮೊದಲು ಭೇಟಿಯಾದಾಗ "ನೀವು ಅಂದುಕೊಂಡಂತೆ ನಾನಿಲ್ಲ ಅಲ್ವಾ? ಬಹಳ ದೊಡ್ಡೋನಂತೆ ಕಾಣ್ತೀನಿ" ಎಂದು ಕೇಳಿದ್ದಿರಿ. ಅವತ್ತೇ ನಾನು ಈ ರೀತಿಯ ಅನುಭವಗಳು ನಿಮಗಾಗಿರಬೇಕು ಎಂದುಕೊಂಡೆ. ಇವತ್ತು ಅದು ನಿಜ ಎಂದು ಗೊತ್ತಾಯ್ತು!

ಇವತ್ತು ವಯಸ್ಸಾದ ಥರ ಕಾಣ್ತೀವಿ. ನಾಳೆ ನಿಜವಾಗಿಯೂ ವಯಸ್ಸಾಗತ್ತೆ! ಅದಿಕ್ಕೆ ಯಾರೇನು ಮಾಡಕ್ಕಾಗತ್ತೆ ಹೇಳಿ?

ನಿಮ್ಮ ಮನಸ್ಸಲ್ಲಿ ಇನ್ನೂ ತಾರುಣ್ಯದ ಉತ್ಸಾಹ ಇದೆ. ಅದು ಮುಖ್ಯ ಅಲ್ವಾ? ಮನಸ್ಸಿಗೆ (ಬುದ್ಧಿ ಅಲ್ಲ!!) ವಯಸ್ಸಾದರೇ ಕಷ್ಟವಾಗೋದು...

sp ಹೇಳಿದರು...

You write very nicely. I am older looking than my age. Who cares man?

Lets enjoy life .... what say?

ಸಿಂಧು Sindhu ಹೇಳಿದರು...

ಪ್ರೀತಿಯ ರಾಜೇಶ್,

ನಾನು ನಿಮ್ಮನ್ನು ನೋಡಿಲ್ಲ ಇನ್ನೂ. ಮತ್ತು ಕಾಯುತ್ತಾ ಇದ್ದೇನೆ ಭೇಟಿಯಾಗಲಿಕ್ಕೆ. ನೋಡಲಿಕ್ಕೆ ಹೇಗೇ (ಎಷ್ಟೇ ವಯಸ್ಸಾಗಿದ್ದರೂ) ಇದ್ದರೂ ನಿಮ್ಮ ಒಳಗಿನ ಚಾರಣೋತ್ಸಾಹದ ತಾರುಣ್ಯ, ಪ್ರಕೃತಿಯೆಡೆಗಿನ ಮಕ್ಕಳಂತ ಬೆರಗು.. ಮತ್ತು ಅದನ್ನೆಲ್ಲ ಎಲ್ಲರ ಜೊತೆ ಹಂಚಿಕೊಳ್ಳಹೊರಟ ಜೀವನಪ್ರೀತಿ..ನಂಗೆ ತುಂಬಾ ಇಷ್ಟ. ಗೊತ್ತು ನಂಗೆ ನೀವು ಹೇಗಿದೀರಿ ಅಂತ. ಹಾಗೇ ಇರ್ತೀರ.

ಪ್ರೀತಿಯಿಂದ
ಸಿಂಧು

Srik ಹೇಳಿದರು...

Hahaha... Thats an ineresting intro of our meet. But how we look and how we speak doesnt represent us, how we go about with life is all that matters. You are like a guru for every traveller, and travel-blogger in this part of the world.

Listening to your stories, and intersting account of 'chitte' 'patte' huli bETe(dont take it literally!) was an evening to remember.

There is something interesting feel when we meet those people whom we know very well, but has never seen. We would've given a face to those words and allegiances.. And when facing the reality, we need to replace those faces and smilys with the real one! Then we get to encounter such interesting incidents.

It was very nice meeting you, sir. And also, we departed reluctantly that evening. Hadnt the hotel people pushed us out, we would've continued talking for ever, I guess. :-)

Aravind GJ ಹೇಳಿದರು...

ರಾಜೇಶ್,
ನಾನು ನಿಮ್ಮನ್ನು ಇನ್ನೂ ನೋಡಿಲ್ಲ ಹಾಗೂ ನಿಮ್ಮ ಕೂಡ ಮಾತನಾಡಿಯೂ ಇಲ್ಲ. ಆದರೆ ನೋಡಲು ಹೇಗಿದ್ದೀರ ಎಂಬುದು ಮುಖ್ಯವಾಗುವುದಿಲ್ಲ. ರಾಜೇಶ್ ಎಂದಾಗ ನೆನಪಾಗುವುದು ನಿಮ್ಮ ಚಾರಣದ ಉತ್ಸಾಹ ಹಾಗೂ ಅದನ್ನು ಹಂಚಿಕೊಳ್ಳುವ ನಿಮ್ಮ ಲೇಖನಗಳು. ಈ ಉತ್ಸಾಹವಿದೆಯಲ್ಲ, ಅದೇ ಸಾಕು... ಯಾವಾಗಲೂ "ಯಂಗ್" ಆಗಿ ಇರೊಕ್ಕೆ. ವಿವಿಧ ಜಾಗಗಳನ್ನು ನೋಡಲು ನನಗೆ ನೀವೇ ಪ್ರೇರಣೆಯಾಗಿದ್ದೀರ.

ಪ್ರಶಾಂತ್ ಎಂ. ಹೇಳಿದರು...

ನಾನು ಹೇಳ್ಬೇಕು ಅಂತ ಅಂದುಕೊಂಡಿದ್ದನ್ನ ಮೇಲಿನ comments ಗಳಲ್ಲಿ ಎಲ್ರು ಹೇಳ್ಬಿಟ್ಟಿದ್ದಾರೆ... ನಿಮ್ಮ ಉತ್ಸಾಹ, ಅದನ್ನು ಹಂಚಿಕೊಳ್ಳುವ ರೀತಿಗೆ thumbs up :)

ನಿಮ್ಮನ್ನು, ಶ್ರೀಕಾಂತ್ (ಮಣಿಪಾಲ್) ಮತ್ತು ವೇಣು ವಿನೋದ್‍ರವರನ್ನು ಭೇಟಿಯಾಗಿದ್ದು ಒಳ್ಳೆಯ ಅನುಭವ...

@aravind, ನಾವಿಬ್ರೂ ಬೆಂಗಳೂರಿನಲ್ಲೇ ಇದ್ದೇವೆ ಒಮ್ಮೆ ಭೇಟಿಯಾಗೋಣವೆ??

ರಾಜೇಶ್ ನಾಯ್ಕ ಹೇಳಿದರು...

ಸ್ಪಂದಿಸಿದ ಎಲ್ಲ ಗೆಳೆಯರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆ ಇರಲಿ. ಆದರೆ ನಾನೇನು 'ತಲೆಬಿಸಿ' ಮಾಡಿಕೊಂಡಿಲ್ಲ. ಚಾರಣ, ದೇವಸ್ಥಾನಗಳ ಲೇಖನಗಳ ನಡುವೆ ಸ್ವಲ್ಪ ಬೇರೆ ರೀತಿಯ ಅನುಭವಗಳೂ ಇರಲಿ ಎಂದು ಚುಟುಕಾಗಿ 'ನೀವು ಇಷ್ಟು ಓಲ್ಡ್...' ಗೀಚಿದೆ.