ಭಾನುವಾರ, ಜನವರಿ 13, 2008

ಒಂದು ದಿನ - ೩ ಜಲಧಾರೆಗಳು

ಜುಲೈ ೨೦೦೪ರ ಅದೊಂದು ದಿನ ನಾನು, ಅರುಣಾಚಲ ಮತ್ತು ಅನಿಲ್ ಜಲಧಾರೆಯೊಂದನ್ನು ನೋಡಲು ಹಳ್ಳಿಯೊಂದಕ್ಕೆ ಬಂದಿದ್ದೆವು. ಹಳ್ಳದಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಜಲಪಾತಕ್ಕೆ ಚಾರಣ ಅಸಾಧ್ಯವೆಂದು ಗೊತ್ತಾಗಿ, ಅಲ್ಲೇ ಹಳ್ಳದ ದಂಡೆಯ ಮೇಲೆ ಕುಳಿತು ಕಾಲಹರಣ ಮಾಡತೊಡಗಿದೆವು. 'ಸಮೀಪದಲ್ಲಿರುವ ಈ ಮೂರೂ ಜಲಪಾತಗಳನ್ನು ಒಂದೇ ದಿನದಲ್ಲಿ ನೋಡಿದ್ರೆ ಹೇಗೆ..?' ಎಂಬ ಮಾತನ್ನು ಅನಿಲ್ ಮುಂದಿರಿಸಿದಾಗ ಕೂಡಲೇ ಒಪ್ಪಿಬಿಟ್ಟೆ. ನವೆಂಬರ್ ೧, ೨೦೦೪ ಎಂದು ದಿನಾಂಕವನ್ನೂ ಫಿಕ್ಸ್ ಮಾಡಿ ಅಲ್ಲಿಂದ ಹೊರಟೆವು.


ನವೆಂಬರ್ ೧, ೨೦೦೪ರಂದು ಮುಂಜಾನೆ ೭ಕ್ಕೆ ಕುಮಟಾದಿಂದ ಮೊದಲ ಜಲಪಾತದತ್ತ ತೆರಳಿದೆವು. ರಾಗಿಹೊಸಳ್ಳಿಯ ಶಾನಭಾಗ್ ರೆಸ್ಟೋರೆಂಟ್ ನಲ್ಲಿ ಉಪಹಾರ ಮುಗಿಸಿ, ಹೊಸೂರಿನ ಕೊನೆಯ ಮನೆ ತಲುಪಿದೆವು. ಈ ಮನೆಯಿಂದ ಸುಮಾರು ೪೦ ನಿಮಿಷ ನಡೆದರೆ ಸುಂದರ ಜಲಪಾತ ಗೋಚರಿಸುವುದು. ಸರಿಯಾಗಿ ೯ ಗಂಟೆಗೆ ನಾವು ಜಲಪಾತದ ಬಳಿ ತಲುಪಿದೆವು. ಸುಮಾರು ೧೨೦ ಅಡಿ ಎತ್ತರದಿಂದ ಧುಮುಕುವ ಈ ಜಲಪಾತದ ಬುಡಕ್ಕೆ ನವೆಂಬರ್ ಬಳಿಕ ಸಲೀಸಾಗಿ ತೆರಳಬಹುದು. ಅನಿಲ್ ದಿನದ ತನ್ನ ಮೊದಲ ಸ್ನಾನವನ್ನು ಮಾಡಿದ. ೧೦.೩೦ಕ್ಕೆ ಅಲ್ಲಿಂದ ಹೊರಟೆವು ಮಂಜುಗುಣಿಯತ್ತ.

ಮಂಜುಗುಣಿಯಲ್ಲಿರುವ ಸುಂದರ ಕೆರೆಯ ದಡದಲ್ಲಿ ಊಟ ಮಾಡಲು ಕುಳಿತೆವು. ಮಂಜುಗುಣಿಯ ದೇವಸ್ಥಾನದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಇದೆಯೆಂಬ ಮಾಹಿತಿ ನನ್ನಲ್ಲಿರಲಿಲ್ಲ. ಅರುಣಾಚಲ ನನಗೊಂದಷ್ಟು ಹಿಡಿಶಾಪ ಹಾಕಿದ. ಆತನಿಗೆ ಊಟ ಮಾಡುವುದೆಂದರೆ ಅಚ್ಚುಮೆಚ್ಚು. ನನ್ನೊಂದಿಗೆ ಹೀಗೆ ಚಾರಣಕ್ಕೆ ಬಂದಾಗ ಹೊಟ್ಟೆತುಂಬಾ ತಿನ್ನಲು ಸಿಗುವುದಿಲ್ಲ ಎಂಬುದು ಆತನ ಎಂದಿನ ದೂರು. ಆದ್ದರಿಂದ ಮನೆಯಿಂದ ೨೦ ಚಪಾತಿಗಳನ್ನು ಕಟ್ಟಿ ತಂದಿದ್ದ. ನಾನು ಮತ್ತು ಅನಿಲ್ ೬ ಚಪಾತಿಗಳನ್ನು ತಿಂದರೆ ಉಳಿದ ೧೪ನ್ನು ಅವನೊಬ್ಬನೇ ಮುಗಿಸಿದ. ಆದರೂ ಮತ್ತೆ ಊಟ ಊಟ ಎಂದು ಬಡಬಡಿಸುತ್ತಿದ್ದ. 'ಟೈಮಿಲ್ಲ' ಎಂದು ಸಬೂಬು ಹೇಳಿ, ಅಲ್ಲಿಂದ ಹೊರಟೆವು.

೧.೩೦ಕ್ಕೆ ಎರಡನೇ ಜಲಧಾರೆ ಇರುವ ಹಳ್ಳಿ ತಲುಪಿದ ನಾವು, ಅಲ್ಲೇ ಬಸ್ ಸ್ಟ್ಯಾಂಡ್ ಬಳಿ ಬೈಕುಗಳನ್ನಿರಿಸಿ ಜಲಪಾತದೆಡೆ ನಡೆಯಲಾರಂಭಿಸಿದೆವು. ಇಳಿಜಾರಿನ ಹಾದಿಯಲ್ಲಿ ೩೦ ನಿಮಿಷ ಕ್ರಮಿಸಿದ ಬಳಿಕ ಮನೆಯೊಂದರಿಂದ, 'ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ ಚಿಲಿಪಿಲಿ ಹಕ್ಕಿ ಹಾಡ್ಯಾವೆ...' ಎಂಬ ಕ್ಲಾಸಿಕ್ ಹಾಡು ರೇಡಿಯೋದಲ್ಲಿ ಬರುತ್ತಿತ್ತು. ಹಾಡನ್ನು ಕೇಳುತ್ತಾ ಮನೆಯಂಗಳದಲ್ಲಿ ನಿಂತೆವು. ಸುಂದರ ಸಿದ್ಧಿ ಹುಡುಗಿಯೊಬ್ಬಳು ಆ ಮನೆಯಿಂದ ಹೊರಬಂದು ಇನ್ನೂ ಸುಂದರ ನಗೆಯೊಂದನ್ನು ನಮ್ಮತ್ತ ಬೀರಿದಳು. ನಾವು ಮಾತು ಮರೆತು, ಕೇಳುತ್ತಿದ್ದ ಹಾಡನ್ನೂ ಮರೆತು ಆಕೆಯನ್ನೇ ದಿಟ್ಟಿಸಿ ನೋಡುತ್ತ ನಿಂತುಬಿಟ್ಟೆವು. ಮುಜುಗರಗೊಂಡ ಆಕೆ ಈ ಬಾರಿ ನಾಚಿಕೆಯ ನಗು ಕೊಟ್ಟು, ಮುಖವನ್ನು ಕೆಳಗೆ ಮಾಡಿ, ಕಣ್ಣುಗಳನ್ನು ಮಾತ್ರ ಮೇಲಕ್ಕೇರಿಸಿ ನಮ್ಮತ್ತ ನೋಡುತ್ತಾ, 'ಏನು' ಎಂದಾಗ ಧರೆಗಿಳಿದ ನಾವು, 'ನೀರು' ಎಂದು ತೊದಲಿದೆವು. ಈಗಲೂ ನಾವು ಮೂವ್ವರು ಆ ಕ್ಷಣವನ್ನು ಆಗಾಗ ನೆನೆಸಿಕೊಂಡು ನಗುವುದಿದೆ. ಸಿದ್ಧಿ ಜನಾಂಗದಲ್ಲೂ ಅಷ್ಟು ಸುಂದರ ಹುಡುಗಿ ಇರಬಹುದೆಂದು ನಾವು ಕಲ್ಪಿಸಿರಲಿಲ್ಲ.

ಹಾಗೆ ಮುಂದೆ ಸಾಗಿದಾಗ, ನಂತರದ ಮನೆಯ ದಣಪೆ(ಗೇಟು ಎನ್ನಬಹುದು) ಬಳಿ ಸಿದ್ಧಿ ಹುಡುಗನೊಬ್ಬ ನಮ್ಮತ್ತ ನೋಡುತ್ತ ನಿಂತಿದ್ದ. ದಾರಿ ಕೇಳಿದಾಗ ತನ್ನತ್ತ ಬರುವಂತೆ ಕೈ ಸನ್ನೆ ಮಾಡಿದ. ಆತನೇ, ಅಲ್ಲಿಂದ ಮುಂದೆ ನಮ್ಮ ಮಾರ್ಗದರ್ಶಿ 'ಭಾಸ್ಕರ ನಾರಾಯಣ ಸಿದ್ಧಿ'. ಭಾಸ್ಕರ ಕಿಲಾಡಿ ಹುಡುಗ ಮತ್ತು ಯಾವಾಗಲೂ ನಗುತ್ತಾ ಇರುತ್ತಾನೆ. ಸ್ವಲ್ಪ ಗಂಭೀರ ಸ್ವಭಾವದ ಅರುಣಾಚಲನಿಗೆ ಹಾಗೆ ಸುಮ್ನೆ ನಗುವರೆಂದರೆ ಆಗದು. 'ಇವನು ಯಾಕೆ ಸುಮ್ನೆ ನಗ್ತಾನೆ' ಎಂದು ನನ್ನಲ್ಲಿ ಅರುಣಾಚಲ ಕೇಳುತ್ತಾ ಇದ್ದ.

ಈ ಜಲಪಾತಕ್ಕೆ ಎರಡು ದಾರಿಗಳಿವೆ. ಮೊದಲ ದಾರಿಯಲ್ಲಿ, ಬಸ್ ಸ್ಟ್ಯಾಂಡ್ ಬಳಿಯಿರುವ ಹಳ್ಳವನ್ನು ದಾಟಿ, ಜಲಪಾತದ ಮೇಲ್ಭಾಗಕ್ಕೆ ಬಂದು ನಂತರ ಕಣಿವೆಯಲ್ಲಿ ಅಪಾಯಕರ ಹಾದಿಯಲ್ಲಿ ಇಳಿಯುವುದು. ಎರಡನೇ ದಾರಿಯಲ್ಲಿ, ಬಸ್ ಸ್ಟ್ಯಾಂಡ್ ಬಳಿಯಲ್ಲಿರುವ ಮಣ್ಣಿನ ಹಾದಿಯಲ್ಲಿ ಸ್ವಲ್ಪ ಕೆಳಗೆ ಸಾಗಿ ನಂತರ ಮನೆಯೊಂದರ ಬಳಿ ಕಾಲುದಾರಿಯಲ್ಲಿ ಮತ್ತಷ್ಟು ಕೆಳಗೆ ಸಾಗಿದರೆ ೩೦-೩೫ ನಿಮಿಷಗಳ ಬಳಿಕ 'ಮುಂಡಗನಮನೆ' ಎಂಬಲ್ಲಿ ಕಾಲುಹಾದಿ ಭಾಸ್ಕರನ ಮನೆಯಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿಂದ ಹಳ್ಳಗುಂಟ ಸಾಗಿದರೆ ಜಲಪಾತದ ಕೆಳಗೆ ತಲುಪಬಹುದು. ರಿಸ್ಕ್ ಕಡಿಮೆ ಇರುವಲ್ಲಿ ತೆರಳುವುದೇ ಲೇಸು ಎಂದು ನಾವು ಮುಂಡಗನಮನೆಯ ಹಾದಿ ತುಳಿದೆವು.

ಹಳ್ಳವನ್ನು ದಾಟಿ ಜಲಪಾತದೆಡೆ ಮುನ್ನಡೆದೆವು. ಕಿರಿದಾದ ಕಾಲುಹಾದಿಯಲ್ಲಿ ದಾರಿಮಾಡಿಕೊಂಡು ಹಳ್ಳಗುಂಟ ಭಾಸ್ಕರ ಮುನ್ನಡೆದ. ಹಾಗೆ ಆತನದೊಂದು ಪ್ರಶ್ನೆ ಅರುಣಾಚಲನಿಗೆ, 'ಅಷ್ಟ್ ದೂರ ಫಾರಿನ್ ನಿಂದ ಜನಾ ಬಂದು ನೋಡ್ ಹೋಗ್ತ್ರು, ಇಲ್ಲೇ ಹತ್ರ ಕುಮ್ಟಾದಿಂದ ನೀವ್ ಈವತ್ ಬಂದ್ರಿ?' ಮೊದಲೇ ಆತನೆಡೆ ಸಿಟ್ಟಿಗೆದ್ದಿದ್ದ ಅರುಣಾಚಲ, ಈ ಪ್ರಶ್ನೆಯಿಂದ ಮತ್ತಷ್ಟು ರೋಸಿಹೋದ.

ಆ ಕಾಲುದಾರಿಯಲ್ಲಿ ಸ್ವಲ್ಪ ನಡೆದು ನಂತರ ಹಳ್ಳದಲ್ಲಿಳಿದೆವು. ಹೆಚ್ಚೇನು ನೀರಿರಲಿಲ್ಲ. ಅನಾಯಾಸವಾಗಿ ಹಳ್ಳದಲ್ಲೇ ನಡೆದುಕೊಂದು ಬರಬಹುದು ಮತ್ತು ಕೆಲವು ಸಣ್ಣ ಪುಟ್ಟ ಗುಂಡಿಗಳನ್ನು ಸುಲಭವಾಗಿ ದಾಟಬಹುದು. ಆದರೆ ಇಂತಹ ಸ್ಥಳಗಳಲ್ಲಿ ನಡೆದು ಅಭ್ಯಾಸವಿಲ್ಲದ ಅರುಣಾಚಲ ಪ್ರತಿ ೫-೧೦ ಹೆಜ್ಜೆಗಳಿಗೊಮ್ಮೆ ಸಹಾಯ ಮಾಡುವಂತೆ ಬೊಬ್ಬಿಡುತ್ತಿದ್ದ. ಅರುಣಾಚಲ ಈ ಪರಿ ಮಕ್ಕಳಂತೆ ಹೆದರುವುದನ್ನು ಕಂಡು ಸ್ವಲ್ಪ ಹೊತ್ತು ಸುಮ್ಮನಿದ್ದ ಭಾಸ್ಕರ ನಂತರ ೬.೩ ಅಡಿ ಎತ್ತರವಿರುವ ಆತನೆಡೆ ಮತ್ತೊಂದು 'ಗೂಗ್ಲಿ'ಯನ್ನೆಸೆದ. 'ನೀವು ನೋಡ್ಲಿಕ್ಕೆ ದೊಡ್ಡವ್ರಿದ್ರೂನೇಯ ಬಹಳ ಹೆದರ್ತ್ರಲ್ರಾ, ಹೀ ಹೀ ಹೀ' ಎಂದಾಗ ನೋಡಬೇಕಿತ್ತು ಅರುಣಾಚಲನ ಮುಖವನ್ನು.


ನಾವು ಹಳ್ಳವನ್ನು ದಾಟಿದಾಗ ಅದರ ಅಗಲ ಸುಮಾರು ೯೦ ಅಡಿಯಷ್ಟಿತ್ತು. ಹಳ್ಳದ ಅಗಲ ನಾವು ಮುಂದೆ ಸಾಗಿದಂತೆ ಕಿರಿದಾಗುತ್ತಿತ್ತು ಮತ್ತು ಎರಡೂ ಬದಿ ಕಣಿವೆಯ ಇಳಿಜಾರು ಉದ್ದನೆಯ ಗೋಡೆಯಂತೆ ಕಾಣುತ್ತಿತ್ತು. ಈಗ ಜಲಪಾತದ ಎರಡನೇ ಹಂತ ನಮಗೆ ಗೋಚರಿಸುತ್ತಿತ್ತು. ಸುಮಾರು ೨೦೦ ಅಡಿಯಷ್ಟೆತ್ತರದಿಂದ ಹುಲ್ಲುಕಡ್ದಿಯ ಆಕಾರದಲ್ಲಿ ರಭಸವಾಗಿ ಧುಮುಕುತ್ತಿತ್ತು. ಈ ಜಲಪಾತ ಇಷ್ಟು 'ಸ್ಪೆಕ್ಟ್ಯಾಕ್ಯುಲರ್' ಆಗಿರುವ ಎಳ್ಳಷ್ಟೂ ಕಲ್ಪನೆಯೂ ನನಗಿರಲಿಲ್ಲ.

ಹಳ್ಳದ ಅಗಲ ಈಗ ೩೦ ಅಡಿಯಷ್ಟಾಗಿದ್ದು ಕಣಿವೆ ಇನ್ನಷ್ಟು ಕಿರಿದಾಗುತ್ತಿತ್ತು. ಎರಡೂ ಬದಿಗೆ ಆಗಸದೆತ್ತರಕ್ಕೆ ಎದ್ದು ನಿಂತಂತೆ ಕಾಣುತ್ತಿದ್ದ ಸುಮಾರು ೩೦೦ ಅಡಿಯಷ್ಟು ಎತ್ತರವಿದ್ದ ಕಣಿವೆಯ ಇಳಿಜಾರು. ಇಲ್ಲಿಂದ ಮುಂದೆ ಹೋಗುವುದು ಅಸಾಧ್ಯವೆನಿಸಿ ನಾನು ಮತ್ತು ಅರುಣಾಚಲ ಅಲ್ಲೇ ನಿಂತರೆ, ಭಾಸ್ಕರ ಮತ್ತು ಅನಿಲ್ ಹಳ್ಳದಿಂದ ೧೫ ಅಡಿ ಮೇಲಕ್ಕೇರಿ ದಾರಿ ಮಾಡಿಕೊಂಡು ಜಲಪಾತದ ಮತ್ತಷ್ಟು ಸನಿಹಕ್ಕೆ ತೆರಳಿದರು. ನಾವಿಬ್ಬರೂ ಹಳ್ಳದಲ್ಲೇ ನಿಂತು ಜಲಪಾತದ ರಮಣೀಯ ಸೌಂದರ್ಯವನ್ನು ಅಚ್ಚರಿಯಿಂದ ನೋಡತೊಡಗಿದೆವು. ಜಲಪಾತದ ೩ನೇ ಹಂತ ಸುಮಾರು ೩೫ ಅಡಿಯಷ್ಟೆತ್ತರವಿರಬಹುದು. ಮೊದಲ ಹಂತದ ಅರ್ಧ ಭಾಗ ಮಾತ್ರ ಗೋಚರಿಸುವುದು. ಇದು ಸ್ವಲ್ಪ ಅಗಲವಾಗಿದ್ದು ಸುಮಾರು ೧೦೦ ಅಡಿ ಎತ್ತರವಿದೆ.


ಭಾಸ್ಕರ ಮತ್ತು ಅನಿಲ್ ಜಲಪಾತದ ೨ನೇ ಹಂತದ ಸಮೀಪದಲ್ಲಿ ಅದರ ಪಾರ್ಶ್ವಕ್ಕೆ ಬಂದು ಮುಟ್ಟಿದ್ದರು. ನಾವು ನಿಂತಲ್ಲಿಂದ ಬಲೂ ದೂರದಲ್ಲಿದ್ದಂತೆ ಕಾಣುತ್ತಿದ್ದರು. ಹಳ್ಳದಿಂದ ೧೫ ಅಡಿ ಮೇಲಕ್ಕೇರಿ ಕಣಿವೆಯ ಇಳಿಜಾರಿನಲ್ಲಿ ಕುಳಿತು ವಿಶ್ರಮಿಸಬಹುದು. ಅತ್ತ ಅನಿಲ್ ಮತ್ತು ಭಾಸ್ಕರ ಹಿಂತಿರುಗಲು ಆರಂಭಿಸಿದಂತೆ, ನಾವು ಹಳ್ಳದಿಂದ ಮೇಲಕ್ಕೇರಲೆಂದು ಒಂದೆರಡು ಹೆಜ್ಜೆ ಇಟ್ಟೆವಷ್ಟೇ...ನೀರಿನಲ್ಲಿ ಏನೋ ಬಿದ್ದ ದೊಡ್ಡ ಸದ್ದು. ಅನಿಲ್ ಮತ್ತು ಭಾಸ್ಕರ ಇಬ್ಬರೂ ನಮಗೆ ಕಾಣುತ್ತಿರಲಿಲ್ಲ. ಕೆಟ್ಟ ವಿಚಾರಗಳು ಬರಲಾರಂಭಿಸಿದವು. ನಮ್ಮ ಮುಂದೆ ಸುಮಾರು ೫೦ ಅಡಿಯಷ್ಟು ಅಂತರದಲ್ಲಿ ನೀರಿನಲ್ಲಿ ಏನೋ ಬಿದ್ದಿದ್ದರಿಂದ ಈಗ ಮಣ್ಣು ಮಿಶ್ರಿತ ಕೆಂಪು ನೀರು ನಮ್ಮತ್ತ ಹರಿಯುತ್ತಿತ್ತು. ಗಾಬರಿಗೊಂಡ ಅರುಣಾಚಲ 'ಮೈ ಗಾಡ್, ಏನದು ಕೆಂಪು ಕೆಂಪು, ರಕ್ತವೋ ಹೇಗೆ..ರಕ್ತ' ಎಂದು ಬಡಬಡಿಸತೊಡಗಿದ್ದ. ನಾನೂ ಹೆದರಿದ್ದೆ. ಮಾತೇ ಬರುತ್ತಿರಲಿಲ್ಲ. ನನ್ನ ಕಣ್ಣುಗಳು ಮೇಲೆ ಭಾಸ್ಕರ ಮತ್ತು ಅನಿಲ್ ಹಿಂತಿರುಗಿ ಬರಬೇಕಾಗಿದ್ದ ಕಾಲುದಾರಿಯ ಮೇಲಿದ್ದವು. ಒಂದೆರಡು ನಿಮಿಷಗಳ ಬಳಿಕ ಕಾಡಿನ ಮರೆಯಿಂದ ೨ ಆಕೃತಿಗಳು ನಿಧಾನವಾಗಿ ಹೊರಬಂದಾಗ ನಿಟ್ಟುಸಿರುಬಿಟ್ಟೆವು. 'ಒಂದ್ ದೊಡ್ಡ ಬಂಡೆ ಇತ್ರಾ ... ಅದನ್ನ್ ಹಂಗೇ ಮಜಾಕ್ಕೆ ಕೆಳ್ಗೆ ತಳ್ದೆ' ಎಂದು ಭಾಸ್ಕರ ಅಂದಾಗ, 'ಎಲ್ಲಿಂದ ಸಿಕ್ತಪ್ಪಾ, ಈ ಐಟಮ್ಮು ನಮ್ಗೆ' ಎಂಬಂತ್ತಿತ್ತು ಅರುಣಾಚಲನ ಮುಖಭಾವ.

ಈಗ ವಿಶ್ರಾಮದ ಸಮಯ. ನಾನು ಮಲಗಿ ಸುತ್ತಲಿನ ಅಂದವನ್ನು ಆಸ್ವಾದಿಸುತ್ತಾ ಇದ್ದರೆ, ಅಲ್ಲೇ ಪಕ್ಕದಲ್ಲಿ ಕಣಿವೆಯ ಮೇಲ್ಮೈಯಿಂದ ಹರಿದು ಬಂದು ಹಳ್ಳವನ್ನು ಸೇರುತ್ತಿದ್ದ ಸಣ್ಣ ತೊರೆಯೊಂದು ನಿರ್ಮಿಸಿದ ಸುಮಾರು ೨೦ ಅಡಿಯಷ್ಟೆತ್ತರವಿದ್ದ ಜಲಪಾತದಲ್ಲಿ ಅನಿಲ್ ದಿನದ ತನ್ನ ಎರಡನೇ ಸ್ನಾನವನ್ನು ಮಾಡುತ್ತಿದ್ದ. ಅದೇಕೋ ನೀರಂದ್ರೆ ಹೆದರುವ ಅರುಣಾಚಲ, ವಿಚಿತ್ರವಾಗಿ ಸ್ನಾನ ಮಾಡಿದ. ಆ ತೊರೆಯ ನೀರಿನಲ್ಲಿ ತನ್ನ ಪಾದಗಳಷ್ಟೇ ಮುಳುಗುವಲ್ಲಿ, ಪಾದಗಳನ್ನು ಮಾತ್ರ ನೀರಲ್ಲಿಟ್ಟು ಕುಳಿತ. ನಂತರ ತನ್ನ ಮುಂಗೈಗಳೆನ್ನೆರಡನ್ನು ಜೋಡಿಸಿ, ಅವುಗಳಲ್ಲಿ ನೀರನ್ನು ತುಂಬಿಸಿ ನೀರನ್ನು ತಲೆಯ ಮೇಲೆ ಮತ್ತು ಮೈ ಮೇಲೆ ಸುರಿದುಕೊಂಡು ವಿಚಿತ್ರವಾಗಿ ಸ್ನಾನ ಮಾಡತೊಡಗಿದ. ಈತ ಏನು ಮಾಡುತ್ತಿದ್ದಾನೆ ಎಂದು ಮೊದಮೊದಲು ಅರಿಯದ ಭಾಸ್ಕರ ನಂತರ 'ಸ್ನಾನ' ಎಂದು ತಿಳಿದ ಬಳಿಕ ಬಿದ್ದು ಬಿದ್ದು ಜೋರಾಗಿ ನಗತೊಡಗಿದ. ನನಗೂ ನಗು ತಡೆಯಲಾಗುತ್ತಿರಲಿಲ್ಲ. ಅಷ್ಟೆಲ್ಲಾ ನೀರಿರುವಾಗ, ಕಡಿಮೆ ನೀರಿದ್ದಲ್ಲಿ ತೆರಳಿ ಈ ತರ ಸ್ನಾನ ಮಾಡುವುದೆ?

ಅಲ್ಲಿಂದ ಹೊರಟ ೨೦ ನಿಮಿಷಗಳಲ್ಲಿ ನಾವು ಭಾಸ್ಕರನ ಮನೆಯಲ್ಲಿದ್ದೆವು. ಆತನ ಮನೆಯವರು ರುಚಿಯಾದ ಪಪ್ಪಾಯಿಯನ್ನು ನಮಗೋಸ್ಕರ ತುಂಡು ಮಾಡಿ ರೆಡಿ ಮಾಡಿ ಇಟ್ಟಿದ್ದರು. ಅರುಣಾಚಲನ ಸ್ನಾನವನ್ನು ನೆನೆಸಿ ಇನ್ನೂ ನಗುತ್ತಿದ್ದ ಭಾಸ್ಕರನಿಗೆ ವಿದಾಯ ಹೇಳಿ ಹಾಗೆ ಮರಳಿ ಹಳ್ಳಿಯೆಡೆ ಹೊರಟಾಗ, ನಮ್ಮ ಮೂವ್ವರ ಮನಸ್ಸಿನಲ್ಲಿ ಇದ್ದಿದ್ದು ಒಂದೇ 'ವಿಶ್'. ಮುಂದಿನ ಮನೆಯಲ್ಲಿ ಆ ಸುಂದರಿ ಮತ್ತೆ ಕಾಣಸಿಗಲೆಂದು. ಆಕೆ ಅಲ್ಲೇ ಕಸ ಗುಡಿಸುತ್ತಾ ಇದ್ದಳು. ನಾವು ಇನ್ನಷ್ಟು ನಿಧಾನವಾಗಿ ಸಾಗಿದೆವು. ಚಾರಣದಿಂದ ಹಿಂತಿರುಗುವಾಗ ಯಾವಾಗಲೂ ವೇಗವಾಗಿ ನಡೆಯುವ ಅನಿಲನಿಗೆ ಇವತ್ತು ತುಂಬಾ ದಣಿವು! ಪಪ್ಪಾಯಿ ತಿಂದು ಹೊಟ್ಟೆ ತುಂಬಿ ನಡೆಯಲಾಗುತ್ತಿಲ್ಲ ಎಂಬ ಕ್ಷುಲ್ಲಕ ಸಬೂಬು. ಆಕೆ ಮತ್ತೊಮ್ಮೆ ತನ್ನ ಸುಂದರ ನಗುವನ್ನು ನಮ್ಮತ್ತ ಬೀರಿದಳು. ನಾವೂ ಸಂತೋಷದಿಂದಲೇ ನಮ್ಮ ನಮ್ಮ ಮುದಿ ನಗುಗಳನ್ನು ನೀಡಿದೆವು.

೩ನೇ ಜಲಧಾರೆ ಇರುವ ಹಳ್ಳಿ ಸಮಯ ೬.೧೫. ಅರುಣಾಚಲ ತಾನು ಬರಲೊಪ್ಪದೆ ಬೈಕು ನಿಲ್ಲಿಸಿದಲ್ಲೇ ನಿಂತರೆ ನಾನು ಮತ್ತು ಅನಿಲ್ ಕಾಡಿನೊಳಗೆ ಓಡಿದೆವು. ಜಲಪಾತ ತಲುಪಿದ ಕೂಡಲೇ ಅನಿಲ್ ನೀರಿಗಿಳಿದು ದಿನದ ತನ್ನ ೩ನೇ ಸ್ನಾನವನ್ನು ಮಾಡತೊಡಗಿದ! ಕತ್ತಲಾಗುತ್ತಿತ್ತು ಮತ್ತು ನಮ್ಮತ್ರ ಟಾರ್ಚ್ ಇರಲಿಲ್ಲ. ಬೇಗನೇ ಸ್ನಾನ ಮುಗಿಸು ಎಂದು ಅನಿಲನಿಗೆ ಅವಸರ ಮಾಡತೊಡಗಿದೆ. ಹಿಂತಿರುಗುವಾಗ ದಾರಿ ಕಾಣದೆ ಅಂದಾಜಿನಲ್ಲಿ ಹೆಜ್ಜೆ ಇಟ್ಟು, ಮುಳ್ಳುಗಳಿಂದ ಮೈ ಪರಚಿಕೊಂಡು ಸ್ವಲ್ಪ ಕಷ್ಟವಾಯಿತಾದರೂ, ೭.೦೦ಕ್ಕೆ 'ರೆಸ್ಟ್ ಲೆಸ್' ಆಗಿ ನಿಂತಿದ್ದ ಅರುಣಾಚಲನನ್ನು ಸೇರಿಕೊಂಡು, ೮.೩೦ಕ್ಕೆ ಕುಮಟಾ ತಲುಪಿದೆವು.

ಅರುಣಾಚಲನನ್ನು ಅವನ ಮನೆಗೆ ಬಿಟ್ಟು, ತನ್ನ ಸಂಬಂಧಿಯ ಬೈಕನ್ನು ಹಿಂತಿರುಗಿಸಿ ಬಂದ ಅನಿಲನನ್ನು ಕೂರಿಸಿ ಉಡುಪಿಯೆಡೆ ಹೊರಟೆ. ಸುಮಾರು ೧೦.೩೦ಕ್ಕೆ ಅನಿಲನನ್ನು ಶಿರಾಲಿಯಲ್ಲಿ ಇಳಿಸಿ ಎಲ್ಲಾ ಜಲಧಾರೆಗಳನ್ನೂ ಮತ್ತು ಆ ಸಿದ್ಧಿ ಸುಂದರಿಯನ್ನೂ ನೆನೆಸುತ್ತಾ, 'ತೇರಾ ಏರಿ ಅಂಬರದಾಗೆ ನೇಸರ ನಗುತಾನೆ...' ಎಂದು ಗುನುಗುತ್ತಾ ಮನೆ ತಲುಪಿದಾಗ ಬೆಳಗ್ಗಿನ ಜಾವ ೧.೦೦.

ಮರೆಯಲಾಗದ ದಿನ!

11 ಕಾಮೆಂಟ್‌ಗಳು:

ವಿನಾಯಕ ಭಟ್ಟ ಹೇಳಿದರು...

ಅಲೆಮಾರಿಗಳು ಸಧ್ಯ ಎಲ್ಲಿಗೂ ಹೋಗಿಲ್ಲವೋ? ಎಲ್ಲ ಹಳೆಯ ನೆನಪುಗಳೇ ಕಾಣಿಸ್ತಿವೆ.

ರಾಜೇಶ್ ನಾಯ್ಕ ಹೇಳಿದರು...

ವಿನಾಯಕ,
ನಿಮ್ಮ ಊಹೆ ಸರಿಯಾಗಿದೆ. ಇತ್ತೀಚೆಗೆ ಅಲೆದಾಟ ಸ್ವಲ್ಪ ಕಡಿಮೆಯಾಗಿದೆ. ಆದ್ದರಿಂದ ಹೊಸ ಅಲೆದಾಟಗಳ ನಡುವೆ ಆಗಾಗ ಹಳೆಯ ನೆನಪುಗಳು ...

ಅನಾಮಧೇಯ ಹೇಳಿದರು...

ರಾಜೇಶ್,
ಹಳೆಯ ನೆನಪಾದರೂ ಸೊಗಸಾಗಿದೆ. ಅರುಣಾಚಲನೆಡೆ ಭಾಸ್ಕರನ ಮಾತುಗಳು ಮತ್ತು ಭಾಸ್ಕರನೆಡೆ ಅರುಣಾಚಲನ ಮೌನ ಮುನಿಸು ತುಂಬಾ ನಗು ಬರಿಸಿತು. ಆದರೂ ನೀವು ಆ ಸಿದ್ದಿ ಹುಡುಗಿಯನ್ನು ದಿಟ್ಟಿಸಿ ನೋಡಬಾರದಿತ್ತು.

Aravind GJ ಹೇಳಿದರು...

ಉತ್ತಮವಾದ ನಿರೂಪಣೆ. ಅರುಣಾಚಲನ ಪ್ರಸಂಗ ನಗು ತರಿಸಿತು.ಬೆಣ್ಣೆ ಹಾಗೂ ಮತ್ತಿಘಟ್ಟ ನನ್ನ "ಲಿಸ್ಟ್" ನಲ್ಲಿ ಇದೆ. ಯಾವಾಗಲಾದರೂ ನೋಡಲು ಹೋಗಬೇಕು.

VENU VINOD ಹೇಳಿದರು...

ರಾಜೇಶ್,
ಬೆಣ್ಣೆ ಫಾಲ್ಸ್ ನೋಡಿದ್ದೇನೆ, ಈಗ ಮತ್ತಿ ಘಟ್ಟದ ಚಿತ್ರ ನೋಡಿ, ವಿವರಣೆ ಓದಿ, ಅದನ್ನೂ ನೋಡಲೇಬೇಕು ಎಂದೆನಿಸಿದೆ, ಯಾವತ್ತಿನ ಹಾಗೆ ನಿಮ್ಮ ವಿವರಣೆ ಸೂಪರ್‍ ...

jomon varghese ಹೇಳಿದರು...

ರಾಜೇಶ್,

ಚಿತ್ರಗಳು ಸೂಪರ್! ಸಿದ್ಧಿ ಹುಡುಗಿ, ವಿಭೂತಿ ಜಲಪಾತ ಇವನ್ನೆಲ್ಲಾ ಖುದ್ದು ನೋಡಿದ ಹಾಗಾಯ್ತು.ಒಳ್ಳೆಯ ಬರಹ.

ಧನ್ಯವಾದಗಳು.
ಜೋಮನ್.

ಅನಾಮಧೇಯ ಹೇಳಿದರು...

ರಾಜೇಶ್,

ಎಲ್ಲಿ ಮಾರಾಯ್ರೆ... ಮೂರು ವಾರವಾಯ್ತಲ್ಲಾ ಒಂದೂ ಪೋಸ್ಟ್ ಇಲ್ಲದೆ! ನೀವ್ಯಾಕೆ ನನ್ಹಾಗೆ ಆಗ್ತಿದ್ದೀರಿ?

ರಾಜೇಶ್ ನಾಯ್ಕ ಹೇಳಿದರು...

ಲೀನಾ,
ನಿಮ್ಮಿಂದ ಇನ್ನಷ್ಟು ಹೊಗಳಿಕೆಯನ್ನು ನಿರೀಕ್ಷಿಸಿದ್ದೆ!

ಆರವಿಂದ್,ವೇಣು,
ನೀವು ನೋಡಲೇಬೇಕಾದ ಸ್ಥಳವಿದು. ಸೆಪ್ಟೆಂಬರ್ ಬಳಿಕ ಹೋದರೆ ಚೆನ್ನ.

ಜೋಮನ್,
ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು.

ಅಲಕಾ,
ಕೆಲಸದ ಒತ್ತಡ. ಸ್ವಲ್ಪ ಬಿಡುವಾದ ಕೂಡಲೇ ಮತ್ತೆ ಬ್ಲಾಗಿಂಗ್.

ನಾವಡ ಹೇಳಿದರು...

ರಾಜೇಶ್ ನಾಯ್ಕರೇ,
ಚೆನ್ನಾಗಿದೆ, ನಿರೂಪಣೆಯೂ ಸಹ. ನಾನೂ ಅಲೆಮಾರಿಗಳಾಗಲು ಪ್ರಯತ್ನಿಸಿದ್ರೂ ಸಾಧ್ಯವಾಗುತ್ತಿಲ್ಲ.
ನಾವಡ

ತೇಜಸ್ವಿನಿ ಹೆಗಡೆ ಹೇಳಿದರು...

ನಮಸ್ಕಾರ. ತಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಮಂಜುಗುಣಿ, ಶಾನುಭಾಗ್ ರೆಸ್ಟೋರೆಂಟ್ ಎಲ್ಲಾ ನನಗೆ ಚಿರಪರಿಚಿತ. ಬೆಣ್ಣೆ ಫಾಲ್ಸ್ ನಾ ನೋಡಿಲ್ಲ. ಆದರೂ ಸ್ವತಃ ನೋಡಿದಷ್ಟು ಖುಶಿಯಾಯಿತು. ತಾವು "ಉಂಚಳ್ಳಿ ಜಲಪಾತ" ನೋಡಿರುವಿರಾ? ಅದು ನಮ್ಮೂರಾದ ಹೆರೂರು, ಹರಿಗಾರ್ ಹತ್ತಿರವಿದೆ.

ರಾಜೇಶ್ ನಾಯ್ಕ ಹೇಳಿದರು...

ನಾವಡ,
ಏನೋ ಸ್ವಲ್ಪ ಉತ್ಸಾಹ. ಪಕ್ಕ ಅಲೆಮಾರಿಯಂತೂ ನಾನಲ್ಲ.

ತೇಜಸ್ವಿನಿ,
ಉಂಚಳ್ಳಿ ಎಂಬ ಅದ್ಭುತ ಜಲಧಾರೆಯನ್ನು ನೋಡದೇ ಇರಲು ಸಾಧ್ಯವೇ?. ವೀಕ್ಷಣಾ ಕಟ್ಟೆಯಿಂದ ಮಾತ್ರ ನೋಡಿದ್ದೇನೆ. ಕೆಳಗಿಳಿದು ಹೋಗಿಲ್ಲ. ಭೇಟಿ ನೀಡಿದ್ದು ೧೯೯೮ರಲ್ಲಿ. ನಂತರ ಮಳೆಗಾಲದಲೊಮ್ಮೆ ತೆರಳಿದ್ದರೂ ಕಾಣಿಸಿದ್ದು ದಟ್ಟ ಮಂಜು ಮಾತ್ರ.