ಭಾನುವಾರ, ಡಿಸೆಂಬರ್ 21, 2008

ಒಂಬತ್ತು ಹಂತಗಳ ಜಲಧಾರೆ

ನವೆಂಬರ್ ೧೩, ೨೦೦೫.

ಹೊಸಗೋಡು ಜಲಪಾತ ನೋಡೋಣವೆಂದು ಉಡುಪಿಯಿಂದ ಯಮಾಹಾದಲ್ಲಿ ಹೊರಟು ಗೆಳೆಯ ಲಕ್ಷ್ಮೀನಾರಾಯಣ (ಪುತ್ತು) ನನ್ನು ಪಿಕ್ ಮಾಡಿ ದಾರಿಯಲ್ಲಿ ಹೋಟೇಲೊಂದಕ್ಕೆ ನುಗ್ಗಿದೆವು. ಇಲ್ಲಿ ನಮ್ಮ ಬೆಳಗಿನ ಉಪಹಾರ ನೆನಪಿನಲ್ಲಿರುವಂತದ್ದು. ೬೦ ರೂಪಾಯಿಯವರೆಗೆ ಬಿಲ್ ಆಗಬಹುದೆಂದು ನಿರೀಕ್ಷಿಸಿದ್ದೆ. ಆದರೆ ಬಿಲ್ ಆದದ್ದು ಕೇವಲ ರೂ.೨೮!! ದೇವಕಾರದ ಮಧುಕರ್ ಮನೆಯ ಊಟವನ್ನು ನೆನೆಸಿ ಪುತ್ತು ಭಾವೋದ್ವೇಗಕ್ಕೊಳಗಾದ. ಈತನಿಗೆ ಎಲ್ಲಿ ಹೋದರೂ ತಿಂದದ್ದು ಮಾತ್ರ ನೆನಪಿರುವುದು, ಪ್ರಕೃತಿ ನೋಡಿದ್ದೆಲ್ಲಾ ಅದೇ ಕ್ಷಣ ಮರೆತುಬಿಟ್ಟಿರುತ್ತಾನೆ. ಆದರೂ ಜೊತೆಗೊಬ್ಬ ಇದ್ದರೆ ಯಾವಾಗಲೂ ಒಳಿತು ಎಂಬ ಮಾತ್ರಕ್ಕೆ ಈತನನ್ನು ನಾನು ಕರೆದೊಯ್ಯುವುದು.

ಮುಂದೆ ದಾರಿಯಲ್ಲಿ ಸುಂದರ ಯುವಕನೊಬ್ಬ ಬಜಾಜ್ ಎಮ್-೮೦ ವಾಹನದಲ್ಲಿ ನಮ್ಮ ಸಮಾನಾಂತರಕ್ಕೆ ಬಂದು ನಿಧಾನಿಸಿದ. ಈತ ಜನಾರ್ಧನ, ಹೀರೇಬೈಲಿನ ಮಹಾದೇವ ನಾಯ್ಕರ ಮಗ. ಪರಸ್ಪರ ಪರಿಚಯ ಮಾಡಿಕೊಂಡು ನಂತರ ಅವರ ಮನೆಯತ್ತ ತೆರಳಿದೆವು. ಮಹಾದೇವ ನಾಯ್ಕರ ಮನೆ ಕಲಾವಿದರ ಮನೆ. ಜನಾರ್ಧನ ಒಬ್ಬ ಯಕ್ಷಗಾನ ಕಲಾವಿದ. ಸಾಲಿಗ್ರಾಮ ಮೇಳದೊಂದಿಗೆ ೨ ವರ್ಷ ತಿರುಗಾಟ ಮಾಡಿದ್ದರು. ಮಹಾದೇವ ನಾಯ್ಕರೂ ಉತ್ತಮ ಕಲಾವಿದರು. ಇಲ್ಲಿ ಕುಡಿಯಲು ಚಹಾ ಸಿಕ್ಕಿತು ನಂತರ ಎಳನೀರೂ ಸಿಕ್ಕಿತು. ’ಮುಂದಿನ ಸಲ ಮುಕ್ತಿ ಹೊಳೆ ಜಲಧಾರೆ ನೋಡ್ಲಿಕ್ಕೆ ಬನ್ನಿ, ಆಗ ನಮ್ಮ ಮನೆಗೆ ಬಂದು ಉಳ್ಕೊಳ್ಳಬೇಕು’ ಎಂದು ಜನಾರ್ಧನ ಆಗಲೇ ಅಹ್ವಾನ ನೀಡಿ, ’ಮುಂದೆ ತಿಮ್ಮಾ ಗೌಡರ ಮನೆಯಲ್ಲಿ ವಿಚಾರಿಸಿ, ಅವರ ಮನೆಯವರಲ್ಲೊಬ್ಬರು ದಾರಿ ತೋರಿಸಲು ಬರಬಹುದು’ ಎಂದು ಬೀಳ್ಕೊಟ್ಟರು.

ತಿಮ್ಮಾ ಗೌಡರ ಮನೆ ತಲುಪಿದಾಗ ಅವರ ಮಗ ಗಣಪತಿ ಪುತ್ತುವನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ. ಪುತ್ತು ಹಳದೀಪುರದವನೆಂದು ಹೇಳಿದ ಕೂಡಲೇ ಗಣಪತಿಯ ಮುಖದಲ್ಲಿ ದೊಡ್ಡ ನಗು. ಪುತ್ತು ರಾಷ್ಟ್ರೀಯ ಮಟ್ಟದ ಕ್ವಾಲಿಫೈಡ್ ವಾಲಿಬಾಲ್ ರೆಫ್ರೀ. ಕರ್ನಾಟಕ, ಗೋವಾಗಳಲ್ಲೆಲ್ಲಾ ವಾಲಿಬಾಲ್ ಪಂದ್ಯಾವಳಿಗಳಲ್ಲಿ ರೆಫ್ರೀಯಾಗಿ ಹೋಗುತ್ತಾನೆ. ಹಳದೀಪುರದಲ್ಲಿ ವ್ಯಾಸಂಗ ಮಾಡಿದ್ದ ಗಣಪತಿ, ಸ್ಥಳೀಯ ವಾಲಿಬಾಲ್ ಪಂದ್ಯಾಟಗಳಲ್ಲಿ ಪುತ್ತುವನ್ನು ನೋಡಿದ್ದ. ಹೀಗಾಗಿ ಆ ಒಂದು ಮುಹೂರ್ತದಲ್ಲಿ ಇಬ್ಬರು ಆಗಂತುಕರು ಗೆಳೆಯರಾದರು. ಈ ಹಳ್ಳಿಯಲ್ಲೂ ತನ್ನನ್ನು ಗುರುತಿಸಿದರಲ್ಲಾ ಎಂದು ಪುತ್ತುವಿಗೆ ಖುಷಿಯೋ ಖುಷಿ. ಬೈಕನ್ನು ಗಣಪತಿಯ ಮನೆಯಲ್ಲೇ ಇರಿಸಿ ಜಲಧಾರೆಯತ್ತ ಹೊರಟೆವು. ಅದಾಗಲೇ ಇಬ್ಬರು ಹೊಸ ಗೆಳೆಯರು ಮಾತುಕತೆಯಲ್ಲಿ ತೊಡಗಿಯಾಗಿತ್ತು.


ಮುಂದೆ ಶಾಲೆಯ ಬಳಿಯೇ ಗಣಪತಿಯ ಸಂಬಂಧಿ ಹನ್ಮಂತ ನಮಗೆ ಜೊತೆಯಾದ. ಸುಮಾರು ೪೦೦ ಅಡಿ ಎತ್ತರದಿಂದ ೯ ಹಂತಗಳಲ್ಲಿ ಧುಮುಕುವ ಜಲಧಾರೆಯ ದೃಶ್ಯ ನೋಡಿ ಇನ್ನಷ್ಟು ವೇಗವಾಗಿ ನಡೆಯತೊಡಗಿದೆವು.


ಜಲಧಾರೆಯ ಮೊದಲ ೩ ಹಂತಗಳಿಗೆ ಮರಗಿಡಗಳು ಚೆನ್ನಾದ ಚಪ್ಪರ ಹಾಕಿವೆ. ಎಂದಿನಂತೆ ನಾನು ನಿಧಾನ ಬರತೊಡಗಿದಾಗ ಇನ್ನು ಮುಂದಕ್ಕೆ ಹೋಗುವುದು ಕಷ್ಟಕರ ಎಂದು ಹನ್ಮಂತ ವಟಗುಟ್ಟತೊಡಗಿದ. ಹಾಗೆ ೬ನೇ ಹಂತ ತಲುಪಿದಾಗ ಹನ್ಮಂತ ಮತ್ತದೇ ಮಾತನ್ನು ಪುನರಾವರ್ತಿಸಿದರೂ ನಾನದನ್ನು ಕಡೆಗಣಿಸಿದೆ.


ಮುಂದೆ ೫ನೇ ಹಂತವನ್ನು ತಲುಪಿದೆವು. ಇದು ೫೦ ಅಡಿ ಅಂತರದಲ್ಲಿ ೨ ಧಾರೆಗಳಾಗಿ ಧುಮುಕುತ್ತಿತ್ತು. ಹನ್ಮಂತನ ವಿರೋಧದ ನಡುವೆಯೂ ಮುಂದುವರಿಸಿದೆವು. ಇಲ್ಲಿ ನಡೆದದ್ದೇ ದಾರಿ. ಕಲ್ಲಿನ ಮೇಲ್ಮೈಯಲ್ಲಿ ಬೆಳೆದಿರುವ ಹುಲ್ಲುಗಳನ್ನು ಆಧಾರವಾಗಿ ಬಳಸಿ ಎಚ್ಚರಿಕೆಯಿಂದ ಮುಂದುವರಿದರಾಯಿತು. ೫ನೇ ಹಂತದ ಮೇಲೆ ತಲುಪಿದಾಗ ಇನ್ನು ಮುಂದಕ್ಕೆ ಹೋಗುವುದು ನಮ್ಮಿಂದ ಸಾಧ್ಯವೇ ಇಲ್ಲ ಎಂದು ಹನ್ಮಂತ ಕೂತುಬಿಟ್ಟ. ಪುತ್ತುವಿಗೆ ಬೆಳಗ್ಗೆ ತಿಂದದ್ದು ಮತ್ತು ಕುಡಿದ ಎಳನೀರೆಲ್ಲಾ ಕರಗಿ ಹೋಗಿರಬೇಕು. ಮೇಲೆ ಹತ್ತಿ ಹತ್ತಿ ಸಾಕಾದ ಆತನೂ ಹನ್ಮಂತನ ಮಾತಿಗೆ ಒಪ್ಪಿಗೆ ಸೂಚಿಸಿದ! ಇನ್ನೂ ಮೇಲಕ್ಕೆ ಹೋಗಲೇಬೇಕೆಂದು ನಾನು ಪಟ್ಟು ಹಿಡಿದೆ. (ನಂತರ ಹನ್ಮಂತನ ಮನೆಯಲ್ಲಿ ವಿಶ್ರಮಿಸುವಾಗ ಮೇಲೆ ಹೋಗುವುದು ಬೇಡವೆಂದು ತಾನೇಕೆ ಪದೇ ಪದೇ ಹೇಳುತ್ತಿದ್ದೆ ಎಂದು ಹನ್ಮಂತ ತಿಳಿಸಿದ. ನನ್ನ ೯೫ ಕೆ.ಜಿ. ಧಡೂತಿ ದೇಹವನ್ನು ನೋಡಿ ಆತನಿಗೆ ಅನುಮಾನವಿತ್ತಂತೆ ಈತನಿಂದಾಗದು ಎಂದು).


ಸುಂದರವಾಗಿರುವ ನಾಲ್ಕನೇ ಹಂತದ ಸನಿಹ ತಲುಪಬೇಕಾದರೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಕೇವಲ ೩ ಅಡಿ ಅಗಲವಿರುವ ಬಂಡೆಯ ಹಾದಿಯಲ್ಲಿ ೫೦ ಅಡಿಗಳಷ್ಟು ದೂರ ನಡೆದುಕೊಂಡು ಹೋಗಬೇಕು. ಈ ಹಾದಿಯ ಎರಡೂ ಬದಿಯಲ್ಲಿ ನೀರು ಹರಿಯುತ್ತದೆ. ನಿಧಾನವಾಗಿ ಈ ತೊಡಕನ್ನು ದಾಟಿ ಮುಂದುವರಿದೆ. ಜಲಧಾರೆಯ ಎರಡನೇ ಹಂತದ ಬಳಿಕ ನೀರಿನ ಹರಿವು ಇಬ್ಭಾಗವಾಗುತ್ತದೆ. ಒಂದು ಭಾಗ ಜಲಧಾರೆಯ ೩ನೇ ಹಂತವನ್ನು ನಿರ್ಮಿಸಿದರೆ ಮತ್ತೊಂದು ಭಾಗ ನಾಲ್ಕನೇ ಹಂತವನ್ನು ನಿರ್ಮಿಸುತ್ತದೆ. ಜಲಧಾರೆಯ ೫ನೇ ಹಂತದ ಮೊದಲು ೨ ಭಾಗಗಳು ಮತ್ತೆ ಒಂದುಗೂಡುತ್ತವೆ.

ನಾಲ್ಕನೇ ಹಂತವನ್ನು ದಾಟಿ ೧೦ ನಿಮಿಷ ಮತ್ತೆ ಬಂಡೆಯ ಮೇಲ್ಮೈಯನ್ನೇರಿದರೆ ಜಲಧಾರೆಯ ೩ ನೇ ಮತ್ತು ಪ್ರಮುಖ ಹಂತ. ಇದು ಸುಮಾರು ೧೦೦ ಅಡಿಯಷ್ಟು ಎತ್ತರವಿದ್ದು ತಳದಲ್ಲಿ ಸಣ್ಣ ಗುಂಡಿಯನ್ನು ಹೊಂದಿದೆ. ಇಲ್ಲಿ ೩ ಜನರಿಗೆ ಮಾತ್ರ ನೀರಿನಲ್ಲಿಳಿಯುವಷ್ಟು ಸ್ಥಳಾವಕಾಶವಿದೆ. ೯ನೇ ಹಂತದಿಂದ ೩ನೇ ಹಂತದ ತಳದವರೆಗೆ ಬರಲು ಸುಮಾರು ೬೦ ನಿಮಿಷ ಬೇಕಾಗುವುದು. ಬಿಸಿಲಲ್ಲಿ ಒಂದು ತಾಸು ನೇರವಾಗಿ ಮೇಲೇರಿ ಈಗ ತ್ರಾಣವೇ ಇರಲಿಲ್ಲ. ಅಲ್ಲೇ ಕುಳಿತು ವಿಶ್ರಮಿಸಿದೆವು. ಅರ್ಧ ಗಂಟೆಯ ಬಳಿಕ ಕೆಳಗಿಳಿಯಲಾರಂಭಿಸಿದೆವು.


ಹನ್ಮಂತ ನಮ್ಮನ್ನು ಆತನ ಮನೆಗೆ ಕರೆದೊಯ್ದ. ಮನೆಯಂಗಳದಲ್ಲೇ ಇದ್ದ ಗಿಡದಿಂದ ನಿಂಬೆ ಹಣ್ಣನ್ನು ಕಿತ್ತು ಅದರಿಂದ ಪಾನಕ ಮಾಡಿ ನಮಗೆ ಕೊಡಲಾಯಿತು. ಎಷ್ಟು ತಾಜಾವಾಗಿತ್ತೆಂದರೆ ಲೋಟದ ತುದಿಯಲ್ಲಿ ಪಾನಕ ಹನಿಗಳು ಮೇಲಕ್ಕೆ ಪುಟಿಯುತ್ತಿದ್ದವು. ಗಣಪತಿ ತೆಂಗಿನ ಮರವೊಂದನ್ನು ಏರಿ ಸೀಯಾಳ ಕೊಯ್ದು ಎಳನೀರು ಕುಡಿಸಿದ. ಲೀಟರ್ ಗಟ್ಟಲೆ ನೀರಿದ್ದವೇನೋ ಆ ಸೀಯಾಳಗಳಲ್ಲಿ. ಎಷ್ಟು ಕುಡಿದರೂ ಮುಗಿಯುತ್ತಿರಲಿಲ್ಲ. ಹನ್ಮಂತನ ಮಗಳು ರಕ್ಷಿತಾಳ ರಂಗು ಮತ್ತು ರೂಪ ಕಂಡು ಪುತ್ತುವಿಗೆ ಫುಲ್ಲು ಡೌಟು - ಆಕೆ ನಿಜವಾಗಿಯೂ ಹನ್ಮಂತನ ಮಗಳು ಹೌದೋ ಅಲ್ಲವೋ ಎಂದು!


ನಂತರ ಗಣಪತಿಯ ಮನೆಯಲ್ಲಿ ಆತ ಮತ್ತೆ ಸೀಯಾಳ ಬೀಳಿಸಿ ಕುಡಿಸಿದ! ದಿನವೆಂದರೆ ಹೀಗಿರಬೇಕು ನೋಡಿ! ಸೀಯಾಳದ ಮೇಲೆ ಸೀಯಾಳ. ತಾಜಾ ಲಿಂಬೆ ಪಾನಕ. ವ್ಹಾ! ಹಿರೇಬೈಲು ತಲುಪಿದಾಗ ಮಹಾದೇವ ನಾಯ್ಕರು ಮನೆಯ ದಣಪೆ(ಗೇಟು)ಯ ಬಳಿಯೇ ನಿಂತಿದ್ದರು. ಅಲ್ಲಿ ಬೈಕು ನಿಲ್ಲಿಸಿದಾಗ ಮತ್ತೆ ಅವರು ಬಿಟ್ಟಾರೆಯೇ. ಪುನ: ಒಳಗೆ ಕರೆದು ಮತ್ತೊಂದು ಬಾರಿ ಚಹಾ ಕುಡಿಸಿದರು. ಸ್ವಲ್ಪ ಹೊತ್ತು ಮಾತನಾಡಿ, ಮುಕ್ತಿ ಹೊಳೆ ಜಲಧಾರೆ ನೋಡಲು ಶೀಘ್ರವೇ ಬರಲಿದ್ದೇವೆಂದು ತಿಳಿಸಿ ಹೊರಟೆವು.

ಶನಿವಾರ, ಡಿಸೆಂಬರ್ 20, 2008

ಶಿವು


ಸಕ್ರೆಬೈಲು ಆನೆ ಬಿಡಾರದಲ್ಲಿ ಮೊನ್ನೆ (ಡಿಸೆಂಬರ್ ೧೮) ರಾತ್ರಿ 75 ವರ್ಷ ವಯಸ್ಸಿನ ಶಿವು ಹೆಸರಿನ ಈ ರಾಜ ಗಾಂಭೀರ್ಯದ ಸಲಗ ಕೊನೆಯುಸಿರೆಳೆಯಿತು. ೩ ವರ್ಷಗಳ ಹಿಂದೆ ಸಕ್ರೆಬೈಲಿಗೆ ಭೇಟಿ ನೀಡಿದ್ದಾಗ ಶಿವು ನನ್ನನ್ನು ಬಹಳ ಆಕರ್ಷಿಸಿದ್ದ. ಆತನ ಒಂದೆರಡು ಚಿತ್ರಗಳನ್ನು ತೆಗೆದಿದ್ದೆ. ಸಮೀಪ ತೆರಳಿ ಸೊಂಡಿಲಿನ ಮೇಲೆ ಕೈಯಾಡಿಸಿದ್ದೆ. ಮೈದಡವಿದ್ದೆ. ದಂತದ ಉದ್ದಕ್ಕೂ ಕೈಯಾಡಿಸಿದ್ದೆ. ಆಗಾಗ ಈ ಚಿತ್ರವನ್ನು ನೋಡಿ ಶಿವುನ ನೆನಪು ಮಾಡಿಕೊಳ್ಳುತ್ತಿದ್ದೆ. ಇನ್ನು ಆತ ಕೇವಲ ನೆನಪಾಗಿಯೇ ಉಳಿಯುತ್ತಾನೆ.

ಮಂಗಳವಾರ, ಡಿಸೆಂಬರ್ 16, 2008

ಮೈಲಾರಲಿಂಗೇಶ್ವರ ದೇವಾಲಯ - ಮೈಲಾರ


೦೯-೦೩-೨೦೦೮.

ಮೈಲಾರ ಜಾತ್ರೆಯ ಬಗ್ಗೆ ಬಹಳ ಕೇಳಿದ್ದೆ. ಲಕ್ಷಗಟ್ಟಲೆ ಜನರು ಒಟ್ಟಾಗುವ ಈ ಜಾತ್ರೆ ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದು. ಮೈಲಾರದ ಮೈಲಾರಲಿಂಗೇಶ್ವರ ದೇವಾಲಯವನ್ನು ನೋಡಬೆಕೆನ್ನುವ ಆಸೆ ಕೊನೆಗೂ ಈಡೇರಿತು. ಆದರೆ ನಿರಾಸೆಯೂ ಆಯಿತು. ಇದೊಂದು ಪ್ರಾಚೀನ ದೇವಾಲಯವಿರಬಹುದೆಂದು ನಾನು ಊಹಿಸಿದ್ದೆ. ಆದರೆ ಇದು ಅತ್ಯಾಧುನಿಕ ದೇವಾಲಯವಾಗಿತ್ತು.


ಬಣ್ಣಬಣ್ಣದ ಅಷ್ಟೆತ್ತರದ ಸುಂದರ ಸ್ವಾಗತ ಗೋಪುರ, ಅತಿ ವಿಶಾಲ ಪ್ರಾಂಗಣ, ಚಪ್ಪಲಿ ಇಡಲು ಪ್ರತ್ಯೇಕ ಕೌಂಟರ್, ಪ್ರವೇಶ ಶುಲ್ಕ, ಗರ್ಭಗುಡಿಯ ಮೇಲೆ ಇನ್ನಷ್ಟು ಸುಂದರವಾಗಿರುವ ಬಣ್ಣಬಣ್ಣದ ಗೋಪುರ. ಎಲ್ಲೆಲ್ಲೂ ಮಾರ್ಬಲ್! ಗೋಡೆಯಲ್ಲೂ, ನೆಲದಲ್ಲೂ ಎಲ್ಲೆಲ್ಲೂ ಮಾರ್ಬಲ್. ಅಂಗಿ ಕಳಚಿ ಅಂತರಾಳದೊಳಗೆ ಪ್ರವೇಶಿಸಬೇಕೆಂಬ ನಿಯಮ. ಇಲ್ಲದಿದ್ದರೆ ಮಾರ್ಬಲ್ ಹಾಸಿ, ಹೊಳೆಯುವಂತೆ ಮಾಡಲಾಗಿದ್ದ ನವರಂಗದಲ್ಲೇ ನಿಂತು ಮೈಲಾರಲಿಂಗೇಶ್ವರನ ದರ್ಶನ ಮಾಡಿ ತೃಪ್ತಿಪಟ್ಟುಕೊಳ್ಳಬೇಕು.


ದೇವಾಲಯದ ಹೊರಗೆ ಮಹಿಳೆಯೊಬ್ಬಳು ಮೈಲಾರಲಿಂಗೇಶ್ವರನಿಗೆ ಸಾಷ್ಟಾಂಗ ನಮಸ್ಕಾರ ಸೇವೆ ಮಾಡುತ್ತಿದ್ದಳು. ದೇವಾಲಯದ ಸುತ್ತಲೂ ಹಾಸಿರುವ ಚಪ್ಪಡಿಕಲ್ಲಿನ ಮೇಲೆ ಉರಿಬಿಸಿಲಿನಲ್ಲಿ ಈಕೆಯ ದೇಹ ದಂಡಿಸಿಕೊಳ್ಳುವ ಸೇವೆ ನೋಡಿ ದಂಗಾದೆ. ಸಾಷ್ಟಾಂಗ ನಮಸ್ಕಾರ ಮಾಡುವುದು, ನಂತರ ಎದ್ದು ೫ ಹೆಜ್ಜೆ ನಡೆದು ಮತ್ತೆ ಸಾಷ್ಟಾಂಗ ನಮಸ್ಕಾರ! ನಾವು ದೇವಾಲಯವನ್ನು ಸಂಪೂರ್ಣವಾಗಿ ನೋಡಿ ಮುಗಿಸಿದರೂ ಈಕೆ ೨ ಸುತ್ತು ಮಾತ್ರ ಮುಗಿಸಿದ್ದಳು. ಎಷ್ಟು ಸುತ್ತುಗಳ ಸೇವೆಯಿತ್ತೇನೋ. ಅಬ್ಬಾ ಭಕ್ತಿಯೇ!


ದೇವಾಲಯದ ಆಧುನಿಕತೆ ನೋಡಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇವಾಲಯ ಇದಾಗಿರಲಾರದು ಎಂಬ ಸಂಶಯ ಬರಲಾರಂಭಿಸಿತು. ಈ ದೇವಸ್ಥಾನದಿಂದ ಅನತಿ ದೂರದಲ್ಲಿ ಸಂಪೂರ್ಣವಾಗಿ ಪಾಳುಬಿದ್ದಿರುವ ತುಂಬಾ ಸಣ್ಣ ದೇವಾಲಯವೊಂದಕ್ಕೆ ಬೇಲಿ ಹಾಕಲಾಗಿತ್ತು. ಅಲ್ಲೇ ಪುರಾತತ್ವ ಇಲಾಖೆಯ ನೀಲಿ ಮತ್ತು ಕೆಂಪು ಬಣ್ಣದ ಫಲಕ! ಹೊರಗಿನಿಂದ ನೋಡಿದರೆ ಎಲ್ಲರೂ ನಿರ್ಲಕ್ಷಿಸಲೇಬೇಕಾದ ದೇವಸ್ಥಾನ. ಇದೇ ಪುರಾತತ್ವ ಇಲಾಖೆ ಮೈಲಾರದಲ್ಲಿ ತನ್ನ ಸುಪರ್ದಿಗೆ ಪಡೆದಿರುವ ಹಳೇ ಮೈಲಾರಲಿಂಗೇಶ್ವರ ದೇವಾಲಯ. ಒಳಗೆಲ್ಲಾ ಕಸಕಡ್ಡಿಗಳ ರಾಶಿ. ಗರ್ಭಗುಡಿಯಲ್ಲಿ ಪಾಣಿಪೀಠ ರಹಿತ ಶಿವಲಿಂಗ, ಅಂತರಾಳ ಮತ್ತು ನವರಂಗ.


ಆದರೆ ಈ ದೇವಾಲಯದಲ್ಲೊಂದು ನನ್ನನ್ನು ಬಹಳ ಗಲಿಬಿಲಿ ಮಾಡಿದ ವೈಶಿಷ್ಟ್ಯತೆಯಿತ್ತು. ಅದೆಂದರೆ ೨ ನಂದಿಗಳು. ಇದರಲ್ಲೇನೂ ದೊಡ್ಡ ವಿಷಯ ಎಂದಿರಾ? ಒಂದು ನಂದಿ ಅಂತರಾಳದಲ್ಲಿದ್ದರೆ ಇನ್ನೊಂದು ನವರಂಗದಲ್ಲಿದೆ. ನವರಂಗದಲ್ಲಿರುವ ನಂದಿ ಗರ್ಭಗುಡಿಗೆ ಮುಖ ಮಾಡಿ ಇದೆ. ಆದರೆ ಅಂತರಾಳದಲ್ಲಿರುವ ನಂದಿ ಗರ್ಭಗುಡಿಗೆ ಬೆನ್ನು ಮಾಡಿ ಆಸೀನನಾಗಿದೆ!!! ಇದೇ ವಿಶೇಷ. ನಂದಿ ಎಂದಾದರೂ ತನ್ನ ಸ್ವಾಮಿ ಶಿವನಿಗೆ ಬೆನ್ನು ಮಾಡಿ ಕೂತಿರುವುದನ್ನು ಕಂಡಿದ್ದೀರಾ? ಆದರೆ ಇಲ್ಲಿ ಹಾಗಿತ್ತು. ಆ ನಂದಿ ಮೊದಲಿನಿಂದಲೂ ಅಲ್ಲೇ ಇತ್ತೋ ಅಥವಾ ನಂತರ ತಂದಿರಿಸಲಾಯಿತೋ ಎಂದು ತಿಳಿಯಲಿಲ್ಲ. ನಂತರ ತಂದಿರಿಸಿದರೂ, ಹೀಗೆ ಶಿವಲಿಂಗಕ್ಕೆ ಬೆನ್ನು ಮಾಡಿ ಯಾಕೆ ಇರಿಸುತ್ತಾರೆ..ಎಂಬ ಪ್ರಶ್ನೆ ಬಹಳ ಕಾಡಿತು. ಈಗಲೂ ಕಾಡುತ್ತಿದೆ.

ಅಷ್ಟರಲ್ಲಿ ಹುಡುಗನೊಬ್ಬ ಪ್ರತ್ಯಕ್ಷನಾದ. ’ನಮ್ಮಜ್ಜ ಈ ಗುಡಿ ನೋಡ್ಕೋತಾನ್ರಿ’ ಎಂದ. ’ನಿಮ್ಮಜ್ಜ ಈ ಕಸ ತೆಗೆದು ಗುಡಿ ಸ್ವಚ್ಛ ಮಾಡಲ್ಲೇನು’? ಎಂದು ಕೇಳಿದರೆ.... ’ನಿಮ್ಮಂತ ಮಂದಿ ಬರ್ತಾರ್ರಿ... ಹೊಲಸ್ ಮಾಡ್ತಾರ್ರಿ... ಹಂಗೇ ಹೋಗ್ತಾರ್ರಿ ....ನಮ್ಮಜ್ಜಂದೇನೂ ಇಲ್ರಿ...’ ಎನ್ನಬೇಕೆ. ಎಲಾ ಇವನ ಎಂದೆ. ’ಎಲ್ಲಿ ನಿಮ್ಮಜ್ಜ’ ಎಂದು ಕೇಳಲು...’ಆರಾಮ್ ತಗೊಳಾಕ್-ಹತ್ತಾರ್ರಿ...ಅದ್ಕೆ ನಾನ್ ಇಲ್ಲಿದ್ದೀನ್ರಿ’ ಎಂದ. ದೇವಾಲಯದ ಹೆಸರೇನೆಂದು ಕೇಳಲು, ನಾಗರಾಜ ದೇವಾಲಯವೆಂದ! ’ಏನ್ ಮಾತಾಡ್ತಿಲೇ..ಇಷ್ಟ್ ಮಸ್ತ್ ಶಿವಲಿಂಗ ಐತಿ...ಈಶ್ವರ ಗುಡಿ ಅನ್ನೋದ್ ಬಿಟ್ಟ್ ನಾಗರಾಜ ಗುಡಿ ಅಂತಿಯಲ್ಲೇ’ಎಂದೆ. ’ಏ ಇಲ್ರೀ ಸರ...ನಾಗರಾಜ ಗುಡಿನೇ. ನಮ್ಮಜ್ಜ ನೋಡ್ಯಾನ. ಅಂವ ರಾತ್ರಿ ಇಲ್ಲೇ ಇರ್ತಾನ. ನಾಗ್ರಹಾವು ಬರ್ತದ. ಇಲ್ಲಿ ಕುತ್ಕೊಳ್ತದ’ ಎಂದು ಶಿವಲಿಂಗವನ್ನು ತೋರಿಸಿದ. ’ಬೇರೆ ಯಾರ್ ನೋಡ್ಯಾರ ನಾಗರಹಾವ್ನ..? ಎಂದು ಕೇಳಿದರೆ..’ಏ ಯಾರೂ ನೋಡಿಲ್ರೀ...ನಮ್ಮಜ್ಜ ಮಾತ್ರ ನೋಡ್ಯಾನ..’ಎಂದ. ಅಜ್ಜ ಕಟ್ಟಿದ ಕತೆಯೋ...ಮೊಮ್ಮಗ ಕಟ್ಟಿದ ಕತೆಯೋ ತಿಳಿಯಲೇ ಇಲ್ಲ.


ಇನ್ನೇನು ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಹೊರಡಬೇಕೆನ್ನುವಾಗ ರಾಜಭಟರ ದಿರಿಸು ಧರಿಸಿದ ವ್ಯಕ್ತಿಯೊಬ್ಬ ದಾರಿಗಡ್ಡವಾಗಿ ಬಂದುಬಿಟ್ಟ. ಆತನ ಹಿಂದೆ ಮಕ್ಕಳ ಸೈನ್ಯ. ಆ ವ್ಯಕ್ತಿ ನಮ್ಮ ಬಳಿಗೆ ಬಂದು ಹಲ್ಲು ಕಿರಿಯುತ್ತಾ ನಿಂತು ಕೈ ಸನ್ನೆಯಲ್ಲಿ ಏನೇನೋ ಹೇಳತೊಡಗಿದ. ಆತನಿಗೆ ಮಾತು ಬರುವುದಿಲ್ಲ ಎಂದು ತಿಳಿಯಲು ಗೆಳೆಯ ನಿರಂಜನ ಆತನಿಗೆ ಸ್ವಲ್ಪ ಹಣ ಕೊಟ್ಟು ಭುಜ ತಟ್ಟಿದಾಗ ದೊಡ್ಡ ನಗುವನ್ನು ಬೀರಿದ ಆತನ ಪೇಟದ ಬಗ್ಗೆ ಮಾತನಾಡುತ್ತಾ ಹಿರೆಹಡಗಲಿಯತ್ತ ಪ್ರಯಾಣ ಮುಂದುವರಿಸಿದೆವು.

ಗುರುವಾರ, ಡಿಸೆಂಬರ್ 04, 2008

ಒಂದು ಶಬ್ದದ ಸುತ್ತ

ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ನನಗುಂಟಾದ ಆಡುಭಾಷೆಯ ಪ್ರಾರಂಭಿಕ ತೊಂದರೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರದೇ ಇರದು. ಒಂದೆರಡು, ಆಗ ’ವಿಚಿತ್ರ’ವೆನಿಸಿದ ಶಬ್ದಗಳ ಬಗ್ಗೆ ನಾನು ತಲೆ ಕೆಡಿಸಿಕೊಂಡ ಪರಿಯನ್ನು ಇಂದಿಗೂ ನೆನೆಸಿ ಗೆಳೆಯರು ಜೋಕ್ ಮಾಡುತ್ತಾ ಇರುತ್ತಾರೆ. ಬಾಗಲಕೋಟೆಯ ಅನಿಲ್ ಢಗೆ ನನ್ನ ’ರೂಮ್ ಮೇಟ್’ ಆಗಿದ್ದ. ಈ ಮರಾಠ ಹುಡುಗನ ಕನ್ನಡವೇ ವಿಚಿತ್ರವಾಗಿತ್ತು. ಅತ್ತ ಹುಬ್ಬಳ್ಳಿದ್ದೂ ಅಲ್ಲದ, ಇತ್ತ ಬಾಗಲಕೋಟೆಗೂ ಸಲ್ಲದ, ಮಧ್ಯೆ ಬೆಳಗಾವಿಗೂ ಹೊಂದದ ಕನ್ನಡವನ್ನು ಅನಿಲ್ ವಟಗುಟ್ಟುತ್ತಿದ್ದ.

’ಕಟದ’ ಎಂಬುದು ನನಗೆ ಬಹಳ ತೊಂದರೆಯನ್ನುಂಟುಮಾಡಿದ ಶಬ್ದ. ಅರ್ಥ ಯಾವ ಪುಸ್ತಕದಲ್ಲೂ ಸಿಗಲಾರದು. ಪ್ಯೂರ್ ಆಡುಭಾಷೆ. ಸಹಪಾಠಿಯೊಬ್ಬ ವೇಗವಾಗಿ ಬೈಕ್ ಚಲಾಯಿಸಿ ಬಂದಾಗ, ಉಳಿದವರು ’ಏನ್ ಗಾಡಿ ಕಟದ!’ ಎಂದು ಹುಬ್ಬೇರಿಸುವರು. ಸಂಜೆ ರೂಮಿಗೆ ಮರಳಿದ ಬಳಿಕ ನನ್ನದು ಅನಿಲನೆದುರು ಪ್ರಶ್ನೆ - ’ಏನ್ ಗಾಡಿ ಕಟದ!’, ಹಾಗೆಂದರೇನು? ಏನೂ ಅರಿಯದ ಮುಗ್ಧನೊಬ್ಬನಿಗೆ ತಿಳಿಹೇಳುವ ಮಾಸ್ತರನಂತೆ ಅನಿಲ್ ನನಗೆ ೫ ನಿಮಿಷ ವಿವರಿಸಿ ಎಳೆ ಎಳೆಯಾಗಿ ಬಿಡಿಸಿ ತಿಳಿಸುತ್ತಿದ್ದ ’ ಹಾಗೆಂದರೆ, ಆಹ್ ಎನ್ ಫಾಸ್ಟ್ ಆಗಿ ಬೈಕ್ ಬಿಟ್ಕೊಂಡ್ ಬಂದ’ ಎಂದು. ಅಂದ್ರೆ ವೇಗವಾಗಿ ದ್ವಿಚಕ್ರ ವಾಹನವನ್ನು ಚಲಾಯಿಸಿದರೆ ’ಕಟದ’ ಅಂತಾರೆ, ಎಂದು ಹೊಸ ಶಬ್ದ ಕಲಿತಿದ್ದಕ್ಕೆ ಸಂತಸಪಟ್ಟೆ.

ಕೆಲವು ದಿನಗಳ ಬಳಿಕ ಗೆಳೆಯ ನವೀನ, ’ರಾಜಾ, ನಿನ್ನೆ ರಾತ್ರಿ ಊಟಕ್ ಹೋಗಿದ್ವಿ ದೋಸ್ತ...... ಭಟ್ಟಾ ಕುಂತವ ಏಳ್ಲೇ ಇಲ್ಲ ದೋಸ್ತ....ಕಟದ ಕಟದ ಕಟದ...ಅವನವ್ವನ ಹೀಂಗ್ ಕಟದ ಅಂತೀನಿ’ ಎನ್ನತೊಡಗಿದ. ’ಊಟಕ್ಕೆ ಕೂತಲ್ಲೇ ಭಟ್ಟ ವೇಗವಾಗಿ ಬೈಕ್ ಒಡಿಸಿದ್ನಾ?’ ಎಂದು ಕೇಳಲಿಕ್ಕೆ ಬಾಯಿ ತೆರೆದವ, ಅದು ಹೇಗೆ ಸಾಧ್ಯ ಎಂದೆನಿಸಿ ಸುಮ್ಮನಾದೆ. ಈ ಬಾಗಲಕೋಟೆಯ ಬದ್ಮಾಶ್ ನನಗೇನಾದ್ರು ತಪ್ಪು ಅರ್ಥ ಹೇಳಿಕೊಟ್ಟಿತೊ ಹೇಗೆ? ವಿಚಾರಿಸೋಣ ಎಂದು ರೂಮಿಗೆ ಬಂದೊಡನೆ ಅನಿಲನಿಗೆ ಎಲ್ಲಾ ವಿವರಿಸಿದೆ. ಬಿದ್ದು ಬಿದ್ದು ನಕ್ಕ ಆತ, ’ಹೊಟ್ಟೆಬಾಕನಂತೆ ಊಟ ಮಾಡಿದರೂ’ ಕಟದ ಅಂತಾರೆ ಎಂದು ಮತ್ತೊಂದು ಪಾಠ ಮಾಡಿದ.

ಮುಂದಿನ ದಿನಗಳಲ್ಲಿ, ಚೆನ್ನಾಗಿ ಬಾಡಿ ಹಾಗೂ ಕಟ್ಸ್ ಮೈಂಟೈನ್ ಮಾಡಿಕೊಂಡಿದ್ದ ಸುಪ್ರೀತ್ ತಾನು ಯಾರಿಗೋ ಧಾರವಾಡದಲ್ಲಿ ತದಕಿದ ಬಗ್ಗೆ ’ಹೀಂಗ್ ಕಟದೆ ದೋಸ್ತ ಅವಂಗೆ..... ’ ಅಂದಾಗ, ಇಲ್ಲಿ ಬೈಕ್ ಮತ್ತು ಊಟ ಎರಡೂ ಮ್ಯಾಚ್ ಆಗ್ತಾ ಇಲ್ವಲ್ಲಾ ಎಂದು ಮತ್ತೆ ಅನಿಲನಲ್ಲಿ ಓಡಿದೆ. ಈ ಬಾರಿಯಂತೂ ಆತ, ’ಯೆ ಯಾವ್ವಲೇ ನೀನ’ ಎಂದು ದೊಡ್ಡದಾಗಿ ನಗುತ್ತಾ ’ಚೆನ್ನಾಗಿ ಎರಡೇಟು ಕೊಟ್ಟರೂ ಕಟದ ಅಂತಾರೆ’ ಅಂದ.

ಮತ್ತೆ ನನಗೆ ಅರಿವಾಗತೊಡಗಿತು - ಸ್ವಲ್ಪ ಅತಿಯಾಗಿ ಯಾವುದನ್ನು ಮಾಡಿದರೂ ಅದಕ್ಕೆ ’ಕಟದ’ ಶಬ್ದವನ್ನು ಬಳಸಿ ವಾಕ್ಯ ರಚಿಸುತ್ತಾರೆ ಎಂದು. ಕ್ರಿಕೆಟ್ ಪಂದ್ಯದ ಸಮಯದಲ್ಲಿ ಸಚಿನ್ ಚೆನ್ನಾಗಿ ಸ್ಕೋರ್ ಮಾಡಿದ್ರೆ ’ಸಚಿನ್ ಏನ್ ಕಟದ ದೋಸ್ತ’ ಎಂದು, ಐದಾರು ಬಾಳೆಹಣ್ಣು ತಿಂದರೆ ’ ಏನ್ ಬಾಳೆಹಣ್ ಕಟಿತೀಲೆ’ ಎಂದು, ಅತಿಯಾಗಿ ಸ್ವೀಟ್ಸ್ ತಿಂದರೆ ’ಅಂವ, ಖತ್ರು(ಖತರ್ನಾಕ್) ಸ್ವೀಟ್ ಕಟದ ದೋಸ್ತ’ ಎಂದು, ವೇಗವಾಗಿ ಬಸ್ ಚಲಾಯಿಸುವ ಚಾಲಕನಿಗೆ ’ಅಂವ ಏನ್ ಕಟೀತಾನ್ಲೇ’ ಎಂದು, ಭರ್ಜರಿ ಊಟ ಮಾಡಿದರೆ ’ಮದ್ವಿ ಊಟ ಶಿಸ್ತ್ ಕಟದೇವ್’ ಎಂದು ಹೀಗೆ..... ಸಾಗುತ್ತದೆ ’ಕಟದ’ ಎಂಬ ಶಬ್ದದ ಸಾರ್ವಭೌಮತೆ.

ಬುಧವಾರ, ಡಿಸೆಂಬರ್ 03, 2008

ಕಲ್ಲೇಶ್ವರ ದೇವಾಲಯ - ಬೇತೂರು


೦೮-೦೩-೨೦೦೮.

ಬೇತೂರಿನಲ್ಲೊಂದು ಶಿವ ದೇವಸ್ಥಾನವಿದೆ ಎಂದು ಗೆಳೆಯ ನಿರಂಜನ ಪಾಟೀಲನೊಂದಿಗೆ ಹುಡುಕಿಕೊಂಡು ಹೊರಟರೆ ಆ ಊರಿನ ಯುವಕರಿಗೇ ಗೊತ್ತಿಲ್ಲದ ಪರಿಸ್ಥಿತಿ. ನಂತರ ಊರ ಹಿರಿಯರೊಬ್ಬರು ನಮ್ಮನ್ನು ದೇವಸ್ಥಾನದೆಡೆಗೆ ಕರೆದೊಯ್ದರಲ್ಲದೆ ಅವರೇ ದೇವಸ್ಥಾನದ ಒಳಗೆಲ್ಲಾ ತೋರಿಸಿದರು. ನಮ್ಮ ಅದೃಷ್ಟಕ್ಕೆ ದೇವಸ್ಥಾನದ ಚಾವಿ ಈ ಹಿರಿಯರಲ್ಲೇ ಇತ್ತು.


ಇದು ಬೇತೂರಿನ ಕಲ್ಲೇಶ್ವರ ದೇವಸ್ಥಾನ. ಊರಿನವರು ಸುಣ್ಣ ಬಳಿದು ದೇವಾಲಯದ ಅಂದವನ್ನು ಸಾಧಾರಣ ಮಟ್ಟಕ್ಕೆ ಇಳಿಸಿದ್ದಾರೆ. ಪಾಂಡ್ಯ ದೊರೆ ತ್ರಿಭುವನ ಮಲ್ಲನ ರಾಜಧಾನಿಯಾಗಿತ್ತು ಬೇತೂರು. ಸುಂದರ ಪರಿಸರದಲ್ಲಿ ನೆಲೆಗೊಂಡಿರುವ ಕಲ್ಲೇಶ್ವರ, ಊರವರಿಂದ ದಿನಾಲೂ ಪೂಜಿಸಲ್ಪಡುತ್ತಾನೆ. ದೇವಾಲಯವನ್ನು ದಿನವೂ ಸ್ವಚ್ಛಗೊಳಿಸಲಾಗುತ್ತದೆ.


ಯಾರಿಂದ ನಿರ್ಮಿಸಲ್ಪಟ್ಟಿತು ಎಂಬ ಮಾಹಿತಿಯಿಲ್ಲ ಮತ್ತು ಊಹೆ ಮಾಡುವುದೂ ಕಷ್ಟದ ಕೆಲಸ. ಈ ಏಕಕೂಟ ದೇವಾಲಯದ ಗೋಪುರ ಬಹಳ ಸಣ್ಣದಾಗಿದೆ. ಗರ್ಭಗುಡಿ, ಅಂತರಾಳ, ೪ ಕಂಬಗಳ ನವರಂಗ/ಸುಖನಾಸಿ ಮತ್ತು ೧೬ ಕಂಬಗಳ ಮುಖಮಂಟಪ. ನಂದಿ ಅಂತರಾಳದಲ್ಲೇ ಆಸೀನನಾಗಿದ್ದಾನೆ.


ಗರ್ಭಗುಡಿಯಲ್ಲಿ ಪಾಣಿಪೀಠ ಸುಮಾರು ೨ ಅಡಿ ಎತ್ತರವಿದ್ದು, ಅದರ ಮೇಲೊಂದು ಸುಂದರ ಶಿವಲಿಂಗ. ಊರವರೇ ಶಿವಲಿಂಗಕ್ಕೆ ಮುಖವನ್ನೊಂದು ಮಾಡಿದ್ದು, ಈ ಮುಖದಿಂದ ಲಿಂಗವನ್ನು ಅಲಂಕರಿಸಿಯೇ ಪೂಜೆ ನಡೆಯುತ್ತದೆ. ಅಂತರಾಳದಲ್ಲೊಂದು ದೇವಿಯ ಸುಂದರ ಕಲ್ಲಿನ ಮೂರ್ತಿಯಿದೆ. ನವರಂಗದ ಛಾವಣಿಯಲ್ಲಿ ನಾಲ್ಕು ಕಂಬಗಳ ನಡುವಿನ ಜಾಗವನ್ನು ೯ ಚೌಕಗಳನ್ನಾಗಿ ವಿಂಗಡಿಸಿ, ಪ್ರತಿಯೊಂದರಲ್ಲೂ ಸುಂದರ ಕಲಾಕೃತಿಗಳನ್ನು ಕೆತ್ತಲಾಗಿದೆ. ಇವೆಲ್ಲಾ ಏನೆಂದು ತಿಳಿಯಲಿಲ್ಲ. ಒಂದೆರಡನ್ನು ಹಾಳುಮಾಡಲಾಗಿತ್ತು. ಯಾರೋ ಅದನ್ನು ನಿಧಿ ಸಿಗಬಹುದು ಎಂದು ಎಳೆದು ತೆಗೆದಿದ್ದರು. ಹೊರಗೆ ಬಿದ್ದ ಆ ತುಂಡುಗಳನ್ನು ಮತ್ತೆ ಹಾಗೇ ಜೋಡಿಸಿದ್ದೇವೆ ಎಂದು ಊರಿನವರೊಬ್ಬರು ತಿಳಿಸಿದರು. ಉಳಿದ ಚೌಕಗಳಲ್ಲಿ ಸುಂದರ ಕೆತ್ತನೆ. ಆದರೆ ಕಪ್ಪು ಬಣ್ಣ ಮೆತ್ತಿ ಎಲ್ಲವೂ ಹಾಳಾಗುತ್ತಿವೆ. ದೇವಾಲಯದ ನೆಲಕ್ಕೆ ’ರೆಡ್ ಆಕ್ಸೈಡ್’ ಸಾರಿ ’ನವೀಕರಣ’ದ ಪ್ರಯತ್ನ ಮಾಡಲಾಗಿದೆ.


ದೇವಾಲಯದ ಬದಿಯಲ್ಲೇ ಸಣ್ಣ ಕಾಲುವೆಯೊಂದಿದ್ದು ಜಲಕ್ರೀಡೆಯಾಡಲು ಸೂಕ್ತಸ್ಥಳ. ಸುತ್ತಲೂ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಇನ್ನೊಂದೆಡೆ ತೋಟಗಳಲ್ಲಿ ತೆಂಗು ಬಾಳೆ ಗಿಡಗಳು. ಇವೆಲ್ಲದರ ನಡುವೆ ಕಲ್ಲೇಶ್ವರ.


ಆ ಸುಂದರ ಪರಿಸರದಲ್ಲಿ ಹಳ್ಳಿಯ ಹಿರಿಯರೊಂದಿಗೆ ಒಂದಷ್ಟು ಹರಟೆ ಹೊಡೆದು ದಾವಣಗೆರೆಗೆ ಹಿಂತಿರುಗಬೇಕಾದರೆ ಸೂರ್ಯ ಸಂಜೆಯ ಕೆಂಪು ರಂಗನ್ನು ಪಡೆದಿದ್ದ.

ಮಂಗಳವಾರ, ಡಿಸೆಂಬರ್ 02, 2008

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ. ಅವರ ತೆರಳುವಿಕೆ ಸರಳವಾಗಿರಲಿಲ್ಲ. ಕೆ.ಎಸ್.ಸಿ.ಎ ಅಧಿಕಾರಿಗಳು ಮತ್ತು ಯೆರೆ ನಡುವೆ ಪರದೆ ಹಿಂದೆ ಗುದ್ದಾಟ ನಡೆದಿತ್ತು. ಇತ್ತ ಕರ್ನಾಟಕವನ್ನು ಬಿಡಲು ಆಗದೆ ಅತ್ತ ಮೇಲಧಿಕಾರಿಗಳ ಆದೇಶವನ್ನು ಕಡೆಗಣಿಸಲೂ ಆಗದೆ ಪೇಚಿಗೆ ಸಿಲುಕಿದ ಯೆರೆ ಕಡೆಗೂ ಕರ್ನಾಟಕವನ್ನು ಬಿಡಬೇಕಾಯಿತು.

ಯೆರೆ ೧೦೦ ಪಂದ್ಯಗಳನ್ನು ಪೂರೈಸಿದ ಬಗ್ಗೆ ಕ್ರಿಕ್ ಇನ್ಫೋ ದಲ್ಲಿ ಅವರ ಬಗ್ಗೆ ಚೆನ್ನಾದ ಲೇಖನ ಬಂದಿದೆ. ಇಲ್ಲಿ ಓದಬಹುದು. ವೆಲ್ ಡನ್ ಗೌಡ್ರೆ.

ಸೋಮವಾರ, ಡಿಸೆಂಬರ್ 01, 2008

ಉಡುಪಿ ಯೂತ್ ಹಾಸ್ಟೆಲ್ ರಾಜ್ಯ ಮಟ್ಟದ ಚಾರಣದ ಇನ್ನಷ್ಟು ಚಿತ್ರಗಳು


ಇಲ್ಲಿವೆ ನಾನು ತೆಗೆದ ಕೆಲವು ಚಿತ್ರಗಳು. ಈ ಚಾರಣ ಕಾರ್ಯಕ್ರಮ ನನಗಂತೂ ಬಹಳ ಸುಂದರ ನೆನಪು. ಉಡುಪಿ ಯೂತ್ ಹಾಸ್ಟೆಲ್ ಗೆಳೆಯರ ಪರಿಚಯವಾಗಿದ್ದು ೨೦೦೪ರಲ್ಲಿ. ಅದಾಗಲೇ...
೧. ಕಿಲ್ಲೂರು-ಬೊಳ್ಳೆ-ಕುದುರೆಮುಖ-ನಾಲೂರು-ಸಂಸೆ ರಾಜ್ಯ ಮಟ್ಟದ ಚಾರಣ,
೨. ಮಾಳ-ಮಾಳ ಚೌಕಿ-ಕುರಿಂಜಾಲು-ಭಗವತಿ ರಾಜ್ಯ ಮಟ್ಟದ ಚಾರಣ,
೩. ಅಮಾಸೆಬೈಲು-ಹುಲ್ಲುಗುಡ್ಡ-ಎಮ್ಕೆಲ್ ಕೆರೆ-ಆಗುಂಬೆ ರಾಜ್ಯ ಮಟ್ಟದ ಚಾರಣ ಮತ್ತು
೪. ಕೂಡ್ಲು-ಬರ್ಕಣ-ಮಲ್ಲಂದೂರು-ನರಸಿಂಹ ಪರ್ವತ-ಸಿರಿಮನೆ ರಾಜ್ಯ ಮಟ್ಟದ ಚಾರಣಗಳನ್ನು
ಯಶಸ್ವಿಯಾಗಿ ನಿಭಾಯಿಸಿ ಅನುಭವವಿದ್ದ ಗುಂಪು ಇದು.


ಬೇಸ್ ಕ್ಯಾಂಪ್ ಮಾವಿನಕಾರಿಗೆ ಸಂಜೆಯ ಹೊತ್ತಿಗೆ ಆಗಮಿಸಿದ ಪರಮೇಶ್ವರ ಭಟ್ಟರು ಅಲ್ಲೇ ಸಮೀಪದಲ್ಲಿ ಹರಿಯುವ ತೊರೆಯ ಬಳಿ ಕುಳಿತು ರಿಲ್ಯಾಕ್ಸ್ ಮಾಡುತ್ತಿದ್ದಾರೆ.


ಆದರೆ ಈ ಎಲ್ಲಾ ಚಾರಣ ಕಾರ್ಯಕ್ರಮಗಳು ನನಗೆ ಇವರ ಪರಿಚಯವಾಗುವ ಮೊದಲೇ ಆದ ಕಾರ್ಯಕ್ರಮಗಳು. ಆಯೋಜಕರಲ್ಲಿ ಒಬ್ಬನಾಗಿ ಮಾವಿನಕಾರು-ಬಾವುಡಿ-ತೀರ್ಥಬರೆ-ಮೇಗಣಿ-ದೇವಕುಂದ-ಮೇಗಣಿ-ಹುಲ್ಕಡಿಕೆ ಚಾರಣ ನನಗೆ ಅವಿಸ್ಮರಣೀಯ ನೆನಪು. ೨೦೦೩ರ ಬಳಿಕ ೫ ವರ್ಷಗಳ ನಂತರ ಉಡುಪಿ ಯೂತ್ ಹಾಸ್ಟೆಲ್ ಒಂದು ರಾಜ್ಯ ಮಟ್ಟದ ಚಾರಣವನ್ನು ಯಶಸ್ವಿಯಾಗಿ ಆಯೋಜಿಸಿತು.


ಹೆಚ್ಚಿನ ಚಿತ್ರಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಈ ರಾಜ್ಯ ಮಟ್ಟದ ಚಾರಣದಲ್ಲಿ ಭಾಗವಹಿಸಿದ ಚಾರಣಿಗರಲ್ಲಿ ಕೆಲವರು ತೆಗೆದ ಚಿತ್ರಗಳನ್ನು ಈ ಕೆಳಗಿನ ಕೊಂಡಿಗಳಲ್ಲಿ ಕಾಣಬಹುದು.
ರವಿ ಎಸ್. ಘೋಷ್, ಪರಮೇಶ್ವರ ಭಟ್, ಗೌರಿಶಂಕರ್, ವಿನಯ್, ಜಗದೀಶ್ ಕುಮಾರ್, ಗುಣಸೇಕರನ್, ಗಿರೀಶ್, ಮಹೇಶ

ಸೋಮವಾರ, ನವೆಂಬರ್ 24, 2008

ಉಡುಪಿ ಯೂತ್ ಹಾಸ್ಟೆಲ್ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳು


ಉಡುಪಿ ಯೂತ್ ಹಾಸ್ಟೆಲ್, ನವೆಂಬರ್ ೧೩,೧೪,೧೫ ಮತ್ತು ೧೬ರಂದು ಆಯೋಜಿಸಿದ ರಾಜ್ಯ ಮಟ್ಟದ ಚಾರಣದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ. ಅರಣ್ಯ ಇಲಾಖೆಯ ಕೊನೆಯ ಗಳಿಗೆಯ ನಖರಾ ಮತ್ತು ದರ್ಪದ ಹೊರತಾಗಿಯೂ ನಾವು ಈ ಚಾರಣವನ್ನು ಯಾವುದೇ ವಿಘ್ನವಿಲ್ಲದೇ ನಡೆಸಿದ್ದೇ ಸೋಜಿಗವೆನಿಸುತ್ತಿದೆ. ೬೪ ಚಾರಣಿಗರು ಭಾಗವಹಿಸಿ, ನಮ್ಮ ನಿರೀಕ್ಷೆಗೂ ಮೀರಿ ಈ ಚಾರಣ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಅವರಿಗೆಲ್ಲರಿಗೂ ಉಡುಪಿ ಯೂತ್ ಹಾಸ್ಟೆಲ್ ಆಭಾರಿ. ಮೇಲೆ ಇರುವುದು ಎಲ್ಲಾ ಚಾರಣಿಗರ ಗ್ರೂಪ್ ಚಿತ್ರ.



ಗೆಳೆಯ ಗುರುದತ್ ಕಾಮತ್ ಒಬ್ಬ ಅಸಾಮಾನ್ಯ ಫೋಟೋಗ್ರಾಫರ್. ಯಾವುದೇ ಚಿತ್ರಗಳನ್ನು ಇವರು ನಂತರ ಸ್ಪೆಷಲ್ ಎಫೆಕ್ಟ್ಸ್ ಹಾಕಿ ಚಂದ ಕಾಣುವಂತೆ ಮಾಡುವುದಿಲ್ಲ. ಬದಲಾಗಿ ಚಿತ್ರಗಳನ್ನೇ ಅಷ್ಟು ಚೆನ್ನಾಗಿ ಕ್ಲಿಕ್ ಮಾಡುತ್ತಾರೆ. ಇಲ್ಲಿ ಎಲ್ಲಾ ಅವರು ತೆಗೆದ ಚಿತ್ರಗಳನ್ನೇ ಹಾಕಿದ್ದೇನೆ. ನಾನು ತೆಗೆದ ಸೆಕೆಂಡ್ ಕ್ಲಾಸ್ ಚಿತ್ರಗಳು ಸ್ವಲ್ಪ ದಿನಗಳ ನಂತರ. ಬೇಸ್ ಕ್ಯಾಂಪ್ ಇದ್ದದ್ದು ಮಾವಿನಕಾರಿನಲ್ಲಿ. ನಮ್ಮ ಅಡುಗೆಯ ತ್ರಿಮೂರ್ತಿಗಳೂ ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಕಾರಣವೂ ಹೌದು. ಮಾವಿನಕಾರಿನಲ್ಲಿ ೧೩ನೇ ತಾರೀಕಿನ ರಾತ್ರಿ ಗೇರು ಮರಗಳ ಕೆಳಗೆ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ.


ನಮ್ಮ ಬೇಸ್ ಕ್ಯಾಂಪ್ - ಮಾವಿನಕಾರು. ಸಮೀಪದಲ್ಲೇ ತೊರೆಯೊಂದು ಹರಿಯುತ್ತಿರುವುದರಿಂದ ಎಲ್ಲರೂ ಈ ಜಾಗವನ್ನು ಬಹಳ ಇಷ್ಟಪಟ್ಟರು.


೧೪ನೇ ತಾರೀಕಿನಂದು ಮಾವಿನಕಾರು-ಬಾವುಡಿ-ಮೇಲ್ಬಾವುಡಿ-ತೀರ್ಥಬರೆ ಜಲಧಾರೆ-ಮೇಗಣಿ ಚಾರಣ ಆರಂಭವಾಗುವ ಮೊದಲು ನಮ್ಮ ಲೀಡರ್ ಪ್ರೊಫೆಸರ್ ಕೆ.ಎಸ್. ಅಡಿಗರು ಚಾರಣಿಗರಿಗೆ ಸೂಚನೆಗಳನ್ನು ನೀಡುತ್ತಿರುವುದು.


ವಲಯ ಅರಣ್ಯಾಧಿಕಾರಿಗಳು ಚಾರಣಿಗರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನಾಡುತ್ತಿದ್ದಾರೆ.


ವಲಯ ಅರಣ್ಯಾಧಿಕಾರಿಗಳು ರಾಜ್ಯ ಮಟ್ಟದ ಚಾರಣಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಾರೆ. ಎಲ್ಲಾ ಚಾರಣಿಗರಿಗಿಂತ ಮುಂದೆ ನಮ್ಮ ಸುಹಾಸ್ ಕಿಣಿಯವರಿದ್ದರೆ, ಎಲ್ಲರಿಗಿಂತ ಹಿಂದೆ ವಿವೇಕ್ ಕಿಣಿಯವರಿದ್ದರು. ಇವರಿಬ್ಬರ ನಡುವೆಯೇ ಎಲ್ಲಾ ೬೪ ಚಾರಣಿಗರು ಇರಬೇಕೆಂದು ಸೂಚಿಸಲಾಗಿತ್ತು.


ಮೇಗಣಿಯಲ್ಲಿ ಅಡುಗೆಯ ಸ್ಥಳ. ಒಂಟಿ ಗೇರು ಮರವೊಂದರ ಕೆಳಗೆ.

ಮೇಗಣಿ ಕ್ಯಾಂಪ್ ಸೈಟ್

ಮುಸ್ಸಂಜೆಯ ಸಮಯದಲ್ಲಿ ಮೇಗಣಿ ಕ್ಯಾಂಪ್ ಸೈಟ್

ಮೇಗಣಿ ಕ್ಯಾಂಪ್ ಸೈಟ್! ಚಿತ್ರದ ಬಲದಲ್ಲಿರುವ ಶಿಖರವೇ ದೇವಕುಂದ!

ಮೇಗಣಿಯಲ್ಲಿ ಮುಂಜಾನೆ ಉಪಹಾರದ ಸಮಯ

೧೫ನೇ ತಾರೀಕು ಮೇಗಣಿ - ಕುನ್ನಿಕಟ್ಟೆ - ದೇವಕುಂದ - ಹದ್ದುಬರೆ - ಗಾಳಿಗುಡ್ಡ - ಮೇಗಣಿ ಚಾರಣಕ್ಕೆ ಎಲ್ಲರೂ ರೆಡಿ

ಮುಸ್ಸಂಜೆ ಮೋಡಗಳ ಚಿತ್ತಾರ

೧೫ನೇ ತಾರೀಕು ರಾತ್ರಿ ಕ್ಯಾಂಪ್ ಬೆಂಕಿ!

ಆಯೋಜಕರು

ರಾತ್ರಿ ವೇಳೆ ಮೇಗಣಿ ಕ್ಯಾಂಪ್ ಸ್ಥಳದ ನೋಟ

೧೬ನೇ ತಾರೀಕು ಮುಂಜಾನೆ ಮೇಗಣಿ ಕ್ಯಾಂಪ್ ಸ್ಥಳದ ರಮಣೀಯ ನೋಟ

ಗಗನದ ಚೆಲುವು

ಮೇಗಣಿ!

೧೬ನೇ ತಾರೀಕು ಮೇಗಣಿ-ಹುಲ್ಕಡಿಕೆ ಚಾರಣದ ಆರಂಭ

ಹುಲ್ಕಡಿಕೆಯ ದಾರಿಯಲ್ಲಿ

೩ ದಿನಗಳ ಚಾರಣದ ಬಳಿಕ ದಣಿದ ಚಾರಣಿಗರು ಹುಲ್ಕಡಿಕೆಯ ದೇವಾಲಯದಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ...

ಗುರುದತ್ ತೆಗೆದಿರುವ ಎಲ್ಲಾ ಚಿತ್ರಗಳನ್ನು ಇಲ್ಲಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು.