ಭಾನುವಾರ, ಜುಲೈ 29, 2007

ಜೋಗ - ಭೀಮೇಶ್ವರ


ಇದು ಭೀಮೇಶ್ವರ ಜಲಧಾರೆಯ ಚಿತ್ರ. ೨೦೦೩ ಜೂನ್ ಮೊದಲ ವಾರದಲ್ಲಿ ಮಡೆನೂರು ಅಣೆಕಟ್ಟಿಗೆ ತೆರಳುವಾಗ ಭೀಮೇಶ್ವರಕ್ಕೆ ಮೊದಲ ಭೇಟಿ ನೀಡಿದ್ದೆ. ಹಳೇಯ ಶಿವ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಪಾಂಡವರು ವನವಾಸದಲ್ಲಿದ್ದಾಗ ಯುಧಿಷ್ಠಿರ ಶಿವನ ಪೂಜೆ ಮಾಡುವ ಇಚ್ಛೆ ವ್ಯಕ್ತಪಡಿಸಿದಾಗ ಭೀಮನು ನಿರ್ಮಿಸಿದ ಶಿವ ದೇವಾಲಯ ಇದಾಗಿರುವುದರಿಂದ ಇದಕ್ಕೆ ಭೀಮೇಶ್ವರ ಎಂದು ಹೆಸರು. ಪ್ರಕೃತಿಯ ಮಡಿಲಲ್ಲಿ ಅಡಗಿ ಕೂತಿರುವ ಪುಟ್ಟ ಊರು. ಇಳಿಜಾರಿನ ದಾರಿಯ ಬಳಿಕ ಸಿಗುವ ಸಣ್ಣ ತೊರೆಯೊಂದನ್ನು ದಾಟಿ ಮುಂದೆ ದಾರಿ ಕವಲೊಡೆಯುವಲ್ಲಿ ಎಡಕ್ಕೆ ತೆರಳಿದರೆ ಭೀಮೇಶ್ವರ ದೇವಳದಿಂದ ಸ್ವಲ್ಪ ಕೆಳಗೆ ಇರುವ ಅರ್ಚಕರ ಮನೆ ಸಿಗುವುದು. ಇನ್ನೊಂದೆರಡು ನಿಮಿಷ ನಡೆದು, ೬೦ ಮೆಟ್ಟಿಲುಗಳನ್ನೇರಿದರೆ ಸುಂದರ ದೇಗುಲ ಮತ್ತು ಮಳೆಗಾಲವಾದಲ್ಲಿ ಪುಟ್ಟ ೩೫ ಅಡಿಯೆತ್ತರವಿರುವ ಜಲಧಾರೆ. ಕೆಲವು ವರ್ಷಗಳ ಹಿಂದೆ ಬಂಡೆಯೊಂದು ಉರುಳಿಬಿದ್ದು ಕಲ್ಲಿನ ಮೇಲ್ಛಾವಣೆ ಸ್ವಲ್ಪ ಹಾನಿಯಾಗಿರುವುದನ್ನು ಹೊರತುಪಡಿಸಿದರೆ ದೇವಾಲಯ ಈಗಲೂ ಗಟ್ಟಿಮುಟ್ಟಾಗಿದೆ. ಎದುರಿಗಿರುವ ನಂದಿಗೂ ಒಂದು ಮಂಟಪ.


ಇಲ್ಲಿ ಶಿವರಾತ್ರಿ ಉತ್ಸವ ೫ ದಿನಗಳವರೆಗೆ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಶನಿವಾರ ಮುಂಜಾನೆ ದೇವರಿಗೆ ಪೂಜೆ ಮಾಡಿ ತನ್ನ ಊರಾದ ಸಿದ್ಧಾಪುರಕ್ಕೆ ತೆರಳುವ ಅರ್ಚಕರು ಆದಿತ್ಯವಾರ ಸಂಜೆ ಮರಳಿ ಬರುತ್ತಾರೆ. ನಾನು ಮೊದಲ ಬಾರಿ ತೆರಳಿದಾಗ ವೃದ್ಧ ಅರ್ಚಕರೊಬ್ಬರಿದ್ದರು. ಅನಾರೋಗ್ಯದ ಕಾರಣ ಅವರು ಈಗ ಇಲ್ಲಿ ಪೂಜೆ ಸಲ್ಲಿಸುತ್ತಿಲ್ಲ. ಈಗ ಮಧ್ಯ ವಯಸ್ಕ ಅರ್ಚಕರೊಬ್ಬರಿದ್ದಾರೆ. ಅರ್ಚಕರ ಮನೆಯಲ್ಲಿ ರಾತ್ರಿ ತಂಗಬಹುದು.

ಜುಲಾಯಿ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ ಜೋಗ ಮತ್ತು ಭೀಮೇಶ್ವರಕ್ಕೆ ೨೧ ಮತ್ತು ೨೨ರಂದು ದಿನೇಶ್ ಹೊಳ್ಳರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ೩೬ ಜನರ ತಂಡ ಮಂಗಳೂರಿನಿಂದ ೨೧ರ ಮಧ್ಯಾಹ್ನ ೨ ಗಂಟೆಗೆ ಹೊರಟು ಉಡುಪಿಯಲ್ಲಿ ನನ್ನನ್ನೂ ಸೇರಿಸಿ ೮ ಜನರನ್ನು 'ಪಿಕ್' ಮಾಡಿ ಚೆನ್ನೆಕಲ್ಲಿನ ಜಲಧಾರೆಯ ಬಳಿ ತಲುಪಿದಾಗ ೬.೪೫ ಆಗಿತ್ತು. ಜಲಧಾರೆಯ ಅಂದವನ್ನು ವೀಕ್ಷಿಸಿ ಜೋಗ ತಲುಪಿದಾಗ ರಾತ್ರಿ ೮.೧೫. ಅಲ್ಲೇ ಯೂತ್ ಹಾಸ್ಟೆಲ್ ನಲ್ಲಿ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿತ್ತು.


ಮರುದಿನ ನನ್ನನ್ನು ಮಾತ್ರ ಹೊರತುಪಡಿಸಿ ಉಳಿದೆಲ್ಲರೂ ಜೋಗದ ಅಂದವನ್ನು ಸವಿಯಲು ಜಲಪಾತದ ಬುಡಕ್ಕೆ ತೆರಳಿದರು. ಅವರೆಲ್ಲರಿಗೆ ಹಿಂತಿರುಗಲು ಕನಿಷ್ಟವೆಂದರೆ ಇನ್ನೆರಡು ತಾಸು ಬೇಕಾಗುವುದರಿಂದ ಅಲ್ಲೇ ಆಚೀಚೆ ಅಲೆದಾಡತೊಡಗಿದೆ. ಶರಾವತಿಯ ಕಣಿವೆಯ ನೋಟ, ಜೋಗದ ಕಣಿವೆಯಲ್ಲಿ ಸ್ವಲ್ಪ ಮುಂದೆ ಮಳೆಗಾಲದಲ್ಲಿ ಮಾತ್ರ ದರ್ಶನ ನೀಡುವ ಮೂರ್ನಾಲ್ಕು ಜಲಧಾರೆಗಳು ಇತ್ಯಾದಿಗಳನ್ನು ನೋಡುತ್ತ ಎರಡು ತಾಸು ಕಳೆದೆ.

ನಂತರ ಟೀಮು ವಿಶ್ವೇಶ್ವರಯ್ಯ ಪಾಯಿಂಟ್ ಬಳಿ ತೆರಳಿತು. ಮುಂಗಾರು ಮಳೆ ಚಿತ್ರದಿಂದ ಇಲ್ಲಿ ಜನರ 'ಅತಿರೇಕ' ನಂಬಲಸಾಧ್ಯ. ಬಂಡೆಯ ಮೇಲ್ಮೈಯಲ್ಲಿ ಮಲಗಿ ಕತ್ತನ್ನು ಮಾತ್ರ ಹೊರಚಾಚಿ ಜಲಧಾರೆ ಧುಮುಕುವುದನ್ನು ನೋಡುವುದೇ ಇದ್ದದ್ದರಲ್ಲಿ ಸುರಕ್ಷಿತ ವಿಧಾನ. ಆದರೆ ಹೆಚ್ಚಿನವರು 'ರಾಜ' ಧುಮುಕುವಲ್ಲಿ ಪ್ರಪಾತದ ಅಂಚಿಗೆ ತೆರಳಿ ಬಗ್ಗಿ ನೋಡುವುದು, 'ರಾಜ'ನ ಪಾರ್ಶ್ವದಲ್ಲಿ ಪ್ರಪಾತದಂಚಿನಲ್ಲಿ ನಿಂತು ಫೋಟೊ ತೆಗೆಯುವುದು, ಅಲ್ಲಿಂದ ನಿಂತುಕೊಂಡೇ ಬಗ್ಗಿ ನೋಡುವುದು ಇವೆಲ್ಲಾ ಮಾಡುತ್ತಿದ್ದರು. ಕಾಲು ಸ್ವಲ್ಪ ಜಾರಿದರೆ ಸಾಕು ೯೦೦ ಅಡಿಯಾಳದ ಗುರುತ್ವಾಕರ್ಷಣೆ ಶಕ್ತಿಯನ್ನು ಗೆಲ್ಲುವ ಸಾಮರ್ಥ್ಯ ಮನುಷ್ಯನ ದೇಹಕ್ಕೆ ಇಲ್ಲ ಎಂಬುದನ್ನು ಅರಿಯದೆ ಮತ್ತೆ ಮತ್ತೆ ಬಗ್ಗಿ ನೋಡುವುದು ನಡೆಯುತ್ತಲೇ ಇತ್ತು.

ಇಲ್ಲಿ ಹೆಚ್ಚು ಹೊತ್ತು ಕಳೆಯಲು ನನ್ನ ಮನಸ್ಸು ಹಿಂಜರಿಯುತ್ತಿತ್ತು. 'ರಾಜ'ನ ಹತ್ತಿರ ತೆರಳಲು ಧೈರ್ಯ ಸಾಲಲಿಲ್ಲ. ಬದಿಯಲ್ಲೊಂದು ಕಡೆ ಮಲಗಿ ಕತ್ತನ್ನು ಹೊರಚಾಚಿ ಪ್ರಪಾತವನ್ನು ನೋಡಿ ದಂಗಾದೆ. ಒಂದೆರಡು ಚಿತ್ರ ಕ್ಲಿಕ್ಕಿಸಿ ಹದಿನೈದೇ ನಿಮಿಷದಲ್ಲಿ ನಮ್ಮ ಟೆಂಪೋಗೆ ಹಿಂತಿರುಗಿದೆ. ಅರ್ಧ ಗಂಟೆಯ ಬಳಿಕ ಉಳಿದವರು ಒಬ್ಬೊಬ್ಬರಾಗಿ ಹಿಂತಿರುಗಿದರು. ನಾನು ಹಿಂತಿರುಗಿದ ಬಳಿಕ ಅಲ್ಲೊಂದು ಘಟನೆ ನಡೆದಿತ್ತು. ಅದನ್ನು ಕೇಳಿಯೇ ಮೈ ನಡುಕ ಬಂದಿತ್ತು. 'ರಾಜ' ಧುಮುಕುವ ಅಂಚಿನಿಂದ ಸ್ವಲ್ಪ ಮೇಲಿರುವ ನೀರಿನ ಗುಂಡಿಯಲ್ಲಿ ಯಾರೋ ಒಬ್ಬ ಅಧಿಕಪ್ರಸಂಗಿ ಈಜಾಡುತ್ತಿದ್ದ. ಸ್ವಲ್ಪ ಮುಂದೆ, 'ರಾಜ' ಧುಮುಕುವ ಎರಡು ಅಡಿ ಮೊದಲು ಇರುವ ಬಂಡೆಯೊಂದರಲ್ಲಿ ನಮ್ಮ ತಂಡದ ಮಹೇಶ ಮತ್ತು ರಾಕೇಶ್ 'ಜಿರಾಫೆ' ಹೊಳ್ಳ ಒಳಗೊಂಡಂತೆ ಐದಾರು ಮಂದಿ ಕೂತಿದ್ದರು. ಜನರೆಲ್ಲಾ ನೋಡುತ್ತಿದ್ದಂತೆಯೇ ಈಜಾಡುತ್ತಿದ್ದ ಆ ಯುವಕ ನೀರಿನ ಸೆಳೆತದಲ್ಲಿ ಸಿಕ್ಕುಬಿದ್ದ. ನೀರಿನ ಸೆಳೆತ ಆತನನ್ನು ಪ್ರಪಾತದ ಅಂಚಿನೆಡೆ ಎಳೆದೊಯ್ಯತೊಡಗಿತು.

ಅಂತ್ಯ ಕಣ್ಣೆದುರೇ ಕಾಣುತ್ತಿದ್ದರಿಂದ ಆ ಯುವಕ ತನ್ನ ಕೈಗಳನ್ನು ಹೊರಚಾಚಿ ಸಿಕ್ಕಿದ್ದನ್ನು ಹಿಡಿದುಕೊಳ್ಳಲು ಪ್ರಯತ್ನಿಸತೊಡಗಿದ. ಆಗ ಅಲ್ಲಿದ್ದ ಒಬ್ಬರು ತನ್ನ ರೈನ್-ಕೋಟನ್ನು ಆತನೆಡೆ ಎಸೆದರು. ಅದರ ಒಂದು ಬದಿಯನ್ನು ಹೇಗೋ ಹಿಡಿದುಕೊಂಡ ಆತ ನೀರಿನ ಸೆಳೆತದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದ. ರೈನ್-ಕೋಟ್ ಎಸೆದ ವ್ಯಕ್ತಿಗೆ ತಾನು ನಿಂತಲ್ಲಿಂದ ಒಂದು ಹೆಜ್ಜೆ ಹಿಂದೆ ಚಲಿಸುವಷ್ಟು ಸ್ಥಳಾವಕಾಶವೂ ಇದ್ದಿರಲಿಲ್ಲ. ಅತ್ತ ನೀರಿನಲ್ಲಿದ್ದ ಯುವಕನ ಹಿಡಿತ ನೀರಿನ ರಭಸಕ್ಕೆ ರೈನ್-ಕೋಟ್ ನಿಂದ ಜಾರುತ್ತಿತ್ತು. ಇನ್ನೇನು ಆತ 'ರಾಜ'ನೊಂದಿಗೆ ಕೆಳಗೆ ಬೀಳಲಿದ್ದಾನೆ ಎನ್ನುವಷ್ಟರಲ್ಲಿ, ಪ್ರಪಾತದಂಚಿನಿಂದ ಕೇವಲ ನಾಲ್ಕೈದು ಅಡಿ ಮೊದಲು ರಾಕೇಶ್, ತನ್ನ ಉದ್ದನೆಯ ದೇಹವನ್ನು ಹೊರಚಾಚಿ ಆ ಯುವಕನ ಕೈಯನ್ನು ಬಲವಾಗಿ ಹಿಡಿದು ತಾನು ಕೂತಿದ್ದ ಬಂಡೆಯೆಡೆ ಎಳೆದುಬಿಟ್ಟ. ನಂತರ ಉಳಿದವರು ಆತನನ್ನು ಮೇಲಕ್ಕೆಳೆದುಕೊಂಡರು. ಚಿತ್ರದುರ್ಗದಿಂದ ಬಂದಿದ್ದ ಆ ಯುವಕನಿಗೆ ಇದೊಂದು ಪುನರ್ಜನ್ಮ ಎನ್ನಬಹುದು. ಕಂಗಾಲಾಗಿ 'ಶಾಕ್' ನಲ್ಲಿದ್ದ ಆತ ತನ್ನ ಜೀವ ಉಳಿಸಿದವನಿಗೆ ಧನ್ಯವಾದ ಹೇಳಲು ಮರೆತೇಬಿಟ್ಟ!

'ಅಂದ ಇದ್ದಲ್ಲಿ ಅಪಾಯವೂ ಇರುವುದು' ಎಂಬುದನ್ನು ನಾವು ಅರಿತರೆ ಚೆನ್ನ.

ಮಾಹಿತಿ: ಪ್ರೇಮಕಲಾ ಎ ಮಧ್ಯಸ್ಥ

ಸೋಮವಾರ, ಜುಲೈ 23, 2007

ಜೋಗ ವೈಭವ


ಆಗೋಸ್ಟ್ ೧೩, ೨೦೦೬ ಆದಿತ್ಯವಾರ. ಯಾವುದೇ ಪೂರ್ವನಿಯೋಜಿತ ಪ್ರಯಾಣ/ಚಾರಣ ಇದ್ದಿರಲಿಲ್ಲ. ಅಲ್ಲದೇ ಮುನ್ನಾ ದಿನ ವಿಪರೀತ ಕೆಲಸವಿದ್ದುದರಿಂದ ಮನೆಗೆ ಬರುವಾಗ ಮಧ್ಯರಾತ್ರಿ ದಾಟಿತ್ತು. ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ, ಮೊದಲ ಪುಟದಲ್ಲೇ ಜೋಗ ಜಲಪಾತದ ರಮಣೀಯವಾಗಿ ಮೈತುಂಬಿಕೊಂಡು ಧುಮುಕುತ್ತಿರುವ ಅದ್ಭುತ ಚಿತ್ರ. ಆರು ಸಲ ಜೋಗಕ್ಕೆ ಹೋದರೂ, ಸಿಕ್ಕಿದ ನೋಟದಿಂದ ಸಮಾಧಾನವಿರಲಿಲ್ಲ. ಚಿತ್ರ ನೋಡಿದ ಕೂಡಲೇ, ಉದಯವಾಣಿಯನ್ನು ಅಲ್ಲೇ ಬಿಟ್ಟು, ಗಡಿಬಿಡಿಯಲ್ಲಿ ಸ್ನಾನ, ಉಪಹಾರ ಮುಗಿಸಿ ಸರಿಯಾಗಿ ೧೦ಕ್ಕೆ ನನ್ನ ಹೀರೋ ಹೊಂಡ ಪ್ಯಾಶನ್ ಏರಿ ಜೋಗಕ್ಕೆ ಹೊರಟೇಬಿಟ್ಟೆ. ದಾರಿಯುದ್ದಕ್ಕೂ ಮಳೆ ಮಳೆ ಮಳೆ. ಕೊಲ್ಲೂರು ತನಕ ಅಗಾಗ ಮಳೆ ಸುರಿಯುತ್ತಾ ಇತ್ತು. ಕೊಲ್ಲೂರು ದಾಟಿ ಕಾರ್ಗಲ್ ಮುಟ್ಟುವ ತನಕ ಎಡೆಬಿಡದೆ ಸುರಿದ ಮಳೆ, ನಾನು ಜೋಗ ಸಮೀಪಿಸಿದಂತೆ ನಿಂತಿತು. ಸಮಯ ಮಧ್ಯಾಹ್ನ ೨.೩೦ ಹಾಗೂ ಕ್ರಮಿಸಿದ ದೂರ ೧೬೩ ಕಿಮಿ.


೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟಿದ್ದರಿಂದ ಜೋಗ ಜಲಪಾತ ೧೦ ಮಳೆಗಾಲಗಳ ಬಳಿಕ ಮತ್ತೊಮ್ಮೆ ರಮಣೀಯವಾಗಿ ಧುಮುಕುವ ದೃಶ್ಯ ನೋಡಲು ಜನಜಾತ್ರೆಯೇ ಅಲ್ಲಿ ಸೇರಿತ್ತು. ಕರ್ನಾಟಕ - ಗೋವಾ ಗಡಿಯಲ್ಲಿರುವ ದೂದಸಾಗರ್ ಜಲಪಾತವನ್ನು ಯಾಕೆ ಆ ಹೆಸರಿನಿಂದ ಕರೆಯುತ್ತಾರೆ ಎಂಬುದು, ಜಲಪಾತ ನೋಡಿದ ಬಳಿಕ ನನಗೆ ತಿಳಿದಿತ್ತು. ಆಕಾಶದಿಂದ ಹಾಲಿನ ರಾಶಿಯೇ ಧರೆಗೆ ಬೀಳುತ್ತಿರುವಂತೆ ಕಾಣುವ ದೂದಸಾಗರ್ ಜಲಪಾತದ ದೃಶ್ಯ ಅದ್ಭುತ. ಇದರ ಮುಂದೆ ನನಗೆ ಇದುವರೆಗೆ ನಮ್ಮ ಜೋಗ ನೀರಸ ಎಂದೆನಿಸುತ್ತಿತ್ತು. ಆದರೆ ದೂದಸಾಗರ್ ಮೇಲ್ಭಾಗದಲ್ಲಿ, ಜೋಗ ಜಲಪಾತಕ್ಕಿರುವಂತೆ ಯಾವುದೇ ಆಣೆಕಟ್ಟು ಇಲ್ಲ. ಲಿಂಗನಮಕ್ಕಿ ಆಣೆಕಟ್ಟು ಇರದಿದ್ದರೆ ಜೋಗ ಜಲಪಾತ ಹೇಗಿರಬಹುದು ಎಂಬುದು ಊಹಿಸುವುದು ಕಷ್ಟ. ಆದರೆ ಆ ದಿನ ಜೋಗ 'ಎಟ್ ಇಟ್ಸ್ ಬೆಸ್ಟ್' ನೋಡಿದ ಬಳಿಕ, ಜೋಗವನ್ನು 'ನೀರಸ' ಎಂದು ಕಲ್ಪನೆ ಮಾಡಿಕೊಳ್ಳುವ ಅಪರಾಧ ಮಾಡಲಾರೆ.

೫೦೦೦೦ಕ್ಕೂ ಅಧಿಕ ಕ್ಯುಸೆಕ್ಸ್-ನಷ್ಟು ಹಾಲಿನಂತೆ ಕಾಣುವ ಜಲರಾಶಿ ಒಂದೇ ನೆಗೆತಕ್ಕೆ ೯೩೦ ಅಡಿ ಆಳಕ್ಕೆ ಧುಮುಕುವ ದೃಶ್ಯ ನೋಡಿ ಬೆರಗಾದೆ. ಅಲ್ಲೇ ನಿಂತಿದ್ದು 'ಪೈನಾಪಲ್' ಮಾರುತ್ತಿದ್ದ ಸ್ಥಳೀಯ ಯುವಕನೊಬ್ಬ 'ಅಪರೂಪ ಸಾರ್, ಹೀಗೆ ನೀರು ಬೀಳೋದು ಅಪರೂಪ. ನಾನಂತೂ ನೋಡೇ ಇಲ್ಲ. ಇದು ಹಾಲಲ್ಲದೇ ಮತ್ತೇನು'? ಆಗಾಗ ಮಳೆ ಬೀಳುತ್ತಾ ಇತ್ತು. 'ಹಾಲು' ಧುಮುಕುತ್ತಾ ಇತ್ತು. ನೋಡುವವರು ನೋಡುತ್ತಲೇ ಇದ್ದರು. ಮತ್ತಷ್ಟು ಜನರು ಬರುತ್ತಾ ಇದ್ದರು. ಆದರೆ ಯಾರೂ ಕದಲುತ್ತಿರಲಿಲ್ಲ. ಜಲಪಾತದ ಮುಂದಿರುವ ಶರಾವತಿಯ ಕಣಿವೆಯಲ್ಲಿ ಮಂಜು ತುಂಬಿ ಏನೇನೂ ಕಾಣದಿದ್ದರೂ, ಜಲಪಾತದ ಸುತ್ತ ಮಂಜು ಇರದೇ 'ಕ್ಲಿಯರ್ ವ್ಯೂ' ಲಭ್ಯವಿತ್ತು.

ಅದಾಗಲೇ ಸಂಜೆ ೪ ಗಂಟೆ ಆಗಿತ್ತು. ಜಲಪಾತದ ಮೇಲ್ಭಾಗದಲ್ಲಿರುವ ಸೇತುವೆ ದಾಟಿ ವಿಶ್ವೇಶ್ವರಯ್ಯ ಪಾಯಿಂಟ್ ಕಡೆಗೆ ಹೋಗಬೇಕೆಂಬ ಇರಾದೆ ಇದ್ದರೂ ಸಮಯದ ಅಭಾವದಿಂದ ಆ ನಿರ್ಧಾರವನ್ನು ಕೈಬಿಟ್ಟೆ. ಮರುದಿನ ಮತ್ತೆ ಉದಯವಾಣಿಯಲ್ಲಿ ಜೋಗದ ಚಿತ್ರ. ಈ ಬಾರಿ ವಿಶ್ವೇಶ್ವರಯ್ಯ ಪಾಯಿಂಟ್ ನಿಂದ ತೆಗೆದ ಚಿತ್ರ. ನಂಬಲಾಗದಷ್ಟು ಅದ್ಭುತವಾಗಿತ್ತು. ಜೋಗ ಜಲಪಾತವೆಂದು ಹೇಳಲು ಅಸಾಧ್ಯವಾದಷ್ಟು ಜಲರಾಶಿ! ಆ ಕಡೆ ಹೋಗದೆ ಹಿಂತಿರುಗಿದಕ್ಕಾಗಿ ಪರಿತಪಿಸತೊಡಗಿದೆ. ನಂತರ ಮತ್ತೆ ೬ ದಿನಗಳ ಕಾಲ ಲಿಂಗನಮಕ್ಕಿಯ ಎಲ್ಲಾ ಗೇಟುಗಳನ್ನು ತೆರೆದಿಡಲಾಗಿತ್ತು. ದಾಖಲೆ ೮ ದಿನಗಳ ಕಾಲ ಎಲ್ಲಾ ಗೇಟುಗಳನ್ನು ತೆರೆದಿಡಲಾಗಿತ್ತು. ಗೇರುಸೊಪ್ಪಾ ಸಮೀಪದ ಹಳ್ಳಿಗಳಾದ ಮಾಗೋಡು, ಹೈಗುಂದ, ಕಂಬ್ಳಕೋಡು, ಅಡ್ಕಾರ, ಮಾವಿನಹೊಳೆ, ಬಳ್ಕೂರು, ಕುದ್ರಿಗಿ ಇತ್ಯಾದಿ ಪ್ರದೇಶಗಳಲ್ಲಿ ನೆರೆ.


ಈ ಬಾರಿ ಏನಾಗುವುದು? ಮತ್ತೆ ಜೋಗ ವಿಜೃಂಭಿಸಲಿದೆಯೇ? ಹಾಗಾದರೆ ಮತ್ತೆ ನೋಡುಗರಿಗೆ ಸುಗ್ಗಿ ಆದರೆ ಗೇರುಸೊಪ್ಪಾ ಸುತ್ತಲಿನ ಹಳ್ಳಿಗರ ಪಾಡು.....? ಲಿಂಗನಮಕ್ಕಿಯ ಅಧಿಕಾರಿಗಳು ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣವನ್ನು ಗಮನಿಸಿ ಅದೇ ರೀತಿ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಅಪಾರ ಪ್ರಮಾಣದಲ್ಲಿ ಜಲಾಶಯಕ್ಕೆ ಹರಿದು ಬರುವ ನೀರನ್ನು ಇಟ್ಟುಕೊಳ್ಳಲಾಗದೇ ಹಿಂದಿನ ವರ್ಷದಂತೆ ಮತ್ತೆ ಕೊನೇ ಕ್ಷಣದಲ್ಲಿ ಸಿಕ್ಕಾಪಟ್ಟೆ ನೀರನ್ನು ಹೊರಬಿಡಬೇಕಾಗಬಹುದು.

ಭಾನುವಾರ, ಜುಲೈ 15, 2007

ಗುಳೇದಗುಡ್ಡದಲ್ಲೊಂದು ಜ(ನ)ಲಧಾರೆ - ಕೋಟೆಕಲ್ ದಿಡುಗು


ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಗುಳೇದಗುಡ್ಡ. ಇಲ್ಲೊಂದು ಜಲಧಾರೆಯಿರುವುದು ಸುಮಾರು ೩ ವರ್ಷಗಳ ಹಿಂದೆ ಮಲ್ಲಿಕಾರ್ಜುನ ಯೋ. ರಾಜನಾಳ ಎಂಬವರು ಕನ್ನಡಪ್ರಭದಲ್ಲಿ ಬರೆದಿದ್ದ ಲೇಖನದಿಂದ ನನಗೆ ತಿಳಿದುಬಂದಿತ್ತು. ಆದರೆ ಇದು ಮಳೆ ಬಿದ್ದಾಗ ಮಾತ್ರ ಇರುವ ಜಲಧಾರೆಯೆಂದೂ ಮಲ್ಲಿಕಾರ್ಜುನ ಬರೆದಿದ್ದರು. ಉಡುಪಿಯಲ್ಲಿ ಕುಳಿತು ದೂರದ ಗುಳೇದಗುಡ್ಡದಲ್ಲಿ ಮಳೆ ಯಾವಾಗ ಬೀಳುವುದು ಎಂದು ತಿಳಿದುಕೊಳ್ಳುವುದು ಕಷ್ಟಕರವಾದರೂ ಮಳೆಗಾಲದ ಆರಂಭದಲ್ಲಿ ಸ್ವಲ್ಪ ಗಮನ ಆ ಕಡೆ ಇರುತ್ತಿತ್ತು. ಈ ವರ್ಷ ಮೇ ಅಂತ್ಯದಲ್ಲಿ ಗುಳೇದಗುಡ್ಡದಲ್ಲಿ ಭಾರಿ ಮಳೆ.

ಕಳೆದ ತಿಂಗಳು ಅಂದರೆ ಜೂನ್ ೩೦ ೨೦೦೭, ಶನಿವಾರದಂದು ಮಂಗಳೂರಿನಿಂದ ಕೂಡಲಸಂಗಮಕ್ಕೆ ಹೊರಟಿದ್ದ ಬಸ್ಸಿನಲ್ಲಿ ಬದಾಮಿಗೆ ಟಿಕೇಟು ಪಡೆದು ಉಡುಪಿಯಿಂದ ಸಂಜೆ ೭.೩೦ಕ್ಕೆ ಹೊರಟೆ. ರಾತ್ರಿ ಸುಮಾರು ೧೦.೩೦ರ ಹೊತ್ತಿಗೆ ಬಸ್ಸು ಹೊನ್ನಾವರ ದಾಟುತ್ತಿದ್ದಂತೆ ಗೆಳೆಯ ಗಿರೀಶ ಭಟ್ಟನ ಫೋನು. ನಾನು ಬದಾಮಿಗೆ ಹೋಗುತ್ತಿರುವುದು ತಿಳಿದ ಕೂಡಲೇ ಹುಬ್ಬಳ್ಳಿಯಲ್ಲಿಳಿದು ಮನೆಗೆ ಬರಬೇಕೆಂದು ಒತ್ತಾಯ ಮಾಡತೊಡಗಿದ. ಹೀಗೆ ಪ್ರಯಾಣ ಅಥವಾ ಚಾರಣದಲ್ಲಿರುವಾಗ ಪರಿಚಯದವರ, ನೆಂಟರಿಷ್ಟರ ಅಥವಾ ಗೆಳೆಯರ ಮನೆಗೆ ನಾನೆಂದೂ ಭೇಟಿ ನೀಡುವುದಿಲ್ಲವಾದರೂ ಆತನ ಒತ್ತಾಯಕ್ಕೆ ಮಣಿದು ಮುಂಜಾನೆ ೩.೩೦ಕ್ಕೆ ಹುಬ್ಬಳ್ಳಿಯಲ್ಲಿಳಿದು ಗಿರೀಶನ ಮನೆಗೆ ತೆರಳಿದೆ.

ಆದಿತ್ಯವಾರ ಮುಂಜಾನೆ ಹುಬ್ಬಳ್ಳಿ ಹಳೇ ಬಸ್ಸು ನಿಲ್ದಾಣದಲ್ಲಿ ೩೦ ನಿಮಿಷ ಸರಕಾರಿ ಬಸ್ಸಿಗಾಗಿ ಕಾದರೂ ಯಾವುದೇ ಬಸ್ಸು ಬಂದಿರಲಿಲ್ಲ. ಕಡೆಗೆ ಬಾಗಲಕೋಟೆಗೆ ಹೊರಟಿದ್ದ ಖಾಸಗಿ ಬಸ್ಸು 'ಚನ್ನಮ್ಮಾ'ದಲ್ಲಿ 'ಕುಳಗೇರಿ ಕ್ರಾಸ್'ಗೆ ಟಿಕೇಟು ಪಡೆದು ಕುಳಿತೆ. ೯ಕ್ಕೆ ಹುಬ್ಬಳ್ಳಿ ಬಿಟ್ಟ ಚನ್ನಮ್ಮಾ ನವಲಗುಂದ, ನರಗುಂದ ಮಾರ್ಗವಾಗಿ ೧೧ಕ್ಕೆ ಕುಳಗೇರಿ ಕ್ರಾಸ್ ತಲುಪಿತು.

ಕುಳಗೇರಿ ಕ್ರಾಸಿನಿಂದ ಬದಾಮಿಗೆ ಮುಂದಿನ ಬಸ್ಸು ಇನ್ನೂ ಅರ್ಧ ಗಂಟೆ ನಂತರ. ಅಲ್ಲೇ ಅದಾಗಲೇ ೧೮ ಜನರು ಕೂತಿದ್ದ ರಿಕ್ಷಾದ ನಿರ್ವಾಹಕ 'ಬದಾಮಿ ಬದಾಮಿ' ಎಂದು ಅರಚುತ್ತಿದ್ದ. ಚೆನ್ನಾಗಿ ಬಟ್ಟೆ ಧರಿಸಿದ್ದ ನನಗೆ ರಾಜ ಮರ್ಯಾದೆ ಕೊಟ್ಟು 'ಬರ್ರೀ ಸರ, ೨೫ ನಿಮಿಷದೊಳಗ ಬದಾಮಿ ಮುಟ್ಟಸ್ತೀನಿ' ಎಂದು ಒಳಗೆ ಜಾಗ ಮಾಡಿಸಿ ಕೂರಿಸಿದ. ಅರ್ಧ ಗಂಟೆ ತಗೊಂಡ ಎನ್ನಿ ೨೧ಕಿಮಿ ದೂರವಿದ್ದ ಬದಾಮಿ ತಲುಪಲು.

ಬಸ್ಸು ನಿಲ್ದಾಣದಲ್ಲಿ ಗುಳೇದಗುಡ್ಡಕ್ಕೆ ಬಸ್ಸಿನ ಬಗ್ಗೆ ವಿಚಾರಿಸಿದರೆ, 'ಈಗಷ್ಟೆ ಹೋತಲ್ರೀ...ಇನ್ನಾ ಲೇಟ್ ಐತ್ರಿ' ಎಂದ ಅಲ್ಲಿನ ನಿಯಂತ್ರಣಾಧಿಕಾರಿ ತನ್ನ ಗಡ್ಡವನ್ನು ಸವರುತ್ತಾ. ಸ್ವಲ್ಪ ಹೊತ್ತು ಕಾದು ನಂತರ 'ಗುಳೇಗುಡ್ಡ...ಗುಳೇಗುಡ್ಡ' ಎಂದು 'ದ'ವನ್ನು ನುಂಗಿ ಒದರುತ್ತಿದ್ದ ಯುವಕ ಪಾಂಡುವಿನ ಟೆಂಪೋ ಬಳಿ ತೆರಳಿದೆ. ಎಷ್ಟು ಹೊತ್ತು ಬೇಕಪ್ಪಾ ನಿಂಗೆ ಗುಳೇದಗುಡ್ಡಕ್ಕೆ ಎಂದು ಕೇಳಲು ಪಾಂಡು, 'ಓನ್ಲೀ ಫಾರ್ಟಿ ಫಾಯಿವ್ ಮಿನಿಟ್ಸರೀ ಸರ' ಎಂದ. 'ಮಸ್ತ್ ಇಂಗ್ಲೀಷ್ ಮಾತಾಡ್ತಿಯಲ್ಲಾ...' ಎಂದು ನಾನು ಹೊಗಳಲು, ಎಲೆ ಅಡಿಕೆ ಜಗಿಯುತ್ತಿದ್ದ ಬಾಯಿಯನ್ನು ಅಗಲಿಸಿ ಕೆಂಪು ಹಲ್ಲುಗಳನ್ನು ಪ್ರದರ್ಶಿಸಿ ನಾಚಿಕೆಯ ನಗು ನಕ್ಕ ಪಾಂಡು.

ಗುಳೇದಗುಡ್ಡದಿಂದ ೩ಕಿಮಿ ದೂರದಲ್ಲಿರುವ ಕೋಟೆಕಲ್ಲು ಎಂಬಲ್ಲಿ ಒಂದೆರಡು ಕಿಮಿ ದೂರ ಬೆಟ್ಟದ ಬುಡಕ್ಕೆ ತೆರಳಿ ನಂತರ ಅರ್ಧ ಗಂಟೆ ನಡೆದರೆ ಕೋಟೆಕಲ್ ದಿಡುಗು. ಈ ಭಾಗದಲ್ಲಿ ಜಲಪಾತಕ್ಕೆ 'ದಿಡುಗು' ಎನ್ನುತ್ತಾರೆ. ಬದಾಮಿಯಿಂದ ಗುಳೇದಗುಡ್ಡಕ್ಕೆ ತೆರಳುವ ಹಾದಿಯಲ್ಲೇ ಕೋಟೆಕಲ್ಲು ಸಿಗುತ್ತದಾದರೂ, ನಾನು ಗುಳೇದಗುಡ್ಡ ಬಸ್ಸು ನಿಲ್ದಾಣದ ಬಳಿ ಇಳಿದು ಆಟೋವೊಂದರಲ್ಲಿ ಕೋಟೆಕಲ್ಲಿನತ್ತ ತೆರಳಿದೆ. ಊರಿನೊಳಗೆ ತಿರುವು ಪಡೆದು ಸ್ವಲ್ಪ ಮುಂದೆ ತೆರಳಿದಾಗ ಅಲ್ಲೊಂದಷ್ಟು ಹುಡುಗರು ನಿಂತಿದ್ದರು. ಅವರೆಲ್ಲಾ ಕೋಟೇಕಲ್ಲಿನವರೇ ಆಗಿದ್ದು ದಿಡುಗು ನೋಡಲು ತೆರಳಿ ಅಲ್ಲೇ ಮಧ್ಯಾಹ್ನದ ಊಟ ಮಾಡುವ ಪ್ಲ್ಯಾನ್ ಹಾಕಿದ್ದರು. ಅವರಲ್ಲಿ ಒಬ್ಬನನ್ನು ನನ್ನೊಂದಿಗೆ ಬರುವಂತೆ ವಿನಂತಿಸಿದೆ. ಊಟವಿದ್ದ ಚೀಲದೊಂದಿಗೆ ಲಕ್ಷ್ಮಣ ಎಂಬ ಹುಡುಗ ನನ್ನೊಂದಿಗೆ ಆಟೋದಲ್ಲಿ ಬಂದ.

ಕಾಲುದಾರಿ ಬೆಟ್ಟದ ಬದಿಯಲ್ಲೇ ಸಾಗಿ, ಬೆಟ್ಟಕ್ಕೊಂದು ಸುತ್ತು ಹಾಕಿ ಬೆಟ್ಟದ ಮತ್ತೊಂದು ಬದಿಯಲ್ಲಿರುವ ದಿಡುಗಿನತ್ತ ಸಾಗುತ್ತದೆ. ಹದವಾದ ಏರುಹಾದಿ. ಅಲ್ಲಿಯವನೇ ಆಗಿದ್ದ ಲಕ್ಷ್ಮಣ 'ಸರ, ಹಿಂಗೇ ನೇರಕ್ಕೆ ಬೆಟ್ಟ ಹತ್ತಿ ಬಿಡೋಣ್ರಿ...೧೫ ನಿಮಿಷ ಸಾಕ್ರಿ...ಆ ದಾರಿ ದೂರ ಆಗ್ತೈತ್ರಿ...'ಎಂದಾಗ ಸಮ್ಮತಿಸಿದೆ. ನೇರವಾಗಿ ಬೆಟ್ಟ ಹತ್ತಿ, ಆ ಕಡೆ ಸ್ವಲ್ಪ ಮುಳ್ಳುಗಿಡಗಳ ನಡುವೆ ದಾರಿ ಮಾಡಿಕೊಂಡು ನಡೆದು ೧೫ ನಿಮಿಷದಲ್ಲಿ ದಿಡುಗಿನ ಬಳಿಯಿದ್ದೆವು. ಇದೊಂದು ಸೂಪರ್ ಶಾರ್ಟ್ ಕಟ್. ನಾನು ಆಟೋ ಇಳಿದಾಗ ಕಾರಿನಲ್ಲಿ ಬಂದ ತಂಡವೊಂದು ನಾನು ತಲುಪಿದ ಅರ್ಧ ಗಂಟೆಯ ಬಳಿಕ ದಿಡುಗಿನ ಬಳಿ ತಲುಪಿತ್ತು.


ಆದಿತ್ಯವಾರವಾಗಿದ್ದರಿಂದ ಮತ್ತು ಹಿಂದಿನ ದಿನ ವಿಜಯ ಕರ್ನಾಟಕದಲ್ಲಿ ಈ ದಿಡುಗಿನ ಬಗ್ಗೆ ಪ್ರಕಟವಾಗಿದ್ದರಿಂದ ಜನಸಾಗರವೇ ಅಲ್ಲಿತ್ತು. ಸುಮಾರು ೪೦ಅಡಿ ಎತ್ತರವಿರುವ ಜಲಧಾರೆ. ಅಗಲ ಸುಮಾರು ೧೦೦ ಅಡಿಯಷ್ಟಿದ್ದರೂ ನೀರು ೨ ಕವಲುಗಳಲ್ಲಿ ಮಾತ್ರ ಧುಮುಕುತ್ತಿತ್ತು. ಪೂರ್ಣ ೧೦೦ ಅಡಿಯಷ್ಟು ಅಗಲದಷ್ಟು ನೀರಿದ್ದರೆ ಅದೊಂದು ಮನಮೋಹಕ ದೃಶ್ಯ. ಇಲ್ಲಿನ ಜನರಿಗೆ ಇದೊಂದು ಅದ್ಭುತ ಜಲಪಾತ. ಏಕೆಂದರೆ ಈ ಪರಿ ನೀರು ಮೇಲಿನಿಂದ ಬೀಳುವ ಜಾಗ ಕರ್ನಾಟಕದ ಈ ಭಾಗದಲ್ಲಿ ವಿರಳ.


ನೀರು ಕೆಳಗೆ ಬೀಳುವಲ್ಲಿ ಹೆಚ್ಚೆಂದರೆ ಸೊಂಟ ಮಟ್ಟದ ತನಕ ನೀರು ಇರುವ ಗುಂಡಿ. ಹತ್ತಾರು ಜನರು ಆರಾಮವಾಗಿ ನೀರಿನಲ್ಲಿ ಸಮಯ ಕಳೆಯಬಹುದಾದ ಇಲ್ಲಿ ಈಗ ೧೦೦ ರಷ್ಟು ಜನರಿದ್ದರು. ಎಲ್ಲೆಲ್ಲಿ ನೀರು ಬೀಳುತ್ತೋ ಅಲ್ಲಿ ತಲೆಕೊಟ್ಟು ನಿಲ್ಲಲು ಸ್ಪರ್ಧೆ ಮತ್ತು ತಾ ಮುಂದು ನಾ ಮುಂದು ಎಂದು ಜಗ್ಗಾಟ. ನೀರು ಬೀಳುವಲ್ಲಿ ತಲೆ ಕೊಟ್ಟು ನಿಂತವರನ್ನು 'ಏ ಸಾಕ್ ಬಾರಲೇ..' ಎಂದು ಈಚೆಗೆ ಎಳೆದು ಉಳಿದವರು ನಿಂತುಕೊಳ್ಳುತ್ತಿದ್ದರು. ಕೂಗಾಟ, ಅರಚಾಟ, ಚೀರಾಟ, ಸಂತೋಷದ ಚೀತ್ಕಾರ ಎಲ್ಲವನ್ನು ಕೇಳುವ ಅಪರೂಪದ ಭಾಗ್ಯ ನನ್ನದು. ಹಲವಾರು ಜಲಪಾತಗಳಿಗೆ ಭೇಟಿ ನೀಡಿರುವ ನನಗೆ ಇಂತಹ 'ಕ್ರೌಡ್ ಗೋಯಿಂಗ್ ಎಬ್ಸೊಲ್ಯೂಟ್ಲಿ ಮ್ಯಾಡ್' ಸನ್ನಿವೇಶ ಎಲ್ಲೂ ಕಂಡುಬಂದಿಲ್ಲ. ಎಲ್ಲಾ ಕಡೆ ಒಂದೆರಡು ತಾಸು ಪ್ರಕೃತಿ ಆಸ್ವಾದಿಸುವ ನನಗೆ ಇಲ್ಲಿ ಅದಕ್ಕೆ ಆಸ್ಪದವೇ ಇರಲಿಲ್ಲ. ಜನಸಾಗರ ಪ್ರಕೃತಿಯನ್ನು ತೆರೆಯ ಮರೆಗೆ ಸರಿಸಿಬಿಟ್ಟಿತ್ತು.


ಜಲಪಾತವೊಂದನ್ನು ಪ್ರಥಮ ಬಾರಿಗೆ ನೋಡಿದ ಅದೆಷ್ಟೋ ಜನರಿದ್ದರು ಇಲ್ಲಿ. ಸಿಕ್ಕಿದ ಸ್ವಲ್ಪವೇ ಸಮಯದ ಬಳಿಕ ಮಾಯವಾಗುವ ನಿಧಿಯೊಂದನ್ನು ಹೇಗೆ ಅನುಭವಿಸಬೇಕೋ ಎಂದು ಗೊತ್ತಾಗದೆ ಮನಬಂದಂತೆ ಅನುಭವಿಸುವ ಪರಿಸ್ಥಿತಿ ಮತ್ತು ಮನೋಸ್ಥಿತಿ ಅಲ್ಲಿದ್ದವರದ್ದು. ಅಷ್ಟು ಸಣ್ಣ ಜಾಗದಲ್ಲಿ ನಂಬಲಾಗದಂತಹ ಸಂಖ್ಯೆಯ ಜನರನ್ನು ಕಂಡು ನಿಬ್ಬೆರಗಾಗಿಬಿಟ್ಟೆ. ಹೆಣ್ಣು ಮಕ್ಕಳಿಗೂ ನೀರಿಗಿಳಿಯಬೇಕೆಂಬ ಆಸೆ. ಹಾಗೆಲ್ಲಾದರೂ ನೀರಿಗಿಳಿದರೆ ಗಂಡು ಹುಡುಗರ ಮಧ್ಯೆ 'ಮಾಯವಾಗುವ' ಚಾನ್ಸ್. ಆದ್ದರಿಂದ ಒಂದೆಡೆ ಬದಿಯಲ್ಲಿ ಸಣ್ಣ ನೀರು ಬೀಳುವಲ್ಲಿ ನಾಲ್ಕಾರು ಹೆಣ್ಣು ಮಕ್ಕಳು ಮುದುಡಿ ನೀರಿಗೆ ತಲೆ ಕೊಟ್ಟು ತಮ್ಮಷ್ಟಕ್ಕೆ ಸಂತೋಷಪಡುತ್ತಿದ್ದರು. ಈ ಎಲ್ಲಾ ಗಲಾಟೆಯ ನಡುವೆ ಒಬ್ಬ ಹುಡುಗ ವೇರಿ ಕೊಂಬೆಯೊಂದರ ಮೇಲೆ ಆಸೀನನಾಗಿ ಗಂಭೀರವದನನಾಗಿ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದ.

ಕೃಷ್ಣಜನ್ಮಾಷ್ಟಮಿಯ ಸಮಯದಲ್ಲಿ ಮೇಲೆ ಕಟ್ಟಿರುವ ಮೊಸರಿನ ಗಡಿಗೆಯನ್ನು ಒಡೆಯಲು ನಿರ್ಮಿಸುವ ಮಾನವ ಏಣಿಯನ್ನು ಇಲ್ಲಿ ನೀರಿನಲ್ಲಿ ನಿಂತು ಮಾಡುವ ಪ್ರಯತ್ನ ಸಾಗಿತ್ತು. ಹಾಗೆ ಮಾನವ ಏಣಿಯನ್ನು ನಿರ್ಮಿಸಿ 'ಹೋ' ಎಂದು ಕಿರುಚುತ್ತಾ ನೀರಿಗೆ ಬೀಳುವುದೇ ಅವರಿಗೆ ಮಜಾ. ಬೀಳುವ ನೀರಿನಡಿ ನಿಂತು ನೃತ್ಯ ಮಾಡುವುದೇನು...ಲಾಗ ಹಾಕುವುದೇನು....ಸೀಟಿ ಹೊಡೆಯುವುದೇನು...ತಮ್ಮ ಪರಿಚಯದವರಿಗೆ ಕೈ ಮಾಡುವುದೇನು...


ಕೆಳಗಿದ್ದಷ್ಟೇ ಸಂಖ್ಯೆಯ ಜನರು ದಿಡುಗಿನ ಮೇಲೆ ನಿಂತು ಕೆಳಗಿದ್ದವರ ಕಪಿಚೇಷ್ಟೆಗಳನ್ನು ವೀಕ್ಷಿಸುತ್ತಿದ್ದರು. ನೀರಿಗಿಳಿದವರು ಯಾರೂ ಜಲಕ್ರೀಡೆಯನ್ನು ಮುಗಿಸುತ್ತಿರಲಿಲ್ಲ. ಮತ್ತಷ್ಟು ಜನರು ನೀರಿಗಿಳಿಯುತ್ತಿದ್ದರೇ ವಿನ: ಯಾರೂ ಮೇಲೆ ಬರುತ್ತಿರಲಿಲ್ಲ. ಅವರೆಲ್ಲರ ಮುಖದ ಮೇಲಿದ್ದ 'ವರ್ಣಿಸಲಾಗದಂತಹ ಸಂತೋಷ'ದ ಭಾವ ನನ್ನಿಂದ ಮರೆಯಲು ಸಾಧ್ಯವಿಲ್ಲ. ನನಗಿದು 'ಒನ್ ಮೋರ್ ಫಾಲ್ಸ್ ಆಫ್ ಮೆನಿ' ಆಗಿದ್ದರೆ ಅವರಿಗೆ ಇದು 'ದ ಓನ್ಲೀ ಒನ್ ಫಾಲ್ಸ್' ಆಗಿತ್ತು! ಇದನ್ನು ಮನಗಂಡ ಬಳಿಕ ನನಗೆ ಅವರೆಲ್ಲರ ಗಲಾಟೆ, ಕೇಕೆ, ಚೀರಾಟ ಇತ್ಯಾದಿಗಳನ್ನು ಕ್ಷಮಿಸಬಹುದು ಎಂದೆನಿಸಿತು. ಅದೊಂದು ಜಾತ್ರೆಯ ಅಟ್ಮಾಸ್ಫಿಯರ್ ಆಗಿತ್ತು. ಜನ ಮರುಳೋ...ಫಾಲ್ಸು ಮರುಳೋ....

ಬುಧವಾರ, ಜುಲೈ 11, 2007

ಅಕ್ಷರ ಅವಾಂತರ ೪ - ಗುಳೇದಗುಡ್ಡ ಆಗಬೇಕಿತ್ತು.....


ಉಡುಪಿ ಬಸ್ಸು ನಿಲ್ದಾಣದಲ್ಲಿ. ಗುಳೇದಗುಡ್ಡ ಎಂದು ಬರೆಯುವ ಬದಲು......ತಮ್ಮದೇ ಆದ ಹೆಸರು ಕೊಟ್ಟಿದ್ದಾರೆ ಆ ಊರಿಗೆ...

ಗುರುವಾರ, ಜುಲೈ 05, 2007

ಎರಡು ಅಣೆಕಟ್ಟುಗಳು


ಈ ಎರಡು ಅಣೆಕಟ್ಟುಗಳನ್ನು ನೋಡಲು ಅದೊಂದು ದಿನ ನನ್ನ ಯಮಾಹದಲ್ಲಿ ತೆರಳಿದೆ. ದಾರಿಯಲ್ಲಿ ಸಿಗುವ ಈ ಊರು ಅದೊಂದು ಸಮಯ ಜನರು, ಅಂಗಡಿ, ಉದ್ಯಾನವನಗಳಿಂದ ಕಂಗೊಳಿಸುತ್ತಿದ್ದ ಪುಟ್ಟ ಊರು. ಆದರೆ ಈಗ, ರಸ್ತೆಯ ಇಕ್ಕೆಲಗಳಲ್ಲಿ ಅರ್ಧ ಮುರಿದು ಬಿದ್ದ, ಮುರಿದು ಬೀಳುತ್ತಿರುವ, ಪೂರ್ತಿ ನಾಶವಾದ ಮನೆಗಳು. ಕೆಲವೊಂದು ಮನೆಗಳು ಇನ್ನೂ ಕುಸಿದಿರಲಿಲ್ಲ ಆದರೆ ಕಿಟಕಿ, ಬಾಗಿಲು ಇತ್ಯಾದಿಗಳಿಗೆ ಬಳಸಲಾಗಿದ್ದ ಮರದ ವಸ್ತುಗಳು ನಾಪತ್ತೆ. ಕೆಲವೊಂದು ಮನೆಗಳ ಸೂರು ನಾಪತ್ತೆ.

೮೦ರ ದಶಕದಲ್ಲಿ ಇಲ್ಲಿರುವ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಪ್ರಾಜೆಕ್ಟ್ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿತು. ಕರ್ನಾಟಕ ವಿದ್ಯುತ್ ನಿಗಮ ಈ ಜೋಡಿ ಅಣೆಕಟ್ಟುಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗಾಗಿ ಈ ಊರನ್ನು ನಿರ್ಮಿಸಿ ಈ ಮನೆಗಳನ್ನು ಕಟ್ಟಿಸಿತ್ತು. ಪ್ರಾಜೆಕ್ಟ್-ನ ವೈಫಲ್ಯದ ಬಳಿಕ ಈಗ ಜಾಗ ಭಣಗುಡುತ್ತಿದೆ. ಸುಂಟರಗಾಳಿ ಬೀಸಿ ಸರ್ವನಾಶವಾದ ಹಳ್ಳಿಯೊಂದರಂತೆ ಕಾಣುತ್ತಿದೆ ಈ ಊರು. ಇಲ್ಲೇ ಉಳಿಯಬಯಸಿದ ಕೆಲವರು ಸ್ವಲ್ಪ ಮೊದಲು ಸಿಕ್ಕಿದ ಸಣ್ಣ ಪೇಟೆಯನ್ನು ಊರನ್ನಾಗಿ ಮಾಡಿ ವಾಸಿಸುತ್ತಿದ್ದಾರೆ. ಹಾಗೆ ನೋಡಿದರೆ ಎಲ್ಲಾ ಮನೆಗಳು ಕುಸಿದಿಲ್ಲ. ಐದಾರು ಸುಸ್ಥಿತಿಯಲ್ಲಿರುವ ಮನೆಗಳಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಈ ಊರಿಗೆ ಬರುವ ಬಸ್ಸು ಈಗಲೂ ಇಲ್ಲಿ ಸುಸ್ಥಿತಿಯಲ್ಲಿರುವ ಕೊನೆಯ ಮನೆಯ ತನಕ ಬಂದೇ ಹೋಗುತ್ತದೆ!


ಮಳೆ ಇನ್ನೂ ನಿಂತಿರಲಿಲ್ಲ. ಅಣೆಕಟ್ಟಿಗೆ ಊರಿನಿಂದ ಸುಮಾರು ದೂರವಿದೆ. ನಾನು ಅಣೆಕಟ್ಟು ಸಮೀಪಿಸಿದಂತೆ ಮಳೆ ನಿಂತಿತು. ಕಣ್ಣ ಮುಂದೆ ವಿಶಾಲ ಜಲರಾಶಿ. ಅಲ್ಲಿ ನಾನೊಬ್ಬನೇ. ಬೈಕನ್ನು ಸೀದಾ ಅಣೆಕಟ್ಟಿನ ಮೇಲೆ ಓಡಿಸಿದೆ. ಅಣೆಕಟ್ಟಿನ ಮತ್ತೊಂದು ತುದಿಯಲ್ಲಿ ಕಾಲುವೆಯೊಂದಿದೆ. ಈಗ ಈ ಕಾಲುವೆಯಲ್ಲಿ ನೀರು ಹರಿಯುವುದಿಲ್ಲ. ಒಂದು ಕಡೆ ಅಗಾಧ ಜಲರಾಶಿ, ಅಲ್ಲಲ್ಲಿ ನಡುಗಡ್ದೆಗಳು, ಜಲರಾಶಿಯ ಪರಿಧಿಯ ಆ ಕಡೆ ಬೆಟ್ಟಗುಡ್ಡಗಳು. ಮತ್ತೊಂದು ಕಡೆ ನದಿಯ ಕಣಿವೆ ಮತ್ತು ಬೆಟ್ಟಗಳು. ಮೂರ್ನಾಲ್ಕು ಬಾರಿ ಅಣೆಕಟ್ಟಿನ ಉದ್ದಗಲಕ್ಕೂ ಬೈಕನ್ನು ಓಡಿಸಿದೆ. ಗಾಳಿಯ ಸದ್ದನ್ನು ಬಿಟ್ಟರೆ ಬರೀ ಮೌನ.

ಅಣೆಕಟ್ಟಿನಿಂದ ಕೆಳಗೆ ರಸ್ತೆಯೊಂದು ಇಳಿದಿತ್ತು. ಅದರಲ್ಲಿ ಬೈಕನ್ನು ಓಡಿಸಿದೆ. ಕೆಳಗಡೆ ಆ ರಸ್ತೆ ಮತ್ತೆ ಕವಲೊಡೆದಿತ್ತು. ಬಲಕ್ಕಿರುವ ರಸ್ತೆ ಅಣೆಕಟ್ಟಿನ ಬುಡಕ್ಕೆ ತೆರಳಿದರೆ ಎಡಕ್ಕಿರುವ ರಸ್ತೆ ಕಾಡಿನೊಳಗೆ ಅದೆಲ್ಲೋ ಮಾಯವಾಗಿತ್ತು. ಈಗಂತೂ ನಾನು ತುಂಬಾ ಹೆದರಿದ್ದೆ. ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು, ಮರಗಳು. ಮುಂದೆ ರಾಕ್ಷಸ ಗಾತ್ರದ ಅಣೆಕಟ್ಟು, ಅದರ ಬುಡದಲ್ಲಿ ಭೂತ ಬಂಗಲೆಯಂತೆ ಕಾಣುತ್ತಿದ್ದ ಕೆಲವು ಕಟ್ಟಡಗಳು. ಮೊದಲು ಈ ಸ್ಥಳದಲ್ಲಿ ಸುಂದರವಾದ ರಸ್ತೆ ಮತ್ತು ಪಾರ್ಕ್ ಇದ್ದ ಕುರುಹುಗಳಿದ್ದವು. ಆದರೆ ಈಗ ಕಾಡು ಎಲ್ಲವನ್ನೂ ಕಬಳಿಸಿದೆ. ಹಿಂದಿನಿಂದ ಏನೋ ಬಂದು ನನ್ನ ಮೈ ಮೇಲೆ ಎರಗುವುದೇನೋ ಎಂಬ ಭಯ. ಬೈಕನ್ನು ತಿರುಗಿಸಿ ವೇಗವಾಗಿ ಮತ್ತೆ ಆಣೆಕಟ್ಟಿನ ಮೇಲೆ ಬಂದಾಗಲೇ 'ಅಬ್ಬಾ ಪಾರಾದೆ' ಎಂದೆನಿಸಿತು. ಅಲ್ಲಿ ಕೆಳಗೆ ಗಾಳಿ ಬೀಸುವ ಸದ್ದು ಕೂಡಾ ಇರಲಿಲ್ಲ. ಆ ಪರಿ ನಾನು ಎಂದೂ ಮತ್ತು ಎಲ್ಲಿಯೂ ಹೆದರಿರಲಿಲ್ಲ.


ನಂತರ ಸಮೀಪದಲ್ಲಿರುವ ಇನ್ನೊಂದು ಅಣೆಕಟ್ಟಿಗೆ ತೆರಳಿದೆ. ಇಲ್ಲೂ ಯಾರಿರಲಿಲ್ಲ...ನಾನೊಬ್ಬನೇ. ರಸ್ತೆ ಒಂದು ದಿಬ್ಬದ ಮೇಲೆ ಬಂದು ನಂತರ ತಿರುವು ಪಡೆದು ಕೆಳಗೆ ಸಾಗಿ ಅಣೆಕಟ್ಟಿನ ಮೇಲೆ ಬಂದು ಕೊನೆಗೊಳ್ಳುತ್ತದೆ. ಈ ದಿಬ್ಬದಲ್ಲೇ ಒಂದು ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದ್ದು ಇಲ್ಲಿಂದ ಜಲಾಶಯದ ನೋಟ ಲಭ್ಯ. ಇಲ್ಲಿಂದ ಅಣೆಕಟ್ಟಿನ ಮೇಲೆ ಇಳಿಯಲು ಮೆಟ್ಟಿಲುಗಳಿವೆ. ವಾಹನವನ್ನು ಇಲ್ಲೇ ನಿಲ್ಲಿಸಿ ಕೆಳಗಡೆ ಇಳಿದರೆ ಚೆನ್ನ. ಅಣೆಕಟ್ಟು ತಗ್ಗಿನಲ್ಲಿದೆ. ಅಣೆಕಟ್ಟಿನ ಸಮೀಪವೇ ಒಂದು ಕೃತಕ ನಡುಗಡ್ಡೆಯನ್ನು ನಿರ್ಮಿಸಲಾಗಿದ್ದು, ಅಲ್ಲಿ ಅಲಂಕಾರಿಕ ಮರಗಳನ್ನು ಬೆಳೆಸಲಾಗಿದ್ದು, ಕೂತುಕೊಳ್ಳಲು ಕಲ್ಲಿನ ಬೆಂಚುಗಳನ್ನು ನಿರ್ಮಿಸಲಾಗಿದೆ. ಅಣೆಕಟ್ಟಿನ ಮೇಲಿನಿಂದ ೨೫-೩೦ ಮೆಟ್ಟಿಲುಗಳನ್ನು ಇಳಿದು, ನೀರಲ್ಲಿ ನಾಲ್ಕೈದು ಹೆಜ್ಜೆಗಳನ್ನಿಟ್ಟು ದಾಟಿ ಈ ನಡುಗಡ್ಡೆಗೆ ತೆರಳಬಹುದು. ಮಳೆಗಾಲ ಬಿಟ್ಟು ಉಳಿದ ಸಮಯದಲ್ಲಿ ನೀರು ದಾಟಿ ಹೋಗುವ ಪ್ರಮೇಯವಿರುವುದಿಲ್ಲ.



ದುರದೃಷ್ಟವೆಂದರೆ ಈ ಎರಡೂ ಅಣೆಕಟ್ಟುಗಳನ್ನು ಯಾತಕ್ಕಾಗಿ ನಿರ್ಮಿಸಲಾಯಿತೋ ಆ ಪ್ರಾಜೆಕ್ಟ್ ವಿಫಲವಾಯಿತು. ಅನಾವಶ್ಯಕವಾಗಿ ಸಾವಿರಾರು ಎಕರೆ ಕೃಷಿ ಭೂಮಿ ಮತ್ತು ಅಷ್ಟೇ ಪ್ರಮಾಣದ ಕಾಡು ನೀರುಪಾಲಾಯಿತು. ಈಗ ಎರಡೂ ಅಣೆಕಟ್ಟುಗಳಿಂದ ನೀರನ್ನು ಲಿಂಗನಮಕ್ಕಿಗೆ ಹರಿಬಿಡಲಾಗುತ್ತಿದೆ.

ಹಿಂತಿರುಗುವಾಗ ಮತ್ತೆ ಬಿರುಸಾಗಿ ಮಳೆ ಬೀಳಲಾರಂಭಿಸಿತು. ಮಾಸ್ತಿಕಟ್ಟೆ - ಕವಲೇದುರ್ಗ ದಾರಿಯಲ್ಲಿ ನಾನು ಪ್ರಯಾಣಿಸಿರಲಿಲ್ಲ. ರಸ್ತೆ ಬಹಳ ಕೆಟ್ಟಿತ್ತು. ಮಾಸ್ತಿಕಟ್ಟೆ ದಾಟಿದ ನಂತರ ಮಳೆ ಮಾಯ. ೩೫ಕಿಮಿ ಸುತ್ತು ಬಳಸಿನ ದಾರಿಯಾದರೂ ಎಂದೂ ಸಂಚರಿಸದ ದಾರಿಯಲ್ಲಿ ತೆರಳಿದಂತಾಗುತ್ತದೆ ಎಂದು ಕವಲೇದುರ್ಗ, ಮೇಗರವಳ್ಳಿ, ಆಗುಂಬೆ ಮಾರ್ಗವಾಗಿ ಉಡುಪಿ ತಲುಪಿದೆ.