ಬುಧವಾರ, ಏಪ್ರಿಲ್ 18, 2007

ಮಡೆನೂರು ಮಾಡಿದ ಮೋಡಿ - ಭಾಗ ೨


ಅಣೆಕಟ್ಟು 114ಅಡಿ ಎತ್ತರ ಮತ್ತು 3870ಅಡಿ ಅಗಲವಿದ್ದು 11 ಸೈಫನ್ ಗಳನ್ನು ಹೊಂದಿದೆ. ಸೈಫನ್ ಎಂದರೆ ವೃತ್ತಾಕಾರದ ನೀರಿನ ಟ್ಯಾಂಕ್ ಇದ್ದಂಗೆ. ಪ್ರತಿ ಸೈಫನ್ 18ಅಡಿ ಅಗಲ ಮತ್ತು 58ಅಡಿ ಎತ್ತರವಿದ್ದು, 12 ಕಂಬಗಳನ್ನು ಆಧಾರವಾಗಿ ಹೊಂದಿದೆಯಲ್ಲದೇ ಮೇಲೆ 3-4 ದೊಡ್ಡ ರಂಧ್ರಗಳನ್ನೂ ಹೊಂದಿದೆ. ಅಣೆಕಟ್ಟು ತುಂಬಿದಾಗ ನೀರು ತಂತಾನೆ ಈ ರಂಧ್ರಗಳಿಂದ ಹೊರಬೀಳುತ್ತಿತ್ತು. ಸೈಫನ್ ಗಳನ್ನು ಅಣೆಕಟ್ಟಿಗೆ ಪ್ಯಾರಲಲ್ ಆಗಿ ನಿರ್ಮಿಸಲಾಗಿದೆ. ಅಣೆಕಟ್ಟಿನಿಂದ ಪ್ರತಿ ಸೈಫನ್ ಮೇಲೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಹಾಗೇನೇ ಒಂದು ಸೈಫನ್ ಮೇಲಿಂದ ಮತ್ತೊಂದಕ್ಕೆ ತೆರಳಲೂ ಸಣ್ಣ ಕಾಂಕ್ರೀಟ್ ಸೇತುವೆ ಮಾಡಲಾಗಿದೆ. ಈ ಸೈಫನ್ ಗಳ ಮೇಲೆ ಎಚ್ಚರಿಕೆಯಿಂದ ನಡೆದಾಡಬೆಕು. ಅವುಗಳ ಮೇಲಿರುವ ರಂಧ್ರಗಳು ಮನುಷ್ಯನೊಬ್ಬ ಬೀಳುವಷ್ಟು ದೊಡ್ಡದಾಗಿವೆ ಮತ್ತು ಒಳಗೆ ನೀರಿರುತ್ತದೆಯಲ್ಲದೆ ಕತ್ತಲ ಹೊರತು ಬೇರೇನೂ ಕಾಣದು. ಅಣೆಕಟ್ಟಿನಿಂದ ಸುಮಾರು 40 ಮೆಟ್ಟಿಲುಗಳನ್ನಿಳಿದು ಸೈಫನ್ ಗಳ ಬುಡಕ್ಕೆ ಬಂದು ಅವುಗಳ ಚೆಲುವನ್ನು ವೀಕ್ಷಿಸಬಹುದು.

ನಂತರ ಬರುವುದು 3 ದೈತ್ಯಗಾತ್ರದ ಕ್ರೆಸ್ಟ್ ಗೇಟುಗಳು. ಇವುಗಳಿಗೆ ಬಳಿದ ಕಪ್ಪು ಬಣ್ಣದಿಂದ ಅವು ಭಯಾನಕವಾಗಿ ಕಾಣುತ್ತಿದ್ದವು. ಕ್ರೆಸ್ಟ್ ಗೇಟುಗಳನ್ನು ಇಷ್ಟು ಸನಿಹದಿಂದ ಎಂದೂ ವೀಕ್ಷಿಸಿರಲಿಲ್ಲ. ಮುರೂ ಕ್ರೆಸ್ಟ್ ಗೇಟುಗಳ ತಳದಲ್ಲಿ ನೀರಿನಲ್ಲಿ ಅರ್ಧ ಮುಳುಗಿದ್ದ ದೈತ್ಯಗಾತ್ರದ ಸಲಕರಣೆಗಳು ಮತ್ತಿನ್ನೇನೋ ಮಷೀನುಗಳು. ಗಾತ್ರದ ಅಗಾಧತೆಯೇ ದಂಗುಬಡಿಸಿತು. ಸೈಫನ್ ಗಳಂತೆಯೇ ಈ ಕ್ರೆಸ್ಟ್ ಗೇಟುಗಳು ಕೂಡಾ ಮೃತ್ಯುಕೂಪಗಳೇ.
ಅಣೆಕಟ್ಟಿನಿಂದ ಆರೇಳು ಮೆಟ್ಟಿಲುಗಳನ್ನಿಳಿದರೆ ಅಲ್ಲೊಂದು 2ಅಡಿ ಅಗಲದ ಕಬ್ಬಿಣದ ಹಲಗೆ. ಈ ಹಲಗೆ ಮುರೂ ಕ್ರೆಸ್ಟ್ ಗೇಟುಗಳ ಉದ್ದಕ್ಕೆ ಹಾದುಹೋಗಿದೆ. ಇದರ ಮೇಲೆ ನಡೆದು, ಕ್ರೆಸ್ಟ್ ಗೇಟುಗಳನ್ನು ಮತ್ತಷ್ಟು ಸನಿಹದಿಂದ ವೀಕ್ಷಿಸಿ ಮತ್ತೊಂದು ಬದಿಯಿಂದ ಅಣೆಕಟ್ಟಿನ ಮೇಲೆ ಬರಬಹುದು. ಅಲ್ಲಲ್ಲಿ ಸಸ್ಯ ಬೆಳೆದು ಅಲ್ಲಲ್ಲಿ ತುಕ್ಕು ಹಿಡಿದಿದ್ದರಿಂದ ಈ ಕಬ್ಬಿಣದ ಹಲಗೆ ದೃಢವಾಗಿದೆ ಎಂದು ಹೇಳಲು ಸಾಧ್ಯವಿರಲಿಲ್ಲವಾದ್ದರಿಂದ ಯಾರೂ ಅದರ ಮೇಲೆ ತೆರಳುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಎಲ್ಲರೂ ಅಣೆಕಟ್ಟಿನ ಸೇತುವೆಯಿಂದಲೇ ಈ ಗೇಟುಗಳನ್ನು ವೀಕ್ಷಿಸುತ್ತಿದರು. ನಾನು ಮತ್ತು ನಮ್ಮೊಂದಿಗೆ ಬಂದಿದ್ದ ಬೈಕ್ ಯುವಕರು ಅಲ್ಲಿ ನಿಂತು ಮೀನಮೇಷ ಎಣಿಸುತ್ತಿರುವಾಗ, ಪ್ರಶಾಂತ್ ಧೈರ್ಯ ಮಾಡಿ ಆ ಹಲಗೆಯ ಮೇಲೆ ಹೆಜ್ಜೆ ಇಟ್ಟೇಬಿಟ್ಟ! ಕನಿಷ್ಟವೆಂದರೆ ಸುಮಾರು 35 ಜನರು ಈಗ ಬಾಯಿ 'ಆಂ' ಎಂದು ತೆರೆದು ಪ್ರಶಾಂತನನ್ನೇ ನೋಡುತ್ತಿದ್ದರು. ಪ್ರತಿ ಹೆಜ್ಜೆಯಲ್ಲೂ ಅನಾಹುತ ಸಂಭವಿಸುವ ಚಾನ್ಸ್ ಮತ್ತು ಕೆಳಗೆ ಬಿದ್ದರೆ ಗಾನ್ ಕೇಸ್.

ನೋಡ್ತಾ ನೋಡ್ತಾ ಪ್ರಶಾಂತ್ ಮತ್ತೊಂದು ಬದಿಯಿಂದ ಅಣೆಕಟ್ಟು ಮೇಲೆ ಬಂದ್ಬಿಟ್ಟ. ಈಗ ಧೈರ್ಯ ಬಂದಂತಾಗಿ ಬೈಕ್ ಯುವಕರು ಮತ್ತು ನಾನು ನಿಧಾನವಾಗಿ ಈ ಹಲಗೆಯ ಮೇಲೆ ತೆರಳಿ ಕ್ರೆಸ್ಟ್ ಗೇಟುಗಳ ಅಂದವನ್ನು ಅಸ್ವಾದಿಸಿ ಬಂದೆವು. ಅಣೆಕಟ್ಟಿನ ಮೇಲೆ ಬಂದಾಗ ಪ್ರಶಾಂತ್ ಎಲ್ಲೂ ಕಾಣಿಸುತ್ತಿರಲಿಲ್ಲ. ಕೆಳಗೆ ನೋಡಿದರೆ ನಿಧಾನವಾಗಿ ಮತ್ತೆ ಆ ಹಲಗೆಯ ಮೇಲೆ ಕ್ರೆಸ್ಟ್ ಗೇಟುಗಳನ್ನು ನೋಡುತ್ತ ಬರುತ್ತಿದ್ದ! 'ಆಗ ತೆರಳಿದ್ದಾಗ ಹೆದರಿದ್ದರಿಂದ, ಧ್ಯಾನವೆಲ್ಲಾ ಆ ಕಡೆ ಸೇಫಾಗಿ ತಲುಪಿದ್ದರೆ ಸಾಕು ಎಂಬುದರ ಮೇಲಿತ್ತು, ಆದ್ದರಿಂದ ಮತ್ತೊಂದು ಸಲ ಬಂದೆ' ಎಂಬ ಸಮಜಾಯಿಷಿ.

ಹಾಗೆ ಸ್ವಲ್ಪ ಮುಂದೆ ನಡೆದು ಅಣೆಕಟ್ಟಿನ ಮತ್ತೊಂದು ತುದಿ ತಲುಪಿದೆವು. ಈ ಬದಿಯಿಂದಲೂ ಬಹಳಷ್ಟು ಜನರು ನೋಡಲು ಬಂದಿದ್ದರು. ಯಾವ ದಾರಿಯಿಂದ ಬಂದಿರಬಹುದು ಎಂದು ಒಂದು ಕ್ಷಣ ಯೋಚಿಸಿ, ತಡವಾಗುತ್ತಿದ್ದರಿಂದ ಬೇಗನೇ ಹೆಜ್ಜೆ ಹಾಕಿ ಈ ಕಡೆ ಬಂದೆವು. ಅಲ್ಲೊಂದು ಒಣಗಿದ್ದ ನಗ್ನ ಮರ ಮತ್ತದರ ಬುಡದಲ್ಲಿ ಸಣ್ಣ ದೇವಾಲಯದ ಕುರುಹು. ಹಿನ್ನೀರಿನಲ್ಲಿ ಮುಖ ತೊಳೆದು ಬೈಕಿನತ್ತ ನಡೆದೆವು. ಸಮಯ 6.15 ಆಗಿತ್ತು.

ಅಲ್ಲಿ ನೋಡಲು ಬಹಳ ಇದ್ದಿದ್ದರಿಂದ ನನಗೆ ಛಾಯಾಚಿತ್ರಗಳನ್ನು ತೆಗೆಯಲು ಸಮಯವೇ ಇರಲಿಲ್ಲ. ಆಗ ನನ್ನಲ್ಲಿದ್ದ ಎಸ್.ಎಲ್.ಆರ್ ಕ್ಯಾಮರದಿಂದ ಫೋಟೊ ತೆಗೆಯಲು ಬಹಳ ಪರದಾಡುತ್ತಿದ್ದೆ. ಒಂದು ಫೋಟೊ ತೆಗೆಯಲೂ ಬಹಳ ಸಮಯ ತಾಗುತ್ತಿತು. ಆದ್ದರಿಂದ ನೋಡಬೇಕಾದಷ್ಟನ್ನು ಮೊದಲು ನೋಡಿ ಮುಗಿಸಿದಾಗ ಕತ್ತಲಾಗುತ್ತಿತ್ತು. ಇನ್ನು ಸ್ವಲ್ಪ ಸಮಯವಿದ್ದಿದ್ದರೆ ಇನ್ನಷ್ಟು ಫೋಟೊ ತೆಗೆಯಬಹುದಿತ್ತಲ್ಲಾ ಎಂದು ಯೋಚಿಸುವಾಗ ಕ್ಷಿತಿಜ ನೇಸರ ಧಾಮದಲ್ಲಿ ಕಳೆದ ಒಂದು ತಾಸು ಬಹಳ ಚುಚ್ಚುತ್ತದೆ. ಮಡೆನೂರಿನ ಅಂದವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯಲಾಗಲಿಲ್ಲವಲ್ಲ ಎಂಬ ನಿರಾಸೆ ಈಗಲೂ ಇದೆ.

ಅರಣ್ಯ ಇಲಾಖೆ ದ್ವಾರದಿಂದ ಹೊರಬಂದು ಸಾಗರದತ್ತ ಸ್ವಲ್ಪ ದಾರಿ ಕ್ರಮಿಸಿದಾಗ ಬಲಕ್ಕೊಂದು ಮಾರ್ಗ ಮತ್ತು ಅಲ್ಲಿ ಬರೆದಿತ್ತು 'ಕುಂದಾಪುರ, ಕೊಲ್ಲೂರು' ಎಂದು. ಆಶ್ಚರ್ಯದಿಂದ ಅಲ್ಲಿರುವವರನ್ನು ಕೇಳಿದಾಗ ಆ ದಾರಿ ಕೊಲ್ಲೂರಿಗೆ ತೆರಳುತ್ತದೆ ಎಂದಾಗ ಬಹಳ ಸಂತೋಷವಾಯಿತು. ಆದರೆ 'ಸಾರ್, ನೀರು ಕಡಿಮೆ ಇದೆ. ಲಾಂಚ್ ಹೋಗ್ತಾ ಇಲ್ಲ' ಎಂದಾಗ ಮತ್ತೆ ನಿರಾಸೆ. ಈ ದಾರಿಯಲ್ಲಿ ಉಡುಪಿಗೆ ಕೆವಲ 135ಕಿಮಿ ಇತ್ತು.

ನಂತರ ಸ್ವಲ್ಪ ಮುಂದೆ ಒಂದು 'ಟಿ' ಜಂಕ್ಷನ್ ಇರುವಲ್ಲಿ (ಈ ಸ್ಥಳದ ಹೆಸರು ನೆನಪಿಲ್ಲ) ಇಂಧನ ಕೇಳಲು ನಿಂತೆವು. ಅಲ್ಲಿ ಸಿಕ್ಕಿದ ಸೀಮೆ ಎಣ್ಣೆ ವಾಸನೆಯಿದ್ದ ಪೆಟ್ರೋಲ್ ನ್ನು ಬೈಕಿಗೆ ಕುಡಿಸಿ ಬರುವಷ್ಟರಲ್ಲಿ ಭಲೇ ಮಾತುಗಾರನಾಗಿರುವ ಪ್ರಶಾಂತ್ ನಾಲ್ಕಾರು ಹಳ್ಳಿಗರಿಗೆ ನಮ್ಮ ಪ್ರಯಾಣ ವಿವರಿಸುತ್ತಿದ್ದ. ಅವರಲ್ಲೊಬ್ಬ ನನ್ನಲ್ಲಿ 'ಸಾರ್ ಕೋಗಾರು ಘಾಟಿಯಲ್ಲಿ ತೆರಳಬೇಡಿ. ರಾತ್ರಿ 8ರ ಬಳಿಕ ಆ ದಾರಿ ಸರಿಯಲ್ಲ. ನೀವು ಈ ದಾರಿಯಲ್ಲಿ (ಟಿ ಜಂಕ್ಷನ್ ಕಡೆ ತೋರಿಸುತ್ತಾ) ತೆರಳಿದರೆ ಹೊಸನಗರ ಮಾರ್ಗವಾಗಿ ಹುಲಿಕಲ್ ಘಾಟಿ ಇಳಿದು ಉಡುಪಿ ಸೇರಬಹುದು. ಸುರಕ್ಷಿತ ದಾರಿ' ಎಂದು ಸಲಹೆ ಕೊಟ್ಟ. ನನಗೂ ಅದು ಸೂಕ್ತವೆನಿಸಿತು. ಈಗ ನಮ್ಮ ಸುತ್ತಲೂ ಸುಮಾರು 15 ಹಳ್ಳಿಗರು ಇದ್ದರು. ಅವರಲ್ಲೊಬ್ಬ 'ಕತ್ಲಲ್ಲಿ ಎಲ್ಲೋಗ್ತೀರಾ ಸಾರ್, ಇಲ್ಲೇ ಉಳ್ಕಂಬಿಡಿ. ನಾಳೆ ಬೆಳಗ್ಗೆ ಹೋಗುವಿರಂತೆ' ಎಂದಾಗ, 'ಬೆಳಗ್ಗೆ 9ಕ್ಕೆ ಮಂಗಳೂರಿಗೆ ಬಾ, ಕಾಯುತ್ತಿರುತ್ತೇನೆ' ಎಂದಿದ್ದ ಬಾಸ್ ಮುಖ ನೆನಪಾಗಿ, ನಯವಾಗಿ ನಿರಾಕರಿಸಬೇಕಾಯಿತು.

7.20ಕ್ಕೆ ಹಳ್ಳಿಗರಿಗೆ ವಿದಾಯ ಹೇಳಿ ಅವರು ತೋರಿಸಿದ ದಾರಿಯಲ್ಲಿ 19ಕಿಮಿ ದೂರವಿದ್ದ ಬಟ್ಟೆಮಲ್ಲಪ್ಪ ತಲುಪಿ, ನಂತರ ಸುಮಾರು 20ಕಿಮಿ ದೂರವಿದ್ದ ಹೊಸನಗರ ತಲುಪಿದೆವು. ಸಮಯ 8.30 ಆಗಿತ್ತು. ಹೊಸನಗರದಲ್ಲಿ ನನ್ನ ಸಂಬಂಧಿ ಮಂಜುನಾಥ ವಾಸಿಸುತ್ತಾನಾದರೂ, ಎಂದೂ ಇಲ್ಲಿಗೆ ಬಂದಿರಲಿಲ್ಲ. ಮಂಜುನಾಥನ ವಿಳಾಸ ಗೊತ್ತಿರಲಿಲ್ಲ ಮತ್ತು ಆತನ ಮನೆಯಲ್ಲಿ ದೂರವಾಣಿಯೂ ಇರಲಿಲ್ಲ ಆದರೆ ಆತ 6.5ಅಡಿ ಉದ್ದ ಇದ್ದಾನೆ. ಅಲ್ಲೊಂದು ಫೋನ್ ಬೂತ್ ನಲ್ಲಿ 'ರಾತ್ರಿ ಬರಲು ತಡವಾಗುತ್ತೆ' ಎಂದು ಮನೆಗೆ ಫೋನಾಯಿಸಿದ ಬಳಿಕ ಅಲ್ಲಿನ ಹುಡುಗನಲ್ಲಿ ಮಂಜುನಾಥನ ಬಗ್ಗೆ ಕೇಳಿದರೆ, ಆತ 'ಓ ಅವ್ರಾ, ಉದ್ಕಿದ್ದಾರಲ್ಲ? ಅವ್ರೇ ತಾನೆ?, ನೇರಕ್ಕೆ ಹೋಗಿ, ಸರ್ಕಲ್ ನಂತರ ಬಲಕ್ಕೆ ನಾಲ್ಕನೇ ಮನೆ' ಎಂದು ಕರಾರುವಕ್ಕಾಗಿ ಹೇಳ್ಬಿಟ್ಟ. ಉದ್ದ ಇದ್ದರೆ ಏನೆಲ್ಲಾ ಪ್ರಯೋಜನ ಎಂದು ಯೋಚಿಸುತ್ತಾ ಮಂಜುನಾಥನ ಮನೆಗೆ ಬಂದರೆ ಆ ಆಸಾಮಿ ಅಲ್ಲಿರಲಿಲ್ಲ. ಆದರೇನು? ತಂಗಿಯರು ಬಹಳ ಸಂತೋಷದಿಂದ ಬರಮಾಡಿ ಭರ್ಜರಿ ಊಟವನ್ನು ಬಡಿಸಿ, ಉಳಿದುಕೊಳ್ಳಲು ಒತ್ತಾಯ ಮಾಡತೊಡಗಿದಾಗ ಮತ್ತೆ ಆ ಬಾಸ್ ಮುಖ ನೆನಪಾಗಿ ಹೊರಡಲೇಬೇಕಾಯಿತು.

9.30ಕ್ಕೆ ಮತ್ತೆ ಯಮಾಹ ಸ್ಟಾರ್ಟ್. ನಗರ, ಮಾಸ್ತಿಕಟ್ಟೆ ದಾಟಿ ಹುಲಿಕಲ್ ಘಾಟಿಯ ದೇವಿಗೆ ನಮಸ್ಕರಿಸಿ, ಕಗ್ಗತ್ತಲ ಘಾಟಿಯ ರಸ್ತೆಯನ್ನಿಳಿದು ಹೊಸಂಗಡಿ, ಸಿದ್ಧಾಪುರ ಮಾರ್ಗವಾಗಿ ಶಂಕರನಾರಾಯಣ ತಲುಪಿದಾಗ ಆ ವರ್ಷದ ಮೊದಲ ಮಳೆ ಬಿರುಸಾಗಿ ಬೀಳಲಾರಂಭಿಸಿತು. ಮಳೆ ನಿಂತ ನಂತರ ಮತ್ತೆ ಹೊರಟೆವು. ಮುಂದೆ ಮತ್ತೆ ನಾಲ್ಕು ಕಡೆ ಮಳೆಯಿಂದ ಅಲ್ಲಲ್ಲಿ ನಿಲ್ಲಬೇಕಾಯಿತು. ಹಾಲಾಡಿ ದಾಟಿ ಬಿದ್ಕಲ್ ಕಟ್ಟೆ ತಲುಪಿದಾಗ ಅಲ್ಲೊಂದು ಒಂಟಿ ಆಟೋ. ಅಚ್ಚರಿಯಿಂದ ನಮ್ಮನ್ನು ನೋಡುತ್ತಾ ಆ ಆಟೋ ಚಾಲಕ ಉಡುಪಿಗೆ ದಾರಿತೋರಿಸಿದ. ಬಾರ್ಕೂರು, ಬ್ರಹ್ಮಾವರ ಮುಲಕ ಉಡುಪಿಯಲ್ಲಿ ಪ್ರಶಾಂತನನ್ನು ಮನೆಗೆ ಬಿಟ್ಟು 462ಕಿಮಿ ಪ್ರಯಾಣದ ಬಳಿಕ ಬೆಳಗ್ಗಿನ ಜಾವ 2.15ಕ್ಕೆ ಮನೆ ತಲುಪಿದಾಗ ಹೊರಗೆ ಕಾಯುತ್ತ ಕುಳಿತಿದ್ದಳು ಅಮ್ಮ.


ಮಡೆನೂರಿನಿಂದ ಹಿಂತಿರುಗುವಾಗ ನೋಡಿದ್ದ 'ಕುಂದಾಪುರ, ಕೊಲ್ಲೂರು' ಮಾರ್ಗಸೂಚಿಯನ್ನು ಹಿಂಬಾಲಿಸಿ ಜನವರಿ 2004ರಂದು ಕೊಲ್ಲೂರು ದಾಟಿ ನಾಗೋಡಿ, ಮರಕುಟಕ, ಸುಳ್ಳಳ್ಳಿ ಕ್ರಾಸ್, ಬ್ಯಾಕೋಡು, ತುಮರಿ ಮಾರ್ಗವಾಗಿ ಕಳಸವಳ್ಳಿಗೆ ತೆರಳಿದೆ. ಇಲ್ಲಿತ್ತು ಲಾಂಚ್ (ಬಾರ್ಜ್). ಈ ಕಡೆ ಕಳಸವಳ್ಳಿಯಿದ್ದರೆ, ಹಿನ್ನೀರಿನ ಆ ಕಡೆ ಇತ್ತು ಹೊಳೆಬಾಗಿಲು. ಬಲಕ್ಕೆ ಅನತಿ ದೂರದಲ್ಲಿತ್ತು ಸೈಫನ್ ಗಳ ಮೇಲ್ಭಾಗವಷ್ಟೇ ನೀರಿನಿಂದ ಹೊರಗೆ ಕಾಣುತ್ತಿದ್ದ ಮಡೆನೂರು ಅಣೆಕಟ್ಟು! ನಾವಲ್ಲಿಗೆ ತೆರಳಿದ್ದಾಗ ಆಣೆಕಟ್ಟಿನ ಮತ್ತೊಂದು ಬದಿಯಿಂದಲೂ ಜನರು ನೋಡಲು ಆಗಮಿಸಿದ್ದನ್ನು ಗಮನಿಸಿದ್ದ ನಾನು, ಕಳಸವಳ್ಳಿಯ ಭಟ್ರ ಹೋಟೇಲಿನಲ್ಲಿ ಆ ಬಗ್ಗೆ ವಿಚಾರಿಸಿದೆ. ಅವರ ಪ್ರಕಾರ ತುಮರಿಯಿಂದ ಕಳಸವಳ್ಳಿಗೆ ತಿರುವು ತಗೊಳ್ಳದೆ ನೇರವಾಗಿ ವಳಗೆರೆ ಮುಖಾಂತರ ತೆರಳಿದರೆ ಆಣೆಕಟ್ಟು ಇರುವಲ್ಲಿಗೆ 10ಕಿಮಿ ದೂರ! ಅಂದರೆ ಉಡುಪಿಯಿಂದ ಅಣೆಕಟ್ಟು 133ಕಿಮಿ ದೂರ ಇದ್ದರೆ, ಸರಿಯಾದ ದಾರಿ ತಿಳಿಯದ ನಾನು 240ಕಿಮಿ ದೂರದ ಸುತ್ತುಬಳಸಿನ ದಾರಿಯಲ್ಲಿ ತೆರಳಿದ್ದೆ!ಇನ್ನೊಂದು ಸಲ ಮಡೆನೂರು ಅಣೆಕಟ್ಟನ್ನು ನೋಡಬೇಕು, ಬಹಳಷ್ಟು ಫೋಟೊ ತೆಗೆಯಬೇಕು ಎಂದು ಮೇ 2004 ಮತ್ತು ಮೇ 2005ರಲ್ಲಿ ಮರಳಿ ಕಳಸವಳ್ಳಿಗೆ ತೆರಳಿದ್ದೇನೆ. ಆದರೆ ಅಣೆಕಟ್ಟು ಸಂಪೂರ್ಣವಾಗಿ ನೀರಿನಿಂದ ಮೇಲೆದ್ದಿರಲಿಲ್ಲ. 2006ರಂದು ಮಳೆ ಎಪ್ರಿಲ್ ತಿಂಗಳಲ್ಲೇ ಬಂದಿದ್ದರಿಂದ ಅಣೆಕಟ್ಟು ಕಾಣುವ ಚಾನ್ಸೇ ಇರಲಿಲ್ಲ. ಈ ವರ್ಷ ಮೇ ತಿಂಗಳಲ್ಲಿ ಮಳೆ ಬರದಿದ್ದರೆ ಮತ್ತೆ ಕಳಸವಳ್ಳಿಯೆಡೆ ಓಡಲಿದೆ ನನ್ನ ಯಮಾಹ.

ಮಾಹಿತಿ: ಗಣಪತಿ ಶಿರಳಗಿ ಹಾಗೂ ಪ್ರಮೋದ್ ಮೆಳ್ಳೆಗಟ್ಟಿ

ಮಂಗಳವಾರ, ಏಪ್ರಿಲ್ 17, 2007

ಮಡೆನೂರು ಮಾಡಿದ ಮೋಡಿ - ಭಾಗ ೧


ನನ್ನ ಪ್ರಥಮ ಪ್ರಯಾಣ/ಚಾರಣ ಜೂನ್ 1, 2003ರಂದು. ಅದುವರೆಗೆ ಶಾಲಾ ಕಾಲೇಜು ಪ್ರವಾಸಗಳನ್ನು ಬಿಟ್ಟರೆ ಎಲ್ಲೂ ಹೋಗಿರಲಿಲ್ಲ. ಇಲ್ಲೇ ಸಮೀಪ ಎಲ್ಲಾದರೂ ಹೋಗಿಬರೋಣ ಎಂದರೆ ನನ್ನಲ್ಲಿ ದ್ವಿಚಕ್ರ ವಾಹನವೂ ಇದ್ದಿರಲಿಲ್ಲ. ಯೂತ್ ಹಾಸ್ಟೆಲ್ ಎಂಬ ಚಾರಣ ಆಯೋಜಿಸುವ ಒಕ್ಕೂಟ ಅಸ್ತಿತ್ವದಲ್ಲಿದೆ ಎಂಬುದು ಮೊದಲೇ ತಿಳಿದಿರಲಿಲ್ಲ. ಆದ್ದರಿಂದ ಮುಂದೆ ಪ್ರಯೋಜನವಾಗಬಹುದು ಎಂದು ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದೆ. ಮೇ ೨೦೦೩ರಂದು ನನ್ನ ತಮ್ಮ ತನ್ನಲ್ಲಿದ್ದ ಸೆಕೆಂಡ್ ಹ್ಯಾಂಡ್ ಯಮಾಹ ಅರ್.ಎಕ್ಸ್.ಜಿ ಬೈಕ್-ನ್ನು ನನಗೆ ದಾನವಾಗಿ ನೀಡಿದಾಗ ಆದ ಸಂತೋಷಕ್ಕೆ ಮಿತಿಯಿಲ್ಲ. ಕೈಗೆ ಬೈಕ್ ಸಿಕ್ಕಿದ ಕೂಡಲೇ ಎಲ್ಲಾದರೂ ತಿರುಗಾಡಲು ಹೋಗುವ ತುಡಿತ.

ಮೇ 2003ರಲ್ಲಿ ವಿಜಯ ಕರ್ನಾಟಕದಲ್ಲಿ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಿತ್ತು. ಕೆಲವು ದಿನಗಳ ಬಳಿಕ ದ ಹಿಂದೂ ಪತ್ರಿಕೆಯಲ್ಲೂ ಮಡೆನೂರು ಅಣೆಕಟ್ಟಿನ ಬಗ್ಗೆ ಲೇಖನ ಬಂದಾಗ 'ನೋಡೇಬಿಡಾಣ...' ಎಂದು ನಿರ್ಧಾರ ಮಾಡಿ ನನ್ನ ಪ್ರಥಮ ಜರ್ನಿಗೆ ಅಣಿಯಾದೆ. ಸಹೋದ್ಯೋಗಿ ಪ್ರಶಾಂತ್ ಬರಲು ಒಪ್ಪಿಕೊಂಡ.

ಮಡೆನೂರು ಅಣೆಕಟ್ಟಿನ ಬಗ್ಗೆ ಒಂದಿಷ್ಟು: ಮಡೆನೂರು ಅಣೆಕಟ್ಟನ್ನು ಶರಾವತಿಯ ಉಪನದಿ ಎಣ್ಣೆಹೊಳೆಗೆ ಅಡ್ಡಲಾಗಿ 1939ರಲ್ಲಿ ನಿರ್ಮಿಸಲು ಆರಂಭಿಸಿ 1948ರಲ್ಲಿ ಪೂರ್ಣಗೊಳಿಸಲಾಗಿತ್ತು. ಜೋಗದಿಂದ ನದಿಗುಂಟ 20ಕಿಮಿ ಮೇಲ್ಭಾಗದಲ್ಲಿರುವ ಈ ಅಣೆಕಟ್ಟಿನ ಪ್ರಮುಖ ಉದ್ದೇಶ ಜೋಗದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ವಿದ್ಯುತ್ ಉತ್ಪಾದನಾ ಕೆಂದ್ರಕ್ಕೆ ನೀರು ಸರಬರಾಜು ಮಾಡುವುದಾಗಿತ್ತು. 2ನೇ ಫೆಬ್ರವರಿ 1948ಕ್ಕೆ ವಿದ್ಯುತ್ ಉತ್ಪಾದನಾ ಕೆಂದ್ರ ಮತ್ತು ಅಣೆಕಟ್ಟಿನ ಉದ್ಘಾಟನೆ ನಡೆಯಬೇಕಿತ್ತು ಆದರೆ ಮಹಾತ್ಮಾ ಗಾಂಧಿಯವರ ನಿಧನದಿಂದ ನಡೆಯಲಿಲ್ಲ. ಕೃಷ್ಣರಾಜೇಂದ್ರ ಒಡೆಯರ್ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ನಾಮಕರಣ ಮಾಡಿದ್ದ ವಿದ್ಯುತ್ ಉತ್ಪಾದನಾ ಕೆಂದ್ರವನ್ನು ಮಹಾತ್ಮಾ ಗಾಂಧಿ ಹೈಡ್ರೊಎಲೆಕ್ಟ್ರಿಕ್ ಪ್ರೊಜೆಕ್ಟ್ ಎಂದು ಮರುನಾಮಕರಣ ಮಾಡಿ, ಮಡೆನೂರು ಅಣೆಕಟ್ಟಿನೊಂದಿಗೆ 21ನೇ ಫೆಬ್ರವರಿ 1949ರಲ್ಲಿ ಉದ್ಘಾಟಿಸಲಾಯಿತು. ನಂತರ 60ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗ ಅದರ ಅಗಾಧ ಹಿನ್ನೀರಿನಲ್ಲಿ ಮಡೆನೂರು ಅಣೆಕಟ್ಟು ತನ್ನ ಪ್ರಾಮುಖ್ಯತೆ ಮತ್ತು ಅಸ್ತಿತ್ವ ಎರಡನ್ನೂ ಕಳಕೊಂಡು ಮುಳುಗಿಹೋಯಿತು. ಲಿಂಗನಮಕ್ಕಿ ತನ್ನ ಗರಿಷ್ಟ ಮಟ್ಟ 1819ಅಡಿ ತಲುಪಿದಾಗ ಮಡೆನೂರು ಅಣೆಕಟ್ಟಿನ ಮೇಲೆ 15ಅಡಿ ನೀರು ನಿಂತಿರುತ್ತದೆ.

ಸಾಗರದಿಂದ 32ಕಿಮಿ ದೂರದಲ್ಲಿದೆ ಹೊಳೆಬಾಗಿಲು. ಈ ದಾರಿಯಲ್ಲಿ 30ಕಿಮಿ ಕ್ರಮಿಸಿದ ಬಳಿಕ ಬಲಕ್ಕೆ ಸಿಗುವ ಅರಣ್ಯ ಇಲಾಖೆಯ ದ್ವಾರದೊಳಗೆ ತಿರುವು ತಗೊಂಡು 6ಕಿಮಿ ಕ್ರಮಿಸಿದರೆ ಅಣೆಕಟ್ಟು ಇರುವ ಸ್ಥಳ ತಲುಪಬಹುದೆಂದು ಎರಡೂ ಲೇಖನಗಳು ತಿಳಿಸಿದ್ದರಿಂದ, ಸಾಗರಕ್ಕೆ ಹೋಗಿಯೇ ಮಡೆನೂರು ಅಣೆಕಟ್ಟಿರುವ ಸ್ಥಳಕ್ಕೆ ತೆರಳಬೇಕೆಂದು ಗ್ರಹಿಸಿ ಮೊದಲ ತಪ್ಪು ಮಾಡಿದೆ. ಭಟ್ಕಳದ ಮುಖಾಂತರ ಸಾಗರಕ್ಕೆ ತೆರಳುವ ನಿರ್ಧಾರ ಮಾಡಿ ಎರಡನೇ ತಪ್ಪು ಮಾಡಿದೆ. ಭಟ್ಕಳ - ಸಾಗರ ಅಂತರ ಹೆಚ್ಚೆಂದರೆ 50ಕಿಮಿ ಇರಬಹುದೆಂದು ಗೆಸ್ ಮಾಡಿ ಬೆಳಗ್ಗೆ 7ಕ್ಕೆ ಉಡುಪಿಯಿಂದ ರಿಲ್ಯಾಕ್ಸ್ ಆಗಿ ಹೊರಟೆವು. ಭಟ್ಕಳದಿಂದ 17ಕಿಮಿ ಮೊದಲು ಒತ್ತಿನೆಣೆಯಲ್ಲಿರುವ ಕ್ಷಿತಿಜ ನೇಸರ ಧಾಮಕ್ಕೆ ತೆರಳಿ ಒಂದು ತಾಸಿನಷ್ಟು ಸಮಯವನ್ನು ಕಳೆದು 3ನೇ ತಪ್ಪು ಮಾಡಿದೆ. ಈ ಒಂದು ತಾಸು ಕಡೆಗೆ ನನ್ನನ್ನು ಬಹಳ ಕಾಡಿತು, ಈಗಲೂ ಕಾಡುತ್ತಿದೆ (ಕೆಳಗಿರುವ ಚಿತ್ರ - ಕ್ಷಿತಿಜ ನೇಸರ ಧಾಮದಿಂದ ಕಾಣುವ ನೋಟ).


ಭಟ್ಕಳದಿಂದ ಹೊರಟಾಗಲೇ 11.30 ಆಗಿತ್ತು. ಸಾಗರ ದಾರಿಯಲ್ಲಿ ಕೇವಲ 1ಕಿಮಿ ಸಾಗಿದ್ದೇವಷ್ಟೆ, ಆಲ್ಲೊಂದು ದಾರಿಸೂಚಿಯಲ್ಲಿ ಬರೆದಿತ್ತು 'ಸಾಗರ - 110ಕಿಮಿ' ಎಂದು! 'ಯಪ್ಪಾ' ಎಂದು ಅಲ್ಲೇ ಬೈಕ್ ನಿಲ್ಲಿಸಿ, ಇಬ್ಬರೂ ಸಮಾಲೋಚಿಸಿ, ರಾತ್ರಿ ಉಡುಪಿ ತಲುಪುವಾಗ ಮಧ್ಯರಾತ್ರಿ ದಾಟಬಹುದು ಎಂದು ತಿಳಿದು ಮುಂದುವರಿಸುವ ನಿರ್ಧಾರ ಮಾಡಿದೆವು. ಈ ಕೋಗಾರ ಘಟ್ಟದ ರಸ್ತೆ ಬಹಳ ಕೆಟ್ಟಿತ್ತು. ಸುಡು ಬಿಸಿಲು ಬೇರೆ. 45ಕಿಮಿ ಬಳಿಕ ರಸ್ತೆಯಿಂದ 2ಕಿಮಿ ಒಳಗೆ ಭೀಮೇಶ್ವರಕ್ಕೆ ತೆರಳುವ ಮಣ್ಣಿನ ದಾರಿ ಬಂದಾಗ ಅಲ್ಲಿಗೆ ತೆರಳಿದೆವು. ಸುಂದರವಾದ ಶಿವ ದೇವಾಲಯ. ಅಲ್ಲೇ ಒಂದು ಸಣ್ಣ 40ಅಡಿ ಜಲಪಾತ. ಆಗ ನೀರಿರಲಿಲ್ಲ. (ನಂತರ ಹಲವಾರು ಬಾರಿ ಭೀಮೇಶ್ವರಕ್ಕೆ ತೆರಳಿದ್ದೇನೆ. ಅಲ್ಲೊಂದು ರಾತ್ರಿ ಕಳೆದದ್ದು ನೆನಪಿನಲ್ಲುಳಿಯುವಂತದ್ದು. ಜಲಪಾತ ಸಣ್ಣದಾದರೂ ನೋಡಲು ಸುಂದರವಾಗಿದೆ). ಭೀಮೇಶ್ವರ ಜಲಪಾತದ ಒಂದು ಚಿತ್ರ ಕೆಳಗಿದೆ.


ಕಾರ್ಗಲ್ ನಿಂದ ನೇರವಾಗಿ ಸಾಗರಕ್ಕೆ ತೆರಳಬಹುದಿತ್ತಾದರೂ, ಪ್ರಶಾಂತ್ ಜೋಗ ನೋಡುವ ಇಚ್ಛೆ ವ್ಯಕ್ತಪಡಿಸಿದಾಗ ಜೋಗಕ್ಕೆ ತೆರಳಿ ಸಾಗರ ತಲುಪಿದಾಗ ಸಮಯ 3.45 ಮತ್ತು ಕ್ರಮಿಸಿದ ದಾರಿ 206ಕಿಮಿ. ಇಂಧನ ತುಂಬಿಸಿ, ಮಾರಿಗುಡಿಯ ಮುಂದೆ ಬಂದು ಬಲಕ್ಕೆ ಹೊರಳಿ ಹೊಳೆಬಾಗಿಲಿನ ರಸ್ತೆಯಲ್ಲಿ ಬೈಕು ಓಡಿಸಿದೆ. 4.40ಕ್ಕೆ ಅರಣ್ಯ ಇಲಾಖೆಯ ದ್ವಾರದ ಬಳಿ ಬಂದಾಗ 7 ಬೈಕುಗಳಲ್ಲಿ 14 ಯುವಕರು ಮುಚ್ಚಿದ ದ್ವಾರದ ಒಳಗೆ ನುಗ್ಗಲು ತಯಾರಾಗಿ ನಿಂತಿದ್ದರು. ಅವರಲ್ಲೊಬ್ಬ ಹೊಳೆಬಾಗಿಲಿನಿಂದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬನನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಬರುವುದಕ್ಕೂ, ನಾವು ಅಲ್ಲಿ ತಲುಪುವುದಕ್ಕೂ ಸರಿಹೋಯಿತು. ಒಳಗೆ ತೆರಳಲು ಹೊಳೆಬಾಗಿಲಿನಲ್ಲಿರುವ ಅರಣ್ಯ ಇಲಾಖೆಯ ಕಛೇರಿಯಿಂದ ಅನುಮತಿ ಪಡೆಯಬೇಕೆಂದು ನಮಗೆ ತಿಳಿದಿರಲಿಲ್ಲ. ಗೇಟು ತೆರೆದ ಆ ಸಿಬ್ಬಂದಿ, ನಾವೂ ಅದೇ ಗುಂಪಿನವರಿರಬಹುದೆಂದು ನಮ್ಮನ್ನೂ ಒಳಬಿಟ್ಟ. ಸಮ್ ಲಕ್!

ಈ 6ಕಿಮಿ ದಾರಿ ಕಚ್ಚಾ ರಸ್ತೆ. 4ಕಿಮಿ ಬಳಿಕ ರಸ್ತೆಯ ಮಧ್ಯದಲ್ಲೇ ಒಂದು ದೊಡ್ಡ ಮರ. ಅದಕ್ಕೊಂದು ಕಟ್ಟೆ. ಕಟ್ಟೆಯ ಮೇಲೆ ಬರೆದಿತ್ತು 'ಮಡೆನೂರು ಸಂತೆ ನಡೆಯುತ್ತಿದ್ದ ಸ್ಥಳ'. ಆಗಿನ ಮಡೆನೂರು ಹಳ್ಳಿಯೊಳಗಿನ ಪ್ರಮುಖ ವೃತ್ತ ಇದಾಗಿತ್ತು. ನಮ್ಮೊಂದಿಗಿದ್ದ ಬೈಕ್ ಯುವಕರು ಮುಂದೆ ಹೋಗಿದ್ದರಿಂದ ಅಲ್ಲಿ ನಾವಿಬ್ಬರೆ. ನೀರವ ಮೌನ. ತರಗೆಲೆಗಳಿಂದ ಆವೃತವಾಗಿದ್ದ ನೆಲ. ಬಲಕ್ಕೊಂದು ಕಲ್ಲು, ಹುಲ್ಲು, ಮುಳ್ಳುಗಳಿಂದ ಮುಚ್ಚಿಹೋಗಿದ್ದ ಕವಲೊಡೆದ ದಾರಿ. ಈ ದಾರಿಯಲ್ಲಿ ಸ್ವಲ್ಪ ದೂರ ನಡೆದು, ಆ ಮೌನ ಹೆದರಿಕೆ ಹುಟ್ಟಿಸುತ್ತಿದ್ದರಿಂದ ಮುಂದೆ ಸಾಗಲು ಧೈರ್ಯ ಸಾಲದೆ ಮರಳಿ ಕಟ್ಟೆ ಮೇಲೆ ಬಂದು ಕೂತೆವು. ಆಗಿನ ಕಾಲದಲ್ಲಿ ಅದು ಮಡೆನೂರಿನಿಂದ ತಾಳಗುಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿತ್ತು ಎಂದು ಎಲ್ಲೋ ಓದಿದ ನೆನಪು.

ಕಟ್ಟೆ ಮೇಲೆ ಕುಳಿತು ಸಂತೆ ಹೇಗೆ ಕಾಣುತ್ತಿರಬಹುದೆಂದು ಮಾತನಾಡತೊಡಗಿದೆವು. ನನಗಂತೂ ಆಗಿನ ಕಾಲದ ದಿರಿಸು ಧರಿಸಿದ್ದ ಜನರು 'ಏನು ಕೊಳ್ಳಲಿ' ಎಂದು ಯೋಚಿಸುತ್ತ ಕೈಯಲ್ಲೊಂದು ಚೀಲ ಹಿಡಿದು ಕೈಯನ್ನು ಹಿಂದಕ್ಕೆ ಕಟ್ಟಿ ನಿಧಾನವಾಗಿ ಅಚೀಚೆ ನಡೆದಾಡುವುದು, ತರಕಾರಿ-ಸೊಪ್ಪು ಇತ್ಯಾದಿಗಳನ್ನು ಮಾರಾಟ ಮಾಡುವ ಹೆಂಗಸರು, ಅವರೊಂದಿಗೆ ಖರೀದಿಸುವ ಸಲುವಾಗಿ ಚೌಕಾಶಿ ಮಾಡುತ್ತಿರುವವರು, ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಹಿರಿಯರು, ಅಲ್ಲೇ ಅಲೆದಾಡುತ್ತಿದ್ದ ಪಡ್ಡೆಗಳು, ಮಕ್ಕಳ ಚಿಲಿಪಿಲಿ, ಏನಾದರೂ ತಿನ್ನಲು ಸಿಗಬಹುದೋ ಎಂದು ಜೊಲ್ಲು ಸುರಿಸುತ್ತ ನಿಂತಿದ್ದ ದನಗಳು, ತಾಳಗುಪ್ಪ ರಸ್ತೆಯಲ್ಲಿ ಹೊರಡಲು ಅನುವಾಗಿ ನಿಂತಿದ್ದ ಎತ್ತಿನಗಾಡಿಗಳು ಇತ್ಯಾದಿಗಳ ಚಿತ್ರಣ ಮನದಲ್ಲಿ ಬರುತ್ತಿತ್ತು; ಎಲ್ಲಾ 55-60 ವರ್ಷಗಳ ಹಿಂದೆ ಮಡೆನೂರು ಎಂಬ ಸಮೃದ್ಧ ಹಳ್ಳಿಯ ತುಂಬಿದ ಸಂತೆಯಲ್ಲಿ.

5 ಗಂಟೆಯ ಹೊತ್ತಿಗೆ ಅಣೆಕಟ್ಟು ಇದ್ದಲ್ಲಿ ತಲುಪಿದೆವು. ನೀರಿನ ಮಟ್ಟ ಬಹಳ ಕಡಿಮೆ ಇದ್ದಿದ್ದರಿಂದ(ಮೊದಲ ಚಿತ್ರ ಮಡೆನೂರು ಹಿನ್ನೀರಿದ್ದು) ಬಹಳ ಮುಂದಿನವರೆಗೆ ಯಮಾಹ ಓಡಿತು. ಒಂದು ದಿಬ್ಬದ ಹಿಂದೆ ಅಣೆಕಟ್ಟು ಇದ್ದಿದ್ದರಿಂದ ಅದಿನ್ನೂ ನಮಗೆ ಕಾಣಿಸುತ್ತಿರಲಿಲ್ಲ. ದಿಬ್ಬದ ಈ ಬದಿಯಲ್ಲಿ ಮನೆ, ರಸ್ತೆಗಳಿದ್ದ ಕುರುಹುಗಳು. ಆಗಿನ ಕಾಲದ ಟಾರು ರಸ್ತೆ ಮಣ್ಣಿನಿಂದ ಮೇಲೆದ್ದು ಸ್ವಲ್ಪ ದೂರ ಸಾಗಿ ಮತ್ತೆ ಮಣ್ಣಿನೊಳಗೆ ಮಾಯವಾಗಿತ್ತು. ಈ ಟಾರು ರಸ್ತೆಯ ಮೇಲೆ ಬೈಕ್ ನಿಲ್ಲಿಸಿ ಅಣೆಕಟ್ಟಿನೆಡೆ ಹೆಜ್ಜೆ ಹಾಕಿದೆವು. ದಿಬ್ಬ ದಾಟಿ ಐದೇ ನಿಮಿಷದಲ್ಲಿ ನಾವು ಅಣೆಕಟ್ಟಿನ ಮೇಲಿದ್ದೆವು. ಪ್ರಥಮ ನೋಟದಲ್ಲೇ ಮಡೆನೂರು ಅಣೆಕಟ್ಟಿನ ಸೌಂದರ್ಯಕ್ಕೆ ನಾನು ಕ್ಲೀನ್ ಬೌಲ್ಡ್! ಐವತ್ತಕ್ಕೂ ಹೆಚ್ಚಿನ ವರ್ಷ ನೀರಿನಡಿ ಇದ್ದು, ಕಿಂಚಿತ್ತೂ ಹಾನಿಯಾಗದೇ ತನ್ನ ಒರಿಜಿನಲ್ ಸೌಂದರ್ಯವನ್ನು ಉಳಿಸಿಕೊಂಡು ಇನ್ನೂ ಗಟ್ಟಿಮುಟ್ಟಾಗಿರುವ ಈ ಅಣೆಕಟ್ಟು, ಸೈಫನ್ ಮಾದರಿ ಬಳಸಿ ನಿರ್ಮಿಸಿದ ಗಣೇಶ್ ಅಯ್ಯರ್ ಎಂಬವರ ನಿರ್ಮಾಣ ನೈಪುಣ್ಯತೆಗೆ ಸಾಕ್ಷಿ.
ಮುಂದುವರಿಯುವುದು...

ಗುರುವಾರ, ಏಪ್ರಿಲ್ 12, 2007

ಅಕ್ಷರ ಅವಾಂತರ ೧ - ದೀರ್ಘವಿಲ್ಲದ ' ಬೀಚ್ ' !!


ಹೊನ್ನಾವರದಿಂದ ಕುಮಟಾಕ್ಕೆ ತೆರಳುವಾಗ ೧೩ಕಿಮಿ ಬಳಿಕ ಸಿಗುವುದು ಧಾರೇಶ್ವರ. ಇಲ್ಲಿರುವ ರಮಣೀಯ ಸಮುದ್ರ ತೀರಕ್ಕೆ ತೆರಳಲು ಹಾಕಿರುವ ಮಾರ್ಗಸೂಚಿಯನ್ನು ಗಮನಿಸಿದರೆ....ಎಡವಟ್ಟು. ರಸ್ತೆಯ ಇನ್ನೊಂದು ಬದಿಯಲ್ಲಿ, ಕುಮಟಾದಿಂದ ಬರುವವರಿಗೆ ಕಾಣಲೆಂದು ಇನ್ನೊಂದು ಮಾರ್ಗಸೂಚಿ. ಅದರಲ್ಲಾದರೂ ಸರಿಯಾಗಿ ಬರೆದಿರಬಹುದು ಎಂದು ನೋಡಹೊರಟರೆ....ಅಲ್ಲೂ ಎಡವಟ್ಟು.

ಸೋಮವಾರ, ಏಪ್ರಿಲ್ 09, 2007

ಹುಲಿ ನೋಡುವ ಹುಚ್ಚು

ಕಳೆದ ತಿಂಗಳು ೩೧ರಂದು ಭಗವತಿ ನಿಸರ್ಗ ಧಾಮದಲ್ಲಿ ರಾತ್ರಿ ಕಳೆದಿದ್ದೆವು. ಹಲವಾರು ಬಾರಿ ಕುದುರೆಮುಖಕ್ಕೆ ತೆರಳಿದರೂ, ಭಗವತಿಗೆ ಇದು ನನ್ನ ಪ್ರಥಮ ಭೇಟಿಯಾಗಿತ್ತು. ನಿಶ್ಯಬ್ದ, ಸುಂದರ ವಾತಾವರಣ ಮತ್ತು ಅಲ್ಲೇ ಹರಿಯುವ ಸದಾ ನೀರಿರುವ ತೊರೆ. ಹುಲಿ ಮತ್ತು ಕಾಡುಕೋಣ (ಇಂಡಿಯನ್ ಗೌರ್) ಇಲ್ಲಿ ಧಾಮದ ಸನಿಹದಲ್ಲೇ ಅಡ್ಡಾಡುತ್ತಿರುತ್ತವೆ ಎಂದು ಕೇಳಿದ್ದೆ. ಮಧ್ಯರಾತ್ರಿಯ ಬಳಿಕ ಒಂಟಿ ಕಾಡುಕೋಣವೊಂದು ಅಡಿಗೆ ಮನೆಯ ಬಳಿ ಬಿದ್ದಿರುವ ತರಕಾರಿ ಚೂರುಗಳನ್ನು ತಿನ್ನಲು ಬರುತ್ತದೆ. ಆದರೆ ಹುಲಿ? ಕಳೆದ ಏಳೆಂಟು ವರ್ಷಗಳಲ್ಲಿ ಹುಲಿಯನ್ನು ಕುದುರೆಮುಖದ ಕಾಡುಗಳಲ್ಲಿ ನೋಡಿದವರು ಆಲ್ಮೋಸ್ಟ್ ಶೂನ್ಯ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಮಲ್ಲೇಶ್ವರದಲ್ಲಿದ್ದ ಕೆಲವು ಸಾಕು ಜಿಂಕೆಗಳನ್ನು ಧಾಮದ ಸನಿಹ ಕಾಡಿನಲ್ಲಿ ಬಿಡಲಾಗಿದೆ. ನಮಗೆ ಕಾಣಸಿಕ್ಕಿದ್ದು ಈ ಜಿಂಕೆಗಳು ಮಾತ್ರ. ಈಗ ಕುದುರೆಮುಖದಲ್ಲಿನ ಹುಲಿಗಳಿಗೆ ಈ ಜಿಂಕೆಗಳು ಸುಲಭ ಆಹಾರ.

ಮೊನ್ನೆ ಕುರಿಂಜಾಲಿಗೆ ಚಾರಣ ಮಾಡಿ ಹಿಂತಿರುಗಿದ ಬಳಿಕ ನಾನು ಸುಸ್ತಾಗಿ ಒಂದು ಡೇರೆಯಲ್ಲಿ ನಿದ್ರೆ ಮಾಡತೊಡಗಿದರೆ ನಮ್ಮಲ್ಲಿ ಕೆಲವರು ಜಲಕ್ರೀಡೆಯಾಡಲು ತೆರಳಿದರು. ಯಾವಾಗಲು ಸ್ನಾನ ಮಾಡುವಲ್ಲಿ ಕೆಲವು ಅನಾಗರೀಕರು ಕೇಕೆ ಹಾಕಿ ಗಲಾಟೆ ಮಾಡುತ್ತಿದ್ದರಿಂದ, ನಮ್ಮವರು ಧಾಮದ ಮೇಟಿ ರುಕ್ಮಯ್ಯನ ಮಾರ್ಗದರ್ಶನದಲ್ಲಿ ಕಾಡಿನೊಳಗೆ ಸ್ವಲ್ಪ ನಡೆದು ಪ್ರಶಾಂತ ಮತ್ತು ವಿಶಾಲವೆನ್ನಬಹುದಾದ ತೊರೆಯ ಮತ್ತೊಂದು ಭಾಗಕ್ಕೆ ತೆರಳಿದರು. ಅಲ್ಲಿ ಮರವೊಂದರಲ್ಲಿ ಹುಲಿಯು ಪರಚಿದ ಗುರುತು ಮತ್ತು ತನ್ನ 'ಟೆರ್ರಿಟರಿ'ಯನ್ನು ಗುರುತಿಸುವ ಸಲುವಾಗಿ ಅದೇ ಮರದ ಮೇಲೆ ಸ್ವಲ್ಪ ಮುತ್ರ ಚಿಮ್ಮಿಸಿದ ಕುರುಹುಗಳು. ತೊರೆಯ ದಂಡೆಯಲ್ಲಿ ಹುಲಿ ನಡೆದಾಡಿದ ಸಾಕ್ಷಿಗೆ ಪೂರಕವಾಗಿ 'ಪಗ್ ಮಾರ್ಕ್'ಗಳು. ನಂತರ ವಿಷಯ ತಿಳಿದು ಬಹಳ ಬೇಜಾರಾಯಿತು. 'ಮನಿಕ್ಕೊಳ್ಳೊ ಬದ್ಲು, ಜಳ್ಕಾ ಮಾಡ್ದಿದ್ರೂ ಪರ್ವಾಯಿಲ್ಲ, ಜಳ್ಕಾ ಮಾಡೋವಲ್ಲಾದ್ರೂ ಹೋಗ್ಬಹುದಿತ್ತಲ್ಲೇ' ಎಂದು ಪರಿತಪಿಸುತ್ತಿದ್ದೆ.

ಹುಲಿ ಎಂದರೆ ಒಂಥರಾ ರೋಮಾಂಚನ. ಕಾಡಿನಲ್ಲಿ ಹುಲಿ ನೋಡಬೇಕೆಂದು ಬಹಳ ಪ್ರಯತ್ನಪಟ್ಟೆವು. ಇದುವರೆಗೆ ಸಾಧ್ಯವಾಗಿಲ್ಲ. ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಸುಲಭದಲ್ಲಿ ಹುಲಿ ನೋಡಲು ಸಿಗುತ್ತವೆ. ಮನುಷ್ಯರನ್ನು ಕಂಡು ಅವು ದೊಡ್ಡದಾಗಿ ಆಕಳಿಸುವ ಪರಿ ನೋಡಿದರೆ, ನಮ್ಮನ್ನು ನೋಡಿ ಯಾವ ಮಟ್ಟಕ್ಕೆ ಅವುಗಳಿಗೆ ಬೋರ್ ಆಗಿರಬಹುದು ಎಂದು ಯೋಚಿಸಿಯೇ ನಮ್ಮ 'ಈಗೋ' ಹರ್ಟ್ ಆಗಿಬಿಡುತ್ತೆ. ಆದರೆ ಉಳಿದೆಡೆ ಪರಿಸ್ಥಿತಿ ಭಿನ್ನ. ಇಲ್ಲಿ ಹುಲಿ ಮತ್ತು ಮನುಷ್ಯ ಮುಖಾಮುಖಿಯಾದರೆ ಮನುಷ್ಯ ಓಡುತ್ತಾನೆ ಅಥವಾ ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ನಿಧಾನವಾಗಿ ಹಿಂದೆ ಸರಿಯುತ್ತಾರೆ ಅಥವಾ ಹುಲಿ ದಾಳಿ ಮಾಡುತ್ತದೆ.

ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗ ಹುಲಿಗಳು ಅಲೆದಾಡುವ ಸ್ಥಳ. ರಕ್ಷಿತಾರಣ್ಯವಲ್ಲದೇ ಮನುಷ್ಯ ಮತ್ತು ಹುಲಿ ಇಷ್ಟು ಸಮೀಪ ವಾಸವಿರುವುದು ಅಪರೂಪ. ಹಲವಾರು ಬಾರಿ ಕವಲೇದುರ್ಗಕ್ಕೆ ತೆರಳಿದರೂ ನಮಗೆ ಹುಲಿಯ ದರ್ಶನವಾಗಿಲ್ಲ. ಹೆಜ್ಜೆಯ ಗುರುತು, ಮರ ಪರಚಿದ ಗುರುತು ಇತ್ಯಾದಿ ಕಾಣಸಿಕ್ಕರೂ ಹುಲಿ ಕಾಣಸಿಕ್ಕಿಲ್ಲ. ಅದೊಂದು ಸಲ ಕವಲೇದುರ್ಗದ ಮೇಲಿಂದ ಹಿಂತಿರುಗುವಾಗ ಹುಲಿಯ 'ಪಗ್ ಮಾರ್ಕ್'. ನಾವು ಮೇಲೆ ತೆರಳುವಾಗ ಅದಿರಲಿಲ್ಲ! ಕೇವಲ 30 ನಿಮಿಷಗಳ ಅಂತರದಲ್ಲಿ ಅಲ್ಲೊಂದು ಹುಲಿ ಸುಳಿದಿತ್ತು. ಅಲ್ಲೆಲ್ಲೋ ಕಾಡಿನಿಂದ ನಮ್ಮನ್ನು ಅದೇ ಹುಲಿ ಗಮನಿಸುತ್ತಿರಬಹುದು ಎಂದು ಯೋಚಿಸಿಯೇ ರೋಮಾಂಚನಗೊಂಡೆವು.

ಊರಿನಿಂದ ಕಾಣುವ ಕೋಟೆಯೊಳಗಿರುವ ಬಂಡೆಯೊಂದರ ಮೇಲೆ ಹುಲಿ ಕುಳಿತಿರುವುದನ್ನು ಹಳ್ಳಿಗರು ನೋಡಿದ್ದಾರೆ. ಮೇಟಿಂಗ್ ಸೀಸನ್ ನಲ್ಲಿ ಕಾಣುವ ಸಾಧ್ಯತೆ ಇರಬಹುದು ಎಂದು ಕವಲೇದುರ್ಗಕ್ಕೆ ತೆರಳಿ ಊರಿನ ಅಂಚಿನಲ್ಲಿ ಡೇರೆ ಹಾಕಿ ರಾತ್ರಿಯಿಡೀ ಆ ಬಂಡೆಯನ್ನು ದಿಟ್ಟಿಸುತ್ತಾ ಕುಳಿತರೂ ನೋ ಹುಲಿ. ಮತ್ತೆರಡು ಬಾರಿ, ಮುಂಚೆ ಬೇರೆಯವರಿಗೆ ಹುಲಿ ಕಾಣಸಿಕ್ಕಿದ್ದ ಕೋಟೆಯ ೩ನೇ ಹಂತದೊಳಗೆ ಡೇರೆ ಹಾಕಿ ಕುಳಿತೆವು. ಸ್ಟಿಲ್ ನೋ ಹುಲಿ.

ಅಕ್ಟೊಬರ್ ೨೦೦೫ರಂದು ಇಬ್ಬರು ಆಗಮಿಸಿದ್ದರು ಕವಲೇದುರ್ಗ ನೋಡಲು. ಆಂಗ್ಲ ಭಾಷೆಯಲ್ಲಿ ಹಳ್ಳಿಗರೊಂದಿಗೆ ಮಾತನಾಡುತ್ತಾ ದಾರಿ ಕೇಳಿ ಮಧ್ಯಾಹ್ನ 2ರ ಹೊತ್ತಿಗೆ ಕೋಟೆಯತ್ತ ತೆರಳಿದರು. ಸುಮಾರು 3.30ರ ಹೊತ್ತಿಗೆ ಇಬ್ಬರೂ ಸತ್ತೇವೋ ಕೆಟ್ಟೇವೋ ಎಂಬಂತೆ ಬರೀಗೈಯಲ್ಲಿ ಏದುಸಿರು ಬಿಡುತ್ತಾ ಓಡಿ ಬಂದು ಮನೆಯೊಂದರ ಅಂಗಣದಲ್ಲಿ ಕೋಟೆಯೆಡೆ ಕೈ ತೋರಿಸುತ್ತಾ ಕೂತುಬಿಟ್ಟರು. ಇಬ್ಬರ ಮುಖದಲ್ಲೂ ಪ್ರೇತಕಳೆ. ಸ್ವಲ್ಪ ಸುಧಾರಿಸಿಕೊಂಡ ಬಳಿಕ 'ಟೈಗರ್ ಮ್ಯಾನ್, ಹುಲಿ, ಹುಲಿ' ಎಂದು ಸೊಂಟದ ಮೇಲೆ ಕೈಯಿಟ್ಟು 'ರೆಸ್ಟ್ ಲೆಸ್' ಆಗಿ ಅಚೀಚೆ ನಡೆದಾಡತೊಡಗಿದರು. ಅವರ ಪರಿಸ್ಥಿತಿ ಕಂಡು ಮನೆಯವರಿಗೆ ಮುಸಿ ಮುಸಿ ನಗು. ಕೇಳಿದ ನಮಗೂ ನಗು.

ಆದದ್ದೇನೆಂದರೆ ನಿಧಾನವಾಗಿ, ಕಾಲೆಳೆದುಕೊಂಡು ಕೋಟೆಯ 3ನೇ ಹಂತ ತಲುಪಿದ್ದಾರೆ ಇಬ್ಬರೂ. 3ನೇ ಹಂತಕ್ಕೆ ಕಾಲಿಟ್ಟ ಕೂಡಲೇ ಕಾಣಬರುವುದು ಕಾಶಿ ವಿಶ್ವನಾಥ ದೇವಾಲಯ. ಈ ದೇವಾಲಯದ ಚೆಲುವು ನೋಡುತ್ತಾ ಮೈಮರೆತ ಇಬ್ಬರೂ ಬಲಕ್ಕೆ 100-150 ಅಡಿ ದೂರದಲ್ಲಿರುವ ಜೋಡಿಬಾವಿಗಳ ಬಳಿ ತಮ್ಮನ್ನೇ ದುರುಗುಟ್ಟಿ ನೋಡುತ್ತ ಕುಳಿತ ಹುಲಿಯನ್ನು ನೋಡೇ ಇಲ್ಲ! ಒಂದೈದು ಸೆಕೆಂಡುಗಳ ಬಳಿ ಆ ಹುಲಿ ಕೊಟ್ಟ ಸಣ್ಣಗೆ ಘರ್ಜನೆಯನ್ನು ಕೇಳಿ, ತಮ್ಮ ಬಲಕ್ಕೆ ಕತ್ತು ತಿರುಗಿಸಿದ ಇಬ್ಬರೂ ಯಾವ ಪರಿ ಕಂಗಾಲಾಗಿರಬೇಡ ವ್ಯಾಘ್ರನ ಅಪ್ರತಿಮ ರೂಪವನ್ನು ಕಂಡು! 'ಶಾಕ್ ಆಫ್ ದ ಲೈಫ್' ಹೊಡೆಸಿಕೊಂಡಿರಬೇಕು ಬಡಪಾಯಿಗಳಿಬ್ಬರು. 'ಮೈ ಗಾಡ್' ಅಂದವರೇ ಬ್ಯಾಕ್ ಪ್ಯಾಕು, ನೀರಿನ ಬಾಟ್ಲು, ಕ್ಯಾಪು, ಇಯರ್ ಫೋನು, ಮೋಬೈಲು, ಸನ್ ಗ್ಲಾಸು, ಕ್ಯಾಮರಾ ಇವೆಲ್ಲವನ್ನೂ ಅಲ್ಲಲ್ಲಿ ಬೀಳಿಸುತ್ತಾ ಕೆಳಗೆ ಓಡೋಡಿ ಬಂದಿದ್ದಾರೆ. ಇವರು ಅದೆಷ್ಟು 'ಲಕ್ಕಿ ಟ್ರೆಕ್ಕರ್ಸ್' ಆಗಿರಬೇಡ. ಹುಲಿ ದರ್ಶನ ಕೊಡುವುದು ಸಾಮಾನ್ಯ ವಿಷಯವಲ್ಲ. ನಮಗೆಲ್ಲಿ ಇಂತಹ ಅದೃಷ್ಟ?

ಇದಾದ ೨ ತಿಂಗಳುಗಳ ಬಳಿಕ ಸಾಬಿಗಳಿಬ್ಬರು ಏನಾದರೂ ಪುರಾತನ ವಸ್ತುಗಳು ಸಿಗಬಹುದೋ ಎಂದು ಕೋಟೆ ಮೇಲೆ ಹೊರಟವರು ಅದೆಲ್ಲೋ ಹುಲಿ ಕಂಡು ದಡಬಡಿಸಿ ಕೆಳಗೆ ಓಡಿ ಬಂದಿದ್ದಾರೆ. ಇಂತಹ ಕಳ್ಳ ಸಾಬಿಗಳಿಗೆಲ್ಲ ದರ್ಶನ ಕೊಡುವ ಹುಲಿರಾಯ ನಮಗೆ ಒಂದೇ ಒಂದು ಸಲ, ಕೇವಲ ಒಂದೇ ಕ್ಷಣಕ್ಕಾದರೂ ಕಾಣಬಾರದೇ?

2005 ಜನವರಿಯಲ್ಲಿ ಕುದುರೆಮುಖ ಶೃಂಗದಲ್ಲಿ ಹಾಲ್ಟ್ ಮಾಡಿದ್ದೆವು. ನಾವು ರಾತ್ರಿ ಕ್ಯಾಂಪ್ ಮಾಡುವಲ್ಲಿ ತಲುಪಿದ ಹತ್ತೇ ನಿಮಿಷದಲ್ಲಿ ಮುದಿ ಕಾಡುಕೋಣವೊಂದು ಪ್ರತ್ಯಕ್ಷ. ಹೆದರಿದ ನಾವು ಪ್ಲೇಟು, ತಟ್ಟೆ ಇತ್ಯಾದಿಗಳಿಂದ ಶಬ್ದವೆಬ್ಬಿಸಿ ಅದನ್ನು ಓಡಿಸುವ ಪ್ರಯತ್ನ ಮಾಡಿದರೂ ಸ್ವಲ್ಪ ಸಮಯದ ಬಳಿಕ ಅದು ಮರಳಿ ನಮ್ಮಲ್ಲಿ ಬರುತ್ತಿತ್ತು. ನಂತರ ಅದು ನೇರವಾಗಿ ನಾವು ಕೂತಲ್ಲಿ ಬಂದಾಗ ಎಲ್ಲರೂ ಚೆಲ್ಲಾಪಿಲ್ಲಿ. ನಮ್ಮ ಬ್ಯಾಗ್ ಗಳನ್ನು ಮುಸಿ ನೋಡುತ್ತ ಅದು ಅತ್ತ ಸರಿದು ನಂತರ ನಮ್ಮ ಹಿಂದೆ ಇದ್ದ ಪೊದೆಗಳ ಸಂದಿಯಿಂದ ಮುಖವಷ್ಟೇ ಹೊರಗೆ ಕಾಣುವಂತೆ ನಿಂತುಬಿಟ್ಟಿತು. ಎಲ್ಲರೂ ಅದರ ಮುಂದೆ ನಿಂತು ಪೋಸು ಕೊಟ್ಟು ಫೋಟೊ ಹೊಡೆಸಿಕೊಂಡೆವು. ಅದ್ಯಾಕೋ ವಿಪರೀತ ಫ್ರೆಂಡ್ಲಿ ಇದ್ದಿದ್ದರಿಂದ ನಂತರ ನಾವದನ್ನು ಓಡಿಸುವ ಪ್ರಯತ್ನವನ್ನು ಕೈಬಿಟ್ಟೆವು. ಸುಮಾರು ಒಂದು ತಾಸು ಅಲ್ಲೇ ನಿಂತಿದ್ದು ಮತ್ತೆ ಈಚೆಗೆ ಬಂತು. ಸಣ್ಣ ಮಕ್ಕಳಿಗೆ ಬುದ್ಧಿ ಹೇಳುವಂತೆ ನಮ್ಮ ಲೀಡರ್ ಶ್ರೀ ಅಡಿಗರು ತಮ್ಮದೇ ಆದ ವಿಶಿಷ್ಟ ನೃತ್ಯ ಶೈಲಿಯಲ್ಲಿ ಅದಕ್ಕೆ ಮರಳಿ ಕಾಡಿನೊಳಗೆ ಹೋಗುವಂತೆ ತಿಳಿಹೇಳಿದರು. ನಂತರ ನಾವದನ್ನು ಅದರಷ್ಟಕ್ಕೆ ಬಿಟ್ಟುಬಿಟ್ಟೆವು.

ಅಂದು ಕಳೆದ ರಾತ್ರಿ ಅವಿಸ್ಮರಣೀಯವಾಗಿತ್ತು. ಶೃಂಗದ ಮೇಲಿರುವ ಮಳೆಕಾಡಿನ ನಡುವೆ ತೊರೆಯೊಂದು ಹರಿಯುವ ಸ್ಥಳದಲ್ಲಿ ನಾವು ಡೇರೆ ಹಾಕಿದ್ದೆವು. ರಾತ್ರಿ 12ರ ಸುಮಾರಿಗೆ ಡೇರೆ ಬಳಿ ಏನೋ ಸುಳಿದಾಡಿದಂತೆ. ಎಲ್ಲರೂ ಹೆದರಿ ದೊಡ್ಡ ದೊಡ್ಡ ಕಣ್ಣು ಮಾಡಿ ಕುಳಿತಿದ್ದರು. ಹತ್ತು ನಿಮಿಷ ಹಾಗೆ ಕುಳಿತ ಬಳಿಕ, ಉಮಾನಾಥ್ ಧೈರ್ಯ ಮಾಡಿ ಡೇರೆಯಿಂದ ತಲೆ ಹೊರಗೆ ಹಾಕಿ ಟಾರ್ಚ್ ಬಿಟ್ಟರೆ ಮತ್ತದೇ ಕಾಡುಕೋಣ! ನಂತರ ಶುರುವಾಯ್ತು ಒಂದೊಂದೇ ಸದ್ದು. ಅಲ್ಲೊಂದು ಕೂಗು, ಇಲ್ಲೊಂದು ಚೀರಾಟ, ಮತ್ತೆ ಆ ಕಡೆ ಎಲ್ಲೋ ಘರ್ಜನೆ, ಅದರ ಬಳಿಕ ಊಳಿಡುವ ಸದ್ದು. ರಾತ್ರಿ 12.30ರಿಂದ ಮುಂಜಾನೆ 4ರ ವರೆಗೆ ವಿವಿಧ ಸದ್ದುಗಳು. ಅದ್ಯಾವ ಪ್ರಾಣಿ, ಇದ್ಯಾವ ನಿಶಾಚರಿ ಪಕ್ಷಿ ಎಂದು ನಿದ್ರೆ ಮರೆತು ಮಾತನಾಡುತ್ತ ಕಾಲ ಕಳೆದೆವು. ಮುಂಜಾನೆ 5ರ ನಂತರ ಶುರುವಾಯಿತು ಹಕ್ಕಿಗಳ ಕಲರವ. ಶಾಮನ ಇಂಪಾದ ಸೀಟಿ ಹೊಡೆತದಿಂದ ಆರಂಭವಾದ ಹಕ್ಕಿ ಪಕ್ಕಿಗಳ ಇಂಚರದ ನಡುವೆ ನಮ್ಮ ಮುಂಜಾನೆಯ ಕೆಲಸಗಳು ನಡೆದಿದ್ದವು.

ಡೆಸೆಂಬರ್ 2006ರಂದು ಮತ್ತೆ ಹೊರಟೆವು ಕುದುರೆಮುಖಕ್ಕೆ. ಕಳೆದೆರಡು ವರ್ಷಗಳಿಂದ ಕುದುರೆಮುಖದಲ್ಲಿ ಚಾರಣಕ್ಕೆ ಅವಕಾಶವಿರಲಿಲ್ಲವಾದ್ದರಿಂದ ಮತ್ತು ತೊಳಲಿಯಲ್ಲಿ ವಾಸವಿದ್ದ ಜನರನ್ನು ಖಾಲಿ ಮಾಡಿಸಿದ್ದರಿಂದ, ಜನ ಮತ್ತು ಸಾಕುಪ್ರಾಣಿಗಳ ಸಂಚಾರವಿಲ್ಲದೆ, ಕೆಲವು ಕಾಡುಪ್ರಾಣಿಗಳು ಕಾಣಬಹುದು ಮತ್ತು ಹುಲಿಯ ಎಟ್ಲೀಸ್ಟ್ ಪಗ್ಮಾರ್ಕ್ ಆದರೂ ನೋಡಲು ಸಿಗಬಹುದು ಎಂದು ಆಸಕ್ತಿಯಿಂದಲೇ ಹೊರಟೆವು. ಆದರೆ ಅರಣ್ಯ ಇಲಾಖೆ ನಮಗೆ ಶೃಂಗದಲ್ಲಿ ರಾತ್ರಿ ಕಳೆಯಲು ಅವಕಾಶವನ್ನು ನೀಡಲೇ ಇಲ್ಲ.

ನಮ್ಮಲ್ಲೊಬ್ಬರಿದ್ದಾರೆ ರಾಘವೇಂದ್ರ ಎಂದು. 50ರ ಆಸುಪಾಸಿನ ವಯಸ್ಸಿನ ಬ್ರಹ್ಮಚಾರಿ. ಒಬ್ಬರೇ ಎಲ್ಲೆಲ್ಲೋ ಚಾರಣಗೈಯುವುದು ಕಳೆದ 25 ವರ್ಷಗಳಿಂದಲೂ ಇವರ ಹವ್ಯಾಸ. 20 ವರ್ಷಗಳ ಹಿಂದೆ ಕುದುರೆಮುಖದ ಮಳೆಕಾಡೊಂದರಲ್ಲಿ ಕೇವಲ 30ಅಡಿ ದೂರದಲ್ಲಿ ಹುಲಿ ಕಂಡ ಅದೃಷ್ಟ ಇವರದ್ದು. ಅದನ್ನು ನಮಗೆ ಹೇಳಿ ಹೇಳಿ ಹೊಟ್ಟೆ ಉರಿಸುವುದು ಅವರಿಗೆ ಟೈಮ್ ಪಾಸ್. ಐದಾರು ವರ್ಷಗಳ ಹಿಂದೆ ಕವಲೇದುರ್ಗಕ್ಕೆ ತೆರಳಿದಾಗ ಪ್ರಥಮ ದ್ವಾರದಲ್ಲೇ ಹುಲಿ ಅರ್ಧ ತಿಂದು ಹೋಗಿದ್ದ ದನದ ಶವವೊಂದು ಇವರನ್ನು ಸ್ವಾಗತಿಸಿತ್ತು.

ಅದೊಂದು ದಿನ 'ಚಿರತೆ(ಚಿಟ್ಟೆ ಹುಲಿ)ಯೊಂದು ತನ್ನೆರಡು ಮರಿಗಳೊಂದಿಗೆ ಇಲ್ಲೇ ಅಲೆದಾಡುತ್ತಿದೆ' ಎಂದು ಆಗುಂಬೆಯಿಂದ ಫೋನ್ ಬಂದಾಗ ಆ ಶನಿವಾರ ರಾತ್ರಿ 10ಕ್ಕೆ ರಾಜೇಶ್ ನಾಯಕ್ (ನಾನಲ್ಲ) ರವರ ಕ್ವಾಲಿಸ್ ವಾಹನದಲ್ಲಿ ಹೊರಟೆವು. ರಾತ್ರಿ ಘಟ್ಟದಲ್ಲಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ರಸ್ತೆ ಬದಿಯಲ್ಲೇ ಈ ಚಿರತೆ ಮತ್ತದರ ಮರಿಗಳನ್ನು ನೋಡಿದವರಿದ್ದರು. 'ಲೆಟ್ಸ್ ಗೆಟ್ ಲಕ್ಕಿ' ಎಂದು ನಾವೂ ರಾತ್ರಿ ಹೊರಟೆವು. ಘಟ್ಟದ ಕೆಳಗಿರುವ ಸೋಮೇಶ್ವರದಿಂದ ಮೇಲೆ ಆಗುಂಬೆ ತನಕ ನಂತರ ಮರಳಿ ಕೆಳಗೆ ಸೋಮೇಶ್ವರಕ್ಕೆ ಹೀಗೆ 7 ಬಾರಿ ಘಟ್ಟ ಹತ್ತಿ ಕೆಳಗಿಳಿದೆವು. ರಾತ್ರಿ 11.30ರಿಂದ ಬೆಳಗ್ಗಿನ ಜಾವ 3.30ರವರೆಗೆ ಇದೇ ಕೆಲಸ. ಸೋಮೇಶ್ವರ ಟು ಆಗುಂಬೆ ಮತ್ತೆ ಆಗುಂಬೆ ಟು ಸೋಮೇಶ್ವರ. ಆದರೂ ಆ ಚಿರತೆ ಕಾಣಸಿಗಲಿಲ್ಲ. ನಿರಾಸೆಯಿಂದ ಉಡುಪಿಗೆ ಹಿಂತಿರುಗಿದೆವು. ನಾವು ಹಿಂತಿರುಗಿದ ಕೇವಲ ಅರ್ಧ ಗಂಟೆಯ ಬಳಿಕ ಅಂದರೆ 4 ಗಂಟೆಗೆ ಘಟ್ಟದ 12ನೇ ತಿರುವಿನ ಬಳಿ ಆ ಚಿರತೆ ತನ್ನೆರಡು ಮರಿಗಳೊಂದಿಗೆ 20 ನಿಮಿಷ ಕುಳಿದಿತ್ತು ಎಂದು ಮರುದಿನ ತಿಳಿದಾಗ ಆದ ನಿರಾಸೆ...

ಕಳೆದ ವರ್ಷ ಬೆಂಗಳೂರಿನಿಂದ ಗೆಳೆಯ ರಾಘವೇಂದ್ರ ಮತ್ತು ಗೌರಿ ಕೂಡ್ಲುಗೆ ಬಾ ಎಂದು ಕರ್ಕೊಂಡು ಹೋದಾಗ, ಎಷ್ಟೋ ಸಲ ಕೂಡ್ಲುಗೆ ಹೋಗಿದ್ದೇನೆ ಎಂದು ಕ್ಯಾಮರಾ ಒಯ್ಯಲಿಲ್ಲ. ನಂತರ ಸಮಯವಿದ್ದುದರಿಂದ ಆಗುಂಬೆಗೆ ತೆರಳಿದೆವು. ನಾಲ್ಕನೇ ತಿರುವಿನಲ್ಲಿ ಅಪರೂಪದ 'ಲಯನ್ ಟೇಯ್ಲ್ಡ್ ಮಕ್ಯಾಕ್' ಜಾತಿಯ ಮಂಗ ರಸ್ತೆ ಬದಿಯಲ್ಲೇ ಕೂತಿತ್ತು, ನಾನು ಆ 'ಲಯನ್ ಟೇಯ್ಲ್ಡ್ ಮಕ್ಯಾಕ್' ಮಂಗವನ್ನು ನೋಡಿ ಸಂತೋಷದಿಂದ ಕೂಗಾಡಿದ ಪರಿ ನೋಡಿ ಗಾಬರಿಗೊಂಡ ಗೌರಿ, ಧಡಕ್ಕನೆ ಬೊಲೇರೊ ನಿಲ್ಲಿಸಿಬಿಟ್ಟಳು. ನಿಧಾನವಾಗಿ ನಮ್ಮಲ್ಲಿ ಬಂದ ಆ ಮಂಗ, ಒಳಗೆ ಮೂತಿ ತೂರಿ ಏನಾದರೂ ತಿನ್ನಲು ಸಿಗುತ್ತೋ ಎಂದು ಮುದ್ದಾಗಿ ಕೈ ಚಾಚುತ್ತಿತ್ತು. ದಷ್ಟಪುಷ್ಟವಾಗಿ ಬೆಳೆದ, ಆರೋಗ್ಯಕರ ಯುವ ಗಂಡು ಮಂಗ. ಅದು ಎಷ್ಟು ಸುಂದರವಾಗಿತ್ತೆಂದರೆ ಸುಮಾರು ೧೦ ನಿಮಿಷ ನೋಡುತ್ತ ನಿಂತೆವು. ಎಲ್ಲಿ ಸಿಗುತ್ತೆ 'ಲಯನ್ ಟೇಯ್ಲ್ಡ್ ಮಕ್ಯಾಕ್' ನೋಡಲು? ನಮ್ಮ ಅದೃಷ್ಟ. ಅದರಲ್ಲೂ ವರ್ಷಕ್ಕೆ ಒಂದೆರಡು ಚಾರಣ ಮಾಡುವ ಗೌರಿ ಮತ್ತು ರಾಘವೇಂದ್ರ ಇಬ್ಬರದ್ದಂತೂ ನಸೀಬು. ಆದರೇನು? ಆ ದಿನ ನಾನು ಕ್ಯಾಮಾರಾನೇ ಒಯ್ದಿರಲಿಲ್ಲ. ನಂತರ ಇದುವರೆಗೂ ನಮ್ಮಲ್ಲಿ ಯಾರಿಗೂ ಆ ಮಂಗ ಕಾಣಸಿಕ್ಕಿದ್ದಿಲ್ಲ.

ಇತ್ತೀಚೆಗೊಂದು 'ಟೈಗರ್ ಅಟ್ಯಾಕ್' ಎಂಬ ಸಣ್ಣ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರಿಗೂ ಫಾರ್ವರ್ಡ್ ಆಗ್ತಾ ಇದೆ. ಅದ್ಭುತವಾದ ವಿಡಿಯೋ. ಹುಲಿ ಅದ್ಯಾವ ಮಟ್ಟಕ್ಕೆ ಹೋಗಬಲ್ಲದು ವ್ಯಗ್ರವಾಗಿದ್ದರೆ ಎಂದು ತಿಳಿಯುವುದು ಈ ವಿಡಿಯೋ ನೋಡಿದರೆ. ಇದನ್ನು ನೋಡಿಯೇ ಹುಲಿ ಅಷ್ಟು ಎತ್ತರಕ್ಕೆ ಹಾರಬಲ್ಲುದು ಎಂದು ತಿಳಿದುಕೊಂಡೆ. 'ಯು ಟ್ಯೂಬ್' ನಲ್ಲಿ 'tiger attack' ಎಂದು ಹುಡುಕಾಡಿದರೆ ಈ ವಿಡಿಯೋ ಸಿಗುತ್ತೆ.


ಆಶಾವಾದಿಗಳಾಗಿ ಇದ್ದೇವೆ, ಯಾವಾಗಾದರೂ ಒಂದು ಚಿರತೆ ಅಥವಾ ಹುಲಿ ಎಲ್ಲಾದರೂ ಕಾಣಸಿಗಬಹುದು ಎಂದು...ಅಫ್ ಕೋರ್ಸ್ ಅವುಗಳನ್ನು ಅಷ್ಟರವರೆಗೆ ಬದುಕಲು ಬಿಟ್ಟರೆ ಮಾತ್ರ!

ಬುಧವಾರ, ಏಪ್ರಿಲ್ 04, 2007

ಕುರಿಂಜಾಲಿನ ಕಡೆ ಹೆಜ್ಜೆ


ಮುರ್ಖರ ದಿನ 2007ರಂದು ನಮ್ಮ ಚಾರಣ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗಿರುವ ಕುರಿಂಜಾಲಿಗೆ. ಗೈಡ್ ಇಲ್ಲದೆ ರಾಷ್ಟ್ರೀಯ ಉದ್ಯಾನದೊಳಗೆ ಎಲ್ಲೂ ಚಾರಣಕ್ಕೆ ಹೋಗುವಂತಿಲ್ಲ ಎಂದು ಅರಣ್ಯ ಇಲಾಖೆಯ ಕಟ್ಟಪ್ಪಣೆ ಇದೆ. ಮುನ್ನಾ ದಿನ ಮಲ್ಲೇಶ್ವರಕ್ಕೆ ತೆರಳಿ ಅಲ್ಲಿರುವ ಅರಣ್ಯ ಇಲಾಖೆ ಕಚೇರಿಯಲ್ಲಿ ನಾನು ಖುದ್ದಾಗಿ ಚಾರಣ ಶುಲ್ಕವಾದ ಒಬ್ಬರಿಗೆ 50 ರೂಪಾಯಿಯನ್ನು, ಭಗವತಿಯಲ್ಲಿ ರಾತ್ರಿ ಕಳೆಯಲು ಅವಶ್ಯವಿದ್ದ ಇತರ ಶುಲ್ಕಗಳೊಂದಿಗೆ ಕಟ್ಟಿ ಬಂದಿದ್ದೆ. ಆದರೆ ಬೆಳಗ್ಗೆ 9.30 ಆದರೂ ಗೈಡ್ ಕಾಣದಿದ್ದಾಗ ನಾವು ಇನ್ನೂ ಕಾದು ಮುರ್ಖರಾಗುವುದು ಬೇಡವೆಂದು ನಾವಾಗಿಯೇ ಕುರಿಂಜಾಲಿನೆಡೆ ಹೊರಟೆವು. ಅದಾಗಲೇ ಸೂರ್ಯನ ಕಿರಣದಿಂದ ಮೈ ಸುಡುತ್ತಿತ್ತು. ಟಾರು ರಸ್ತೆಯ ಬದಿಯಲ್ಲಿರುವ ಅರಣ್ಯ ಇಲಾಖೆಯ ಟ್ರೇಡ್ ಮಾರ್ಕ್ ಹಸಿರು - ನೀಲಿ ಬಣ್ಣದ ಗೇಟೊಂದರ ಬಳಿಯಿಂದ ಒಳಹೊಕ್ಕು ಆ ಜೀಪ್ ದಾರಿಯಲ್ಲಿ ಹೆಜ್ಜೆ ಹಾಕಿದೆವು.

ಹಿಂದೆ ಕುರಿಂಜಾಲಿನ ಬುಡದಲ್ಲೊಂದು ಮೈಕ್ರೋವೇವ್ ಸ್ಟೇಷನ್ ಮತ್ತು ಮೈಕ್ರೋವೇವ್ ಟವರ್ ಇತ್ತು. ಈಗಲೂ ಇವೆ ಆದರೆ ಕಾರ್ಯ ಮಾಡುತ್ತಿಲ್ಲ. ಈ ಸ್ಟೇಷನ್ ಇದ್ದ ಕಾರಣ, ಟಾರು ರಸ್ತೆಯಿಂದ ಕುರಿಂಜಾಲಿನ ಬುಡದವರೆಗೆ ಜೀಪ್ ರಸ್ತೆ ಇದೆ. ಸೇತುವೆಯೊಂದನ್ನು ದಾಟಿದ ಬಳಿಕ ಏರುಹಾದಿ ಶುರು. ಬಿಸಿಲಿನಿಂದ ಪಾರಾಗಲು ನೆರಳು ಸಿಗುತ್ತಿರಲಿಲ್ಲ. ನಿಧಾನವಾಗಿ ನಡೆದು ಕಾಡು ಹೊಕ್ಕಾಗಲೇ ಸ್ವಲ್ಪ ರಿಲೀಫ್.

ರಸ್ತೆಯ ಎರಡೂ ಬದಿಯ ಕಾಡು, ನಾನು ಎಮ್ಮೆಶಿರ್ಲ ಜಲಪಾತದ ಕಣಿವೆಯ ಕೆಳಗಿಳಿಯುವಾಗ ಇದ್ದ ಕಾಡನ್ನು ಹೋಲುತ್ತಿತ್ತು. ಆಗ ನಾನು ಮತ್ತು ಜಿರಾಫೆ ಹೊಳ್ಳ ಇಬ್ಬರೇ ಇದ್ದರೆ ಈಗ 10 ಮಂದಿ ಇದ್ದೆವು. ಆದ್ದರಿಂದ 'ಭಯ' ಎಂಬ ಶಬ್ದ ದೂರವುಳಿದಿತ್ತು. ಕೊನೆಯ 60 ನಿಮಿಷದ ಹಾದಿ ಮತ್ತೆ ಬಿಸಿಲಿನಲ್ಲಿ. ಈಗ ಬೆಟ್ಟದ ಬದಿಯಲ್ಲೇ 'ಝಿಗ್ ಝ್ಯಾಗ್' ರೂಪದಲ್ಲಿದ್ದ, ಕೆಟ್ಟುಹೋಗಿದ್ದ, ಕಲ್ಲು ಮಣ್ಣುಗಳಿಂದ ಕೂಡಿದ್ದ ರಸ್ತೆಯಲ್ಲಿ ನಡಿಗೆ. ಇದೊಂದು ಸುಂದರ ಮತ್ತು ಆಹ್ಲಾದಕರವಾದ ವಾಕ್. ಬಿಸಿಲಿದ್ದರೂ, ಆಗಾಗ ಬೀಸುತ್ತಿದ್ದ ತಂಗಾಳಿ ನೀಡುತ್ತಿದ್ದ ಸುಖ, ಆಹಾ. ನಾಲ್ಕೈದು 'ಯು ಟರ್ನ್' ಬಳಿಕ ಮತ್ತೆ ನೇರ ರಸ್ತೆ ಮತ್ತು ದೂರದಲ್ಲಿ ಪ್ರಥಮ ಬಾರಿಗೆ ಕುರಿಂಜಾಲಿನ ದರ್ಶನ. ಧುತ್ತೆಂದು ಭೂಮಿಯಿಂದ ಮೇಲೆದ್ದಂತೆ ಕಾಣುತ್ತದೆ ಕುರಿಂಜಾಲು ಅಥವಾ ಕುರಿಂಗಲ್ಲು. ನೋಡಿದ ಕೂಡಲೇ ನನ್ನ ಮನಸ್ಸಿಗೆ ನಾಟಿದ್ದು ಕುರಿಂಗಲ್ಲಿನ ಅಂದ ಮತ್ತು ಗಾಂಭೀರ್ಯ. ಆ ಕರಿಗಲ್ಲು ರಾಜಗಾಂಭೀರ್ಯದಿಂದ ನಿಂತಿರುವ ಚೆಲುವನ್ನು ನೋಡಿದಾಗ ನನಗೆ ಎತ್ತಿನಭುಜದ ನೆನಪು ಬರದೇ ಇರಲಿಲ್ಲ.

ತನ್ನ ಆಚೀಚೆ ಇರುವವರಿಗಿಂತ ತಾನು ಭಿನ್ನ ಎಂದು ಪೋಸು ಕೊಡುತ್ತಿದ್ದ ಕುರಿಂಜಾಲಿನ ಬುಡದಲ್ಲಿದ್ದ ಮೈಕ್ರೋವೇವ್ ಸ್ಟೇಷನ್ ಕಡೆ ಹೆಜ್ಜೆ ಹಾಕತೊಡಗಿದೆವು. ಮೊದಲ 'ಝಿಗ್ ಝ್ಯಾಗ್' ರಸ್ತೆಗಳ ನಂತರದ ನೇರ ರಸ್ತೆಯಲ್ಲಿ ನಡೆದು ಕುರಿಂಜಾಲಿನೆಡೆ ಬರುತ್ತಿರುವಾಗ, ಅದರ ಸೌಂದರ್ಯವನ್ನು 'ಮ್ಯಾಕ್ಸಿಮಮ್' ಆಗಿ ಆಸ್ವಾದಿಸಬಹುದು. ಹತ್ತು ಹೆಜ್ಜೆಗೊಮ್ಮೆ ನಿಂತು ಅದರ ಬೃಹತ್ ಆಕಾರವನ್ನು, ಗಾತ್ರವನ್ನು ಕಣ್ತುಂಬಾ ನೋಡಿಯೇ ಮುಂದೆ ಹೆಜ್ಜೆ ಹಾಕುತ್ತಿದ್ದೆ. ನೋಡಿದಷ್ಟೂ ಸಾಲುತ್ತಿರಲಿಲ್ಲ. ನಂತರ ಮೈಕ್ರೊವೇವ್ ಸ್ಟೇಷನ್ ಬುಡಕ್ಕೆ ಬಂದಾಗ ಮತ್ತೆ ನಾಲ್ಕೈದು 'ಯು ಟರ್ನ್' ಗಳಿರುವ ಝಿಗ್ ಝ್ಯಾಗ್ ರಸ್ತೆ. ಈ ಮೈಕ್ರೊವೇವ್ ಸ್ಟೇಷನ್ ಪಾಳುಬಿದ್ದಿದೆ. ಇದರ ಬದಿಯಿಂದಲೇ ಕಡಿದಾದ ದಾರಿಯಲ್ಲಿ 10 ನಿಮಿಷ ಮೇಲೇರಿ ಕುರಿಂಗಲ್ಲಿನ ಮೇಲೆ ತಲುಪಿದೆವು.

12 ವರ್ಷಗಳಿಗೊಮ್ಮೆ ಹೂ ಬಿಡುವ ಕುರುಂಜಿ ಸಸ್ಯಗಳು ದೊಡ್ಡ ಸಂಖ್ಯೆಯಲ್ಲಿ ಈ ಪ್ರದೇಶದಲ್ಲಿರುವುದರಿಂದ ಮೊದಲು 'ಕುರುಂಜಿಕಲ್ಲು' ಇದ್ದದ್ದು ನಂತರ 'ಕುರಿಂಗಲ್ಲು' ಮತ್ತು 'ಕುರಿಂಜಾಲ್' ಆಗಿರಬೇಕು ಎಂದು ಕುದುರೆಮುಖ ಪ್ರದೇಶವನ್ನು ಚೆನ್ನಾಗಿ ಬಲ್ಲ ಜಗದೀಶ್ ಕಾಮತ್ ಅಭಿಪ್ರಾಯ. ಕುದುರೆಮುಖದಲ್ಲಿ ಟಾರು ರಸ್ತೆ ನಿರ್ಮಾಣ ಆದದ್ದು 1975ರಲ್ಲಿ.

ರಸ್ತೆಯ ಬದಿಯಲ್ಲೊಂದು ಸಣ್ಣ ಗಣಪತಿ ದೇವಾಲಯವಿದ್ದು ಅದಕ್ಕೆ ಗಣಪತಿ ಕಟ್ಟೆ ಎನ್ನುತ್ತಾರೆ. ಈ ಗಣಪತಿ ಕಟ್ಟೆಯ ಮುಂಭಾಗದಲ್ಲಿ ಅಂದರೆ ಈಗಿರುವ ರಸ್ತೆಯ ಮತ್ತೊಂದು ಬದಿಯಲ್ಲಿ ಈಗ ಸಾವಿರಾರು ಎಕರೆ ವಿಶಾಲ ಬೋಳು ಪ್ರದೇಶ. 1966ರಲ್ಲಿ ಇಲ್ಲಿ ಕಾಡಿಗೆ ಭಾರೀ ಬೆಂಕಿ ಬಿದ್ದು ಸಾವಿರಾರು ಎಕರೆ ಕಾಡು ಸುಟ್ಟುಹೋಗಿತ್ತು. ಈ ಬೆಂಕಿ 3 ತಿಂಗಳ ಕಾಲ ಉರಿದಿತ್ತು ಎಂದರೆ ಆದ ನಾಶದ ಅಗಾಧತೆಯನ್ನು ಊಹಿಸಿ. ಇಲ್ಲಿ ರಸ್ತೆಯಿಂದ ಒಂದೆರಡು ಕಿಮಿ ದೂರಕ್ಕೆ ನಡೆದರೆ ಸುಟ್ಟು ಕರಟಿಹೋದ ಮರಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಆಗ ರಸ್ತೆಯಿರದಿದ್ದರೂ ಕಳಸ, ಕಾರ್ಕಳ, ಶೃಂಗೇರಿ ಮುಂತಾದ ಊರುಗಳಿಂದ ಜನರು ಬೆಂಕಿ ವೀಕ್ಷಿಸಲು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಈ ಬೆಂಕಿ ಗಣಪತಿ ಕಟ್ಟೆಯನ್ನು ದಾಟಿ ಕುರಿಂಜಾಲ್ ಇದ್ದ ಕಡೆಗೆ ಹಬ್ಬಲಿಲ್ಲ. ಯಾಕೆಂದರೆ ಕುರುಂಜಿ ಸಸ್ಯ ಮತ್ತು ಕುರುಂಜಿ ಹೂಗಳು ಬೆಂಕಿಯಲ್ಲಿ ನಾಶವಾಗದೇ, ಬೆಂಕಿ ಹಬ್ಬಲು ಸಹಕರಿಸದೇ ಇರುವುದರಿಂದ ಗಣಪತಿ ಕಟ್ಟೆಯ ನಂತರ ಕುರಿಂಜಾಲ್ ಕಡೆ ಇರುವ ಕಾಡು 1966ರ ಭಾರೀ ಬೆಂಕಿಯಿಂದ ಪಾರಾಯಿತು. ಈ ಕಡೆ ಇದ್ದ ಕುರುಂಜಿ ಸಸ್ಯಗಳು ಬೆಂಕಿ ನಿರೋಧಕ ಶಕ್ತಿಯುಳ್ಳವಾದ್ದರಿಂದ ಬೆಂಕಿ ಗಣಪತಿ ಕಟ್ಟೆಯ ಆ ಕಡೆಗೇ ಸೀಮಿತವಾಯಿತು ಎಂದು ಜಗದೀಶ್ ವಿವರಿಸುತ್ತಿದ್ದಾಗ ಆಸಕ್ತಿಯಿಂದ ಕೇಳುತ್ತಿದ್ದೆ ನಾನು.

ಹಿಂತಿರುಗುವಾಗ ದಾರಿಯಿಂದ ಬಲಕ್ಕೆ ಕಾಡಿನೊಳಗೆ ಸ್ವಲ್ಪ ನಡೆದಾಗ ಅಲ್ಲೊಂದು ಸುಂದರ ಕೆರೆ ಮತ್ತು ಪಕ್ಕದಲ್ಲೊಂದು ಮಚಾನ್. ಹಾಗೇ ಮರಳಿ ದಾರಿಗೆ ಬಂದು, ನಂತರ ಗೇಟು ದಾಟಿ ಟಾರು ರಸ್ತೆಯಲ್ಲೊಂದು ಕಿಮಿ ನಡೆದು ಭಗವತಿ ತಲುಪಿದಾಗ ಮಧ್ಯಾಹ್ನ 3ರ ಸಮಯ ಮತ್ತು ಊಟ ಜಸ್ಟ್ ರೆಡಿಯಾಗಿತ್ತು. ಊಟದ ಬಳಿಕ ಹೆಚ್ಚಿನವರು ಜಲಕ್ರೀಡೆಯಾಡಲು ತೆರಳಿದರೆ ನಾನು ಡೇರೆಯೊಳಗೆ ತೆರಳಿ ಮಂಚದ ಮೇಲೆ ಅಂಗಾತ ಬಿದ್ದು ನಿದ್ರಾವಶನಾದೆ.

ಸೋಮವಾರ, ಏಪ್ರಿಲ್ 02, 2007

ಅಬ್ಬಾ ಅಮೇದಿಕಲ್ಲು!


ಮಂಗಳೂರು ಯೂತ್ ಹಾಸ್ಟೆಲ್ ಆಯೋಜಿಸಿದ್ದ ಅಮೇದಿಕಲ್ಲಿನ ಚಾರಣ ನಾನು ಕೈಗೊಂಡ ಕಷ್ಟದ ಚಾರಣಗಳಲ್ಲಿ ಒಂದಾಗಿತ್ತು. ಜನವರಿ 21, 2006ರಂದು ಶಿಶಿಲ ತಲುಪಿ, ಗೋಪು ಗೋಖಲೆಯವರ ಮನೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿದೆವು. ನಮ್ಮ ಮಾರ್ಗದರ್ಶಿ 'ಪಿಜಿನ' ಇಲ್ಲಿ ನಮ್ಮನ್ನು ಸೇರಿಕೊಂಡ. ಅದಾಗಲೇ ಆತ ಒಂದೆರಡು ಸರಕಾರಿ ಶರಾಬು ಪ್ಯಾಕೇಟುಗಳನ್ನು ಹೊಟ್ಟೆಗಿಳಿಸಿದ್ದ. ಸರಿಯಾಗಿ ಮಧ್ಯಾಹ್ನ 2.40ಕ್ಕೆ ಚಾರಣ ಆರಂಭ.

ಮೊದಲ 90 ನಿಮಿಷಗಳ ಚಾರಣದ ಬಳಿಕ ಎಲ್ಲರೂ ಸುರಕ್ಷಿತವಾಗಿ ಅಮೇದಿಕಲ್ಲು ಪ್ರಥಮ ಬಾರಿಗೆ ಕಾಣುವ ಸ್ಥಳ ತಲುಪಿದರು. ಇದುವರೆಗೆ ಸೂರ್ಯನ ಪ್ರಖರವಾದ ಕಿರಣಗಳಿಂದ ಕಾಡು ರಕ್ಷಣೆ ಒದಗಿಸಿತ್ತು. ಕೆಲವು ಚಾರಣಿಗರು ಈಗಾಗಲೇ ಬಸವಳಿದಿದ್ದರು. ಇನ್ನು ಅಲ್ಲಲ್ಲಿ ಸಿಗುವ ಮಳೆಕಾಡುಗಳನ್ನು ದಾಟಿ ಕಷ್ಟದ ಚಡಾವು ಇರುವ ತನಕ ಸುಮಾರು 45 ನಿಮಿಷದ ಆರಾಮದ ನಡಿಗೆ.

ಮಳೆಕಾಡುಗಳನ್ನು ದಾಟಿ ಕಠಿಣ ಏರುಹಾದಿ ಶುರುವಾಗುವಲ್ಲಿ ನಾವು ಬಂದಾಗ ಸಂಜೆ 5.15ರ ಸಮಯ. ಮುಂದೆ ಹೋಗಿದ್ದ ನಮ್ಮ ಗುಂಪಿನ ಇತರ ಸದಸ್ಯರು ದೂರದಲ್ಲಿ, ಎತ್ತರದಲ್ಲಿ ಸಣ್ಣ ಸಣ್ಣ ಚುಕ್ಕಿಗಳಂತೆ ಕಾಣುತ್ತಿದ್ದರು. ನಾವು ಬಹಳ ಹಿಂದೆ ಇದ್ದೆವು. ಮಳೆಕಾಡುಗಳ ಪರಿಧಿ ದಾಟಿ ಬಂದ ನಂತರ ಎಲ್ಲೂ ಮರಗಳಿರಲಿಲ್ಲ. ಬರೀ ಒಣಹುಲ್ಲುಗಳು ಮತ್ತು ಅರ್ಧಗಂಟೆಗೊಂದರಂತೆ ಸಣ್ಣ ಒಂಟಿ ಮರಗಳು. ಅದೃಷ್ಟವಶಾತ್ ಸಂಜೆಯಾಗುತ್ತಿದ್ದರಿಂದ ಸೂರ್ಯನ ಕಿರಣಗಳಲ್ಲಿ ಪ್ರಖರತೆ ಕಡಿಮೆಯಾಗುತ್ತಿತ್ತು. ಒಂದೆರಡು ತಾಸು ಮೊದಲಾಗಿದ್ದಿದ್ದರೆ ಅಲ್ಲೇ 'ಫ್ರೈ' ಆಗಿಬಿಡುತ್ತಿದ್ದೇವೇನೋ!

ನಾವು 6 ಮಂದಿ ಬಹಳ ಹಿಂದೆ ಉಳಿದುಬಿಟ್ಟಿದ್ದೆವು. ಇದೊಂದು ಬಹಳ ಕಷ್ಟಕರವಾದ ಏರುಹಾದಿಯಾಗಿತ್ತು. ಸರಿಯಾಗಿ 6.45ಕ್ಕೆ ಸೂರ್ಯ ನಿಧಾನವಾಗಿ ಬೆಟ್ಟದ ಮರೆಗೆ ಸರಿದು ಕಣ್ಮರೆಯಾದ. ಹುಲ್ಲುಗಳು ಎತ್ತರಕ್ಕೆ ಬೆಳೆದಿದ್ದರಿಂದ ನೆಲ ಕಾಣುತ್ತಿರಲಿಲ್ಲ. ಅಡಾಲ್ಫ್ ಮತ್ತು ಡ್ಯಾರಿಲ್ ಒದ್ದಾಡುತ್ತಿದ್ದರೆ ಸುಹಾಸ್, ಸಂದೀಪ್ ಮತ್ತು ನಾನು ಏದುಸಿರುಬಿಡುತ್ತಿದ್ದೆವು. ನಮ್ಮ 6 ಮಂದಿಯ ಪೈಕಿ ಅನಂತನೊಬ್ಬನೇ 'ಕೂಲ್' ಆಗಿ ಬೆಟ್ಟವೇರುತ್ತಿದ್ದ. ಸಮಯ 7 ದಾಟಿದರೂ ನಾವು ಮುಂದಿದ್ದವರಿಗಿಂತ ಇನ್ನೂ ಹಿಂದೆ ಇದ್ದೆವು. ಮೇಲೆ ಸಿಗುವ ಕೊನೆಯ ಮಳೆಕಾಡಿನ ಬಳಿ ತಂಡದ ಉಳಿದ 20 ಸದಸ್ಯರು ನಮಗಾಗಿ ಕಾಯುತ್ತಿದ್ದರು. ಡ್ಯಾರಿಲ್ 'ತಲೆ ತಿರುಗುತ್ತಿದೆ' ಎಂದಾಗ ಮತ್ತೆ ಸ್ವಲ್ಪ ಹೊತ್ತು ವಿಶ್ರಾಂತಿ. ಅಂತೂ ಸುಮಾರು 7.30ರ ಹೊತ್ತಿಗೆ ಉಳಿದವರನ್ನು ಸೇರಿಕೊಂಡೆವು.


ಆಯೋಜಕ ದಿನೇಶ್ ಹೊಳ್ಳರಲ್ಲಿ ಪವರ್-ಫುಲ್ ಆದ ಒಂದು ಟಾರ್ಚ್ ಇತ್ತು. ಅದನ್ನವರು ನಮ್ಮತ್ತ 'ಫ್ಲ್ಯಾಶ್' ಮಾಡುತ್ತ ಇದ್ದಿದ್ದರಿಂದ ನಮಗೆ ಅವರನ್ನೆಲ್ಲಾ ಸೇರಿಕೊಳ್ಳಲು ಸ್ವಲ್ಪ ಸುಲಭವಾಯಿತು. ಟಾರ್ಚ್ ತರಲು ಹೇಳಿದ್ದರೂ ಹೆಚ್ಚಿನವರು ತಂದಿರಲಿಲ್ಲ. ನಂತರ ಕಗ್ಗತ್ತಲಿನ ಕೂಪದಂತೆ ಕಾಣುತ್ತಿದ್ದ ಕೊನೆಯ ಶೋಲಾ ಕಾಡನ್ನು (ಮಳೆಕಾಡು) ಒಬ್ಬರ ಹಿಂದೊಬ್ಬರಂತೆ ಸಾಲಿನಲ್ಲಿ ಹೊಕ್ಕೆವು. ದಿನೇಶರ 'ಫ್ಲ್ಯಾಶ್' ಲೈಟೇ ಇಲ್ಲದಿದ್ದರೆ ನಮ್ಮ ಸ್ಥಿತಿ ಊಹಿಸಲಸಾಧ್ಯ. ಮುಂದೆ ಮರ ಇದ್ದರೂ ಕಾಣದಷ್ಟು ಕಗ್ಗತ್ತಲು.

ಮಾರ್ಗದರ್ಶಿ ಪಿಜಿನ ದಾರಿ ಮಾಡುತ್ತ ಮುಂದೆ ಸಾಗಿದ. ತನ್ನ ಫ್ಲ್ಯಾಶ್ ಲೈಟ್ ಬೆಳಗಿಸಿ ಎಲ್ಲರನ್ನು ಮುನ್ನಡೆಯಲು ದಿನೇಶ್ ಸಹಕರಿಸುತ್ತಿದ್ದರು. ನನ್ನ ಹಿಂದೆ ದಿನೇಶ್ ಇದ್ದರೆ ಅವರ ಹಿಂದೆ ಅನಂತ ಮತ್ತು ಸಂದೀಪ್ ಇದ್ದರು. ತಿರುವೊಂದರಲ್ಲಿ ಆಧಾರಕ್ಕಾಗಿ ನಾನು ಬಂಡೆಯೊಂದನ್ನು ಮುಟ್ಟಿದಾಗ ಅದು ಸ್ಥಾನಪಲ್ಲಟಗೊಂಡು ಭಯಂಕರ ಸದ್ದಿನೊಂದಿಗೆ ಕೆಳಗುರುಳಿತು. ಕೇವಲ ಒಂದು ಕ್ಷಣದ ಮೊದಲು ಸಂದೀಪ್ ಆ ದಾರಿಯನ್ನು ದಾಟಿ ಬಂದಿದ್ದ. ಆತ ಒಂದು ಹೆಜ್ಜೆ ಹಿಂದಿದ್ದರೆ ಆ ಬಂಡೆ ಆತನಿಗೆ ಅಪ್ಪಳಿಸುತ್ತಿತ್ತು. ಮತ್ತು ನಮ್ಮ ಮುಂದೆ ಇದ್ದ ಇತರರು ಆ ಬಂಡೆಯನ್ನು ಅಧಾರಕ್ಕಾಗಿ ಬಳಸುವಾಗ ಉರುಳಿದಿದ್ದರೆ ಅದು ನಮ್ಮಲ್ಲೊಬ್ಬನ್ನಿಗೆ ಅಪ್ಪಳಿಸುತ್ತಿತ್ತು. ಎಲ್ಲರೂ ಒಂದು ಕ್ಷಣ ಸ್ತಂಭೀಭೂತರಾಗಿ ನಿಂತುಬಿಟ್ಟರು. ಸಂದೀಪನಂತೂ ಆ ಬಂಡೆ ಉರುಳಿ ಹೋದ ಕಡೆ ದಿಟ್ಟಿಸುತ್ತಾ ನಿಂತುಬಿಟ್ಟ. ಐದಾರು ಕ್ಷಣಗಳ ಬಳಿಕ ಮತ್ತೆ ಮೊದಲಿನಂತೆ ನಿಶ್ಯಬ್ದ.

ಕಣ್ಣು ಕತ್ತಲೆಗೆ ಎಡ್ಜಸ್ಟೇ ಆಗುತ್ತಿರಲಿಲ್ಲ. ಸುಮಾರು 45 ನಿಮಿಷದ ಬಳಿಕ ದಿನೇಶರಿಗೆ ನಾವು ದಾರಿ ತಪ್ಪಿದಂತೆ ಅನಿಸತೊಡಗಿತ್ತು. ನಮ್ಮನ್ನು ನಿಂತಲ್ಲೇ ನಿಲ್ಲಲು ಆದೇಶಿಸಿ, ದಿನೇಶ್ ಮುಂದೆ ಪಿಜಿನ ಇದ್ದಲ್ಲಿ ನಡೆದರು. ಆ ಪಿಜಿನ, ಕತ್ತಲಲ್ಲಿ ಅದೆಲ್ಲೋ ನಮ್ಮನ್ನು ಕರೆದೊಯ್ಯುತ್ತಿದ್ದ. ಆದರೆ ತಾನು 'ದಾರಿ ತಪ್ಪಿದೆ' ಎಂದು ಪಿಜಿನ ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಅಬ್ಬಾ, ಸರಕಾರಿ ಶರಾಬಿನ ಪ್ರಭಾವವೇ! ನಾಲ್ಕನೇ ಸಲ ಅಮೇದಿಕಲ್ಲಿಗೆ ಬರುತ್ತಿರುವ ದಿನೇಶ್, ನಾವು ದಾರಿ ತಪ್ಪಿದ್ದನ್ನು ಆ ಕತ್ತಲಲ್ಲೂ ಅರಿತದ್ದು ನಮ್ಮ ಪುಣ್ಯ. ಇಲ್ಲವಾದಲ್ಲಿ ಆ ಪಿಜಿನನ ಹಿಂದೆ ಆ ಕಾಡಲ್ಲೇ ಗಿರಕಿ ಹೊಡೆಯುತ್ತಾ ಬೆಳಗಾಗುವವರೆಗೆ ಅಂಡಲೆಯುತ್ತ ಇರಬೇಕಾಗಿತ್ತು.

ಪಿಜಿನನಿಗೆ ಸ್ವಲ್ಪ ಗದರಿಸಿ ನಮ್ಮನ್ನೆಲ್ಲ ಅಲ್ಲೇ ನಿಲ್ಲಲು ಆದೇಶಿಸಿ ದಿನೇಶ್ ಒಬ್ಬರೇ ಮುಂದೆ ಕಾಡೊಳಗೆ ತನ್ನ ಫ್ಲ್ಯಾಶ್ ಲೈಟ್ ನೊಂದಿಗೆ ಮರೆಯಾದರು. ಕೆಲವರು ನಿಂತಲ್ಲೆ ನಿಂತರೆ ಮತ್ತು ಕೆಲವರು ಯಾರಿಗೆ, ಯಾವುದಕ್ಕೆ ಹಿಡಿ ಶಾಪ ಹಾಕುವುದು ಎಂದು ತಿಳಿಯದೆ ಅಲ್ಲೇ ಕೂತರು. 20 ನಿಮಿಷಗಳ ಬಳಿಕ ದಿನೇಶ್ ಬಂದು ಅವರನ್ನು ಹಿಂಬಾಲಿಸುವಂತೆ ಸೂಚಿಸಿದರು. 9.30ಕ್ಕೆ ಆ ಕತ್ತಲಿನ ಕೋಣೆಯಂತಿರುವ ಮಳೆಕಾಡಿನಿಂದ ಹೊರಬಂದಾಗ ನಿಟ್ಟುಸಿರು ಬಿಡದವರಿಲ್ಲ.

ಕತ್ತಲಲ್ಲಿ ಬೆಟ್ಟಗಳ ಆಕೃತಿಯಷ್ಟೇ ಕಾಣುತ್ತಿತ್ತೇ ಹೊರತು ಬೇರೇನೂ ಗೊತ್ತಾಗುತ್ತಿರಲಿಲ್ಲ. ಇನ್ನೂ 90 ನಿಮಿಷ ನಡೆಯುವುದಿದೆ ಎಂಬುದರ ಅರಿವು ನಮಗ್ಯಾರಿಗೂ ಇರಲಿಲ್ಲ. ಈಗ ಕಲ್ಲುಬಂಡೆಗಳನ್ನು, ಹುಲ್ಲುಗಳನ್ನು ಆಧಾರವಾಗಿ ಹಿಡಿದು ಅದೆಲ್ಲೋ ಹತ್ತುತ್ತಿದ್ದೆವು. ಕೆಳಗೆ ಕಣ್ಣು ಹಾಯಿಸಿದರೆ ಏನೂ ಕಾಣಿಸುತ್ತಿರಲಿಲ್ಲ. ನಾವು ಏರುತ್ತಿದ್ದ ಕೊರಕಲು ಸಾವಿರಾರು ಅಡಿ ಆಳವಿತ್ತು. ಆದರೆ ಅದರ ಆಳ ಕತ್ತಲಲ್ಲಿ ಕಾಣದೇ ಇದ್ದಿದ್ದರಿಂದ ಸಲೀಸಾಗಿ ಯಾವ ಹೆದರಿಕೆಯೂ ಇಲ್ಲದೆ ಹತ್ತಿಬಿಟ್ಟೆವು. ಎಲ್ಲರ ಮುಖದಲ್ಲಿ ನಿರ್ಜೀವ ಕಳೆ. ಯಾರ ಬಾಯಲ್ಲೂ ಮಾತಿಲ್ಲ. ಇದ್ದ ನೀರೆಲ್ಲ ಖಾಲಿ. ಹಸಿವು, ದಣಿವಿನಿಂದ ಎಲ್ಲರು ಕಂಗಾಲು. ಆದರೂ ಮುನ್ನಡೆಯದೆ ಬೇರೆ ವಿಧಾನವಿಲ್ಲ.

10.30ಕ್ಕೆ ನಾವು ರಾತ್ರಿ ಕಳೆಯಬೇಕಾದ ನೀರಿನ ಹರಿವಿರುವ ಮಳೆಕಾಡೊಂದರ ಮೇಲ್ಭಾಗಕ್ಕೆ ಬಂದು ತಲುಪಿದೆವು. ಆದರೆ ಆ ಕಾಡಿನೊಳಗೆ ನೀರಿನ ಹರಿವು ಎಲ್ಲಿದೆ ಎಂದು ಕತ್ತಲಲ್ಲಿ ಹುಡುಕುವುದೇ ಒಂದು ಸವಾಲು. ನಮ್ಮನ್ನು ಮೇಲೆ ನಿಲ್ಲಲು ಹೇಳಿ ದಿನೇಶ್ ಇಳಿಜಾರನ್ನು ಇಳಿದು, ಪಿಜಿನನೊಂದಿಗೆ ಕಾಡು ಹೊಕ್ಕರು. ನಮಗೆ ಮೇಲಿನಿಂದ ಅವರು ಅಚೀಚೆ ನೀರು ಹುಡುಕುತ್ತಾ ಓಡಾಡುತ್ತಿರುವುದು ಅವರ ಟಾರ್ಚ್ ಬೆಳಕ ಮೂಲಕ ಗೊತ್ತಾಗುತ್ತಿತ್ತು. ಒಂದು ಕ್ಷಣ ಕಾಡಿನ ಈ ಭಾಗದಲ್ಲಿದ್ದರೆ ಮತ್ತೊಂದು ಕ್ಷಣ ಕಾಡಿನ ಮತ್ತೊಂದು ಭಾಗದಲ್ಲಿರುತ್ತಿದ್ದರು. ಪಿಜಿನ ಒಂದು ಜಾಗ ತೋರಿಸಿ ಅಲ್ಲಿ ನೆಲ ಅಗೆದು ನೀರು ಹುಡುಕುವ ಬಗ್ಗೆ ಮಾತನಾಡುತ್ತಿದ್ದ! ಅವನ ಮಾತು ಕೇಳಿ ತಲೆಕೆಟ್ಟ ದಿನೇಶ್ ತಾನೊಬ್ಬನೇ ಕಾಡೊಳಗೆ ಓಡಾಡಿ ನೀರಿದ್ದ ಸ್ಥಳ ಹುಡುಕಿ ನಮಗೆ ಕೆಳಗಿಳಿದು ಬರಲು 'ಗ್ರೀನ್ ಸಿಗ್ನಲ್' ಕೊಟ್ಟರು.

ಕೆಳಗಿಳಿದು ನೀರಿದ್ದ ಸ್ಥಳ ತಲುಪಿದಾಗ ರಾತ್ರಿ 11 ಗಂಟೆ. ಒಟ್ಟು 8 ತಾಸು 20 ನಿಮಿಷಗಳ ಚಾರಣ. ಇಲ್ಲಿ ಸುನೀಲನನ್ನು ಮೆಚ್ಚಬೇಕು. ದಿನೇಶ್ ಮುಂದೆ ತೆರಳಿದ ಬಳಿಕ 'ಫ್ಲ್ಯಾಶ್ ಲೈಟ್'ನ್ನು ತನ್ನ ಕೈಗೆ ತಗೊಂಡು, ಹಿಂದೆ ಮುಂದೆ ಓಡಾಡಿ, ಪ್ರತಿಯೊಬ್ಬರಿಗೆ ದಾರಿ ತೋರಿಸುತ್ತ ನೀರಿರುವವರೆಗೆ ಕರಕೊಂಡು ಬರುವ ಪುಣ್ಯ ಕಾರ್ಯ ಮಾಡಿದರು. ಗಂಜಿ ಮಾಡಲಿಕ್ಕೆ ಬಹಳ ಸಮಯ ತಗುಲುವುದರಿಂದ, ಉಪ್ಪಿಟ್ಟು ಮಾಡುವ ನಿರ್ಧಾರ ಮಾಡಿದೆವು. ವಿನಯ್ ಮತ್ತು ವಿಜೇಶ್ ಅರ್ಧ ಗಂಟೆಯಲ್ಲಿ ಉಪ್ಪಿಟ್ಟು ರೆಡಿ ಮಾಡಿದರು. ಗಬಗಬನೆ ಎಲ್ಲರೂ ತಿಂದ ಪರಿ ನೋಡಿದಾಗಲೇ ಹಸಿವು ಯಾವ ಪರಿ ಮನುಷ್ಯನನ್ನು ಕಂಗೆಡಿಸುತ್ತದೆ ಎಂದು ಅರಿವಾಗತೊಡಗಿತು. ಮಧ್ಯರಾತ್ರಿ 12ಕ್ಕೆ ಸದ್ದಿಲ್ಲದೆ ಎಲ್ಲರೂ ನಿದ್ರಾವಶರಾಗಿದ್ದರು. ಸದ್ದಿಲ್ಲ ಮತ್ತೇನೂ ಮಾತಿಲ್ಲ. ಮಾತಾಡಲೂ ತ್ರಾಣವಿದ್ದರೆ ತಾನೆ? ಐದೇ ನಿಮಿಷದಲ್ಲಿ ದಣಿದ ದೇಹಗಳು ನಿದ್ರೆಗೆ ಜಾರಿದ್ದವು.


ಮರುದಿನ ಮುಂಜಾನೆ 8.15ಕ್ಕೆ ಹೊರಟು 45 ನಿಮಿಷಗಳಲ್ಲಿ ಅಮೇದಿಕಲ್ಲಿನ ತುದಿಯಲ್ಲಿದ್ದೆವು. ಶಿಖರದ ತುದಿ ತಲುಪಿದಾಗ ಮುನ್ನಾ ದಿನ ರಾತ್ರಿ ಅಷ್ಟೆಲ್ಲ ಒದ್ದಾಡಿ ಬಂದದ್ದು ಸಾರ್ಥಕವೆನಿಸತೊಡಗಿತು. ಕಾಣುತ್ತಿದ್ದ ದೃಶ್ಯ ರಮಣೀಯ. ಚಾರ್ಮಾಡಿ ಮತ್ತು ಶಿರಾಡಿ ಶ್ರೇಣಿಯ ಎತ್ತರದ ಶಿಖರದ ಮೇಲೆ ಈಗ ನಾವು ನಿಂತಿದ್ದೆವು. ಸುತ್ತಲೂ ಕಣ್ಣುಹಾಯಿಸಿದರೆ ಗುಡ್ಡಗಳು, ಬೆಟ್ಟಗಳು, ಕಣಿವೆಗಳು, ಮಳೆಕಾಡುಗಳು ಅಹಾ, ನೋಟವೆಂದರೆ ಇದು. ಗಡಾಯಿಕಲ್ಲಿನಿಂದ (ಜಮಲಾಬಾದ್) ಶುರುಮಾಡಿದರೆ ನಂತರ ಕುದುರೆಮುಖ, ಮೇರು ಪರ್ವತ, ಹಿರಿಮರಿಗುಪ್ಪೆ, ಕೃಷ್ಣಗಿರಿ, ದುರ್ಗದಬೆಟ್ಟ, ಏರಿಕಲ್ಲು, ಕುಂಭಕಲ್ಲು, ಬಾರೆಕಲ್ಲು, ಮಿಂಚುಕಲ್ಲು, ಮುಳ್ಳಯ್ಯನಗಿರಿ, ದತ್ತಪೀಠ, ಜೇನುಕಲ್ಲು (ಭೈರಾಪುರದ ಸಮೀಪವಿರುವಂತದ್ದು, ಚಾರ್ಮಾಡಿಯದ್ದಲ್ಲ), ಎತ್ತಿನಭುಜ, ಕುಮಾರ ಪರ್ವತ ಮತ್ತು ನಿಶಾನಿ ಗುಡ್ಡದವರೆಗೆ ನೋಟವೇ ನೋಟ. 10 ಗಂಟೆಗೆ ಕೆಳಗಿಳಿಯಲು ಶುರುಮಾಡಿದೆವು.

ಮೊದಮೊದಲು ಕಡಿದಾದ ಇಳಿಜಾರು. ಈ ದಾರಿ ನಿನ್ನೆ ರಾತ್ರಿ ನಾವು ಹತ್ತಿದ ಕೊರಕಲಿನ ಪಕ್ಕದಲ್ಲೇ ಇತ್ತು. ಆ ಕೊರಕಲಿನ ಆಳ ನೋಡಿ ಕೆಲವರು ನಿನ್ನೆ ನಾವೆಲ್ಲ ಅಲ್ಲಿಂದಲೇ ಮೇಲೇರಿದ್ದು ಎಂದು ನಂಬಲು ಸಿದ್ಧರಿರಲಿಲ್ಲ. ಹಗಲಲ್ಲಾದರೆ ಯಾರೂ ಅಲ್ಲಿಂದ ಮೇಲೇರುವ ಸಾಹಸ ಮಾಡುತ್ತಿರಲಿಲ್ಲ. ನಂತರ ನಿನ್ನೆ ದಾರಿ ತಪ್ಪಿದ ಮಳೆಕಾಡಿನ ಒಳಗೆ ಹೊಕ್ಕಾಗ ಸ್ವಲ್ಪ ಆರಾಮವೆನಿಸಿತು. ಸೂರ್ಯನ ಬಿಸಿಯಿಂದ ಸ್ವಲ್ಪ ಎಸ್ಕೇಪ್. ಅದಾದ ನಂತರ ಮತ್ತೆ ಬಿಸಿಲು ಮತ್ತು ಇಳಿಜಾರಿನ ದಾರಿ. ನಿನ್ನೆ ಒದ್ದಾಡಿ ಮೇಲೆ ಬಂದರೆ, ಈಗ ಜಾರಿ, ಬಿದ್ದು ಕೆಳಗಿಳಿಯುವ ಸಂಕಟ. ನಿನ್ನೆ ಸೂರ್ಯನ ಬಿಸಿಲಿನಲ್ಲಿ ತೀಕ್ಷ್ಣತೆಯಿರಲಿಲ್ಲ, ಆದರೆ ಈಗ 'ಮಕ್ಳಾ, ನಿನ್ನೆ ಸ್ವಲ್ಪದರಲ್ಲೆ ತಪ್ಪಿಸ್ಕೊಂಡ್ರಿ, ಈಗ ನೋಡ್ತೀನಿ ಹೆಂಗೆ ತಪ್ಪಿಸ್ಕೊಳ್ತ್ರಿ' ಎಂದು ಸೂರ್ಯ ನಮ್ಮನ್ನು ಕೆಣಕುತ್ತಿರುವಂತೆ ಭಾಸವಾಗುತ್ತಿತ್ತು. ಮುಂದಿನ 100 ನಿಮಿಷ ನೀರು ಸಿಗುವ ಚಾನ್ಸಿರಲಿಲ್ಲ. ಉದ್ದುದ್ದಕ್ಕೆ ಬೆಳೆದಿದ್ದ ಒಣಹುಲ್ಲುಗಳನ್ನು ಆಧಾರವಾಗಿಟ್ಟುಕೊಂಡು, ಕೆಳಗಿಳಿಯತೊಡಗಿದೆವು. ನೀರಿರುವಲ್ಲಿ ತಲುಪಿದ ಕೂಡಲೇ ಕೆಲವರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಶ್ರಾಂತಿ ಪಡೆದರು.


ಅಡಾಲ್ಫ್ ಮತ್ತು ಹರ್ಷ ಕೆಳಗಿಳಿದು ಬರಲು ಬಹಳ ಕಷ್ಟಪಡುತ್ತಿದ್ದರು. ತ್ರಾಸಿ ದಿನೇಶ್ ಅವರಿಬ್ಬರ ಬ್ಯಾಗುಗಳನ್ನು ತನ್ನ ಹೆಗಲೇರಿಸಿಕೊಂಡು ಅವರನ್ನು ನಿಧಾನವಾಗಿ ಕೆಳಗೆ ಕರಕೊಂಡು ಬರುತ್ತಿದ್ದರು. ನೀರಿನ ಸ್ಪಾಟ್ ಗಿಂತ ಇನ್ನೂ ಅರ್ಧ ಗಂಟೆ ಹಿಂದಿರುವಾಗಲೇ ಅಡಾಲ್ಫ್ 'ತನ್ನಿಂದ ಆಗದು' ಎಂದು ಕುಳಿತುಬಿಟ್ಟಾಗ, ತ್ರಾಸಿ ದಿನೇಶ್ ಕೆಳಗಿಳಿದು ಬಂದು ನೀರು ತುಂಬಿಸಿಕೊಂಡು, ಮತ್ತೆ ಅಡಾಲ್ಫ್ ಇದ್ದಲ್ಲಿ ಆ ಉರಿ ಬಿಸಿಲಿನಲ್ಲಿ ಮೇಲೇರಿ ಅವರಿಗೆ ನೀರು ಕೊಟ್ಟು ಸಾವಕಾಶವಾಗಿ ಕೆಳಗೆ ಕರಕೊಂಡು ಬಂದರು. ಮುಂದೆ ತೆರಳಿದ್ದ ನಮಗೆ ಇದೆಲ್ಲದರ ಅರಿವಿರಲಿಲ್ಲ. ಅಂದು ತ್ರಾಸಿ ದಿನೇಶ್ ಇರದಿದ್ದರೆ ಅಡಾಲ್ಫ್ ಮತ್ತು ಹರ್ಷ ಕೆಳಗಿಳಿದು ಬರುವುದು ಕಷ್ಟವಿತ್ತು.

ಈ ತ್ರಾಸಿ ದಿನೇಶ್ ಕುಂದಾಪುರ ಸಮೀಪದ ತ್ರಾಸಿಯವರು. ಸಣ್ಣ ಮಟ್ಟದ ಉದ್ಯೋಗವಿದ್ದು, ಚಾರಣದ ವಿಪರೀತ ಚಟ ಇದ್ದಿದ್ದರಿಂದ 110ಕಿಮಿ ಪ್ರಯಾಣಿಸಿ ತ್ರಾಸಿಯಿಂದ ಮಂಗಳೂರಿಗೆ ಚಾರಣ ಮಾಡಲೋಸುಗ ಬರುತ್ತಿದ್ದರು. ಹಿಂದೆ ಮಂಗಳೂರು ಯೂತ್ ಹಾಸ್ಟೆಲ್ ಸಕ್ರಿಯ ಸದಸ್ಯರಾಗಿದ್ದು, ಈಗ ಗಲ್ಫ್ ನಲ್ಲಿ ವಾಸವಾಗಿರುವ ಅಡಾಲ್ಫ್, ಊರಿಗೆ ಬಂದವರು ಚಾರಣಕ್ಕೆಂದು ಬಂದಿದ್ದರು. ತ್ರಾಸಿ ದಿನೇಶ್ ಮಾಡಿದ ನಿಸ್ವಾರ್ಥ ಸಹಾಯದಿಂದ ಬಹಳ ಪ್ರಭಾವಿತರಾದ ಅಡಾಲ್ಫ್, ಆತನನ್ನು ಗಲ್ಫ್ ಗೆ ಕರೆಯಿಸಿ ಉತ್ತಮ ಉದ್ಯೋಗವೊಂದನ್ನು ಕೊಡಿಸಿದರು. ಈಗ ತ್ರಾಸಿ ದಿನೇಶನಿಗೆ ಗಲ್ಫ್ ನಲ್ಲಿ ಉತ್ತಮ ಉದ್ಯೋಗ, ಕೈ ತುಂಬಾ ಸಂಬಳ. ಅಮೇದಿಕಲ್ಲು ಚಾರಣ ಆತನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತು.

ನಾವು ಕೆಳಗೆ ತಲುಪಿದಾಗ ಸಮಯ 3.45. ನಂತರ ಗೋಖಲೆಯವರ ಮನೆಯಲ್ಲಿ ಊಟ ಮುಗಿಸಿ, 8.15ಕ್ಕೆ ಮಂಗಳೂರಿನಲ್ಲಿ. ದಾರಿ ತಪ್ಪದಿದ್ದರೆ ಶಿಶಿಲದಿಂದ 6 ತಾಸುಗಳಲ್ಲಿ ಅಮೇದಿಕಲ್ಲಿನ ಮೇಲೆ ತಲುಪಬಹುದು. ನೆರಿಯಾದಿಂದ ಚಾರಣದ ಹಾದಿ ಒಂದೆರಡು ಗಂಟೆಗಳಷ್ಟು ಸಮೀಪವಾಗುತ್ತದೆ. ಆದರೆ ಅಲ್ಲಿನ ಎಸ್ಟೇಟ್ ಮಾಲೀಕರು ತಮ್ಮ(?) ಎಸ್ಟೇಟ್ ಮೂಲಕ ಯಾರನ್ನೂ ಬಿಡುವುದಿಲ್ಲ. ನಾನು ಕೈಗೊಂಡ ಚಾರಣಗಳಲ್ಲಿ ಅಮೇದಿಕಲ್ಲಿನ ಚಾರಣ ಸ್ಮರಣೀಯ. ಆ ನೆನಪುಗಳು ಯಾವಾಗಲು ಉಳಿಯುವಂತವು.