ಸೋಮವಾರ, ಡಿಸೆಂಬರ್ 31, 2007

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧


೨೦೦೮ ಜನವರಿ ೧೯ ಮತ್ತು ೨೦ ರಂದು ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.

ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು 'ಟೀಮ್ ಮಂಗಳೂರು' ಆಯೋಜಿಸಿತ್ತು. ಜನ ಪ್ರವಾಹವೇ ಪಣಂಬೂರು ಸಮುದ್ರ ತೀರಕ್ಕೆ ಹರಿದು ಬರುತ್ತಿತ್ತು. ಇಡೀ ಮಂಗಳೂರೇ ಗಾಳಿಪಟ ಉತ್ಸವ ನೋಡಲು ಪಣಂಬೂರು ಕಡಲ ತೀರದಲ್ಲಿ ನೆರೆದಿತ್ತು.

ಜನವರಿ ೨೩,೨೦೦೫ರಂದು ನಡೆದ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಟೀಮ್ ಮಂಗಳೂರಿನ ಸದಸ್ಯರ ಕನಸು ನನಸಾದ ದಿನ. ಇದು ಟೀಮ್ ಮಂಗಳೂರಿಗೆ ಒಂದು ದೊಡ್ಡ ಮಟ್ಟದ ಯಶಸ್ಸು ಕಂಡ ದಿನವಾಗಿತ್ತು. ಉತ್ಸವದ ಸಂಪೂರ್ಣ ಪ್ರಾಯೋಜಕತೆಯನ್ನು ಮಂಗಳೂರು ತೈಲಾಗಾರ(ಎಮ್.ಆರ್.ಪಿ.ಎಲ್)ದ ಪೋಷಕ ಸಂಸ್ಠೆಯಾಗಿರುವ ಓ.ಎನ್.ಜಿ.ಸಿ ವಹಿಸಿಕೊಂಡಿತ್ತು. ಮಿಡಿಯಾ ಪ್ರಾಯೋಜಕತೆಯ ಜವಾಬ್ದಾರಿಯನ್ನು ವಿಜಯ ಕರ್ನಾಟಕ ವಹಿಸಿಕೊಂಡಿದ್ದರಿಂದ ಉತ್ಸವದ ಪ್ರಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಗಾಳಿಪಟ ಉತ್ಸವ ವೀಕ್ಷಿಸಲು ಸುಮಾರು ಒಂದು ಲಕ್ಷದಷ್ಟು ಜನಸಮೂಹ ಸೇರಿತ್ತು. ಫ್ರಾನ್ಸ್, ಇಸ್ರೇಲ್, ಆಸ್ಟ್ರೇಲಿಯ, ಮಲೇಶ್ಯ, ಇಂಡೋನೇಶ್ಯ, ಇಂಗ್ಲಂಡ್, ಜಪಾನ್ ಮತ್ತು ಟರ್ಕಿ ದೇಶಗಳಿಂದ ಗಾಳಿಪಟಗಾರರು ಬಂದಿದ್ದರು.


ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ ನಂತರ ಟೀಮ್ ಮಂಗಳೂರಿನ ಅದೃಷ್ಟ ಬದಲಾಯಿತು. ಬೇರೆ ದೇಶಗಳಿಂದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಹ್ವಾನಗಳು ಬರಲಾರಂಭಿಸಿದವು. ಎಪ್ರಿಲ್ ೨೦೦೫ರಲ್ಲಿ ಫ್ರಾನ್ಸ್ ನ ಬರ್ಕ್ ಸುರ್ ಮರ್ ಎಂಬಲ್ಲಿ ನಡೆದ ಗಾಳಿಪಟ ಉತ್ಸವದಿಂದ ಪ್ರಾರಂಭಗೊಂಡು ೫ ಬಾರಿ ಟೀಮ್ ಮಂಗಳೂರು ವಿದೇಶ ಪ್ರಯಾಣ ಮಾಡಿ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದೆ. ಸೌದಿ ಅರೇಬಿಯ, ಟರ್ಕಿ, ಜಪಾನ್ ಮತ್ತು ಇಂಡೋನೇಶ್ಯಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಿಗೆ ತೆರಳಲು ಟೀಮ್ ಮಂಗಳೂರಿಗೆ ನಾನಾ ಕಾರಣಗಳಿಂದ ಸಾಧ್ಯವಾಗಲಿಲ್ಲ.


ಭಾಗವಹಿಸಲು ತೆರಳಿದ ಎಲ್ಲಾ ಕಡೆಗಳಲ್ಲೂ ಭಾರತದ ಜನಪದ ಕಲೆಗಳಿಗೆ, ಪೌರಾಣಿಕ ಪಾತ್ರಗಳಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದೈತ್ಯ ಗಾತ್ರದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿಸಿ ವಿದೇಶಿಯರನ್ನು ದಂಗುಬಡಿಸಿ, ಪ್ರಶಂಸೆ ಪಡೆದು ಹೆಮ್ಮೆಯಿಂದ ಬೀಗುತ್ತ ಮರಳಿ ಬಂದಿದೆ ಟೀಮ್ ಮಂಗಳೂರು. ೨೦೦೫ರಲ್ಲಿ ಇಂಗ್ಲಂಡ್ ನಲ್ಲಿ ನಡೆದ ೨ ಗಾಳಿಪಟ ಉತ್ಸವಗಳಲ್ಲಿ 'ಬೆಸ್ಟ್ ಟೀಮ್' ಪ್ರಶಸ್ತಿಯನ್ನು ಗಳಿಸಿದ್ದು ಟೀಮ್ ಮಂಗಳೂರಿನ ಸಾಧನೆ. ಭಾರತದಿಂದ ಅಹ್ವಾನಿಸಲ್ಪಟ್ಟ ಏಕೈಕ ತಂಡವೆಂಬ ಹೆಗ್ಗಳಿಕೆ ಬೇರೆ. ೨೦೦೨ರ ಗುಜರಾತ್ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 'ಟೀಮ್ ಮಂಗಳೂರು' ತನ್ನ ೩೬ ಅಡಿ ಉದ್ದದ ಕಥಕ್ಕಳಿ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿತು. ಲಿಮ್ಕಾ ಸಾಧನೆಗಳ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಲಾಗಿದೆ. ಇಂಗ್ಲಂಡ್ ನ ಗಾಳಿಪಟ ಮಾಸ ಪತ್ರಿಕೆಯಾಗಿರುವ 'ದಿ ಕೈಟ್ ಫ್ಲೈಯರ್' ತನ್ನ ಜುಲೈ ೨೦೦೫ರ ಸಂಚಿಕೆಯ ಮುಖಪುಟದಲ್ಲಿ ಟೀಮ್ ಮಂಗಳೂರಿನ ಗಾಳಿಪಟಗಳನ್ನು ಮುದ್ರಿಸಿತ್ತು.

ಅಂದ ಹಾಗೆ ಏನಿದು 'ಟೀಮ್ ಮಂಗಳೂರು'?

ಗಾಳಿಪಟಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ತಯಾರಿಸಿ ಹಾರಿಸುವ ಹವ್ಯಾಸವಿರುವ ಸಮಾನ ಮನಸ್ಕರ ಒಂದು ಸಣ್ಣ ತಂಡ 'ಟೀಮ್ ಮಂಗಳೂರು'. ಗಾಳಿಪಟ ಹಾರಿಸುವುದನ್ನು ಒಂದು ಹವ್ಯಾಸವಾಗಿ ಜನರಲ್ಲಿ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಯುವ ಜನಾಂಗದಲ್ಲಿ ಬೆಳೆಸಬೇಕು ಎಂಬ ಪ್ರಮುಖ ಉದ್ದೇಶದಿಂದ ೧೯೯೮ ರಲ್ಲಿ 'ಟೀಮ್ ಮಂಗಳೂರು' ಅಸ್ತಿತ್ವಕ್ಕೆ ಬಂತು. ಇದರೊಂದಿಗೆ ಯುವ ಜನಾಂಗದಲ್ಲಿ ಪ್ರಕೃತಿಯ ಪ್ರತಿ ಪ್ರೀತಿ ಹಾಗೂ ಗೌರವ ಬೆಳೆಸುವುದು ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ತನ್ನ ಗಾಳಿಪಟಗಳ ಮೂಲಕ ಜಗತ್ತಿನೆಲ್ಲೆಡೆ ಸಾರುವುದು ಇವು ಇತರ ಉದ್ದೇಶಗಳಾಗಿವೆ.


ಈಗ ಟೀಮ್ ಮಂಗಳೂರಿನ ಮುಂದೆ ಇರುವ ಸವಾಲೆಂದರೆ ಪ್ರತಿ ವರ್ಷ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸುವುದು. ೨೦೦೬ರಲ್ಲಿ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ೨೦೦೭ರಲ್ಲಿ ಜನವರಿಯಲ್ಲಿ ನಡೆದ 'ಬೀಚ್ ಉತ್ಸವ' ದಲ್ಲಿ ಟೀಮ್ ಮಂಗಳೂರು ತನ್ನ ಗಾಳಿಪಟಗಳನ್ನು ಹಾರಿಸಿದ್ದಲ್ಲದೇ ಬೇರೆ ದೇಶಗಳ ಗಾಳಿಪಟಗಾರರನ್ನೂ ಪಾಲ್ಗೊಳ್ಳಲು ತಾನಾಗಿಯೇ ಆಹ್ವಾನಿಸಿದ್ದರಿಂದ ಅದೇ ಒಂದು ಗಾಳಿಪಟ ಉತ್ಸವವಾಗಿಹೋಯಿತು. ೨೦೦೮ರಲ್ಲಿ ಜನವರಿ ೧೯ ಮತ್ತು ೨೦ ರಂದು ಮತ್ತೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಪ್ರತಿ ವರ್ಷ ಗಾಳಿಪಟ ಉತ್ಸವ ಮಾಡಲು ಪಡಬೇಕಾದ ಪರದಾಟ, ಇದ್ದ ತೊಡಕುಗಳು, ಪ್ರೋತ್ಸಾಹದ ಕೊರತೆ, ಪ್ರಾಯೋಜಕರ ಕೊರತೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಜನರ ನಿರುತ್ಸಾಹ ಮತ್ತು ನಿರ್ಲಕ್ಶ್ಯ ಟೀಮ್ ಮಂಗಳೂರಿಗೆ ನಿರಾಸೆಯನ್ನುಂಟು ಮಾಡುತ್ತಿದ್ದವು. ಆದರೂ ಕೂಡಾ ಛಲಬಿಡದೆ ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆ ಮತ್ತು ಒಂದು ಸಣ್ಣ ಗಾಳಿಪಟ ಉತ್ಸವವನ್ನು ಪಣಂಬೂರು ಕಡಲ ತೀರದಲ್ಲಿ ಸ್ವಂತ ಖರ್ಚಿನಲ್ಲಿ ಟೀಮ್ ಮಂಗಳೂರು ಮಾಡುತ್ತಿತ್ತು.


ಪ್ರತಿ ವರ್ಷ ಜನವರಿಯಲ್ಲಿ ಗುಜರಾತಿನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲು ಟೀಮ್ ಮಂಗಳೂರು ತೆರಳುತ್ತಿತ್ತು. ಯಕ್ಷಗಾನ ಪಾತ್ರಧಾರಿಯ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು. ಹೈದರಾಬಾದ್ ನಲ್ಲಿ ನಡೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮತ್ತದೇ ಗಾಳಿಪಟಗಳನ್ನು ಹಾರಿಸಿ ಮತ್ತಷ್ಟು ಪ್ರಶಂಸೆಗಳ ಸುರಿಮಳೆ. ಈ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬೇರೆ ದೇಶಗಳ ಗಾಳಿಪಟಗಾರರು ಟೀಮ್ ಮಂಗಳೂರಿನ 'ಹ್ಯಾಂಡ್ ಮೇಡ್' ಗಾಳಿಪಟಗಳಿಂದ ಆಕರ್ಷಿತರಾದರು. ತಮ್ಮ ದೇಶಗಳಿಗೆ ಹಿಂತಿರುಗಿದ ಬಳಿಕ ಅಲ್ಲಿನ ಗಾಳಿಪಟ ಉತ್ಸವ ಆಯೋಜಕರಿಗೆ ಟೀಮ್ ಮಂಗಳೂರಿನ ಬಗ್ಗೆ ಮಾಹಿತಿ ನೀಡಿ ಅಹ್ವಾನಿಸುವಂತೆ ಶಿಫಾರಸು ಮಾಡತೊಡಗಿದಾಗ ಟೀಮ್ ಮಂಗಳೂರಿನ ಖ್ಯಾತಿ ವಿದೇಶಗಳಲ್ಲಿ ಹರಡತೊಡಗಿತು.

ಮೊದಲೆಲ್ಲ ಎಲ್ಲಿ ಗುಜರಾತ್-ಹೈದರಾಬಾದ್ ನಿಂದ ಅಹ್ವಾನ ಬರುದಿಲ್ಲವೋ ಎಂದು ಆತಂಕಗೊಳಗಾಗುತ್ತಿದ್ದ ಸರ್ವೇಶ್, ಈಗ ಎಲ್ಲಿ ಫ್ರಾನ್ಸ್-ಇಂಗ್ಲಂಡ್ ಗಳಿಂದ ಆಹ್ವಾನ ಬರುದಿಲ್ಲವೋ ಎಂಬ ಆತಂಕಗೊಳಗಾಗುತ್ತಾರೆ!

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: http://www.indiankites.com/

2 ಕಾಮೆಂಟ್‌ಗಳು:

jomon varghese ಹೇಳಿದರು...

ಆತ್ಮೀಯ ರಾಜೇಶನಾಯ್ಕ್‌ರೆ, ನಿಮ್ಮ ಬ್ಲಾಗ್ ಸೊಗಸಾಗಿದೆ. ಗಾಳಿಪಟ ಉತ್ಸವದ ಬಗ್ಗೆ ನೀವು ಬರೆದಿರುವ ಲೇಖನ ಸಂಗ್ರಹಯೋಗ್ಯ. ಅಂದಹಾಗೆ ನಿಮಗೊಂದು ಸಂತಸದ ಸುದ್ದಿ.ವಿಶೇಷ ಅಭಿನಂದನೆ.ಕೆಂಡಸಂಪಿಗೆ ದಿನದಬ್ಲಾಗ್‌ ಕಾಲಂನಲ್ಲಿ ನಿಮ್ಮ ಬ್ಲಾಗ್ ಪ್ರಕಟಗೊಂಡಿದೆ. ಮಾಹಿತಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಬಹುದು. http://www.kendasampige.com/preview/?page_id=64


ಧನ್ಯವಾದಗಳೊಂದಿಗೆ,
ಜೋಮನ್ ವರ್ಗೀಸ್.

ರಾಜೇಶ್ ನಾಯ್ಕ ಹೇಳಿದರು...

ಜೋಮೋನ್,

ಕೆಂಡಸಂಪಿಗೆಯಲ್ಲಿ ಓದಿದೆ. ಕೊಂಡಿಗಾಗಿ ಧನ್ಯವಾದಗಳು.