ಭಾನುವಾರ, ಸೆಪ್ಟೆಂಬರ್ 02, 2007

ಜಲಧಾರೆಯೊಂದರ ಮಡಿಲಲ್ಲಿ


ಅಕ್ಟೋಬರ್ ೨೪, ೨೦೦೪ರಂದು ಜೊತೆಗೆ ಬರಲು ಯಾರೂ ಸಿಗಲಿಲ್ಲವಾದ್ದರಿಂದ ಈ ಜಲಪಾತಕ್ಕೆ ಒಬ್ಬನೇ ಹೊರಟೆ. ಆ ದಿನ ನನ್ನ ಯಮಾಹಾ ಇನ್ನೂ ತನ್ನ ಸರ್ವಿಸ್ ಮುಗಿಸಿ ಬಂದಿರಲಿಲ್ಲವಾದ್ದರಿಂದ, ಪ್ಯಾಶನ್ ಬೈಕಿನಲ್ಲಿ ಮುಂಜಾನೆ ೬.೩೦ಕ್ಕೆ ಸರಿಯಾಗಿ ಮನೆಯಿಂದ ಹೊರಬಿದ್ದೆ. ಮನೆಯಲ್ಲಿ ಯಥಾಪ್ರಕಾರ ಅದೇ ಸುಳ್ಳು - 'ಇಲ್ಲೇ ಬಸ್ ಸ್ಟ್ಯಾಂಡ್ ವರೆಗೆ ಬೈಕು, ನಂತರ ಬಸ್ಸಿನಲ್ಲಿ ತೆರಳಲಿದ್ದೇನೆ' ಎಂದು.

ನರಬಲಿ ಪಡೆಯುವುದರಲ್ಲಿ ಈ ಜಲಪಾತಕ್ಕೆ ಅಗ್ರಸ್ಥಾನ. ಶಾಂತವಾಗಿ ಹರಿಯುವ ಈ ನದಿ, ಜಲಪಾತದ ಮುಂದೆ ೩ ವಿಶಾಲ ಈಜುಕೊಳದಂತಹ ಗುಂಡಿಗಳನ್ನು ಸೃಷ್ಟಿಸಿದೆ. ಇಲ್ಲಿ ಪ್ರಾಣ ಕಳಕೊಂಡವರ ಲಾಸ್ಟ್ ಕೌಂಟ್ ನಾನು ತೆರಳಿದಾಗ ೧೪ ಇತ್ತು. ನೋಡಲು ಶಾಂತವಾಗಿ ಕಂಡರೂ ನೀರಿನಲ್ಲಿರುವ ಸುಳಿ ಅಪಾಯಕಾರಿಯಾದದ್ದು. ಸುಳಿಗೆ ಸಿಕ್ಕವರನ್ನು ಸೀದಾ ತನ್ನ ಒಡಲಿಗೆ ಕೊಂಡೊಯ್ಯುತ್ತದೆ ನದಿ. ಪ್ರಾಣ ಕಳಕೊಂಡವರಲ್ಲಿ ೪ ಮಂದಿಯ ಶವ ಸಿಗಲಿಲ್ಲ ಎಂದರೆ, ಇಲ್ಲಿ ನೀರಿಗಿಳಿಯುವುದು ಅದೆಷ್ಟು ಅಪಾಯಕಾರಿ ಎಂದು ಮನದಟ್ಟಾಗುವುದು.

ರಾಗಿಹೊಸಳ್ಳಿ ತಲುಪಿದಾಗ ಸರಿಯಾಗಿ ೧೨.೦೦ ಗಂಟೆ ಆಗಿತ್ತು. ಇಲ್ಲಿರುವುದು ನನ್ನ ಫೇವರಿಟ್ 'ಶಾನಭಾಗ್ ರೆಸ್ಟೋರೆಂಟ್'. ಈ ಹೊಟೇಲಿನಲ್ಲಿ ನನ್ನ ಮೆಚ್ಚಿನ ನಟ (ನೃತ್ಯ ಮಾಡುವುದನ್ನು ಹೊರತುಪಡಿಸಿ) ಶಂಕರ್ ನಾಗ್ ಅವರ ದೊಡ್ಡ ಭಾವಚಿತ್ರವೊಂದನ್ನು ತೂಗುಹಾಕಲಾಗಿದೆ. ಈ ದಾರಿಯಲ್ಲಿ ತೆರಳಿದರೆ ಇದು ನನ್ನ ರೆಗ್ಯುಲರ್ ಮತ್ತು ಕಂಪಲ್ಸರಿ ಸ್ಟಾಪು - ಹಸಿವು ಇರಲಿ ಇಲ್ಲದಿರಲಿ.

ಜಲಪಾತದ ವೀಕ್ಷಣಾಕಟ್ಟೆ ತಲುಪಿದಾಗ ಮಧ್ಯಾಹ್ನ ೨ ಗಂಟೆ. ಅಲ್ಲಿ ಬೇರಾವುದೇ ವಾಹನಗಳಿರಲಿಲ್ಲವಾದ್ದರಿಂದ ನಾನೊಬ್ಬನೇ ಬಂದಿರಬೇಕೆಂದು ಗ್ರಹಿಸಿ ಕೆಳಗಿಳಿಯಲು ಶುರುಮಾಡಿದೆ. ಐದು ನಿಮಿಷ ಕಾಂಕ್ರೀಟ್ ಮೆಟ್ಟಿಲುಗಳನ್ನು ಇಳಿದ ಬಳಿಕ ಕಾಲುದಾರಿ. ೨೦ ನಿಮಿಷದಲ್ಲಿ ಕಣಿವೆಯ ಕೆಳಗಿದ್ದೆ. ಈ ದಾರಿ ವಿಶಾಲವಾದ ೩ನೇ ಗುಂಡಿಯ ಬಳಿ ಬಂದು ಕೊನೆಗೊಳ್ಳುತ್ತದೆ. ಇಲ್ಲಿ ಸುಳಿಗಳಿವೆ ಎಂದರೆ ಯಾರಿಂದಲೂ ನಂಬಲಿಕ್ಕಾಗದ ಮಾತು. ಹಾಗಿರುವುದರಿಂದಲೇ ನೀರಿಗಿಳಿದು ಪ್ರಾಣ ಕಳಕೊಂಡವರ ಸಂಖ್ಯೆ ಇಲ್ಲಿ ಹೆಚ್ಚು. ಅಲ್ಲಿ ಯಾರೂ ಕಾಣುತ್ತಿರಲಿಲ್ಲ. ಒಬ್ಬನೇ ಇದ್ದಿದ್ದರಿಂದ ಮತ್ತು ವೀಕ್ಷಣಾ ಕಟ್ಟೆಯಲ್ಲಿ ಮೃತಪಟ್ಟವರ ಸಂಖ್ಯೆ ಬರೆದು ಎಚ್ಚರಿಕೆಯ ಬೋರ್ಡ್ ಹಾಕಿದ್ದು ನೆನಪಾಗಿ ಸ್ವಲ್ಪ ಹೆದರಿಕೆ ಶುರುವಾಯಿತು.


ಜಲಪಾತ ೩ ಹಂತಗಳನ್ನು ಹೊಂದಿದೆ. ಮೊದಲ ಹಂತ ೧೫ಅಡಿಯಷ್ಟು ಎತ್ತರವಿದೆ ಮತ್ತು ಇದಾದ ಕೂಡಲೇ ೧೫೦ಅಡಿಯಷ್ಟು ಎತ್ತರವಿರುವ ದ್ವಿತೀಯ ಹಂತವಿದೆ. ಎರಡನೇ ಹಂತದ ಬಳಿಕ ಮೊದಲ ನೀರಿನ ಗುಂಡಿ ಇದ್ದು, ಇಲ್ಲಿಂದ ನೀರು ಸುಮಾರು ೪೦ ಅಡಿಯಷ್ಟು ಆಳಕ್ಕೆ ೮೦ ಆಡಿಯಷ್ಟು ಅಗಲದ ರೂಪ ತಾಳಿ ಎರಡನೇ ಗುಂಡಿಗೆ ಧುಮುಕುತ್ತದೆ. ಮಳೆಗಾಲದಲ್ಲಿ ಮೊದಲೆರಡು ಹಂತಗಳು ಒಂದೇ ಹಂತದಂತೆ ಕಂಡರೆ, ೩ನೇ ಹಂತ ನೀರಿನ ಅಗಾಧ ಹರಿವಿನಲ್ಲಿ ಮುಳುಗಿ ಮಾಯವಾಗಿರುತ್ತದೆ. ಮಳೆಗಾಲದಲ್ಲಿ ಈ ಜಲಧಾರೆಯ ರೌದ್ರಾವತಾರವನ್ನು ದೂರದಿಂದಲೇ ವೀಕ್ಷಿಸುವುದು ಒಳಿತು.


೩ನೇ ಗುಂಡಿಯ ಬಳಿಯಿಂದ ಜಲಪಾತದ ನೋಟ ಲಭ್ಯ. ಆದರೆ ಮುಂದೆ ತೆರಳಿದಂತೆ ಇನ್ನೂ ಸುಂದರ ನೋಟ ಲಭ್ಯವಾಗಬಹುದೆಂದು ಸ್ವಲ್ಪ ಕಾಲ ವಿರಾಮ ಪಡೆದು ಹಾಗೆ ನೀರಗುಂಟ ಕಲ್ಲುಬಂಡೆಗಳನ್ನು ನಿಧಾನವಾಗಿ ದಾಟುತ್ತಾ ಜಲಪಾತದೆಡೆ ಇನ್ನೂ ಸನಿಹಕ್ಕೆ ತೆರಳಿದೆ. ಈಗ ಎರಡನೇ ಗುಂಡಿಯ ಬಳಿ ಬಂದೆ. ಬೀಸುತ್ತಿದ್ದ ಗಾಳಿಗೆ ನೀರ ಅಲೆಗಳು ನಾನು ನಿಂತಲ್ಲಿ ಬಂಡೆಗಳಿಗೆ ಅಪ್ಪಳಿಸುವ ಶಬ್ದ ಹೆದರಿಕೆಯುಂಟುಮಾಡುತ್ತಿತ್ತು. ನಾನು ನೀರಿಗೆ ಸನಿಹದಲ್ಲೇ ನಿಂತಿದ್ದೆ. ಕೂಡಲೇ ಆ ವೀಕ್ಷಣಾಕಟ್ಟೆಯ ಎಚ್ಚರಿಕೆ ಫಲಕದಲ್ಲಿ 'ನೀರಿನಲ್ಲಿ ಮೊಸಳೆಗಳಿವೆ' ಎಂದು ಬರೆದದ್ದು ನೆನಪಾಗಿ, ಆಚೀಚೆ ನೋಡದೆ ದಡಬಡಿಸಿ ನೀರಿನಿಂದ ದೂರ ಮೇಲಕ್ಕೆ ಧಾವಿಸಿದೆ! ನೀರಿಗಿಳಿಯುವುದನ್ನು ತಡೆಯಲು ಹಾಗೆ ಬರೆದಿರಬಹುದು.

ನಂತರ ಇನ್ನೂ ಮೇಲೆ ಹತ್ತಿ ಮತ್ತಷ್ಟು ಮುಂದಕ್ಕೆ ತೆರಳಿ ಜಲಪಾತವನ್ನು ಇನ್ನೂ ಸನಿಹದಿಂದ ನೋಡಿ ಅದರ ಸಂಪೂರ್ಣ ಚಿತ್ರವನ್ನು ತೆಗೆಯಬಹುದಿತ್ತು. ಈಗ ನಾನು ನಿಂತಲ್ಲಿಂದ ಕಲ್ಲಿನ ಕೋರೆಯೊಂದು ಹೊರಚಾಚಿ ಜಲಪಾತದ ಸ್ವಲ್ಪ ಭಾಗ ಕಾಣುತ್ತಿರಲಿಲ್ಲ. ಆದರೆ ಮತ್ತಷ್ಟು ರಿಸ್ಕ್ ತಗೊಂಡು ಮುಂದಕ್ಕೆ ಹೋಗುವುದು ಬೇಡವೆನ್ನಿಸಿ ಅಲ್ಲಿಂದಲೇ ಹಿಂದಿರುಗಿದೆ. ಆಗ ಒಮ್ಮೆಲೇ ಕೇಕೆ ಹಾಕಿ ಕೂಗಾಡಿದ ಸದ್ದು! ಸದ್ದು ಬಂದಲ್ಲಿ ನೋಡಿದರೆ ಇಬ್ಬರು ಯುವಕರು ಹೊಳೆಯ ಆ ಕಡೆ ಜಲಪಾತದ ೩ನೇ ಹಂತದ ಮೇಲೆ ಮೊದಲ ನೀರಿನ ಗುಂಡಿಯಲ್ಲಿ ನೀರಾಟ ಆಡುತ್ತಿದ್ದರು! ನದಿಯ ಹರಿವು ಇಲ್ಲಿ ವಿಶಾಲವಾಗಿರುವುದರಿಂದ ಅವರಿಬ್ಬರೂ ಬಹಳ ಚಿಕ್ಕದಾಗಿ ಕಾಣುತ್ತಿದ್ದರು. ನಂಬಲಾಗದ ದೃಶ್ಯ. ತಮ್ಮ ಜೀವದ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲದ ಬದ್ಮಾಶ್ ಗಳು. ಅಷ್ಟು ಮಂದಿ ಪ್ರಾಣ ಕಳಕೊಂಡಿದ್ದಾರೆ ಎಂದು ಎಚ್ಚರಿಕೆ ಫಲಕ ಇದ್ದರೂ ಕೂಡಾ ಇವರು ಮಜಾ ಮಾಡುವುದನ್ನು ನೋಡಿ, ಸತ್ತವರ ಸಂಖ್ಯೆ ಇಲ್ಲಿ ಯಾಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ತಿಳಿಯಿತು. ಇಲ್ಲೆಲ್ಲೂ ಸಮೀಪದಲ್ಲಿ ನದಿ ದಾಟಿ ಆ ಕಡೆ ತೆರಳುವುದು ಅಸಾಧ್ಯ. ಯಾವ ಕಡೆಯಿಂದ ಇವರು ನದಿಯನ್ನು ದಾಟಿ ಆ ಕಡೆ ತೆರಳಿದರು ಎಂದು ತಿಳಿಯದೆ, ತಿಳಿದುಕೊಳ್ಳುವ ಸಲುವಾಗಿ ಕಣಿವೆಯ ಮೇಲೆ ಹತ್ತುವ ಕಾಲುದಾರಿ ಇದ್ದಲ್ಲಿ ಬಂದು ಕುಳಿತೆ.


ಅಲ್ಲಿ ಇನ್ನೂ ಇಬ್ಬರಿದ್ದರು! ಈಗ ನಾಲ್ವರೂ ಮರಳಿ ನದಿಯ ಈ ದಂಡೆಗೆ ಬರಲು ಹಳ್ಳಗುಂಟ ಅಲ್ಲಲ್ಲಿ ಈಜುತ್ತಾ ಕೆಳಗಡೆ ಹೊರಟರು. ಆಗಾಗ ನನ್ನಲ್ಲಿ ಕೈ ಬೀಸುತ್ತಿದ್ದರು. ಸೆಳೆತ ಹೆಚ್ಚಿದ್ದರಿಂದ ದಾಟಲು ಆಗದೇ ಬಹಳ ಪರದಾಡುತ್ತಿದ್ದರು. ಕಡೆಗೂ ಕೈ ಕೈ ಹಿಡಿದು, ಒಟ್ಟಿಗೆ ನಿಂತುಕೊಂಡು ಗುದ್ದಾಡಿ, ಒದ್ದಾಡಿ, ಆ ಸಣ್ಣ ತೊಡಕೊಂದನ್ನು ದಾಟಿ ನಂತರ ಸುಲಭವಾಗಿ ಬಂಡೆಗಳನ್ನು ದಾಟಿ ಈ ಕಡೆ ಬಂದರು. 'ನೀವು ಹಾಗ್ಯಾಕೆ ರಿಸ್ಕ್ ತಗೋಳ್ತೀರಾ? ಇಲ್ಲಿ ನೀರಲ್ಲಿಳಿಯುವುದು ಅಪಾಯ ಅಲ್ವಾ' ಎಂದು ನಾನು ಪ್ರಶ್ನಿಸಿದಾಗ, ಅವರಲ್ಲೊಬ್ಬ ' ಈಜಾಕೆ ಬರದವರು ಸಾಯ್ತಾರೆ ಸಾರ್, ನಾವು ಈಜೋದ್ರಲ್ಲಿ ಎಕ್ಸ್ ಪರ್ಟುಗಳು' ಎಂದ. 'ಅದ್ಕೆ ಈಗ ದಾಟಿ ಬರಲು ಇಷ್ಟು ಕಷ್ಟವಾಯ್ತು ಅಂತ ಅನ್ಸುತ್ತೆ' ಹಾಗಂತ ನಾನಂದಾಗ ಅವನಲ್ಲಿ ಉತ್ತರವಿರಲಿಲ್ಲ.

ಅವರಿಗೆ ವಿದಾಯ ಹೇಳಿ ಕಣಿವೆ ಏರಿ ಮೇಲೆ ವೀಕ್ಷಣಾ ಕಟ್ಟೆ ತಲುಪಿದಾಗ ಗಂಟೆ ೪ ಆಗಿತ್ತು. ಕೆಳಗಿಳಿಯಲು ೨೦ ನಿಮಿಷ ಸಾಕಾದರೆ ಮೇಲೆ ಬರಲು ೪೫ ನಿಮಿಷ ಬೇಕಾದವು. ಆ ನಾಲ್ವರನ್ನು ಪಿಕ್ ಮಾಡಲು ಬಂದಿದ್ದ ಓಮ್ನಿ ಅಲ್ಲಿ ನಿಂತಿತ್ತು. ೪.೧೫ಕ್ಕೆ ಅಲ್ಲಿಂದ ಹೊರಟು ಮತ್ತೆ ರಾಗಿಹೊಸಳ್ಳಿಯ ಶಾನಭಾಗ ರೆಸ್ಟೋರೆಂಟ್ ಗೆ ನುಗ್ಗಿ, ಸಿಕ್ಕಿದ್ದನ್ನು ನುಂಗಿ, ರಾತ್ರಿ ೧೧.೩೦ಕ್ಕೆ ಉಡುಪಿಯಲ್ಲಿದ್ದೆ. ಪ್ರಯಾಣಿಸಿದ ದೂರ - ೪೯೦ ಕಿಮಿಗಳು.

7 ಕಾಮೆಂಟ್‌ಗಳು:

Srik ಹೇಳಿದರು...

wow! Another waterfall added to the 'to see' list of mine!

Srikanth - ಶ್ರೀಕಾಂತ ಹೇಳಿದರು...

ಇದರ ಬಗ್ಗೆ ಕೇಳಿದ್ದೆ, ಆದರೆ ಇಷ್ಟು ಅದ್ಭುತವಾಗಿದೆ ಎಂದು ಊಹಿಸಿರಲಿಲ್ಲ!

ಮನಸ್ವಿನಿ ಹೇಳಿದರು...

ಹೇಂಗೆ ನಮ್ಮ ಉತ್ತರ ಕನ್ನಡ ಜಿಲ್ಲೆ? ;)
ನಿಮ್ಮ ಪ್ರವಾಸ ಕಥನ ಓದಿ ನಂಗೆ ಹೊಟ್ಟೆಕಿಚ್ಚು ..ಎಷ್ಟು ಜಾಗಗಳಿಗೆ ಭೇಟಿ ಕೊಡ್ತೀರಾ ಮಾರಯರೆ? time management class-ಗೆ ಬರ್ಲಾ?

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಮಿಸ್ ಮಾಡ್ಕೊಂಡ್ರಿ. ಮತ್ತೊಮ್ಮೆ ಹೋಗಿ ಬನ್ನಿ. ನೋಡಲೇಬೇಕಾದ ಸ್ಥಳ.

ಶ್ರಿಕ್ ಮತ್ತು ಶ್ರೀಕಾಂತ್,
ಇದೊಂದು ಅದ್ಭುತ ಸ್ಥಳ ಎಂಬುದರಲ್ಲಿ ಸಂಶಯವಿಲ್ಲ. ಪ್ರಕೃತಿ ಪ್ರಿಯರು ನೋಡಲೇಬೇಕಾದ ಜಲಧಾರೆ ಇದು.

ಮನಸ್ವಿನಿ,
ಉತ್ತರ ಕನ್ನಡ ಜಿಲ್ಲೆ ಜಲಧಾರೆಗಳ ಜಿಲ್ಲೆ. ಒಂದು ಜೀವಮಾನವಿಡೀ ನೋಡಲಾಗದಷ್ಟು ಜಲಧಾರೆಗಳಿವೆ ಇಲ್ಲಿ. ಬಿಡುವು ಇದ್ದಾಗಲೆಲ್ಲಾ ಅಲೆದಾಟ. ಆದಷ್ಟು ಸುಂದರ ಸ್ಥಳಗಳಿಗೆ ಭೇಟಿ.

Prashanth M ಹೇಳಿದರು...

super!! idara bagge saakashtu keliddeeni... nodakke innu avakaasha sikkilla... :(

BTW nammoora hatra nu ondu shivagange ide, aadare adu beTTa, jalapaata alla :)

ರಾಜೇಶ್ ನಾಯ್ಕ ಹೇಳಿದರು...

ಪ್ರಶಾಂತ್,
ಅವಕಾಶ ಸಿಕ್ಕೊಡನೆ ನೋಡಿಬಿಡಿ.

ಸಿಂಧು Sindhu ಹೇಳಿದರು...

ರಾಜೇಶ್,

ತುಂಬ ಚೆನ್ನಾಗಿ ಬರೆದಿದ್ದೀರಿ. ನನಗೆ ಯಾವಾಗಲೂ ನಿಮ್ಮ ಬ್ಲಾಗ್ ಓದುವುದು ಚಾರಣಾನಂತರದ ಉಲ್ಲಸವನ್ನ ಕೊಡುತ್ತದೆ. ಪ್ರಾಕೃತಿಕ ತಾಣಗಳ ಚಂದದ ಚಿತ್ರಣಕ್ಕೆ ವಿವರದ ಚೌಕಟ್ಟು ಒಪ್ಪವಾಗಿದೆ. ಶಿವಗಂಗೆ ಅನ್ವರ್ಥ ನಾಮವೆನಿಸುತ್ತಿದೆ ನಿಮ್ಮ ಬರಹ ಓದಿದ ನಂತರ.

ಸಿಂಧು