ಮಂಗಳವಾರ, ಆಗಸ್ಟ್ 14, 2007

ನಾ ಮರೆಯದ ಸ್ವಾತಂತ್ರ್ಯ ದಿನಾಚರಣೆ


ಅಗೋಸ್ಟ್ ೧೩, ೨೦೦೫ರಂದು ನಾನು ಸಂಜೆ ೬ ಗಂಟೆಗೇ ಹಳದೀಪುರಕ್ಕೆ ಆಗಮಿಸಿದ್ದೆ. ನಾನು, ಗೆಳೆಯ ಲಕ್ಷ್ಮೀನಾರಾಯಣ, ಹಳದೀಪುರದ ನಮ್ಮ ಮನೆಯಲ್ಲಿರುವ ನನ್ನ ಚಿಕ್ಕಪ್ಪ ಮತ್ತು ತಮ್ಮ ನಯನ - ನಾಲ್ಕೂ ಮಂದಿ ರಾತ್ರಿ ೧೨ರ ಸುಮಾರಿಗೆ ಆಗಮಿಸಲಿರುವ ಮಂಗಳೂರು ಯೂತ್ ಹಾಸ್ಟೆಲಿನ ೨೭ ಮಂದಿ ಸದಸ್ಯರಿಗೆ ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದೆವು. ಮುಂದಿನ ೨ ದಿನಗಳ ಕಾಲ ಕೆಲವೊಂದು ಜಲಧಾರೆಗಳು ಮತ್ತು ಬನವಾಸಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ರಾತ್ರಿ ೧೨.೩೦ ಕಳೆದರೂ ಇವರ ಪತ್ತೆಯಿಲ್ಲ. ಅಂತೂ ಕಡೆಗೆ ರಾತ್ರಿ ೧ ಗಂಟೆಗೆ ಮೋಹನನ 'ಶಕ್ತಿ' ೨೭ ಮಂದಿಯನ್ನು ಹೊತ್ತು ಹಳದೀಪುರಕ್ಕೆ ಬಂದಾಗ ನಾನು ಮತ್ತು ಲಕ್ಷ್ಮೀನಾರಾಯಣ ಮುಖ್ಯ ರಸ್ತೆಯಲ್ಲೇ ಅತಿಥಿಗಳನ್ನು ಸ್ವಾಗತಿಸಿ, ನಮ್ಮ ಮನೆಯಿರುವ ಕುದಬೈಲಕ್ಕೆ ಕರೆದೊಯ್ದೆವು. ದಣಿದು ಬಂದ ಎಲ್ಲರೂ ಹಾಸಿ ಇಟ್ಟ ಜಮಖಾನೆ ಇತ್ಯಾದಿ ನೋಡಿದ ಕೂಡಲೇ ಮಾತಿಲ್ಲದೆ ನಿದ್ರಾವಶರಾದರು.

ಮುಂಜಾನೆ ನಮ್ಮ ಮನೆಯಂಗಳದಲ್ಲೇ ಸಣ್ಣ ಸಭೆಯೊಂದನ್ನು ಏರ್ಪಡಿಸಿ ಆವತ್ತಿನ ಮತ್ತು ಮರುದಿನದ ಕಾರ್ಯಕ್ರಮಗಳ ಬಗ್ಗೆ ಸತ್ಯಜಿತ್ ಅವರು ವಿವರ ನೀಡಿ, ರಾತ್ರಿ ಉಳಿದುಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಿದ್ದ ರಾಜೇಶ್ ನಾಯ್ಕರ(ನಾನೇ) ಮನೆಯವರಿಗೆ ಧನ್ಯವಾದ ಹೇಳಿದರು. ನಂತರ ಹೊರಟೆವು ಬೆಣ್ಣೆ ಜಲಧಾರೆಯೆಡೆ. ಅಲ್ಲಿಂದ ಮಾಗೋಡು ಜಲಧಾರೆಗೆ. ನಂತರ ಕುಳಿ ಮಾಗೋಡು ಜಲಧಾರೆಗೆ ಭೇಟಿ ನೀಡಿ ಯಲ್ಲಾಪುರದ ಸಂಭ್ರಮ್ ಹೋಟೇಲಿನಲ್ಲಿ ರಾತ್ರಿ ೮ ಗಂಟೆಗೆ ಊಟಕ್ಕೆ ಆಗಮಿಸಿದೆವು. ಇಲ್ಲೊಬ್ಬ ತನ್ನ ಕಾರನ್ನು ತಂದು ನಮ್ಮ 'ಶಕ್ತಿ' ಗೆ ತಾಗಿಸಿಬಿಟ್ಟ. ಆದರೆ ಆತ ತಾನು ಗುದ್ದಿದ್ದೇ ಅಲ್ಲ ಎಂದು ವಾದಕ್ಕಿಳಿದಾಗ ನಾವೂ ಜೋರಾಗಿ ಮಾತನಾಡಬೇಕಾಯಿತು. ಅಲ್ಲೇ ಇದ್ದ ಪೋಲೀಸ್ ಠಾಣೆಗೂ ಹೋಯಿತು ನಮ್ಮ ಜಗಳ. ಅಳುಕುತ್ತಾ ನಾವೆಲ್ಲರೂ ಒಳಗೆ ಕಾಲಿಟ್ಟೆವು. ಆತನಂತೂ ನುರಿತ ಕ್ರಿಮಿನಲ್ ತರಹ ಮನೆಯೊಳಗೆ ಕಾಲಿಡುವಂತೆ ಒಳಬಂದ. ನಮ್ಮ ಅದೃಷ್ಟಕ್ಕೆ ಅಲ್ಲಿನ ಇನ್ಸ್-ಪೆಕ್ಟರ್ ಆತನಿಗೇ ಗದರಿಸಿ ನಮ್ಮಲ್ಲಿ ಕ್ಷಮೆ ಕೇಳುವಂತೆ ಮಾಡಿದರು. ಬೇಗನೇ ಅಲ್ಲಿಂದ ಹೊರಬಿದ್ದು ಶಿರಸಿಯೆಡೆ ಹೊರಟೆವು.

ಮಾರಿಕಾಂಬ ದೇವಸ್ಥಾನ ತಲುಪಿದಾಗ ರಾತ್ರಿ ೧೧.೧೫. ನಾನು ಮೊದಲೇ ಫೋನ್ ಮಾಡಿ ವಿನಂತಿಸಿದ್ದರಿಂದ ಅಲ್ಲಿನ ಮ್ಯಾನೇಜರ್ ನಮಗಾಗಿ ಎರಡು ಕೋಣೆಗಳನ್ನು ಖಾಲಿ ಇರಿಸಿದ್ದರು. ಮರುದಿನ ಸ್ವಾತಂತ್ರ್ಯೋತ್ಸವ. ಮುಂಜಾನೆ ಬನವಾಸಿಗೆ ತೆರಳುವಾಗ ಶಿರಸಿಯಿಂದ ಒಂದೆರಡು ಕಿಮಿ ಪ್ರಯಾಣಿಸಿದ ಕೂಡಲೇ ಮೋಹನ ತನ್ನ 'ಶಕ್ತಿ' ಗೆ ಇಂಧನ ತುಂಬಿಸಲು ಮರಳಿ ಶಿರಸಿಗೆ ತೆರಳಿದ.



ಸುಧೀರ್ ಕುಮಾರ್ ನೆನಪು ಮಾಡಿ ಮಂಗಳೂರಿನಿಂದಲೇ ರಾಷ್ಟ್ರಧ್ವಜವನ್ನು ತಂದಿದ್ದರು. ಬೇರೆ ಯಾರಿಗೂ ಈ ವಿಚಾರ ಹೊಳೆದಿರಲಿಲ್ಲ. ನಾವಲ್ಲೇ ದಾರಿಯಲ್ಲಿ ಸಣ್ಣ ಕೊಂಬೆಯೊಂದಕ್ಕೆ ರಾಷ್ಟ್ರಧ್ವಜವನ್ನು ಏರಿಸಿ, ರಾಷ್ಟ್ರಗೀತೆಯನ್ನು ಹಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆವು. ಇದು ನಾನು ಪಾಲ್ಗೊಂಡ 'ದ ಮೋಸ್ಟ್ ಮೆಮೋರೇಬಲ್' ಸ್ವಾತಂತ್ರ್ಯ ದಿನಾಚರಣೆ. ರಾಷ್ಟ್ರಗೀತೆಯನ್ನು ಹಾಡುವಾಗ ಅಲ್ಲೇ ಜಾಗಿಂಗ್ ಮಾಡುತ್ತಿದ್ದವನೊಬ್ಬ ಕೂಡಲೇ ನಮ್ಮೊಂದಿಗೆ ಸೇರಿ ತಟಸ್ಥನಾಗಿ ನಿಂತು ರಾಷ್ಟ್ರಗೀತೆ ಹಾಡಿದ. ನಮ್ಮಲ್ಲಿ ಹೆಚ್ಚಿನವರು ಆತನನ್ನು ಗಮನಿಸಿಯೇ ಇರಲಿಲ್ಲ. ಅಲ್ಲೇ ಒಬ್ಬಳು ಯುವ ಶಿಕ್ಷಕಿ ತನ್ನ ಶಾಲೆಯೆಡೆ ಓಡುತ್ತಿದ್ದಳು. ಧ್ವಜಾರೋಹಣಕ್ಕೆ ಮುಂಚಿತವಾಗಿಯೇ ಅನತಿ ದೂರದಲ್ಲಿದ್ದ ಶಾಲೆಗೆ ಆಕೆ ತಲುಪಬೇಕಿತ್ತು. ಅವಸರದಲ್ಲಿ ಓಡುತ್ತಿದ್ದರೂ, ನಾವು ರಾಷ್ಟ್ರಗೀತೆ ಹಾಡಲು ಶುರುಮಾಡಿದ ಕೂಡಲೇ ಅಲ್ಲೇ ಮಿಸುಕಾಡದೆ ನಿಂತು, ರಾಷ್ಟ್ರಗೀತೆ ಮುಗಿದ ಬಳಿಕ ಮತ್ತೆ ಓಡಲು ಶುರುಮಾಡಿದಳು. ರಾಷ್ಟ್ರಗೀತೆಗೆ ಆಕೆ ನೀಡಿದ ಗೌರವ ಮತ್ತು ಮಾನ್ಯತೆ ನಾನೆಂದೂ ಮರೆಯುವಂತಿಲ್ಲ.


ಇನ್ನೂ ಮೋಹನ ಬಂದಿರಲಿಲ್ಲ. ಹಾಗೇ ಬನವಾಸಿಯೆಡೆ ನಡೆಯಲಾರಂಭಿಸಿದೆವು. ರಾಷ್ಟ್ರಧ್ವಜ ಹಿಡಿದ ಸುನಿಲ್ ಮುಂದಕ್ಕೆ ನಡೆಯುತ್ತಿದ್ದ. ನಮ್ಮ ತಂಡದಲ್ಲಿದ್ದ ಫೋಟೋಗ್ರಾಫರುಗಳು ಮುಂದೆ ಹಿಂದೆ ಓಡಾಡುತ್ತ ಫೋಟೊ ತೆಗೆಯುತ್ತಿದ್ದರು. ಒಂದೈದು ನಿಮಿಷದಲ್ಲಿ 'ಶಕ್ತಿ' ಆಗಮಿಸಿತು. ಬನವಾಸಿ ತಲುಪಿದಾಗ ಅಲ್ಲಿ ದೇವಸ್ಥಾನದ ಸಮಿತಿಯವರು ಧ್ವಜಾರೋಹಣ ಮಾಡಲು ತಯಾರಿ ನಡೆಸುತ್ತಿದ್ದರು. ಮತ್ತೊಮ್ಮೆ ಆಚರಿಸಿದೆವು ಸ್ವಾತಂತ್ರ್ಯೋತ್ಸವವನ್ನು!

ನಂತರ ಗುಡ್ನಾಪುರದ ಕೆರೆ, ಶಿವಗಂಗಾ ಜಲಧಾರೆ ಮತ್ತು ಕೊನೆಗೆ ಉಂಚಳ್ಳಿ ಜಲಧಾರೆ ನೋಡಿ ಮರಳಿದೆವು ಗೂಡಿಗೆ.

೨೦೦೫ರ ಸ್ವಾತಂತ್ರ್ಯೋತ್ಸವವನ್ನು ನಾನಂತೂ ಎಂದಿಗೂ ಮರೆಯಲಾರೆ ಅಂತೆಯೇ ಆ ೨ ದಿನಗಳ ಪ್ರವಾಸವನ್ನು ಕೂಡಾ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು ಈ ಅಲೆಮಾರಿಯ ಕಡೆಯಿಂದ.

8 ಕಾಮೆಂಟ್‌ಗಳು:

VENU VINOD ಹೇಳಿದರು...

ರಾಜೇಶ್,
ಆ ಪ್ರವಾಸದಲ್ಲಿ ನಾನೂ ಇದ್ದೆ, ಆದ್ರೆ ಈ ವಿಷ್ಯ ಮರೆತೇಬಿಟ್ಟಿದ್ದೆ ನೋಡಿ, ಮತ್ತೆ ನೆನಪು ಹಸಿಗೊಳಿಸಿದ್ದಕ್ಕೆ ವಂದನೆ. ನಿಜಕ್ಕೂ ಅದು ವಿಶೇಷ ಸ್ವಾತಂತ್ರೋತ್ಸವ.

ಅನಾಮಧೇಯ ಹೇಳಿದರು...

ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಪರ ಹೋರಾಟವನ್ನು ಬೆಂಬಲಿಸಿ

http://karave.blogspot.com/

www.karnatakarakshanavedike.org

ಸಿಂಧು sindhu ಹೇಳಿದರು...

ರಾಜೇಶ್,

ಇದನ್ನು ಬರೆದಿದ್ದಕ್ಕೆ ತುಂಬ ಧನ್ಯವಾದಗಳು.

you made my day.

ತುಂಬ ಪ್ರೀತಿಯಿಂದ
ಸಿಂಧು

PRAVINA KUMAR.S ಹೇಳಿದರು...

ಲೇಖನದ ಮೂಲಕ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿಯೇ ಅಚರಿಸಿದ್ದೀರಿ.

Parisarapremi ಹೇಳಿದರು...

ಸೂಪರ್ ಕಣ್ರೀ... ನಿಜ್ವಾಗ್ಲೂ....

Srik ಹೇಳಿದರು...

Thanks and same to you.

ರಾಜೇಶ್ ನಾಯ್ಕ ಹೇಳಿದರು...

ಸ್ಪಂದಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

ಅನಾಮಧೇಯ ಹೇಳಿದರು...

ಅಗಸ್ಟ್ ೧೫ ಕ್ಕೆ ಯಾವಾಗಲು ನಮ್ಮ ಉತ್ತರ ಕನ್ನಡದ ಪ್ರವಾಸವನ್ನ ನೆನಪು ಮಾಡುತ್ತೆನೆ,

ಆ ಜಲಪಾತಗಳು , ಕಾಮತರ ನಗೆಹನಿಗಲು ೭೦೦-೮೦೦ ಕಿ .ಮೀ ಪ್ರಯಾಣ ವನ್ನು ಮರೆಸಿತು.


ಇನ್ನು ಮು೦ದಿನ ಚಾರಣದ ಸ್ವಾತಂತ್ರ್ಯ ಆಚರಣೆಗೆ ರಾಷ್ಟ್ರಧ್ವಜ ತರುವುದು ನಾನೆ ಒ ಕೆ