ಗುರುವಾರ, ಜುಲೈ 05, 2007

ಎರಡು ಅಣೆಕಟ್ಟುಗಳು


ಈ ಎರಡು ಅಣೆಕಟ್ಟುಗಳನ್ನು ನೋಡಲು ಅದೊಂದು ದಿನ ನನ್ನ ಯಮಾಹದಲ್ಲಿ ತೆರಳಿದೆ. ದಾರಿಯಲ್ಲಿ ಸಿಗುವ ಈ ಊರು ಅದೊಂದು ಸಮಯ ಜನರು, ಅಂಗಡಿ, ಉದ್ಯಾನವನಗಳಿಂದ ಕಂಗೊಳಿಸುತ್ತಿದ್ದ ಪುಟ್ಟ ಊರು. ಆದರೆ ಈಗ, ರಸ್ತೆಯ ಇಕ್ಕೆಲಗಳಲ್ಲಿ ಅರ್ಧ ಮುರಿದು ಬಿದ್ದ, ಮುರಿದು ಬೀಳುತ್ತಿರುವ, ಪೂರ್ತಿ ನಾಶವಾದ ಮನೆಗಳು. ಕೆಲವೊಂದು ಮನೆಗಳು ಇನ್ನೂ ಕುಸಿದಿರಲಿಲ್ಲ ಆದರೆ ಕಿಟಕಿ, ಬಾಗಿಲು ಇತ್ಯಾದಿಗಳಿಗೆ ಬಳಸಲಾಗಿದ್ದ ಮರದ ವಸ್ತುಗಳು ನಾಪತ್ತೆ. ಕೆಲವೊಂದು ಮನೆಗಳ ಸೂರು ನಾಪತ್ತೆ.

೮೦ರ ದಶಕದಲ್ಲಿ ಇಲ್ಲಿರುವ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಪ್ರಾಜೆಕ್ಟ್ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿತು. ಕರ್ನಾಟಕ ವಿದ್ಯುತ್ ನಿಗಮ ಈ ಜೋಡಿ ಅಣೆಕಟ್ಟುಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗಾಗಿ ಈ ಊರನ್ನು ನಿರ್ಮಿಸಿ ಈ ಮನೆಗಳನ್ನು ಕಟ್ಟಿಸಿತ್ತು. ಪ್ರಾಜೆಕ್ಟ್-ನ ವೈಫಲ್ಯದ ಬಳಿಕ ಈಗ ಜಾಗ ಭಣಗುಡುತ್ತಿದೆ. ಸುಂಟರಗಾಳಿ ಬೀಸಿ ಸರ್ವನಾಶವಾದ ಹಳ್ಳಿಯೊಂದರಂತೆ ಕಾಣುತ್ತಿದೆ ಈ ಊರು. ಇಲ್ಲೇ ಉಳಿಯಬಯಸಿದ ಕೆಲವರು ಸ್ವಲ್ಪ ಮೊದಲು ಸಿಕ್ಕಿದ ಸಣ್ಣ ಪೇಟೆಯನ್ನು ಊರನ್ನಾಗಿ ಮಾಡಿ ವಾಸಿಸುತ್ತಿದ್ದಾರೆ. ಹಾಗೆ ನೋಡಿದರೆ ಎಲ್ಲಾ ಮನೆಗಳು ಕುಸಿದಿಲ್ಲ. ಐದಾರು ಸುಸ್ಥಿತಿಯಲ್ಲಿರುವ ಮನೆಗಳಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಈ ಊರಿಗೆ ಬರುವ ಬಸ್ಸು ಈಗಲೂ ಇಲ್ಲಿ ಸುಸ್ಥಿತಿಯಲ್ಲಿರುವ ಕೊನೆಯ ಮನೆಯ ತನಕ ಬಂದೇ ಹೋಗುತ್ತದೆ!


ಮಳೆ ಇನ್ನೂ ನಿಂತಿರಲಿಲ್ಲ. ಅಣೆಕಟ್ಟಿಗೆ ಊರಿನಿಂದ ಸುಮಾರು ದೂರವಿದೆ. ನಾನು ಅಣೆಕಟ್ಟು ಸಮೀಪಿಸಿದಂತೆ ಮಳೆ ನಿಂತಿತು. ಕಣ್ಣ ಮುಂದೆ ವಿಶಾಲ ಜಲರಾಶಿ. ಅಲ್ಲಿ ನಾನೊಬ್ಬನೇ. ಬೈಕನ್ನು ಸೀದಾ ಅಣೆಕಟ್ಟಿನ ಮೇಲೆ ಓಡಿಸಿದೆ. ಅಣೆಕಟ್ಟಿನ ಮತ್ತೊಂದು ತುದಿಯಲ್ಲಿ ಕಾಲುವೆಯೊಂದಿದೆ. ಈಗ ಈ ಕಾಲುವೆಯಲ್ಲಿ ನೀರು ಹರಿಯುವುದಿಲ್ಲ. ಒಂದು ಕಡೆ ಅಗಾಧ ಜಲರಾಶಿ, ಅಲ್ಲಲ್ಲಿ ನಡುಗಡ್ದೆಗಳು, ಜಲರಾಶಿಯ ಪರಿಧಿಯ ಆ ಕಡೆ ಬೆಟ್ಟಗುಡ್ಡಗಳು. ಮತ್ತೊಂದು ಕಡೆ ನದಿಯ ಕಣಿವೆ ಮತ್ತು ಬೆಟ್ಟಗಳು. ಮೂರ್ನಾಲ್ಕು ಬಾರಿ ಅಣೆಕಟ್ಟಿನ ಉದ್ದಗಲಕ್ಕೂ ಬೈಕನ್ನು ಓಡಿಸಿದೆ. ಗಾಳಿಯ ಸದ್ದನ್ನು ಬಿಟ್ಟರೆ ಬರೀ ಮೌನ.

ಅಣೆಕಟ್ಟಿನಿಂದ ಕೆಳಗೆ ರಸ್ತೆಯೊಂದು ಇಳಿದಿತ್ತು. ಅದರಲ್ಲಿ ಬೈಕನ್ನು ಓಡಿಸಿದೆ. ಕೆಳಗಡೆ ಆ ರಸ್ತೆ ಮತ್ತೆ ಕವಲೊಡೆದಿತ್ತು. ಬಲಕ್ಕಿರುವ ರಸ್ತೆ ಅಣೆಕಟ್ಟಿನ ಬುಡಕ್ಕೆ ತೆರಳಿದರೆ ಎಡಕ್ಕಿರುವ ರಸ್ತೆ ಕಾಡಿನೊಳಗೆ ಅದೆಲ್ಲೋ ಮಾಯವಾಗಿತ್ತು. ಈಗಂತೂ ನಾನು ತುಂಬಾ ಹೆದರಿದ್ದೆ. ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು, ಮರಗಳು. ಮುಂದೆ ರಾಕ್ಷಸ ಗಾತ್ರದ ಅಣೆಕಟ್ಟು, ಅದರ ಬುಡದಲ್ಲಿ ಭೂತ ಬಂಗಲೆಯಂತೆ ಕಾಣುತ್ತಿದ್ದ ಕೆಲವು ಕಟ್ಟಡಗಳು. ಮೊದಲು ಈ ಸ್ಥಳದಲ್ಲಿ ಸುಂದರವಾದ ರಸ್ತೆ ಮತ್ತು ಪಾರ್ಕ್ ಇದ್ದ ಕುರುಹುಗಳಿದ್ದವು. ಆದರೆ ಈಗ ಕಾಡು ಎಲ್ಲವನ್ನೂ ಕಬಳಿಸಿದೆ. ಹಿಂದಿನಿಂದ ಏನೋ ಬಂದು ನನ್ನ ಮೈ ಮೇಲೆ ಎರಗುವುದೇನೋ ಎಂಬ ಭಯ. ಬೈಕನ್ನು ತಿರುಗಿಸಿ ವೇಗವಾಗಿ ಮತ್ತೆ ಆಣೆಕಟ್ಟಿನ ಮೇಲೆ ಬಂದಾಗಲೇ 'ಅಬ್ಬಾ ಪಾರಾದೆ' ಎಂದೆನಿಸಿತು. ಅಲ್ಲಿ ಕೆಳಗೆ ಗಾಳಿ ಬೀಸುವ ಸದ್ದು ಕೂಡಾ ಇರಲಿಲ್ಲ. ಆ ಪರಿ ನಾನು ಎಂದೂ ಮತ್ತು ಎಲ್ಲಿಯೂ ಹೆದರಿರಲಿಲ್ಲ.


ನಂತರ ಸಮೀಪದಲ್ಲಿರುವ ಇನ್ನೊಂದು ಅಣೆಕಟ್ಟಿಗೆ ತೆರಳಿದೆ. ಇಲ್ಲೂ ಯಾರಿರಲಿಲ್ಲ...ನಾನೊಬ್ಬನೇ. ರಸ್ತೆ ಒಂದು ದಿಬ್ಬದ ಮೇಲೆ ಬಂದು ನಂತರ ತಿರುವು ಪಡೆದು ಕೆಳಗೆ ಸಾಗಿ ಅಣೆಕಟ್ಟಿನ ಮೇಲೆ ಬಂದು ಕೊನೆಗೊಳ್ಳುತ್ತದೆ. ಈ ದಿಬ್ಬದಲ್ಲೇ ಒಂದು ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದ್ದು ಇಲ್ಲಿಂದ ಜಲಾಶಯದ ನೋಟ ಲಭ್ಯ. ಇಲ್ಲಿಂದ ಅಣೆಕಟ್ಟಿನ ಮೇಲೆ ಇಳಿಯಲು ಮೆಟ್ಟಿಲುಗಳಿವೆ. ವಾಹನವನ್ನು ಇಲ್ಲೇ ನಿಲ್ಲಿಸಿ ಕೆಳಗಡೆ ಇಳಿದರೆ ಚೆನ್ನ. ಅಣೆಕಟ್ಟು ತಗ್ಗಿನಲ್ಲಿದೆ. ಅಣೆಕಟ್ಟಿನ ಸಮೀಪವೇ ಒಂದು ಕೃತಕ ನಡುಗಡ್ಡೆಯನ್ನು ನಿರ್ಮಿಸಲಾಗಿದ್ದು, ಅಲ್ಲಿ ಅಲಂಕಾರಿಕ ಮರಗಳನ್ನು ಬೆಳೆಸಲಾಗಿದ್ದು, ಕೂತುಕೊಳ್ಳಲು ಕಲ್ಲಿನ ಬೆಂಚುಗಳನ್ನು ನಿರ್ಮಿಸಲಾಗಿದೆ. ಅಣೆಕಟ್ಟಿನ ಮೇಲಿನಿಂದ ೨೫-೩೦ ಮೆಟ್ಟಿಲುಗಳನ್ನು ಇಳಿದು, ನೀರಲ್ಲಿ ನಾಲ್ಕೈದು ಹೆಜ್ಜೆಗಳನ್ನಿಟ್ಟು ದಾಟಿ ಈ ನಡುಗಡ್ಡೆಗೆ ತೆರಳಬಹುದು. ಮಳೆಗಾಲ ಬಿಟ್ಟು ಉಳಿದ ಸಮಯದಲ್ಲಿ ನೀರು ದಾಟಿ ಹೋಗುವ ಪ್ರಮೇಯವಿರುವುದಿಲ್ಲ.



ದುರದೃಷ್ಟವೆಂದರೆ ಈ ಎರಡೂ ಅಣೆಕಟ್ಟುಗಳನ್ನು ಯಾತಕ್ಕಾಗಿ ನಿರ್ಮಿಸಲಾಯಿತೋ ಆ ಪ್ರಾಜೆಕ್ಟ್ ವಿಫಲವಾಯಿತು. ಅನಾವಶ್ಯಕವಾಗಿ ಸಾವಿರಾರು ಎಕರೆ ಕೃಷಿ ಭೂಮಿ ಮತ್ತು ಅಷ್ಟೇ ಪ್ರಮಾಣದ ಕಾಡು ನೀರುಪಾಲಾಯಿತು. ಈಗ ಎರಡೂ ಅಣೆಕಟ್ಟುಗಳಿಂದ ನೀರನ್ನು ಲಿಂಗನಮಕ್ಕಿಗೆ ಹರಿಬಿಡಲಾಗುತ್ತಿದೆ.

ಹಿಂತಿರುಗುವಾಗ ಮತ್ತೆ ಬಿರುಸಾಗಿ ಮಳೆ ಬೀಳಲಾರಂಭಿಸಿತು. ಮಾಸ್ತಿಕಟ್ಟೆ - ಕವಲೇದುರ್ಗ ದಾರಿಯಲ್ಲಿ ನಾನು ಪ್ರಯಾಣಿಸಿರಲಿಲ್ಲ. ರಸ್ತೆ ಬಹಳ ಕೆಟ್ಟಿತ್ತು. ಮಾಸ್ತಿಕಟ್ಟೆ ದಾಟಿದ ನಂತರ ಮಳೆ ಮಾಯ. ೩೫ಕಿಮಿ ಸುತ್ತು ಬಳಸಿನ ದಾರಿಯಾದರೂ ಎಂದೂ ಸಂಚರಿಸದ ದಾರಿಯಲ್ಲಿ ತೆರಳಿದಂತಾಗುತ್ತದೆ ಎಂದು ಕವಲೇದುರ್ಗ, ಮೇಗರವಳ್ಳಿ, ಆಗುಂಬೆ ಮಾರ್ಗವಾಗಿ ಉಡುಪಿ ತಲುಪಿದೆ.

8 ಕಾಮೆಂಟ್‌ಗಳು:

Aravind GJ ಹೇಳಿದರು...

ಚಿತ್ರಗಳು ತುಂಬ ಚೆನ್ನಾಗಿದೆ. ಸದ್ಯದಲ್ಲೆ ಹುಲಿಕಲ್ಲಿಗೆ ಹೋಗುವ ಯೋಚನೆ ಇದೆ. ನೀವು ಬರೆದಿರುವ ಜಾಗಗಳನ್ನು ನೋಡಲು.

ಅನಾಮಧೇಯ ಹೇಳಿದರು...

ಗೆಳೆಯರೆ,

ಪ್ರಪಂಚದ ಆಗುಹೋಗುಗಳ ಬಗ್ಗೆ ಕನ್ನಡದ ಕಣ್ಣಿನಿಂದ ಸರಿಯಾಗಿ ವಿಶ್ಲೇಷಿಸಲು ಮತ್ತು ಚರ್ಚಿಸಲು, ಕನ್ನಡ-ಕನ್ನಡಿಗ-ಕರ್ನಾಟಕದ ಏಳಿಗೆಗೆ ಬದ್ಧವಾಗಿರುವ ಬನವಾಸಿ ಬಳಗದ ಹೊಸ ಬ್ಲಾಗ್ ಬಂದಿದೆ. ಅದೇ http://enguru.blogspot.com ಬನ್ನಿ, ಚರ್ಚೆಯಲ್ಲಿ ಭಾಗವಹಿಸಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ.

-ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರಾ...

Srik ಹೇಳಿದರು...

This is so inviting.

Superb pictures and a wonderful narration. Thanks for sharing. Will be there shortly.

ಸಿಂಧು sindhu ಹೇಳಿದರು...

ರಾಜೇಶ್,

ಚಿತ್ರಗಳು ನಾನು ನಿಮ್ಮ ಹಿಂದಿನ ಬರಹಕ್ಕೆ ಬರೆದಂತೆ, ಕಿಟಕಿಯಾಚೆಗಿನ ನೋಟ.. ಅಂದ್ರೆ, ತುಂಬ ಹತ್ತಿರದಿಂದ ಕಣ್ಣೆದುರೇ ಮೂಡಿ ಬರುವ ರಮ್ಯತೆ..

ಕಾಡು ನನ್ನನ್ನು ತುಂಬ ಸೆಳೆಯುವುದು ಅದರ ಭೀಕರಸೌಂದರ್ಯದಿಂದ.. ನೀವು ಬರೆದಿರಲ್ಲಾ ಆ ಮೌನದಲ್ಲಿ ಹೆದರಿಹೋದೆ ಅಂತ, i m in sync with you..

ನಿಮ್ಮ ವಿವರಣೆ ಚೆನ್ನಾಗಿದೆ. ನನಗನ್ನಿಸುತ್ತದೆ, ನಾವು ಹೀಗೆ ಚಾರಣ,ಪ್ರವಾಸ ಹೋದವರು ಆ ಸ್ಥಳದಲ್ಲಿ/ಕ್ಕೆ ಈಗಿರುವ ತೊಂದರೆ, ಅಪಾಯ, i mean, ಪರಿಸರವನ್ನ ಹೇಗಾದರೂ ಚೆನ್ನಾಗಿಡುವ ವಿಷಯಗಳನ್ನ, ಅದಕ್ಕೆ ನಾವೇನು ಮಾಡಬೇಕು ಅನ್ನುವುದನ್ನ explore ಮಾಡಿ ಬರೆಯಬೇಕು ಅಂತ. ನಿಮಗೊಬ್ಬರಿಗೇ ಹೇಳುತ್ತಿಲ್ಲ, ನನಗೂ..

ಇಂತದೊಂದು ಉತ್ತಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದ.

PRAVINA KUMAR.S ಹೇಳಿದರು...

ನಿಮ್ಮ ಈ ಲೇಖನ, ಪೋಟೋ ಲೈವ್ ಕಾಮೆಂಟ್ರಿ ಇದ್ದಂತೆ. ತುಂಬಾ ಸಂತೋಷ ನೀಡಿತು.

ರಾಜೇಶ್ ನಾಯ್ಕ ಹೇಳಿದರು...

ಅರವಿಂದ್,
ಹೋಗಿ ಬಂದು ಪ್ರವಾಸ ಕಥನವನು ನಿಮ್ಮ ಬ್ಲಾಗಿನಲ್ಲಿ ಬರೆಯುವಿರಂತೆ. ಓದಲು ಕಾತುರನಾಗಿದ್ದೇನೆ.

ಶ್ರೀಕಾಂತ್,
ಧನ್ಯವಾದಗಳು.

ಸಿಂಧು,
ನೀವು ಹೇಳಿರುವುದು ಸರಿಯಾಗೇ ಇದೆ. ಇದುವರೆಗೆ ನಾನು ಬರೀ ಭೇಟಿ ನೀಡಿರುವ ಸ್ಥಳಗಳ ಬಗ್ಗೆ ಬರೆಯುತ್ತಿದ್ದೆ. ಇನ್ನು ಮುಂದೆ ಪರಿಸರವನ್ನು ಕಾಪಾಡುವ ಮತ್ತು ಪರಿಸರ ಎದುರಿಸುವ ಅಪಾಯ ಬಗ್ಗೆ ಲೇಖನಕ್ಕೆ ಹೊಂದುವಂತೆ ಬರೆಯಲು ಪ್ರಯತ್ನಿಸುವೆ.

ಮನಸ್ವಿನಿ ಹೇಳಿದರು...

ಚಿತ್ರಗಳು ಬಹಳ ಬಹಳ ಸುಂದರವಾಗಿವೆ :)

Unknown ಹೇಳಿದರು...

ನಿಮ್ಮ ಲೇಖನ ಹಾಗು ಚಿತ್ರಗಳು ತುಂಬಾ ಅದ್ಬುತವಾಗಿದೆ. ನೀವು ಹೇಳಿರುವುದು ಚಿತ್ರಗಳು ಚಕ್ರಾನಗರ ದ ಹತ್ತಿರ ಸವೆಹಕ್ಲು ಡ್ಯಾಮ್ & ಚಕ್ರಾ ಡ್ಯಾಮ್ ಅಲ್ವ.....