ಭಾನುವಾರ, ಜೂನ್ 10, 2007

ಶಿಂಗಾಣಿಬೆಟ್ಟವನ್ನೇರಿ


ಮೇ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಚಾರಣ 'ಶಿಂಗಾಣಿಬೆಟ್ಟ'ಕ್ಕೆ. ಕಳೆದೆರಡು ವರ್ಷಗಳಲ್ಲಿ ಇಲ್ಲಿಗೆ ಇದು ನಮ್ಮ ನಾಲ್ಕನೇ ಭೇಟಿ. ಮೇ ೨೦೦೫ರಲ್ಲಿ ಎತ್ತಿನಭುಜ, ಜನವರಿ ೨೦೦೬ರಲ್ಲಿ ಅಮೇದಿಕಲ್ಲು, ಮೇ೨೦೦೬ರಲ್ಲಿ ಉದಯಗಿರಿ ಮತ್ತು ಈಗ ಶಿಂಗಾಣಿಬೆಟ್ಟ.

ಎಂದಿನಂತೆ ಈ ಸಲ ಕೂಡಾ ಗೋಪು ಗೋಖಲೆಯವರ ಮನೆಯಲ್ಲಿ ನಮಗೆ ಊಟ, ಉಪಹಾರ ಇತ್ಯಾದಿಗಳ ವ್ಯವಸ್ಥೆ. ಮೇ ೧೯ರಂದು ಮೋಹನನ 'ಶಕ್ತಿ'ಯಲ್ಲಿ ೨೪ ಚಾರಣಿಗರ ನಮ್ಮ ತಂಡ ಮಂಗಳೂರು ಬಿಟ್ಟಾಗ ಸಂಜೆ ೬.೧೫. ಗೋಪು ಗೋಖಲೆಯವರ ಮನೆ ರಾತ್ರಿ ೯.೧೫ ಕ್ಕೆ ತಲುಪಿದಾಗ ನಮಗಾಗಿ ಕಾಯುತ್ತಿತ್ತು ರುಚಿಯಾದ ಊಟ. ನಂತರ ಸಮೀಪದಲ್ಲೇ ಇದ್ದ ಶಾಲೆಯ ವಠಾರಕ್ಕೆ ತೆರಳಿ ಕ್ಯಾಂಪ್ ಫಯರ್. ಕಳೆದ ಎಪ್ರಿಲ್ ನಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ನವದಂಪತಿಗಳೆನಿಸಿಕೊಂಡಿದ್ದ ನಮಗೆ(ನನಗೆ ಮತ್ತು ನನ್ನವಳಿಗೆ) ಸನ್ಮಾನ. ನಂತರ ಕಳೆದ ಐದು ವರ್ಷಗಳಿಂದ ಮಂಗಳೂರು ಯೂತ್ ಹಾಸ್ಟೆಲ್ ಆಯೋಜಿಸಿದ ಎಲ್ಲಾ ಚಾರಣಗಳಲ್ಲೂ ಒಂದನ್ನೂ ತಪ್ಪಿಸದೆ ಪಾಲ್ಗೊಂಡ ರಮೇಶ್ ಕಾಮತರಿಗೆ ಸನ್ಮಾನ. ನಂತರ ಎಂಟರ್-ಟೈನ್-ಮೆಂಟ್ ಶುರು. ಸುಮಾರು ೧೧.೩೦ಕ್ಕೆ ಕ್ಯಾಂಪ್ ಫಯರ್ ಮುಗಿಸಿ ಶಾಲಾ ವಠಾರದಲ್ಲೇ ನಿದ್ರೆ.

ಮುಂಜಾನೆ ಗೋಖಲೆಯವರ ಮನೆಯಲ್ಲಿ ಉಪಹಾರ ಮುಗಿಸಿ ೭.೧೫ಕ್ಕೆ ಚಂದಪ್ಪನ ಮಾರ್ಗದರ್ಶನದಲ್ಲಿ ಶಿಂಗಾಣಿಬೆಟ್ಟಕ್ಕೆ ಚಾರಣ ಶುರು. ಎಂದಿನಂತೆ ನಾನು ಹಿಂದೆ. ಕಾಡು ಕೆಲವೊಂದು ಕಡೆ ದಟ್ಟವಾಗಿತ್ತು. ಬೇಗನೇ ಹೊರಟಿದ್ದರಿಂದ ಮತ್ತು ಕಾಡಿನ ನಡುವೆನೇ ಏರುಹಾದಿ ಇದ್ದಿದ್ದರಿಂದ ಬಿಸಿಲಿನ ಉರಿಯಿಂದ ತಪ್ಪಿಸಿಕೊಂಡೆವು.

ಎರಡು ತಾಸು ಕಳೆದರೂ ಇನ್ನೂ ಕಾಡು ಮುಗಿಯುತ್ತಿರಲಿಲ್ಲ. ಕೊನೆಕೊನೆಗೆ ಈ ಕಾಡಿನ ಸಹವಾಸ ಸಾಕಪ್ಪ ಎನ್ನುವಷ್ಟು ಮಟ್ಟಿಗೆ 'ಮೊನೊಟೊನಸ್' ಆಗುತ್ತಿತ್ತು ಚಾರಣ. ಮಧ್ಯದಲ್ಲಿ ಸಿಕ್ಕಿದ ನೀರಿನ ಸೆಲೆಯೊಂದು ಆಯಾಸ ಪರಿಹಾರ ಮಾಡಿತು. ನಂತರ ಮತ್ತೆ ಏರುಹಾದಿ. ಚಂದಪ್ಪ ದಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದ. ಆದರೆ ಕಾಡಿನಿಂದ ಹೊರಗೆ ನಮ್ಮನ್ನು ಕರಕೊಂಡು ಹೋಗುವ ವಿಚಾರ ಆತನಿಗೆ ಇದ್ದಂತಿರಲಿಲ್ಲ.


ಸರಿಯಾಗಿ ೩ ತಾಸಿನ ಬಳಿಕ ಒಂದೆಡೆ ಎಡ ತಿರುವು ತಗೊಂಡು ಇಪ್ಪತ್ತು ಹೆಜ್ಜೆ ಇಟ್ಟು ಒಮ್ಮೆಲೇ ಕಾಡಿನಿಂದ ಹೊರಗೆ ಬೋಳು ಗುಡ್ಡ ಪ್ರದೇಶಕ್ಕೆ ಬಂದುಬಿಟ್ಟೆವು. ಅಲ್ಲೇ ಮುಂದೆ ಕೇವಲ ೫ ನಿಮಿಷದ ನಡಿಗೆಯಷ್ಟು ದೂರದಲ್ಲಿ ರಾರಾಜಿಸುತ್ತಿತ್ತು ಶಿಂಗಾಣಿಬೆಟ್ಟದ ತುದಿ. ಸಂತೋಷ ಮತ್ತು ನಿರಾಸೆ ಒಟ್ಟಿಗೆ ಆಯಿತು. ಅದ್ಭುತವಾಗಿ ಕಾಣುತ್ತಿದ್ದ ಶಿಂಗಾಣಿಬೆಟ್ಟದ ತುದಿ, ಸುತ್ತಮುತ್ತಲಿನ ಗ್ರೇಟ್ ನೋಟ ಮತ್ತು ಯಶಸ್ವಿಯಾಗಿ ಮತ್ತೊಂದು ಬೆಟ್ಟವನ್ನೇರಿದ ಸಂತೋಷ ಒಂದೆಡೆಯಾದರೆ ಬೋಳುಗುಡ್ಡದಲ್ಲಿ ಕೇವಲ ೫ ನಿಮಿಷದ ನಡಿಗೆಯಿದ್ದರಿಂದ ನಿರಾಸೆಯಾಯಿತು. ಶಿಂಗಾಣಿಬೆಟ್ಟದ ತುದಿಯಿಂದ ಸ್ವಲ್ಪ ಕೆಳಗಿನವರೆಗೆ ಕಾಡು ಹಬ್ಬಿಕೊಂಡಿದೆ. ಶಿಂಗಾಣಿಬೆಟ್ಟದ ತುದಿ ತಲುಪಿದಾಗ ಸಮಯ ೧೦.೨೦.


ಕೆಳಗೆ ಶಿಶಿಲದ ಶಿಶಿಲೇಶ್ವರ ದೇವಸ್ಥಾನ ಮತ್ತು ಅಲ್ಲೇ ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಿಂಡಿ ಅಣೆಕಟ್ಟು ಸ್ಪಷ್ಟವಾಗಿ ಕಾಣುತ್ತಿತ್ತು. ಕಪಿಲಾ ನದಿಯ ಹರಿವಿನ ಮಾರ್ಗ, ಅದರ ಹುಟ್ಟಿನ ಸ್ಥಳದಿಂದ ಬಹೂ ದೂರದವರೆಗೂ ಗೋಚರಿಸುತ್ತಿತ್ತು. ಮತ್ತೊಂದು ಕಡೆಯಲ್ಲಿ ಅಮೇದಿಕಲ್ಲು ಮತ್ತು ಎತ್ತಿನಭುಜ ಶಿಖರಗಳು ಕಾಣಿಸುತ್ತಿದ್ದವು. ಮಾರ್ಚ್ ತಿಂಗಳಲ್ಲಿ ನಾವು ಚಾರಣಗೈದ ಏರಿಕಲ್ಲು ದೂರದಲ್ಲಿ ಕಾಣುತ್ತಿದ್ದರೆ, ಮೇ ೨೦೦೬ರಲ್ಲಿ ನಾವು ಚಾರಣಗೈದ ಉದಯಗಿರಿ ಸಮೀಪದಲ್ಲೇ ಕಾಣುತ್ತಿತ್ತು. ಬಿಸಿಲಿದ್ದರೂ, ಬೀಸುತ್ತಿದ್ದ ತಂಗಾಳಿಯಿಂದ ಶಿಂಗಾಣಿಬೆಟ್ಟದ ಮೇಲೆ ಕಳೆದ ಸಮಯ ಹಿತವಾಗಿತ್ತು.

ಮಿಥುನ್, ವೇಣು ವಿನೋದ್, ಸುಧೀರ್ ಕುಮಾರ್ ಮತ್ತು ಅನಂತ್ ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸುತ್ತಲಿನ ಅದ್ಭುತ ದೃಶ್ಯಾವಳಿಯನ್ನು ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರೆ, ವಿನಯ್ ಮತ್ತು ವಿದ್ಯಾ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳುತ್ತಾ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದರು. ಯಾವಾಗಲೂ ಆ ಬೆಟ್ಟ ಯಾವುದು ಈ ಬೆಟ್ಟ ಯಾವುದು ಎಂದು ಕಿರಿಕಿರಿ ಮಾಡಿ ಎಲ್ಲರ ತಲೆ ತಿನ್ನುವ ರಮೇಶ್ ಕಾಮತ್ ಇಂದೇಕೋ ಮೌನಿಯಾಗಿ ಶಿಖರದಿಂದ ಸ್ವಲ್ಪ ಕೆಳಗೆ ಬಂಡೆಯೊಂದರ ಮರೆಯಲ್ಲಿ ವಿಶ್ರಮಿಸುತ್ತಿದ್ದರು. ದಿನೇಶ್ ಹೊಳ್ಳ ತಮ್ಮ ಶಿಶ್ಯೆ ರೇಷ್ಮಾಳಿಗೆ ಚಾರಣದ ಬಗ್ಗೆ ಕೊರೆಯುತ್ತಿದ್ದರು. ಯತೀಶ್ ಮತ್ತು ಪ್ರಶಾಂತ್ ಬಂಡೆಯೊಂದರ ಮೇಲೆ ಹತ್ತುವುದು ಹೇಗೆ ಎಂದು ಅದಕ್ಕೆ ಸುತ್ತು ಹೊಡೆಯುತ್ತಿದ್ದರು. ಗುಡ್ಡಗಾಡು ಓಟಗಾರ ದಾಮೋದರ್, 'ಎಂಚಿನ ಸೀನತ್ತೆ' (ಎಂಥಾ ದೃಶ್ಯವಲ್ಲವಾ) ಎನ್ನುತ್ತಾ ಅಚೀಚೆ ಓಡಾಡುತ್ತಿದ್ದರು.

೧೧.೪೫ಕ್ಕೆ ಆಯೋಜಕ ದಿನೇಶ್ ಹೊಳ್ಳರು ಕೆಳಗಿಳಿಯುವ ಆರ್ಡರ್ ಕೊಟ್ಟರು. ಗೋಪು ಗೋಖಲೆಯವರ ಮನೆ ತಲುಪಿದಾಗ ಸಮಯ ೩.೧೫ ಆಗಿತ್ತು. ಅಲ್ಲೇ ಅವರ ಮನೆಯ ಹಿಂದೆ ಹರಿಯುವ ಕಪಿಲಾ ನದಿಯಲ್ಲಿ ಮಿಂದ ನಂತರ ಮತ್ತೆ ಭರ್ಜರಿ ಊಟ. ಶಿಶಿಲೇಶ್ವರ ದೇವಸ್ಥಾನಕ್ಕೊಂದು ಭೇಟಿ ನೀಡಿ ೪.೪೫ಕ್ಕೆ ಶಿಶಿಲ ಬಿಟ್ಟ ಮೋಹನನ 'ಶಕ್ತಿ', ಉಪ್ಪಿನಂಗಡಿಯಲ್ಲಿ ಚಾ ವಿರಾಮದ ಬಳಿಕ ೮ಕ್ಕೆ ಮಂಗಳೂರು ತಲುಪಿತು. ಗಂಗಾವತಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಉಡುಪಿ ತಲುಪಿ ೯.೩೦ಕ್ಕೆ ಮನೆಯಲ್ಲಿ.

'ನೀವ್ಯಾಕೆ ಸುಮ್ನೆ ಗುಡ್ಡ ಹತ್ತುವುದು, ಜಲಪಾತ ನೋಡುವುದು ಇತ್ಯಾದಿ ಮಾಡುತ್ತೀರಿ?... ತಿಂಗಳ ಎಲ್ಲಾ ಸಂಡೇ ನೀವು ಬರೀ ಇದೇ ಮಾಡ್ತಾ ಇದ್ರೆ ಹ್ಯಾಗೆ...?' ಎಂದು ಮದುವೆಯ ಮುಂಚೆ ಕಿರಿಕಿರಿ ಮಾಡುತ್ತಿದ್ದ ನನ್ನಾಕೆ, ಈಗ ತನ್ನ ಜೀವನದ ಮೊದಲ ಚಾರಣವನ್ನು ಯಶಸ್ವಿಯಾಗಿ ಸಂತೋಷದಿಂದ ಪೂರ್ಣಗೊಳಿಸಿದ ಬಳಿಕ, 'ನಿಮಗಿರುವ ಒಳ್ಳೆಯ ಹವ್ಯಾಸವೆಂದರೆ ಇದೊಂದೆ' ಎನ್ನುವುದೇ?!

ಈ ಚಾರಣದ ಇನ್ನೊಂದು ಲೇಖನವನ್ನು ಇಲ್ಲಿ ಓದಬಹುದು.

7 ಕಾಮೆಂಟ್‌ಗಳು:

ಮನಸ್ವಿನಿ ಹೇಳಿದರು...

ಲೇಖನ ಚೆನ್ನಾಗಿದೆ, ಚಿತ್ರಗಳೂ ಕೂಡ .

ಅಂತೂ ನಿಮ್ಮವ್ರಿಗೆ ಚಾರಣದ ಹುಚ್ಚು ಹಿಡಿಸಿದ್ರಾ? ಕೊನೆ ಪ್ಯಾರ ಚೆನ್ನಾಗಿದೆ :)

Srik ಹೇಳಿದರು...

ನಮಗೆ ನಿಮ್ಮ ಇತರ ಹವ್ಯಾಸಗಳ ಪರಿಚಯ ಇಲ್ಲದಿರುವುದರಿಂದ ನಿಮ್ಮ ಶ್ರೀಮತಿಯವರೊಂದಿಗೆ ತಲೆದೂಗಲೇ ಬೇಕಾಗಿದೆ.

ಮತ್ತೊಂದು ಇದೆ... ತಮ್ಮ photography ಮತ್ತು ಬರವಣಿಗೆ!!

PRAVINA KUMAR.S ಹೇಳಿದರು...

ನಿಮ್ಮ ಲೇಖನಗಳು ಎಂತಹವರಿಗೂ ಚಾರಣದ ಹುಚ್ಚು ಹತ್ತಿಸುತ್ತವೆ. ಪೋಟೋಗಳು ಸಹ ಸೂಪರ್ ಡೂಪರ್...

PRAVINA KUMAR.S ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸಿಂಧು sindhu ಹೇಳಿದರು...

ಪ್ರಿಯ ರಾಜೇಶ್,

ಬೆಳಿಗ್ಗೆ ಓದಿದೆ. ಕೂಡಲೇ ಸ್ಪಂದಿಸಲು ಎಷ್ಟು ಚಂದದ ಜಾಗಕ್ಕೆ ಹೋಗಿಬಿಟ್ರಲ್ಲ ಎಂಬ ಹೊಟ್ಟೆಕಿಚ್ಚು ಬಿಡಲಿಲ್ಲ :)

ನಾನು ನಿಮ್ಮ ನಿರೂಪಣೆಯ ಅಭಿಮಾನಿ. ಮತ್ತೆ ನೀವು ಬರೆಯುವ ಎಲ್ಲ ವಿಷಯಗಳೂ ನಾನು ಬಲು ಪ್ರೀತಿಸುವ ಅಮ್ಮನ ಮಡಿಲಿನ ವಿವಿಧ ನೋಟಗಳು.

ಬರೆದಷ್ಟೂ ಕಡಿಮೆ. ಅನುಪಮ ಬರಹ.

ಹೀಗೇ ತುಂಬ ಕಾಲ ಅಮ್ಮನ ಮಡಿಲಲ್ಲಿ ಆಟವಾಡಿ. ನಮ್ಮೊಡನೆ ಹಂಚಿಕೊಳ್ಳಿ.

Mahantesh ಹೇಳಿದರು...

Tumba hiDisida sAlugaLu
'ನೀವ್ಯಾಕೆ ಸುಮ್ನೆ ಗುಡ್ಡ ಹತ್ತುವುದು, ಜಲಪಾತ ನೋಡುವುದು ಇತ್ಯಾದಿ ಮಾಡುತ್ತೀರಿ?... ತಿಂಗಳ ಎಲ್ಲಾ ಸಂಡೇ ನೀವು ಬರೀ ಇದೇ ಮಾಡ್ತಾ ಇದ್ರೆ ಹ್ಯಾಗೆ...?' ಎಂದು ಮದುವೆಯ ಮುಂಚೆ ಕಿರಿಕಿರಿ ಮಾಡುತ್ತಿದ್ದ ನನ್ನಾಕೆ, ಈಗ ತನ್ನ ಜೀವನದ ಮೊದಲ ಚಾರಣವನ್ನು ಯಶಸ್ವಿಯಾಗಿ ಸಂತೋಷದಿಂದ ಪೂರ್ಣಗೊಳಿಸಿದ ಬಳಿಕ, 'ನಿಮಗಿರುವ ಒಳ್ಳೆಯ ಹವ್ಯಾಸವೆಂದರೆ ಇದೊಂದೆ' ಎನ್ನುವುದೇ?!

lekhana matte shaile eroDu chennagide..antu nimmarage charaNada huchchu hiDisibittri :))

ರಾಜೇಶ್ ನಾಯ್ಕ ಹೇಳಿದರು...

ಮನಸ್ವಿನಿ,
ಇದು ಅವರ ಪ್ರಥಮ ಚಾರಣ. ಚಾರಣದ ಹುಚ್ಚು ಹಿಡಿದಿದೆಯೋ ಇಲ್ವೋ ಗೊತ್ತಿಲ್ಲ. ಆದರೆ ಅವರು ಈ ಚಾರಣದಲ್ಲಿ ಪಾಲ್ಗೊಂಡ ಬಳಿಕ, ಈಗ ನನಗಂತೂ ಯಾವಾಗ ಬೇಕಾದ್ರೂ ಎಲ್ಲಿಗೆ ಬೇಕಾದ್ರೂ ಹೋಗಲು ಅನುಮತಿಯೊಂದು ಸಿಕ್ಕಿದೆ! ನನಗಷ್ಟೇ ಸಾಕು.

ಶ್ರೀಕಾಂತ್,
ಹೊಗಳಿಕೆಗೆ ಧನ್ಯವಾದಗಳು. ಬರವಣಿಗೆಯನ್ನು ಹವ್ಯಾಸವೆಂದು ನಾನು ಹೇಳಲಾರೆ. ನನಗೆ ಬರೆಯುವುದೆಂದರೇ ಆಗದು. ಯಾರಾದರೂ ನಾನು ಹೇಳಿದ್ದನ್ನು ಬರೆದು ಕೊಟ್ಟರೆ ಚೆನ್ನ ಎಂದು ಆಗಾಗ ಅನಿಸುತ್ತಿರುತ್ತದೆ.

ಪ್ರವೀಣ್,
ಚಾರಣದ ಹುಚ್ಚು ಹತ್ತಿದ್ರೆ ಒಳ್ಳೆಯದೇ ತಾನೆ?.. ಒಂದು ೧೦೦ ಫೋಟೋ ತೆಗೆದಿರುತ್ತೇನ್ರಿ. ಅದ್ರಲ್ಲಿ ೧೦-೧೫ ಚೆನ್ನಾಗಿ ಇರ್ಲೇಬೇಕಲ್ವೆ. ಚೆನ್ನಾಗಿ ಬಂದಿರೋ ಫೋಟೋಗಳನ್ನು ಮತ್ತೊಂದು ಸಲ ಹಾಗೇ ತೆಗೀರಿ ಅಂದ್ರೆ ಅದು ನನ್ನಿಂದ ಆಗದ ಕೆಲಸ. ಯಾಕೆಂದ್ರೆ ಅವುಗಳನ್ನು ಹೇಗೆ ತೆಗೆದೆ ಎಂಬುದು ನೆನಪಿದ್ರೆ ತಾನೆ!

ಸಿಂಧು,
ನನಗೆ ನಿಮ್ಮ ಟಿಪ್ಪಣಿ ಓದೋದೆ ಖುಷಿ. ನನ್ನ ಲೇಖನಗಿಂತ ನಿಮ್ಮ ಟಿಪ್ಪಣಿ ಚೆನ್ನಾಗಿರುತ್ತೆ. ಮತ್ತೆ ನನ್ನ ಲೇಖನದ ನಿರೂಪಣೆ ಚೆನ್ನಾಗಿರುತ್ತೆ ಎಂದು ನೀವು ಹೊಗಳಿದ್ದಕ್ಕೆ ಥ್ಯಾಂಕ್ಸ್. ನನ್ನದು ಏನಿದ್ದರೂ, 'ಹೊರಟೆವು, ಮುಟ್ಟಿದೆವು, ನೋಡಿದೆವು, ಬಂದೆವು' ಶೈಲಿಯ ನಿರೂಪಣೆ. ನನ್ನ ಕನ್ನಡ ಅಷ್ಟಕ್ಕಷ್ಟೆ. ಆದರೆ ಯಾವಾಗಲೂ ಅದ್ಭುತವಾಗಿ ಬರೆಯುವ ನೀವದನ್ನು ಹೊಗಳಿದ್ದೀರಿ ಅಂದ್ರೆ....! ಮುಜುಗರವಾಗುತ್ತಿದೆ.

ಮಹಾಂತೇಶ,
ಅವರಿಗೆ ಮನೆ, ಕಾಲೇಜು, ಶಾಲೆ ಇಷ್ಟೇರಿ ಗೊತ್ತಿದ್ದಿದ್ದು. ಇಂತಹ ಸ್ಥಳಗಳಿಗೆ ತೆರಳಿದರೆ ಸಿಗುವ ಆನಂದ ಎಷ್ಟೆಂಬ ಅರಿವು ಅವರಿಗಿರಲಿಲ್ಲ. ಆದ್ದರಿಂದ ಮೊದಲು, ಎಂಥವರೂ ಕೂಡಾ ಮೆಚ್ಚುವ ಆಗುಂಬೆಗೆ ಬೈಕಿನಲ್ಲಿ ಕರೆದೊಯ್ದೆ. ನಾನೆಣಿಸಿದಂತೆ ಕ್ಲೀನ್ ಬೌಲ್ಡ್ ಆದರು. ನಂತರ ತಾನಾಗಿಯೇ ಶಿಂಗಾಣಿಬೆಟ್ಟಕ್ಕೆ ಬರುವೆನೆಂದು ಕೇಳಿದಾಗ, ಕರೆದೊಯ್ದೆ. ಮತ್ತೊಮ್ಮೆ ಕ್ಲೀನ್ ಬೌಲ್ಡ್. ಈಗ ನಾನಂತೂ ನಿರಾಳ. ಎಲ್ಲಿಗ್ಬೇಕಾದ್ರೂ ಚಾರಣಕ್ಕೆ ಹೋಗ್ಲಿಕ್ಕೆ ಸಮ್ಮತಿಯೊಂದು ದೊರಕಿದೆ.