ಬುಧವಾರ, ಜೂನ್ 27, 2007

ದೊಡ್ಡ ಗಣೇಶನಿಗೊಂದು ವಿದಾಯ


ಕಳೆದ ರಣಜಿ ಋತುವಿಗೆ ಕರ್ನಾಟಕ ತಂಡದ ಆಯ್ಕೆ ಆದಾಗ ದೊಡ್ಡ ಗಣೇಶ್ ಹೆಸರು ಇರದಿರುವುದನ್ನು ನೋಡಿ ಆಶ್ಚರ್ಯವಾಯಿತು. ಹೊಸದಾಗಿ ಕೋಚ್ ಆಗಿ ನೇಮಕಗೊಂಡಿದ್ದ ವೆಂಕಟೇಶ್ ಪ್ರಸಾದ್ ತಂಡವನ್ನು ಆಯ್ಕೆ ಮಾಡುವಾಗ ಮುಖ್ಯ ಆಯ್ಕೆಗಾರ ಅಶೋಕಾನಂದ್ ಅವರಿಗೆ ತಿಳಿಸಿದ ವಿಷಯವೇನೆಂದರೆ 'ನನಗೆ ಇವರು ಬೇಕು ಮತ್ತು ಇವರು ಬೇಡ' ಎಂದು. ದೊಡ್ಡ ಗಣೇಶ್ ಹೆಸರು 'ಇವರು ಬೇಡ' ಪಟ್ಟಿಯಲ್ಲಿತ್ತು. ಇದಕ್ಕೆ ಪ್ರಮುಖ ಕಾರಣ ಗಣೇಶನ ಕ್ಷೇತ್ರರಕ್ಷಣೆ. ಕಳೆದೆರಡು ಋತುಗಳಲ್ಲಿ ಅವರ ಕ್ಷೇತ್ರರಕ್ಷಣೆಯ ಗುಣಮಟ್ಟ ಕಡಿಮೆಯಾಗಿತ್ತು ಆದರೆ ಕಳಪೆಯಾಗಿರಲಿಲ್ಲ. ಬೌಲಿಂಗ್ ನಲ್ಲಿ ಹುದ್ದರಿ ಕೀಳುವ ಕ್ಷಮತೆ ಸ್ವಲ್ಪ ಮಟ್ಟಿಗೆ ಕ್ಷೀಣಿಸಿದ್ದರೂ, 'ಕರ್ನಾಟಕಕ್ಕೆ ಇಗೊಂದು ಹುದ್ದರಿಯ ಅವಶ್ಯಕತೆ ಇದೆ' ಎನ್ನುವಾಗ, ಆ ಹುದ್ದರಿ ಬೀಳಿಸುವ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಇನ್ನೂ ಇತ್ತು ಗಣೇಶನಲ್ಲಿ.

ವೆಂಕಿ ಕೋಚ್ ಆಗಿ ನೇಮಕಗೊಂಡಾಗ ಅವರು ಒತ್ತು ಕೊಟ್ಟಿದ್ದು ೩ ಅಂಶಗಳಿಗೆ - ಉತ್ತಮ ಬ್ಯಾಟಿಂಗ್, ಉತ್ತಮ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್. ತಾನು ಈ ಬಾರಿ ರಾಜ್ಯ ತಂಡ ರಣಜಿ ಟ್ರೋಫಿ ಗೆಲ್ಲುವಂತೆ ಮಾಡುತ್ತೇನೆ ಎಂದೇ ಈ ಹುದ್ದೆಯನ್ನು ದಕ್ಕಿಸಿಕೊಂಡಿದ್ದ ವೆಂಕಿ, ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಅವುಗಳಲ್ಲಿ ಶಿಷ್ಯನೂ, ಗೆಳೆಯನೂ ಆಗಿದ್ದ ದೊಡ್ಡ ಗಣೇಶನನ್ನು ಕೈ ಬಿಡುವ ನಿರ್ಧಾರವೂ ಒಂದು. ಗಣೇಶ್ ತನ್ನ ಪ್ರಥಮ ರಣಜಿ ಪಂದ್ಯ ಆಡಿದಂದಿನಿಂದ ಅವರ ಆಟವನ್ನು ಗಮನಿಸುತ್ತಾ ಬಂದಿದ್ದ ನನಗೆ, ಆತನನ್ನು ಕೈ ಬಿಟ್ಟು ವೆಂಕಿ ಎಡವಿರಬಹುದೆಂದು ಅನಿಸತೊಡಗಿತ್ತು.

ಸೆಮಿ ಫೈನಲ್ ಪಂದ್ಯದಲ್ಲಿ ಬಂಗಾಲದ ಮನೋಜ್ ತಿವಾರಿ ಮತ್ತು ಅಭಿಷೇಕ್ ಝುಂಝುನ್-ವಾಲಾ ಇವರಿಬ್ಬರ ನಡುವಿನ ಜೊತೆಯಾಟವನ್ನು ಮುರಿಯಲು ನಮ್ಮ ಬೌಲರುಗಳು ಸಫಲರಾಗಿದ್ದರೆ ಕರ್ನಾಟಕ ಪಂದ್ಯವನ್ನು ಗೆಲ್ಲುತ್ತಿತ್ತು. ಆ ಪಂದ್ಯದಲ್ಲಿ ಆಡುತ್ತಿದ್ದ ರಾಜು ಭಟ್ಕಳ್ ಮತ್ತು ಶ್ರೀನಿವಾಸ ಧನಂಜಯ ಇವರಿಗೆ ಮತ್ತು ಒಬ್ಬ ಬೌಲರ್ ಆಗಿ ಗಣೇಶನಿಗೆ ಹೋಲಿಕೆಯೇ ಇಲ್ಲ! ಗಣೇಶ್ ಎಷ್ಟೋ ಪಟ್ಟು ಉತ್ತಮ. ಎದುರಾಳಿ ಬ್ಯಾಟ್ಸ್ ಮನ್ ಗಳು ಔಟಾಗದೇ ರನ್ನುಗಳನ್ನು ಪೇರಿಸುತ್ತಿರುವಾಗ, ಅಲ್ಲಿ ಅವಶ್ಯಕತೆ ಇರುವುದು ಒಬ್ಬ ಬುದ್ಧಿವಂತ ಎಸೆಗಾರನದ್ದು. 'ಗಣೇಶನಿದ್ದಿದ್ದರೆ...' ಎಂಬ ಯೋಚನೆ ಆಗಾಗ ಬರುತ್ತಿತ್ತು.

ಸಂಪೂರ್ಣವಾಗಿ ಪಕ್ವವಾಗುವ ಮೊದಲೇ ರಾಷ್ಟ್ರೀಯ ತಂಡಕ್ಕೆ ಗಣೇಶನನ್ನು ಆಯ್ಕೆ ಮಾಡಲಾಗಿತ್ತು. ಈ ಪ್ರಮಾದವೆಸಗಿದ್ದು ಆಗ ಆಯ್ಕೆಗಾರರ ಮುಖ್ಯಸ್ಥರಾಗಿದ್ದ ಗುಂಡಪ್ಪ ವಿಶ್ವನಾಥ್. ೧೯೯೭ರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಎಲ್ಲಾ ೪ ವೇಗಿಗಳು ಕರ್ನಾಟಕದವರೇ! ಶ್ರೀನಾಥ್, ವೆಂಕಿ, ಡೇವಿಡ್ ಜಾನ್ಸನ್ ಮತ್ತು ಗಣೇಶ್. ವಿಶಿ ಮಾಡಿದ ತಪ್ಪಿನಿಂದ ಗಣೇಶ್, ನಂತರ ಅದೆಷ್ಟೇ ಉತ್ತಮವಾಗಿ ಬೌಲಿಂಗ್ ಮಾಡಿ ಪ್ರಯತ್ನಪಟ್ಟರೂ ಮರಳಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಸತತವಾಗಿ ೫ ವರ್ಷಗಳ ಕಾಲ ಭರ್ಜರಿ ಬೌಲಿಂಗ್ ಮಾಡಿ, ರಾಶಿ ರಾಶಿ ವಿಕೆಟ್ ಕಿತ್ತರೂ ಗಣೇಶನನ್ನು ಆಯ್ಕೆಗಾರರು ಪರಿಗಣಿಸಲಿಲ್ಲ. ಇದೇ ಸಮಯದಲ್ಲಿ ಗಣೇಶರಿಗಿಂತ ಕಡಿಮೆ ಸಾಮರ್ಥ್ಯದ ಇಕ್ಬಾಲ್ ಸಿದ್ದಿಕಿ, ಟಿನು ಯೋಹಾನನ್, ದೇಬಾಶಿಶ್ ಮೊಹಾಂತಿ, ಹರ್ವಿಂದರ್ ಸಿಂಗ್, ಟಿ.ಕುಮಾರನ್, ಅಮಿತ್ ಭಂಡಾರಿ ಮುಂತಾದವರಿಗೆ ಅವಕಾಶಗಳನ್ನು ನೀಡಲಾಯಿತು. ಆದರೂ ಛಲ ಬಿಡದೆ ಗಣೇಶ್ ಪ್ರಯತ್ನಿಸಿದರು, ಯಾವುದೇ ಪ್ರಯೋಜನವಾಗಲಿಲ್ಲ.

೧೯೯೮ರಿಂದ ೨೦೦೪ರವರೆಗೆ ದೇಶೀಯ ಕ್ರಿಕೆಟ್ ನಲ್ಲಿ ಗಣೇಶ್ ತೋರಿಸಿದ ನಿರ್ವಹಣೆ ಅತ್ಯುತ್ತಮ. ಕರ್ನಾಟಕದ ಬೌಲಿಂಗ್ ಬೆನ್ನೆಲುಬಾಗಿ ಅವರ ನಿರ್ವಹಣೆಗೆ ತಲೆ ತೂಗದವರೆಂದರೆ ಆಯ್ಕೆಗಾರರು ಮಾತ್ರ. ಈ ಬಾರಿ ಗಣೇಶ್ ಆಯ್ಕೆ ಖಚಿತ ಎಂದು ಎಲ್ಲರೂ ಎದುರುನೋಡುತ್ತಿದ್ದರೆ, ಅವರ ಹೆಸರು ಮಾತ್ರ ತಂಡದಲ್ಲಿರುತ್ತಿರಲಿಲ್ಲ. ಬೌಲರ್ ಆಗಿ ಸಂಪೂರ್ಣವಾಗಿ ಬೆಳೆಯುವ ಮೊದಲೇ ಗಣೇಶನನ್ನು ರಾಷ್ಟ್ರ ತಂಡಕ್ಕೆ ಆಯ್ಕೆ ಮಾಡಿ ಒಂದು ತಪ್ಪೆಸಗಿದ ಆಯ್ಕೆಗಾರರು, ಆತ ರಾಷ್ಟ್ರದಲ್ಲೇ ಬುದ್ಧಿವಂತ ಬೌಲರ್ ಎಂದು ಸಾಬೀತುಪಡಿಸಿದಾಗ ಆಯ್ಕೆ ಮಾಡದೇ ಮತ್ತೊಂದು ತಪ್ಪನ್ನೆಸಗಿದರು. ರಾಷ್ಟ್ರಾದ್ಯಂತ ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದ ಆಟಗಾರರಿಗೆ ಕಾಡುತ್ತಿದ್ದ ಏಕೈಕ ಪ್ರಶ್ನೆಯೆಂದರೆ ಗಣೇಶ್ ಆಯ್ಕೆ ಯಾಕೆ ಆಗುತ್ತಿಲ್ಲವೆಂದು. ಆದರೆ ಈ ಎಲ್ಲಾ ಆಟಗಾರರಿಗೂ ಮತ್ತು ಕೆಲವು ಪತ್ರಕರ್ತರಿಗೆ ಗಣೇಶನನ್ನು ಯಾತಕ್ಕಾಗಿ ಆಯ್ಕೆ ಮಾಡಲಾಗುತ್ತಿಲ್ಲ ಎಂಬುದರ ಒಳಗುಟ್ಟು ಗೊತ್ತಿತ್ತು!

ಸಂಪೂರ್ಣ ಬೌಲರ್ ಆಗಿ ಬೆಳೆದು ನಿಂತ ಗಣೇಶನಿಗೆ ಈಗ ತಿಪ್ಪರಲಾಗ ಹಾಕಿದರೂ ರಾಷ್ಟ್ರೀಯ ತಂಡಕ್ಕೆ ಬರಲು ಸಾಧ್ಯವಿರಲಿಲ್ಲ. ಇದಕ್ಕೆ ಕಾರಣ ಸಚಿನ್ ತೆಂಡುಲ್ಕರ್ ಮತ್ತು ಒಬ್ಬ ಹೆಸರಾಂತ ಅಂಪಾಯರ್ ರವರ ವಿರೋಧ. ಈ ಇಬ್ಬರಿಗೆ ಗಣೇಶ್ ಮೊದಲ್ನಿಂದಲೂ ಇಷ್ಟವಿರಲಿಲ್ಲ. ಪತ್ರಕರ್ತರಿಗೆ ಮತ್ತು ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದ ಎಲ್ಲಾ ಆಟಗಾರರಿಗೆ ಗೊತ್ತಿದ್ದ ವಿಷಯವಿದು. ಗಣೇಶನಿಗೂ ಇದು ಗೊತ್ತಿತ್ತು, ಆದರೂ ತನ್ನ ಪರ್-ಫಾರ್-ಮೆನ್ಸ್ ಬಲದಿಂದ ತಾನು ಆಯ್ಕೆಯಾಗಬಹುದು ಎಂದು ಪ್ರಯತ್ನಪಟ್ಟರು.

೧೯೯೭ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದಲ್ಲಿ ೭ ಕನ್ನಡಿಗರು ಮತ್ತು ತಂಡದ ನಾಯಕ ತೆಂಡುಲ್ಕರ್. ಗಣೇಶನಿಗೆ ಎಲ್ಲವೂ ಹೊಸದು. ಕನ್ನಡದಲ್ಲಿ ಮಾತ್ರ ಮಾತನಾಡಿ ಗೊತ್ತಿದ್ದ ಗಣೇಶ್, ಸಹಜವಾಗಿಯೇ ತನ್ನ ಪ್ರಥಮ ಪ್ರವಾಸದಲ್ಲಿ ಕರ್ನಾಟಕದವರಿಗೇ ಅಂಟಿಕೊಂಡರು. ಸಚಿನ್ ಹೇಳಿದ್ದು ಈತನಿಗೆ ಅರ್ಥವಾದರೆ ತಾನೆ? ಸಚಿನ್ ಯಾವಾಗಲೂ ಒಬ್ಬ ಉತ್ತಮ ನಾಯಕನಾಗಿರಲಿಲ್ಲ. ಕರ್ನಾಟಕದವರೆಂದರೆ ಮೊದಲಿನಿಂದಲೂ ಕಿಡಿಕಾರುವ ಸಚಿನ್, ಗಣೇಶನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ವಿನಾಕಾರಣ ಆತನ ಬಗ್ಗೆ ತಪ್ಪು ನಿಲುವನ್ನು ತಾಳಿಕೊಂಡರು. ಗಣೇಶನೊಬ್ಬ 'ಪ್ರಯೋಜನವಿಲ್ಲದ ಬೌಲರ್, ಟೀಮ್ ಸ್ಪಿರಿಟ್ ಇಲ್ಲ, ಅಟಿಟ್ಯೂಡ್ ಸರಿಯಿಲ್ಲ, ಪ್ರಯತ್ನವನ್ನೇ ಮಾಡುವುದಿಲ್ಲ, ತನ್ನ ರಾಜ್ಯದವರೊಂದಿಗೆ ಮಾತ್ರ ಮಾತನಾಡುತ್ತಾನೆ' ಎಂದು ತನಗೆ ತಾನೇ ಹೇಳಿಕೊಂಡು ಅದನ್ನು ಸಮರ್ಥಿಸಿಕೊಂಡರು ಕೂಡಾ.

ಆ ಪ್ರವಾಸಕ್ಕೆ ಸಚಿನ್-ಗೆ ತನ್ನದೇ ಮುಂಬೈ ತಂಡದ ಅಬೇ ಕುರುವಿಲ್ಲಾ ಬೇಕಾಗಿತ್ತು. ಆವಾಗ ಕುರುವಿಲ್ಲಾ, ಗಣೇಶನಿಗಿಂತ ಉತ್ತಮ ಬೌಲರ್ ಆಗಿದ್ದು ಹೆಚ್ಚು ಅನುಭವ ಉಳ್ಳವರಾಗಿದ್ದರು ಮತ್ತು ಅವರ ಆಯ್ಕೆ ಆಗಬೇಕಾಗಿತ್ತು ಕೂಡಾ. ಆದರೆ ವಿಶ್ವನಾಥ್, ಸಚಿನ್ ಮಾತನ್ನು ಪರಿಗಣಿಸದೆ ಗಣೇಶನನ್ನು ಆಯ್ಕೆ ಮಾಡಿಬಿಟ್ಟರು. ಸಿಟ್ಟಿಗೆದ್ದ ಸಚಿನ್, ವಿಶಿ ಮೇಲಿನ ಸಿಟ್ಟನ್ನು ಬಡಪಾಯಿ ಗಣೇಶನ ಮೇಲೆ ಹಿಗ್ಗಾಮುಗ್ಗಾ ತೀರಿಸಿಕೊಂಡರು. ಹಸಿದ ಹುಲಿ ಬಾಯಿಗೆ ಸಿಕ್ಕಿದ ಬಡಪಾಯಿ ಮೇಕೆಯ ಪರಿಸ್ಥಿತಿ ಗಣೇಶನದ್ದು. ಇದಕ್ಕೆಲ್ಲಾ ಸರಿಯಾಗಿ ಒಬ್ಬ ಬೌಲರ್ ಆಗಿ ಗಣೇಶ್ ಸಾಮರ್ಥ್ಯ ಕೂಡಾ ಆಗ ಅಂತರಾಷ್ಟ್ರೀಯ ಕ್ರಿಕೆಟ್ ಆಡುವಷ್ಟು ಮಟ್ಟದಲ್ಲಿರಲಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತ ತಂಡ ಅಲ್ಲಿಂದಲೇ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿತ್ತು. ಈ ೨ ಪ್ರವಾಸಗಳಿಗಾಗಿಯೇ ತಂಡವನ್ನು ಆಯ್ಕೆ ಮಾಡಲಾಗಿದ್ದರಿಂದ ಗಣೇಶ್ ವೆಸ್ಟ್ ಇಂಡೀಸ್-ಗೂ ತೆರಳಿದರು. ಇಲ್ಲಿ ತಂಡದ ಒಬ್ಬ ಸದಸ್ಯ ಗಾಯಾಳಾದಾಗ ತನ್ನ ಜಿದ್ದಿಗೆ ಬಿದ್ದ ಸಚಿನ್, ಅಬೇ ಕುರುವಿಲ್ಲಾರನ್ನು ಕರೆಸಿಕೊಂಡರು. ಕುರುವಿಲ್ಲಾರಿಗೆ ನ್ಯಾಯವಾಗಿ ದೊರಕಬೇಕಾಗಿದ್ದ ಸ್ಥಾನ ಅಂತೂ ಕೊನೆಗೆ ಸಿಕ್ಕಿತು. ಗಮನಿಸಬೇಕಾದ ಅಂಶವೆಂದರೆ ಈ ೨ ಪ್ರವಾಸಗಳಲ್ಲಿ ಗಣೇಶ್ ಎಲ್ಲೂ ಕಳಪೆಯಾಗಿ ಬೌಲಿಂಗ್ ಮಾಡಲಿಲ್ಲ. ನಿರೀಕ್ಷಿತ ಮಟ್ಟಕ್ಕೆ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಲ್ಲಿರಲಿಲ್ಲ. ಇದಕ್ಕೆಲ್ಲಾ ಕಲಶವಿಟ್ಟಂತೆ ಕುರುವಿಲ್ಲಾ ಪ್ರಕರಣ ಮತ್ತು ಸಚಿನ್ ಸಿಟ್ಟು. ಒಬ್ಬ ಆಯ್ಕೆಗಾರರಾಗಿ 'ಜೆಂಟ್ಲ್ ಮ್ಯಾನ್' ವಿಶಿ ಮಾಡಿದ ತಪ್ಪಿನಿಂದಾಗಿ ಗಣೇಶ್ ಕಳಕೊಂಡದ್ದು ಅಪಾರ.

ಮೊಹಮ್ಮದ್ ಅಜರುದ್ದೀನ್ ಗಣೇಶ್ ಸಾಮರ್ಥ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆದರೆ ಅದಾಗಲೇ ಅವರ ತಲೆ ಮೇಲಿಂದ ನಾಯಕತ್ವ ಪಟ್ಟ ತೊಲಗಿತ್ತು ಮತ್ತು ನಂತರ ಅವರದೇ ಆದ ತೊಂದರೆಗಳಲ್ಲಿ ಅವರು ಸಿಲುಕಿಕೊಂಡರು. ಅಜರ್ ನಾಯಕನಾಗಿದ್ದಿದ್ದರೆ ಗಣೇಶ್ ಮತ್ತೆ ಭಾರತಕ್ಕಾಗಿ ಆಡುತ್ತಿದ್ದರು. ಒಟ್ಟಾರೆ ದೊಡ್ಡನರಸಯ್ಯ ಗಣೇಶ್ ಒಬ್ಬ ನತದೃಷ್ಟ ಕ್ರಿಕೆಟಿಗ.

ನಂತರ ಕೆಲವು ಸಂದರ್ಶನಗಳಲ್ಲಿ ಸಚಿನ್ ಪರೋಕ್ಷವಾಗಿ ಗಣೇಶ್ ವಿರುದ್ಧ ಹೇಳಿಕೆ ನೀಡಿದ್ದು ಮಾತ್ರ ಆಘಾತಕಾರಿ. 'ಡೇವಿಡ್ ಜಾನ್ಸನ್ ಒಬ್ಬ ಉತ್ತಮ ಬೌಲರ್. ಬಹಳ ಪ್ರಯತ್ನ ಮಾಡುತ್ತಾರೆ. ಒಬ್ಬ ಬೌಲರ್-ಗೆ ಇರಬೇಕಾದ ಮುಖ್ಯ ಗುಣ ಅದು. ಆದ್ರೆ ಪ್ರಯತ್ನವೇ ಮಾಡದ ಬೌಲರುಗಳಿದ್ದರೆ ಒಬ್ಬ ನಾಯಕನಾಗಿ ನೀವೇನೂ ಮಾಡಲು ಸಾಧ್ಯವಿಲ್ಲ' ಎಂದು ಗಣೇಶನನ್ನು ಮತ್ತು ವಿಶಿಯನ್ನು ತೆಗಳುವ ಸಲುವಾಗಿ ಕಳಪೆ ಪ್ರದರ್ಶನ ನೀಡಿದ್ದ ಡೇವಿಡ್ ಜಾನ್ಸನ್-ರನ್ನು ಹೊಗಳಿದ್ದು ಮಾತ್ರ ಹಾಸ್ಯಾಸ್ಪದ. ಗಣೇಶ್ ಪ್ರಯತ್ನ ಮಾಡದ ಬೌಲರ್? ಹ್ಹಾ! ಆಯ್ಕೆಗಾರರ ಮೇಲಿನ ಸಿಟ್ಟನ್ನು ಸಚಿನ್, ಗಣೇಶನಂತಹ ಯುವ ಆಟಗಾರನ ಮೇಲೆ ತೋರಿಸಿದ್ದು ನಾಚಿಕೆಗೇಡು. ಗಣೇಶ್ ಆಯ್ಕೆಗೆ ನಂತರದ ದಿನಗಳಲ್ಲಿ ತೊಡಕಾಗಿದ್ದ ಆ ಅಂಪಾಯರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲಾ ಕಡೆ ವಿಚಾರಿಸಿದರೂ ಎಲ್ಲರೂ ಹೇಳುವುದು ಒಂದೇ, 'ಒಬ್ಬರಿದ್ದಾರೆ..ಆದರೆ ಯಾರೆಂದು ಗೊತ್ತಿಲ್ಲ' ಎಂದು.

ಅದೆಲ್ಲಾ ಏನೇ ಇರಲಿ. ಕರ್ನಾಟಕಕ್ಕೆ ಗಣೇಶ್ ನೀಡಿದಷ್ಟು ಕಳೆದ ದಶಕದಲ್ಲಿ ಬೇರ್ಯಾರೂ ನೀಡಿಲ್ಲ. ಬಹಳ ಬಡ ಕುಟುಂಬದಿಂದ ಬಂದಿದ್ದರೂ ಮತ್ತು ವಿದ್ಯಾಭಾಸದ ಕೊರತೆಯಿದ್ದರೂ ಉತ್ತಮ ನಡತೆ ಮತ್ತು ವಿನಯ ಗಣೇಶರಿಗಿದ್ದ ಗುಣಗಳು. ತನ್ನ ಸ್ವಾರ್ಥಕಾಗಿ ಯಾವಾಗಲೂ ಆಡಿದವರಲ್ಲ ಗಣೇಶ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಲ್ಲಿನ 'ಗ್ರೌಂಡ್ಸ್ ಮೆನ್' ಮತ್ತು ಇತರ ಸಿಬ್ಬಂದಿಗಳು ಗಣೇಶನನ್ನು ಮಾತಿಗೆಳೆಯುವುದು 'ಏನ್ ಗುರು?' ಎಂದೇ. ಯಾವ ಕ್ರಿಕೆಟಿಗ ಇಂತಹ ಸರಳ ಸಂಬಂಧಗಳನ್ನು ಇಟ್ಟುಕೊಂಡಿರುತ್ತಾನೆ? ಕ್ರಿಕೆಟ್ ನಿಂದ ಗಣೇಶ್ ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದಾರೆ - ಹಣ, ಕಾರು, ಮನೆ, ಮೆಚ್ಚಿದ ಹುಡುಗಿ, ಇಂಡಿಯನ್ ಏರ್-ಲೈನ್ಸ್ ನಲ್ಲಿ ಆಫೀಸರ್ ಹುದ್ದೆ ಎಲ್ಲಾ. ಭಾರತಕ್ಕಾಗಿ ಮತ್ತೊಂದು ಸಲ ಆಡುವುದನ್ನು ಬಿಟ್ಟು.

ನಾನು ಬಹುವಾಗಿ ಮೆಚ್ಚುವ ಕ್ರಿಕೆಟಿಗರೆಂದರೆ ಅನಿಲ್ ಕುಂಬ್ಳೆ ಮತ್ತು ಗಣೇಶ್. ಅನಿಲ್ ಈಗಾಗಲೇ ಒಂದು ದಿನದ ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದಾರೆ. ಈಗ ಗಣೇಶ ಕೂಡಾ ನಿವೃತ್ತಿ ಹೊಂದಿ ರಾಜಕೀಯ ಸೇರಲು ಹೊರಟಿದ್ದಾರೆ. ಜೂನ್ ೨೭, ೨೦೦೭ರಂದು ಅವರು ಜಾತ್ಯಾತೀತ ಜನತಾದಳ ಪಕ್ಷವನ್ನು ಸೇರಲಿದ್ದಾರೆ. ಇದುವರೆಗೆ ಭ್ರಷ್ಟನಾಗದೆ ಸರಳ ಜೀವನವನ್ನು ವಿನಯದಿಂದ ಸಾಗಿಸಿದ್ದ ಗಣೇಶ ಈ ರಾಜಕೀಯವೆಂಬ ಕೂಪಕ್ಕೆ ಬಿದ್ದು ಬದಲಾಗದೆ ಇದುವರೆಗಿದ್ದ ಗಣೇಶನಾಗಿಯೇ ಇರಲಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಸಿಬ್ಬಂದಿಗಳು 'ಏನ್ ಗುರು?' ಎಂದೇ ಕರೆಯುವಷ್ಟು ಸರಳತೆಯಿರಲಿ ಎಂಬ ಶುಭಹಾರೈಕೆ.

3 ಕಾಮೆಂಟ್‌ಗಳು:

Srik ಹೇಳಿದರು...

Wow! So much of information...good to know the inside stories of the local and international 'kiriks'!

Hope Ganesh forgets all these things and starts afresh as a stain-less politician, and does good to the society as well.

ಪ್ರವೀಣ್ ಮಾವಿನಸರ ಹೇಳಿದರು...

ಗಣೇಶ್ ಬಗ್ಗೆ ಬಹಳಷ್ಟು ನಿಮ್ಮ ಲೇಖನದಿಂದ ತಿಳಿದುಕೊಂಡೆ. ಆದರೆ, ಅವರು ರಾಜಕೀಯ ಸೇರಿದ್ದು ಎಳ್ಳಷ್ಟು ಇಷ್ಟ ಆಗಲಿಲ್ಲ.

ಸುಧೀರ್ ಹೇಳಿದರು...

ಕನ್ನಡದ ಕ್ರಿಕೆಟಿಗ ಗಣೇಶ್ ಮೊಹಮ್ಮದ್ ಅಜರುದ್ದೀನ್ ಜೊತೆ ರಾಜಕೀಯ ಸೇರಿದ್ದು ಪೇಪರಲ್ಲಿ ಓದಿ ಬೇಸರವಾಯಿತು. ಗಣೇಶ್ ತನ್ನ ರಾಜಕೀಯ ಶಕ್ತಿಯನ್ನು ಬಳಸಿಯಾದರು
ಕರ್ನಾಟಕ ಕ್ರಿಕೆಟ್ ಅಸೋಸಿಯತ್ ನ ಪ್ರಮುಖರಾಗಿ ಕರ್ನಾಟಕದ ಕ್ರಿಕೆಟ್ ಗೆ ದುಡಿಯಲಿ .