ಬುಧವಾರ, ಏಪ್ರಿಲ್ 18, 2007

ಮಡೆನೂರು ಮಾಡಿದ ಮೋಡಿ - ಭಾಗ ೨


ಅಣೆಕಟ್ಟು 114ಅಡಿ ಎತ್ತರ ಮತ್ತು 3870ಅಡಿ ಅಗಲವಿದ್ದು 11 ಸೈಫನ್ ಗಳನ್ನು ಹೊಂದಿದೆ. ಸೈಫನ್ ಎಂದರೆ ವೃತ್ತಾಕಾರದ ನೀರಿನ ಟ್ಯಾಂಕ್ ಇದ್ದಂಗೆ. ಪ್ರತಿ ಸೈಫನ್ 18ಅಡಿ ಅಗಲ ಮತ್ತು 58ಅಡಿ ಎತ್ತರವಿದ್ದು, 12 ಕಂಬಗಳನ್ನು ಆಧಾರವಾಗಿ ಹೊಂದಿದೆಯಲ್ಲದೇ ಮೇಲೆ 3-4 ದೊಡ್ಡ ರಂಧ್ರಗಳನ್ನೂ ಹೊಂದಿದೆ. ಅಣೆಕಟ್ಟು ತುಂಬಿದಾಗ ನೀರು ತಂತಾನೆ ಈ ರಂಧ್ರಗಳಿಂದ ಹೊರಬೀಳುತ್ತಿತ್ತು. ಸೈಫನ್ ಗಳನ್ನು ಅಣೆಕಟ್ಟಿಗೆ ಪ್ಯಾರಲಲ್ ಆಗಿ ನಿರ್ಮಿಸಲಾಗಿದೆ. ಅಣೆಕಟ್ಟಿನಿಂದ ಪ್ರತಿ ಸೈಫನ್ ಮೇಲೆ ತೆರಳಲು ಅವಕಾಶ ಮಾಡಿಕೊಡಲಾಗಿದೆ. ಹಾಗೇನೇ ಒಂದು ಸೈಫನ್ ಮೇಲಿಂದ ಮತ್ತೊಂದಕ್ಕೆ ತೆರಳಲೂ ಸಣ್ಣ ಕಾಂಕ್ರೀಟ್ ಸೇತುವೆ ಮಾಡಲಾಗಿದೆ. ಈ ಸೈಫನ್ ಗಳ ಮೇಲೆ ಎಚ್ಚರಿಕೆಯಿಂದ ನಡೆದಾಡಬೆಕು. ಅವುಗಳ ಮೇಲಿರುವ ರಂಧ್ರಗಳು ಮನುಷ್ಯನೊಬ್ಬ ಬೀಳುವಷ್ಟು ದೊಡ್ಡದಾಗಿವೆ ಮತ್ತು ಒಳಗೆ ನೀರಿರುತ್ತದೆಯಲ್ಲದೆ ಕತ್ತಲ ಹೊರತು ಬೇರೇನೂ ಕಾಣದು. ಅಣೆಕಟ್ಟಿನಿಂದ ಸುಮಾರು 40 ಮೆಟ್ಟಿಲುಗಳನ್ನಿಳಿದು ಸೈಫನ್ ಗಳ ಬುಡಕ್ಕೆ ಬಂದು ಅವುಗಳ ಚೆಲುವನ್ನು ವೀಕ್ಷಿಸಬಹುದು.

ನಂತರ ಬರುವುದು 3 ದೈತ್ಯಗಾತ್ರದ ಕ್ರೆಸ್ಟ್ ಗೇಟುಗಳು. ಇವುಗಳಿಗೆ ಬಳಿದ ಕಪ್ಪು ಬಣ್ಣದಿಂದ ಅವು ಭಯಾನಕವಾಗಿ ಕಾಣುತ್ತಿದ್ದವು. ಕ್ರೆಸ್ಟ್ ಗೇಟುಗಳನ್ನು ಇಷ್ಟು ಸನಿಹದಿಂದ ಎಂದೂ ವೀಕ್ಷಿಸಿರಲಿಲ್ಲ. ಮುರೂ ಕ್ರೆಸ್ಟ್ ಗೇಟುಗಳ ತಳದಲ್ಲಿ ನೀರಿನಲ್ಲಿ ಅರ್ಧ ಮುಳುಗಿದ್ದ ದೈತ್ಯಗಾತ್ರದ ಸಲಕರಣೆಗಳು ಮತ್ತಿನ್ನೇನೋ ಮಷೀನುಗಳು. ಗಾತ್ರದ ಅಗಾಧತೆಯೇ ದಂಗುಬಡಿಸಿತು. ಸೈಫನ್ ಗಳಂತೆಯೇ ಈ ಕ್ರೆಸ್ಟ್ ಗೇಟುಗಳು ಕೂಡಾ ಮೃತ್ಯುಕೂಪಗಳೇ.
ಅಣೆಕಟ್ಟಿನಿಂದ ಆರೇಳು ಮೆಟ್ಟಿಲುಗಳನ್ನಿಳಿದರೆ ಅಲ್ಲೊಂದು 2ಅಡಿ ಅಗಲದ ಕಬ್ಬಿಣದ ಹಲಗೆ. ಈ ಹಲಗೆ ಮುರೂ ಕ್ರೆಸ್ಟ್ ಗೇಟುಗಳ ಉದ್ದಕ್ಕೆ ಹಾದುಹೋಗಿದೆ. ಇದರ ಮೇಲೆ ನಡೆದು, ಕ್ರೆಸ್ಟ್ ಗೇಟುಗಳನ್ನು ಮತ್ತಷ್ಟು ಸನಿಹದಿಂದ ವೀಕ್ಷಿಸಿ ಮತ್ತೊಂದು ಬದಿಯಿಂದ ಅಣೆಕಟ್ಟಿನ ಮೇಲೆ ಬರಬಹುದು. ಅಲ್ಲಲ್ಲಿ ಸಸ್ಯ ಬೆಳೆದು ಅಲ್ಲಲ್ಲಿ ತುಕ್ಕು ಹಿಡಿದಿದ್ದರಿಂದ ಈ ಕಬ್ಬಿಣದ ಹಲಗೆ ದೃಢವಾಗಿದೆ ಎಂದು ಹೇಳಲು ಸಾಧ್ಯವಿರಲಿಲ್ಲವಾದ್ದರಿಂದ ಯಾರೂ ಅದರ ಮೇಲೆ ತೆರಳುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಎಲ್ಲರೂ ಅಣೆಕಟ್ಟಿನ ಸೇತುವೆಯಿಂದಲೇ ಈ ಗೇಟುಗಳನ್ನು ವೀಕ್ಷಿಸುತ್ತಿದರು. ನಾನು ಮತ್ತು ನಮ್ಮೊಂದಿಗೆ ಬಂದಿದ್ದ ಬೈಕ್ ಯುವಕರು ಅಲ್ಲಿ ನಿಂತು ಮೀನಮೇಷ ಎಣಿಸುತ್ತಿರುವಾಗ, ಪ್ರಶಾಂತ್ ಧೈರ್ಯ ಮಾಡಿ ಆ ಹಲಗೆಯ ಮೇಲೆ ಹೆಜ್ಜೆ ಇಟ್ಟೇಬಿಟ್ಟ! ಕನಿಷ್ಟವೆಂದರೆ ಸುಮಾರು 35 ಜನರು ಈಗ ಬಾಯಿ 'ಆಂ' ಎಂದು ತೆರೆದು ಪ್ರಶಾಂತನನ್ನೇ ನೋಡುತ್ತಿದ್ದರು. ಪ್ರತಿ ಹೆಜ್ಜೆಯಲ್ಲೂ ಅನಾಹುತ ಸಂಭವಿಸುವ ಚಾನ್ಸ್ ಮತ್ತು ಕೆಳಗೆ ಬಿದ್ದರೆ ಗಾನ್ ಕೇಸ್.

ನೋಡ್ತಾ ನೋಡ್ತಾ ಪ್ರಶಾಂತ್ ಮತ್ತೊಂದು ಬದಿಯಿಂದ ಅಣೆಕಟ್ಟು ಮೇಲೆ ಬಂದ್ಬಿಟ್ಟ. ಈಗ ಧೈರ್ಯ ಬಂದಂತಾಗಿ ಬೈಕ್ ಯುವಕರು ಮತ್ತು ನಾನು ನಿಧಾನವಾಗಿ ಈ ಹಲಗೆಯ ಮೇಲೆ ತೆರಳಿ ಕ್ರೆಸ್ಟ್ ಗೇಟುಗಳ ಅಂದವನ್ನು ಅಸ್ವಾದಿಸಿ ಬಂದೆವು. ಅಣೆಕಟ್ಟಿನ ಮೇಲೆ ಬಂದಾಗ ಪ್ರಶಾಂತ್ ಎಲ್ಲೂ ಕಾಣಿಸುತ್ತಿರಲಿಲ್ಲ. ಕೆಳಗೆ ನೋಡಿದರೆ ನಿಧಾನವಾಗಿ ಮತ್ತೆ ಆ ಹಲಗೆಯ ಮೇಲೆ ಕ್ರೆಸ್ಟ್ ಗೇಟುಗಳನ್ನು ನೋಡುತ್ತ ಬರುತ್ತಿದ್ದ! 'ಆಗ ತೆರಳಿದ್ದಾಗ ಹೆದರಿದ್ದರಿಂದ, ಧ್ಯಾನವೆಲ್ಲಾ ಆ ಕಡೆ ಸೇಫಾಗಿ ತಲುಪಿದ್ದರೆ ಸಾಕು ಎಂಬುದರ ಮೇಲಿತ್ತು, ಆದ್ದರಿಂದ ಮತ್ತೊಂದು ಸಲ ಬಂದೆ' ಎಂಬ ಸಮಜಾಯಿಷಿ.

ಹಾಗೆ ಸ್ವಲ್ಪ ಮುಂದೆ ನಡೆದು ಅಣೆಕಟ್ಟಿನ ಮತ್ತೊಂದು ತುದಿ ತಲುಪಿದೆವು. ಈ ಬದಿಯಿಂದಲೂ ಬಹಳಷ್ಟು ಜನರು ನೋಡಲು ಬಂದಿದ್ದರು. ಯಾವ ದಾರಿಯಿಂದ ಬಂದಿರಬಹುದು ಎಂದು ಒಂದು ಕ್ಷಣ ಯೋಚಿಸಿ, ತಡವಾಗುತ್ತಿದ್ದರಿಂದ ಬೇಗನೇ ಹೆಜ್ಜೆ ಹಾಕಿ ಈ ಕಡೆ ಬಂದೆವು. ಅಲ್ಲೊಂದು ಒಣಗಿದ್ದ ನಗ್ನ ಮರ ಮತ್ತದರ ಬುಡದಲ್ಲಿ ಸಣ್ಣ ದೇವಾಲಯದ ಕುರುಹು. ಹಿನ್ನೀರಿನಲ್ಲಿ ಮುಖ ತೊಳೆದು ಬೈಕಿನತ್ತ ನಡೆದೆವು. ಸಮಯ 6.15 ಆಗಿತ್ತು.

ಅಲ್ಲಿ ನೋಡಲು ಬಹಳ ಇದ್ದಿದ್ದರಿಂದ ನನಗೆ ಛಾಯಾಚಿತ್ರಗಳನ್ನು ತೆಗೆಯಲು ಸಮಯವೇ ಇರಲಿಲ್ಲ. ಆಗ ನನ್ನಲ್ಲಿದ್ದ ಎಸ್.ಎಲ್.ಆರ್ ಕ್ಯಾಮರದಿಂದ ಫೋಟೊ ತೆಗೆಯಲು ಬಹಳ ಪರದಾಡುತ್ತಿದ್ದೆ. ಒಂದು ಫೋಟೊ ತೆಗೆಯಲೂ ಬಹಳ ಸಮಯ ತಾಗುತ್ತಿತು. ಆದ್ದರಿಂದ ನೋಡಬೇಕಾದಷ್ಟನ್ನು ಮೊದಲು ನೋಡಿ ಮುಗಿಸಿದಾಗ ಕತ್ತಲಾಗುತ್ತಿತ್ತು. ಇನ್ನು ಸ್ವಲ್ಪ ಸಮಯವಿದ್ದಿದ್ದರೆ ಇನ್ನಷ್ಟು ಫೋಟೊ ತೆಗೆಯಬಹುದಿತ್ತಲ್ಲಾ ಎಂದು ಯೋಚಿಸುವಾಗ ಕ್ಷಿತಿಜ ನೇಸರ ಧಾಮದಲ್ಲಿ ಕಳೆದ ಒಂದು ತಾಸು ಬಹಳ ಚುಚ್ಚುತ್ತದೆ. ಮಡೆನೂರಿನ ಅಂದವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯಲಾಗಲಿಲ್ಲವಲ್ಲ ಎಂಬ ನಿರಾಸೆ ಈಗಲೂ ಇದೆ.

ಅರಣ್ಯ ಇಲಾಖೆ ದ್ವಾರದಿಂದ ಹೊರಬಂದು ಸಾಗರದತ್ತ ಸ್ವಲ್ಪ ದಾರಿ ಕ್ರಮಿಸಿದಾಗ ಬಲಕ್ಕೊಂದು ಮಾರ್ಗ ಮತ್ತು ಅಲ್ಲಿ ಬರೆದಿತ್ತು 'ಕುಂದಾಪುರ, ಕೊಲ್ಲೂರು' ಎಂದು. ಆಶ್ಚರ್ಯದಿಂದ ಅಲ್ಲಿರುವವರನ್ನು ಕೇಳಿದಾಗ ಆ ದಾರಿ ಕೊಲ್ಲೂರಿಗೆ ತೆರಳುತ್ತದೆ ಎಂದಾಗ ಬಹಳ ಸಂತೋಷವಾಯಿತು. ಆದರೆ 'ಸಾರ್, ನೀರು ಕಡಿಮೆ ಇದೆ. ಲಾಂಚ್ ಹೋಗ್ತಾ ಇಲ್ಲ' ಎಂದಾಗ ಮತ್ತೆ ನಿರಾಸೆ. ಈ ದಾರಿಯಲ್ಲಿ ಉಡುಪಿಗೆ ಕೆವಲ 135ಕಿಮಿ ಇತ್ತು.

ನಂತರ ಸ್ವಲ್ಪ ಮುಂದೆ ಒಂದು 'ಟಿ' ಜಂಕ್ಷನ್ ಇರುವಲ್ಲಿ (ಈ ಸ್ಥಳದ ಹೆಸರು ನೆನಪಿಲ್ಲ) ಇಂಧನ ಕೇಳಲು ನಿಂತೆವು. ಅಲ್ಲಿ ಸಿಕ್ಕಿದ ಸೀಮೆ ಎಣ್ಣೆ ವಾಸನೆಯಿದ್ದ ಪೆಟ್ರೋಲ್ ನ್ನು ಬೈಕಿಗೆ ಕುಡಿಸಿ ಬರುವಷ್ಟರಲ್ಲಿ ಭಲೇ ಮಾತುಗಾರನಾಗಿರುವ ಪ್ರಶಾಂತ್ ನಾಲ್ಕಾರು ಹಳ್ಳಿಗರಿಗೆ ನಮ್ಮ ಪ್ರಯಾಣ ವಿವರಿಸುತ್ತಿದ್ದ. ಅವರಲ್ಲೊಬ್ಬ ನನ್ನಲ್ಲಿ 'ಸಾರ್ ಕೋಗಾರು ಘಾಟಿಯಲ್ಲಿ ತೆರಳಬೇಡಿ. ರಾತ್ರಿ 8ರ ಬಳಿಕ ಆ ದಾರಿ ಸರಿಯಲ್ಲ. ನೀವು ಈ ದಾರಿಯಲ್ಲಿ (ಟಿ ಜಂಕ್ಷನ್ ಕಡೆ ತೋರಿಸುತ್ತಾ) ತೆರಳಿದರೆ ಹೊಸನಗರ ಮಾರ್ಗವಾಗಿ ಹುಲಿಕಲ್ ಘಾಟಿ ಇಳಿದು ಉಡುಪಿ ಸೇರಬಹುದು. ಸುರಕ್ಷಿತ ದಾರಿ' ಎಂದು ಸಲಹೆ ಕೊಟ್ಟ. ನನಗೂ ಅದು ಸೂಕ್ತವೆನಿಸಿತು. ಈಗ ನಮ್ಮ ಸುತ್ತಲೂ ಸುಮಾರು 15 ಹಳ್ಳಿಗರು ಇದ್ದರು. ಅವರಲ್ಲೊಬ್ಬ 'ಕತ್ಲಲ್ಲಿ ಎಲ್ಲೋಗ್ತೀರಾ ಸಾರ್, ಇಲ್ಲೇ ಉಳ್ಕಂಬಿಡಿ. ನಾಳೆ ಬೆಳಗ್ಗೆ ಹೋಗುವಿರಂತೆ' ಎಂದಾಗ, 'ಬೆಳಗ್ಗೆ 9ಕ್ಕೆ ಮಂಗಳೂರಿಗೆ ಬಾ, ಕಾಯುತ್ತಿರುತ್ತೇನೆ' ಎಂದಿದ್ದ ಬಾಸ್ ಮುಖ ನೆನಪಾಗಿ, ನಯವಾಗಿ ನಿರಾಕರಿಸಬೇಕಾಯಿತು.

7.20ಕ್ಕೆ ಹಳ್ಳಿಗರಿಗೆ ವಿದಾಯ ಹೇಳಿ ಅವರು ತೋರಿಸಿದ ದಾರಿಯಲ್ಲಿ 19ಕಿಮಿ ದೂರವಿದ್ದ ಬಟ್ಟೆಮಲ್ಲಪ್ಪ ತಲುಪಿ, ನಂತರ ಸುಮಾರು 20ಕಿಮಿ ದೂರವಿದ್ದ ಹೊಸನಗರ ತಲುಪಿದೆವು. ಸಮಯ 8.30 ಆಗಿತ್ತು. ಹೊಸನಗರದಲ್ಲಿ ನನ್ನ ಸಂಬಂಧಿ ಮಂಜುನಾಥ ವಾಸಿಸುತ್ತಾನಾದರೂ, ಎಂದೂ ಇಲ್ಲಿಗೆ ಬಂದಿರಲಿಲ್ಲ. ಮಂಜುನಾಥನ ವಿಳಾಸ ಗೊತ್ತಿರಲಿಲ್ಲ ಮತ್ತು ಆತನ ಮನೆಯಲ್ಲಿ ದೂರವಾಣಿಯೂ ಇರಲಿಲ್ಲ ಆದರೆ ಆತ 6.5ಅಡಿ ಉದ್ದ ಇದ್ದಾನೆ. ಅಲ್ಲೊಂದು ಫೋನ್ ಬೂತ್ ನಲ್ಲಿ 'ರಾತ್ರಿ ಬರಲು ತಡವಾಗುತ್ತೆ' ಎಂದು ಮನೆಗೆ ಫೋನಾಯಿಸಿದ ಬಳಿಕ ಅಲ್ಲಿನ ಹುಡುಗನಲ್ಲಿ ಮಂಜುನಾಥನ ಬಗ್ಗೆ ಕೇಳಿದರೆ, ಆತ 'ಓ ಅವ್ರಾ, ಉದ್ಕಿದ್ದಾರಲ್ಲ? ಅವ್ರೇ ತಾನೆ?, ನೇರಕ್ಕೆ ಹೋಗಿ, ಸರ್ಕಲ್ ನಂತರ ಬಲಕ್ಕೆ ನಾಲ್ಕನೇ ಮನೆ' ಎಂದು ಕರಾರುವಕ್ಕಾಗಿ ಹೇಳ್ಬಿಟ್ಟ. ಉದ್ದ ಇದ್ದರೆ ಏನೆಲ್ಲಾ ಪ್ರಯೋಜನ ಎಂದು ಯೋಚಿಸುತ್ತಾ ಮಂಜುನಾಥನ ಮನೆಗೆ ಬಂದರೆ ಆ ಆಸಾಮಿ ಅಲ್ಲಿರಲಿಲ್ಲ. ಆದರೇನು? ತಂಗಿಯರು ಬಹಳ ಸಂತೋಷದಿಂದ ಬರಮಾಡಿ ಭರ್ಜರಿ ಊಟವನ್ನು ಬಡಿಸಿ, ಉಳಿದುಕೊಳ್ಳಲು ಒತ್ತಾಯ ಮಾಡತೊಡಗಿದಾಗ ಮತ್ತೆ ಆ ಬಾಸ್ ಮುಖ ನೆನಪಾಗಿ ಹೊರಡಲೇಬೇಕಾಯಿತು.

9.30ಕ್ಕೆ ಮತ್ತೆ ಯಮಾಹ ಸ್ಟಾರ್ಟ್. ನಗರ, ಮಾಸ್ತಿಕಟ್ಟೆ ದಾಟಿ ಹುಲಿಕಲ್ ಘಾಟಿಯ ದೇವಿಗೆ ನಮಸ್ಕರಿಸಿ, ಕಗ್ಗತ್ತಲ ಘಾಟಿಯ ರಸ್ತೆಯನ್ನಿಳಿದು ಹೊಸಂಗಡಿ, ಸಿದ್ಧಾಪುರ ಮಾರ್ಗವಾಗಿ ಶಂಕರನಾರಾಯಣ ತಲುಪಿದಾಗ ಆ ವರ್ಷದ ಮೊದಲ ಮಳೆ ಬಿರುಸಾಗಿ ಬೀಳಲಾರಂಭಿಸಿತು. ಮಳೆ ನಿಂತ ನಂತರ ಮತ್ತೆ ಹೊರಟೆವು. ಮುಂದೆ ಮತ್ತೆ ನಾಲ್ಕು ಕಡೆ ಮಳೆಯಿಂದ ಅಲ್ಲಲ್ಲಿ ನಿಲ್ಲಬೇಕಾಯಿತು. ಹಾಲಾಡಿ ದಾಟಿ ಬಿದ್ಕಲ್ ಕಟ್ಟೆ ತಲುಪಿದಾಗ ಅಲ್ಲೊಂದು ಒಂಟಿ ಆಟೋ. ಅಚ್ಚರಿಯಿಂದ ನಮ್ಮನ್ನು ನೋಡುತ್ತಾ ಆ ಆಟೋ ಚಾಲಕ ಉಡುಪಿಗೆ ದಾರಿತೋರಿಸಿದ. ಬಾರ್ಕೂರು, ಬ್ರಹ್ಮಾವರ ಮುಲಕ ಉಡುಪಿಯಲ್ಲಿ ಪ್ರಶಾಂತನನ್ನು ಮನೆಗೆ ಬಿಟ್ಟು 462ಕಿಮಿ ಪ್ರಯಾಣದ ಬಳಿಕ ಬೆಳಗ್ಗಿನ ಜಾವ 2.15ಕ್ಕೆ ಮನೆ ತಲುಪಿದಾಗ ಹೊರಗೆ ಕಾಯುತ್ತ ಕುಳಿತಿದ್ದಳು ಅಮ್ಮ.


ಮಡೆನೂರಿನಿಂದ ಹಿಂತಿರುಗುವಾಗ ನೋಡಿದ್ದ 'ಕುಂದಾಪುರ, ಕೊಲ್ಲೂರು' ಮಾರ್ಗಸೂಚಿಯನ್ನು ಹಿಂಬಾಲಿಸಿ ಜನವರಿ 2004ರಂದು ಕೊಲ್ಲೂರು ದಾಟಿ ನಾಗೋಡಿ, ಮರಕುಟಕ, ಸುಳ್ಳಳ್ಳಿ ಕ್ರಾಸ್, ಬ್ಯಾಕೋಡು, ತುಮರಿ ಮಾರ್ಗವಾಗಿ ಕಳಸವಳ್ಳಿಗೆ ತೆರಳಿದೆ. ಇಲ್ಲಿತ್ತು ಲಾಂಚ್ (ಬಾರ್ಜ್). ಈ ಕಡೆ ಕಳಸವಳ್ಳಿಯಿದ್ದರೆ, ಹಿನ್ನೀರಿನ ಆ ಕಡೆ ಇತ್ತು ಹೊಳೆಬಾಗಿಲು. ಬಲಕ್ಕೆ ಅನತಿ ದೂರದಲ್ಲಿತ್ತು ಸೈಫನ್ ಗಳ ಮೇಲ್ಭಾಗವಷ್ಟೇ ನೀರಿನಿಂದ ಹೊರಗೆ ಕಾಣುತ್ತಿದ್ದ ಮಡೆನೂರು ಅಣೆಕಟ್ಟು! ನಾವಲ್ಲಿಗೆ ತೆರಳಿದ್ದಾಗ ಆಣೆಕಟ್ಟಿನ ಮತ್ತೊಂದು ಬದಿಯಿಂದಲೂ ಜನರು ನೋಡಲು ಆಗಮಿಸಿದ್ದನ್ನು ಗಮನಿಸಿದ್ದ ನಾನು, ಕಳಸವಳ್ಳಿಯ ಭಟ್ರ ಹೋಟೇಲಿನಲ್ಲಿ ಆ ಬಗ್ಗೆ ವಿಚಾರಿಸಿದೆ. ಅವರ ಪ್ರಕಾರ ತುಮರಿಯಿಂದ ಕಳಸವಳ್ಳಿಗೆ ತಿರುವು ತಗೊಳ್ಳದೆ ನೇರವಾಗಿ ವಳಗೆರೆ ಮುಖಾಂತರ ತೆರಳಿದರೆ ಆಣೆಕಟ್ಟು ಇರುವಲ್ಲಿಗೆ 10ಕಿಮಿ ದೂರ! ಅಂದರೆ ಉಡುಪಿಯಿಂದ ಅಣೆಕಟ್ಟು 133ಕಿಮಿ ದೂರ ಇದ್ದರೆ, ಸರಿಯಾದ ದಾರಿ ತಿಳಿಯದ ನಾನು 240ಕಿಮಿ ದೂರದ ಸುತ್ತುಬಳಸಿನ ದಾರಿಯಲ್ಲಿ ತೆರಳಿದ್ದೆ!ಇನ್ನೊಂದು ಸಲ ಮಡೆನೂರು ಅಣೆಕಟ್ಟನ್ನು ನೋಡಬೇಕು, ಬಹಳಷ್ಟು ಫೋಟೊ ತೆಗೆಯಬೇಕು ಎಂದು ಮೇ 2004 ಮತ್ತು ಮೇ 2005ರಲ್ಲಿ ಮರಳಿ ಕಳಸವಳ್ಳಿಗೆ ತೆರಳಿದ್ದೇನೆ. ಆದರೆ ಅಣೆಕಟ್ಟು ಸಂಪೂರ್ಣವಾಗಿ ನೀರಿನಿಂದ ಮೇಲೆದ್ದಿರಲಿಲ್ಲ. 2006ರಂದು ಮಳೆ ಎಪ್ರಿಲ್ ತಿಂಗಳಲ್ಲೇ ಬಂದಿದ್ದರಿಂದ ಅಣೆಕಟ್ಟು ಕಾಣುವ ಚಾನ್ಸೇ ಇರಲಿಲ್ಲ. ಈ ವರ್ಷ ಮೇ ತಿಂಗಳಲ್ಲಿ ಮಳೆ ಬರದಿದ್ದರೆ ಮತ್ತೆ ಕಳಸವಳ್ಳಿಯೆಡೆ ಓಡಲಿದೆ ನನ್ನ ಯಮಾಹ.

ಮಾಹಿತಿ: ಗಣಪತಿ ಶಿರಳಗಿ ಹಾಗೂ ಪ್ರಮೋದ್ ಮೆಳ್ಳೆಗಟ್ಟಿ

10 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

yavaga hogteera? eegle heLi.. :)nodbeku nanooo. madenoorina mOdiyashte chandada baraha. nammamma heLuvudannashte keLidde.

ಅನಾಮಧೇಯ ಹೇಳಿದರು...

ರಾಜೆಶರಿಗೆ ನಮಸ್ಕಾರ. ಶ್ರೀಕಾಂತ್ ನಿಮ್ಮ blogನ link ಕಳುಹಿಸಿ ನೋಡು, ಕನ್ನಡದಲ್ಲೊಂದು travel blog ಅಂದ. ನಿಮ್ಮ ಲೇಖನ ಶೈಲಿಬಹಳ ಸೊಗಸಾಗಿದೆ. ನೀವು ಎಲ್ಲಿ ಹೇಳಿರುವ ಹೆಚ್ಚಿನ ಸ್ಥಳಗಳನ್ನೂ ನೋಡಲಾಗಿಲ್ಲ ನನಗೆ. ಮಡೆನೂರಿಗೆ ಯಾವಾಗ ಹೋಗುತ್ತಿದ್ದೀರ? ಮೊದಲೇ ತಿಳಿಸಿ, ನಾನು & Srik ಇಬ್ಬರೂ ಬರುತ್ತೇವೆ :)

ಅನಾಮಧೇಯ ಹೇಳಿದರು...

ನಿಮ್ಮ ಹೆಸರು ತಪ್ಪಾಗಿ ಟೈಪಿಸಿದಕ್ಕಾಗಿ ಕ್ಷಮೆ ಇರಲಿ.

ರಾಜೇಶ್ ನಾಯ್ಕ ಹೇಳಿದರು...

ಸಿಂಧು ಮತ್ತು ಪ್ರಶಾಂತ್,

ಮೆಚ್ಚುಗೆಗೆ ಧನ್ಯವಾದಗಳು.

ನೀವು ಬಂದಾಗ ಅಣೆಕಟ್ಟು ಇನ್ನೂ ಪೂರ್ತಿಯಾಗಿ ಕಾಣದಿದ್ದರೆ ಏನು ಮಾಡುವಿರಿ? ಅಷ್ಟು ದೂರದಿಂದ ಬಂದಿದ್ದು ವ್ಯರ್ಥವಾಗುವುದಿಲ್ಲವೇ? ಮೇ ತಿಂಗಳಲ್ಲಿ ಮಳೆ ಬರದಿದ್ದರೆ ನಾನು ಕಳಸವಳ್ಳಿಗೆ ತೆರಳಿ ನೋಡುವೆ. ಅಣೆಕಟ್ಟು ಕಾಣುವಷ್ಟು ನೀರು ಕಡಿಮೆಯಾಗಿದ್ದಲ್ಲಿ ನಿಮಗೆ ತಿಳಿಸುವೆ. ಕೂಡಲೇ ಬಂದು ನೋಡುವಿರಂತೆ.

ರಾಜೇಶ್ ನಾಯ್ಕ ಹೇಳಿದರು...

ಸಿಂಧು ಮತ್ತು ಪ್ರಶಾಂತ್,

ಏನಾದರೂ ಆಗಲಿ, ಅಣೆಕಟ್ಟು ಸ್ವಲ್ಪ ಕಾಣಲಿ ಅಥವಾ ಪೂರ್ತಿ ಕಾಣಲಿ, ಬಂದೇ ಬರುತ್ತೇವೆ ಎಂದಾದ್ರೆ ತಿಳಿಸಿ, ಒಟ್ಟಿಗೆ ಹೋಗೋಣ.

ಅನಾಮಧೇಯ ಹೇಳಿದರು...

ರಾಜೇಶ್,

ಮಡನೂರಿನ ಪ್ರವಾಸ ಕಥನ ಚೆನ್ನಾಗಿದೆ.
ನನ್ನೂರು ತುಮರಿ ಹತ್ತಿರ (ವಳಗೆರೆಯಿಂದ ೪ ಕಿ.ಮಿ), ಪ್ರತೀ ವರ್ಷ ನಾವು ಮಡೆನೂರಿಗೆ ನಡೆದುಕೊಂಡು ಹೋಗಿ, ಅಲ್ಲೆ ಹೊಳೆ ಊಟ ಮಾಡಿ, ಸಂಜೆ ತನಕ ಅಲ್ಲಿದ್ದು ಬರ್ತೇವೆ. ಬಹಳ ಸುಂದರ ಸ್ಥಳ.

ವಳಗೆರೆಯಿಂದ ಹೋಗುವುದು ಸ್ವಲ್ಪ ಕಷ್ಟ. ದಾರಿ ಸರಿಯಾಗಿಲ್ಲ ಮತ್ತು ಅಲ್ಲಿ ಯಾವ ಮನೆಗಳೂ ಇಲ್ಲ. ಕಾಡು ಕೋಣದ ಕಾಟ ಬೇರೆ. ಅರ್ದ ದಾರಿಯಲ್ಲಿ ಬೈಕ್ ಹಾಳಾದರೆ ದೇವರೆ ಕಾಪಾಡಬೇಕು. ಅದಕ್ಕಿಂತ ನೀವು ಹೊಳೇಬಾಗಿಲನ್ನು ದಾಟಿ (ಲಾಂಚ್) ನಂತರ ಮಡನೂರಿಗೆ ಹೋಗಿ.

ಏನಾದ್ರು ಮಾಹಿತಿ ಬೇಕಾದರೆ ನನ್ನನ್ನು ಸಂಪರ್ಕಿಸಿ (yajnesh@gmail.com)

Mahantesh ಹೇಳಿದರು...

maDenOru maaDida MoDi lekhana moDI maaDide..

aNekaTTu khanDitaa noDabeku anisita ide....

Shiv ಹೇಳಿದರು...

ರಾಜೇಶ್,

ತುಂಬಾ ಚೆನ್ನಾಗಿದೆ ನಿಮ್ಮ ಮಡೆನೂರು ಪ್ರವಾಸಗಥೆ..
ಸಂತೆ ನಡೆಯುತ್ತಿದ ಸ್ಥಳದ ಬಗ್ಗೆ ನಿಮ್ಮ ವರ್ಣನೆ ಸೊಗಸಾಗಿದೆ.

ನಿಮ್ಮ ಎತ್ತರದ ಸ್ನೇಹಿತನ ಮನೆ ಹುಡುಕಿದ್ದು ..ಹಿಹ್ಹಿಹಿ..

ಹೀಗೆ ಬರಲಿ ನಿಮ್ಮ ಪ್ರವಾಸಗಥೆಗಳು..

ರಾಜೇಶ್ ನಾಯ್ಕ ಹೇಳಿದರು...

ಯಜ್ಙೇಶ್,
ಸಲಹೆಗಳಿಗಾಗಿ ಧನ್ಯವಾದಗಳು. ನೀವು ವಳಗೆರೆ ಮುಖಾಂತರ ತೆರಳುವ ದಾರಿಯ ವರ್ಣನೆ ಮಾಡಿದ ಬಳಿಕ, ಅಲ್ಲಿಂದಲೇ ತೆರಳಬೇಕೆಂಬ ಆಸೆಯುಂಟಾಗಿದೆ. ಆದರೂ ತೆರಳುವ ಮುನ್ನ ನಿಮ್ಮನ್ನು ಸಂಪರ್ಕಿಸುವೆ.

ಮಹಾಂತೇಶ್,
ನೋಡ ಬನ್ನಿ ಮಡೆನೂರು ಅಣೆಕಟ್ಟು, ಮರೆಯಲಾರಿರಿ ಅದರ ಚೆಲುವು.

ಶಿವ್,
ಪ್ರೋತ್ಸಾಹದ ಮಾತುಗಳಿಗಾಗಿ ಧನ್ಯವಾದಗಳು.

ಅನಾಮಧೇಯ ಹೇಳಿದರು...

ರಾಜೇಶ್,

ನಂಗೂ ಮಡೆನೂರು ಅಣೆಕಟ್ಟು ನೋಡಬೇಕು. ಮುಂದಿನ ವಾರ ಹೋಗೋಣವೇ?
ಲೀನಾ