ಸೋಮವಾರ, ಏಪ್ರಿಲ್ 09, 2007

ಹುಲಿ ನೋಡುವ ಹುಚ್ಚು

ಕಳೆದ ತಿಂಗಳು ೩೧ರಂದು ಭಗವತಿ ನಿಸರ್ಗ ಧಾಮದಲ್ಲಿ ರಾತ್ರಿ ಕಳೆದಿದ್ದೆವು. ಹಲವಾರು ಬಾರಿ ಕುದುರೆಮುಖಕ್ಕೆ ತೆರಳಿದರೂ, ಭಗವತಿಗೆ ಇದು ನನ್ನ ಪ್ರಥಮ ಭೇಟಿಯಾಗಿತ್ತು. ನಿಶ್ಯಬ್ದ, ಸುಂದರ ವಾತಾವರಣ ಮತ್ತು ಅಲ್ಲೇ ಹರಿಯುವ ಸದಾ ನೀರಿರುವ ತೊರೆ. ಹುಲಿ ಮತ್ತು ಕಾಡುಕೋಣ (ಇಂಡಿಯನ್ ಗೌರ್) ಇಲ್ಲಿ ಧಾಮದ ಸನಿಹದಲ್ಲೇ ಅಡ್ಡಾಡುತ್ತಿರುತ್ತವೆ ಎಂದು ಕೇಳಿದ್ದೆ. ಮಧ್ಯರಾತ್ರಿಯ ಬಳಿಕ ಒಂಟಿ ಕಾಡುಕೋಣವೊಂದು ಅಡಿಗೆ ಮನೆಯ ಬಳಿ ಬಿದ್ದಿರುವ ತರಕಾರಿ ಚೂರುಗಳನ್ನು ತಿನ್ನಲು ಬರುತ್ತದೆ. ಆದರೆ ಹುಲಿ? ಕಳೆದ ಏಳೆಂಟು ವರ್ಷಗಳಲ್ಲಿ ಹುಲಿಯನ್ನು ಕುದುರೆಮುಖದ ಕಾಡುಗಳಲ್ಲಿ ನೋಡಿದವರು ಆಲ್ಮೋಸ್ಟ್ ಶೂನ್ಯ. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಮಲ್ಲೇಶ್ವರದಲ್ಲಿದ್ದ ಕೆಲವು ಸಾಕು ಜಿಂಕೆಗಳನ್ನು ಧಾಮದ ಸನಿಹ ಕಾಡಿನಲ್ಲಿ ಬಿಡಲಾಗಿದೆ. ನಮಗೆ ಕಾಣಸಿಕ್ಕಿದ್ದು ಈ ಜಿಂಕೆಗಳು ಮಾತ್ರ. ಈಗ ಕುದುರೆಮುಖದಲ್ಲಿನ ಹುಲಿಗಳಿಗೆ ಈ ಜಿಂಕೆಗಳು ಸುಲಭ ಆಹಾರ.

ಮೊನ್ನೆ ಕುರಿಂಜಾಲಿಗೆ ಚಾರಣ ಮಾಡಿ ಹಿಂತಿರುಗಿದ ಬಳಿಕ ನಾನು ಸುಸ್ತಾಗಿ ಒಂದು ಡೇರೆಯಲ್ಲಿ ನಿದ್ರೆ ಮಾಡತೊಡಗಿದರೆ ನಮ್ಮಲ್ಲಿ ಕೆಲವರು ಜಲಕ್ರೀಡೆಯಾಡಲು ತೆರಳಿದರು. ಯಾವಾಗಲು ಸ್ನಾನ ಮಾಡುವಲ್ಲಿ ಕೆಲವು ಅನಾಗರೀಕರು ಕೇಕೆ ಹಾಕಿ ಗಲಾಟೆ ಮಾಡುತ್ತಿದ್ದರಿಂದ, ನಮ್ಮವರು ಧಾಮದ ಮೇಟಿ ರುಕ್ಮಯ್ಯನ ಮಾರ್ಗದರ್ಶನದಲ್ಲಿ ಕಾಡಿನೊಳಗೆ ಸ್ವಲ್ಪ ನಡೆದು ಪ್ರಶಾಂತ ಮತ್ತು ವಿಶಾಲವೆನ್ನಬಹುದಾದ ತೊರೆಯ ಮತ್ತೊಂದು ಭಾಗಕ್ಕೆ ತೆರಳಿದರು. ಅಲ್ಲಿ ಮರವೊಂದರಲ್ಲಿ ಹುಲಿಯು ಪರಚಿದ ಗುರುತು ಮತ್ತು ತನ್ನ 'ಟೆರ್ರಿಟರಿ'ಯನ್ನು ಗುರುತಿಸುವ ಸಲುವಾಗಿ ಅದೇ ಮರದ ಮೇಲೆ ಸ್ವಲ್ಪ ಮುತ್ರ ಚಿಮ್ಮಿಸಿದ ಕುರುಹುಗಳು. ತೊರೆಯ ದಂಡೆಯಲ್ಲಿ ಹುಲಿ ನಡೆದಾಡಿದ ಸಾಕ್ಷಿಗೆ ಪೂರಕವಾಗಿ 'ಪಗ್ ಮಾರ್ಕ್'ಗಳು. ನಂತರ ವಿಷಯ ತಿಳಿದು ಬಹಳ ಬೇಜಾರಾಯಿತು. 'ಮನಿಕ್ಕೊಳ್ಳೊ ಬದ್ಲು, ಜಳ್ಕಾ ಮಾಡ್ದಿದ್ರೂ ಪರ್ವಾಯಿಲ್ಲ, ಜಳ್ಕಾ ಮಾಡೋವಲ್ಲಾದ್ರೂ ಹೋಗ್ಬಹುದಿತ್ತಲ್ಲೇ' ಎಂದು ಪರಿತಪಿಸುತ್ತಿದ್ದೆ.

ಹುಲಿ ಎಂದರೆ ಒಂಥರಾ ರೋಮಾಂಚನ. ಕಾಡಿನಲ್ಲಿ ಹುಲಿ ನೋಡಬೇಕೆಂದು ಬಹಳ ಪ್ರಯತ್ನಪಟ್ಟೆವು. ಇದುವರೆಗೆ ಸಾಧ್ಯವಾಗಿಲ್ಲ. ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ಸುಲಭದಲ್ಲಿ ಹುಲಿ ನೋಡಲು ಸಿಗುತ್ತವೆ. ಮನುಷ್ಯರನ್ನು ಕಂಡು ಅವು ದೊಡ್ಡದಾಗಿ ಆಕಳಿಸುವ ಪರಿ ನೋಡಿದರೆ, ನಮ್ಮನ್ನು ನೋಡಿ ಯಾವ ಮಟ್ಟಕ್ಕೆ ಅವುಗಳಿಗೆ ಬೋರ್ ಆಗಿರಬಹುದು ಎಂದು ಯೋಚಿಸಿಯೇ ನಮ್ಮ 'ಈಗೋ' ಹರ್ಟ್ ಆಗಿಬಿಡುತ್ತೆ. ಆದರೆ ಉಳಿದೆಡೆ ಪರಿಸ್ಥಿತಿ ಭಿನ್ನ. ಇಲ್ಲಿ ಹುಲಿ ಮತ್ತು ಮನುಷ್ಯ ಮುಖಾಮುಖಿಯಾದರೆ ಮನುಷ್ಯ ಓಡುತ್ತಾನೆ ಅಥವಾ ಇಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ನಿಧಾನವಾಗಿ ಹಿಂದೆ ಸರಿಯುತ್ತಾರೆ ಅಥವಾ ಹುಲಿ ದಾಳಿ ಮಾಡುತ್ತದೆ.

ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗ ಹುಲಿಗಳು ಅಲೆದಾಡುವ ಸ್ಥಳ. ರಕ್ಷಿತಾರಣ್ಯವಲ್ಲದೇ ಮನುಷ್ಯ ಮತ್ತು ಹುಲಿ ಇಷ್ಟು ಸಮೀಪ ವಾಸವಿರುವುದು ಅಪರೂಪ. ಹಲವಾರು ಬಾರಿ ಕವಲೇದುರ್ಗಕ್ಕೆ ತೆರಳಿದರೂ ನಮಗೆ ಹುಲಿಯ ದರ್ಶನವಾಗಿಲ್ಲ. ಹೆಜ್ಜೆಯ ಗುರುತು, ಮರ ಪರಚಿದ ಗುರುತು ಇತ್ಯಾದಿ ಕಾಣಸಿಕ್ಕರೂ ಹುಲಿ ಕಾಣಸಿಕ್ಕಿಲ್ಲ. ಅದೊಂದು ಸಲ ಕವಲೇದುರ್ಗದ ಮೇಲಿಂದ ಹಿಂತಿರುಗುವಾಗ ಹುಲಿಯ 'ಪಗ್ ಮಾರ್ಕ್'. ನಾವು ಮೇಲೆ ತೆರಳುವಾಗ ಅದಿರಲಿಲ್ಲ! ಕೇವಲ 30 ನಿಮಿಷಗಳ ಅಂತರದಲ್ಲಿ ಅಲ್ಲೊಂದು ಹುಲಿ ಸುಳಿದಿತ್ತು. ಅಲ್ಲೆಲ್ಲೋ ಕಾಡಿನಿಂದ ನಮ್ಮನ್ನು ಅದೇ ಹುಲಿ ಗಮನಿಸುತ್ತಿರಬಹುದು ಎಂದು ಯೋಚಿಸಿಯೇ ರೋಮಾಂಚನಗೊಂಡೆವು.

ಊರಿನಿಂದ ಕಾಣುವ ಕೋಟೆಯೊಳಗಿರುವ ಬಂಡೆಯೊಂದರ ಮೇಲೆ ಹುಲಿ ಕುಳಿತಿರುವುದನ್ನು ಹಳ್ಳಿಗರು ನೋಡಿದ್ದಾರೆ. ಮೇಟಿಂಗ್ ಸೀಸನ್ ನಲ್ಲಿ ಕಾಣುವ ಸಾಧ್ಯತೆ ಇರಬಹುದು ಎಂದು ಕವಲೇದುರ್ಗಕ್ಕೆ ತೆರಳಿ ಊರಿನ ಅಂಚಿನಲ್ಲಿ ಡೇರೆ ಹಾಕಿ ರಾತ್ರಿಯಿಡೀ ಆ ಬಂಡೆಯನ್ನು ದಿಟ್ಟಿಸುತ್ತಾ ಕುಳಿತರೂ ನೋ ಹುಲಿ. ಮತ್ತೆರಡು ಬಾರಿ, ಮುಂಚೆ ಬೇರೆಯವರಿಗೆ ಹುಲಿ ಕಾಣಸಿಕ್ಕಿದ್ದ ಕೋಟೆಯ ೩ನೇ ಹಂತದೊಳಗೆ ಡೇರೆ ಹಾಕಿ ಕುಳಿತೆವು. ಸ್ಟಿಲ್ ನೋ ಹುಲಿ.

ಅಕ್ಟೊಬರ್ ೨೦೦೫ರಂದು ಇಬ್ಬರು ಆಗಮಿಸಿದ್ದರು ಕವಲೇದುರ್ಗ ನೋಡಲು. ಆಂಗ್ಲ ಭಾಷೆಯಲ್ಲಿ ಹಳ್ಳಿಗರೊಂದಿಗೆ ಮಾತನಾಡುತ್ತಾ ದಾರಿ ಕೇಳಿ ಮಧ್ಯಾಹ್ನ 2ರ ಹೊತ್ತಿಗೆ ಕೋಟೆಯತ್ತ ತೆರಳಿದರು. ಸುಮಾರು 3.30ರ ಹೊತ್ತಿಗೆ ಇಬ್ಬರೂ ಸತ್ತೇವೋ ಕೆಟ್ಟೇವೋ ಎಂಬಂತೆ ಬರೀಗೈಯಲ್ಲಿ ಏದುಸಿರು ಬಿಡುತ್ತಾ ಓಡಿ ಬಂದು ಮನೆಯೊಂದರ ಅಂಗಣದಲ್ಲಿ ಕೋಟೆಯೆಡೆ ಕೈ ತೋರಿಸುತ್ತಾ ಕೂತುಬಿಟ್ಟರು. ಇಬ್ಬರ ಮುಖದಲ್ಲೂ ಪ್ರೇತಕಳೆ. ಸ್ವಲ್ಪ ಸುಧಾರಿಸಿಕೊಂಡ ಬಳಿಕ 'ಟೈಗರ್ ಮ್ಯಾನ್, ಹುಲಿ, ಹುಲಿ' ಎಂದು ಸೊಂಟದ ಮೇಲೆ ಕೈಯಿಟ್ಟು 'ರೆಸ್ಟ್ ಲೆಸ್' ಆಗಿ ಅಚೀಚೆ ನಡೆದಾಡತೊಡಗಿದರು. ಅವರ ಪರಿಸ್ಥಿತಿ ಕಂಡು ಮನೆಯವರಿಗೆ ಮುಸಿ ಮುಸಿ ನಗು. ಕೇಳಿದ ನಮಗೂ ನಗು.

ಆದದ್ದೇನೆಂದರೆ ನಿಧಾನವಾಗಿ, ಕಾಲೆಳೆದುಕೊಂಡು ಕೋಟೆಯ 3ನೇ ಹಂತ ತಲುಪಿದ್ದಾರೆ ಇಬ್ಬರೂ. 3ನೇ ಹಂತಕ್ಕೆ ಕಾಲಿಟ್ಟ ಕೂಡಲೇ ಕಾಣಬರುವುದು ಕಾಶಿ ವಿಶ್ವನಾಥ ದೇವಾಲಯ. ಈ ದೇವಾಲಯದ ಚೆಲುವು ನೋಡುತ್ತಾ ಮೈಮರೆತ ಇಬ್ಬರೂ ಬಲಕ್ಕೆ 100-150 ಅಡಿ ದೂರದಲ್ಲಿರುವ ಜೋಡಿಬಾವಿಗಳ ಬಳಿ ತಮ್ಮನ್ನೇ ದುರುಗುಟ್ಟಿ ನೋಡುತ್ತ ಕುಳಿತ ಹುಲಿಯನ್ನು ನೋಡೇ ಇಲ್ಲ! ಒಂದೈದು ಸೆಕೆಂಡುಗಳ ಬಳಿ ಆ ಹುಲಿ ಕೊಟ್ಟ ಸಣ್ಣಗೆ ಘರ್ಜನೆಯನ್ನು ಕೇಳಿ, ತಮ್ಮ ಬಲಕ್ಕೆ ಕತ್ತು ತಿರುಗಿಸಿದ ಇಬ್ಬರೂ ಯಾವ ಪರಿ ಕಂಗಾಲಾಗಿರಬೇಡ ವ್ಯಾಘ್ರನ ಅಪ್ರತಿಮ ರೂಪವನ್ನು ಕಂಡು! 'ಶಾಕ್ ಆಫ್ ದ ಲೈಫ್' ಹೊಡೆಸಿಕೊಂಡಿರಬೇಕು ಬಡಪಾಯಿಗಳಿಬ್ಬರು. 'ಮೈ ಗಾಡ್' ಅಂದವರೇ ಬ್ಯಾಕ್ ಪ್ಯಾಕು, ನೀರಿನ ಬಾಟ್ಲು, ಕ್ಯಾಪು, ಇಯರ್ ಫೋನು, ಮೋಬೈಲು, ಸನ್ ಗ್ಲಾಸು, ಕ್ಯಾಮರಾ ಇವೆಲ್ಲವನ್ನೂ ಅಲ್ಲಲ್ಲಿ ಬೀಳಿಸುತ್ತಾ ಕೆಳಗೆ ಓಡೋಡಿ ಬಂದಿದ್ದಾರೆ. ಇವರು ಅದೆಷ್ಟು 'ಲಕ್ಕಿ ಟ್ರೆಕ್ಕರ್ಸ್' ಆಗಿರಬೇಡ. ಹುಲಿ ದರ್ಶನ ಕೊಡುವುದು ಸಾಮಾನ್ಯ ವಿಷಯವಲ್ಲ. ನಮಗೆಲ್ಲಿ ಇಂತಹ ಅದೃಷ್ಟ?

ಇದಾದ ೨ ತಿಂಗಳುಗಳ ಬಳಿಕ ಸಾಬಿಗಳಿಬ್ಬರು ಏನಾದರೂ ಪುರಾತನ ವಸ್ತುಗಳು ಸಿಗಬಹುದೋ ಎಂದು ಕೋಟೆ ಮೇಲೆ ಹೊರಟವರು ಅದೆಲ್ಲೋ ಹುಲಿ ಕಂಡು ದಡಬಡಿಸಿ ಕೆಳಗೆ ಓಡಿ ಬಂದಿದ್ದಾರೆ. ಇಂತಹ ಕಳ್ಳ ಸಾಬಿಗಳಿಗೆಲ್ಲ ದರ್ಶನ ಕೊಡುವ ಹುಲಿರಾಯ ನಮಗೆ ಒಂದೇ ಒಂದು ಸಲ, ಕೇವಲ ಒಂದೇ ಕ್ಷಣಕ್ಕಾದರೂ ಕಾಣಬಾರದೇ?

2005 ಜನವರಿಯಲ್ಲಿ ಕುದುರೆಮುಖ ಶೃಂಗದಲ್ಲಿ ಹಾಲ್ಟ್ ಮಾಡಿದ್ದೆವು. ನಾವು ರಾತ್ರಿ ಕ್ಯಾಂಪ್ ಮಾಡುವಲ್ಲಿ ತಲುಪಿದ ಹತ್ತೇ ನಿಮಿಷದಲ್ಲಿ ಮುದಿ ಕಾಡುಕೋಣವೊಂದು ಪ್ರತ್ಯಕ್ಷ. ಹೆದರಿದ ನಾವು ಪ್ಲೇಟು, ತಟ್ಟೆ ಇತ್ಯಾದಿಗಳಿಂದ ಶಬ್ದವೆಬ್ಬಿಸಿ ಅದನ್ನು ಓಡಿಸುವ ಪ್ರಯತ್ನ ಮಾಡಿದರೂ ಸ್ವಲ್ಪ ಸಮಯದ ಬಳಿಕ ಅದು ಮರಳಿ ನಮ್ಮಲ್ಲಿ ಬರುತ್ತಿತ್ತು. ನಂತರ ಅದು ನೇರವಾಗಿ ನಾವು ಕೂತಲ್ಲಿ ಬಂದಾಗ ಎಲ್ಲರೂ ಚೆಲ್ಲಾಪಿಲ್ಲಿ. ನಮ್ಮ ಬ್ಯಾಗ್ ಗಳನ್ನು ಮುಸಿ ನೋಡುತ್ತ ಅದು ಅತ್ತ ಸರಿದು ನಂತರ ನಮ್ಮ ಹಿಂದೆ ಇದ್ದ ಪೊದೆಗಳ ಸಂದಿಯಿಂದ ಮುಖವಷ್ಟೇ ಹೊರಗೆ ಕಾಣುವಂತೆ ನಿಂತುಬಿಟ್ಟಿತು. ಎಲ್ಲರೂ ಅದರ ಮುಂದೆ ನಿಂತು ಪೋಸು ಕೊಟ್ಟು ಫೋಟೊ ಹೊಡೆಸಿಕೊಂಡೆವು. ಅದ್ಯಾಕೋ ವಿಪರೀತ ಫ್ರೆಂಡ್ಲಿ ಇದ್ದಿದ್ದರಿಂದ ನಂತರ ನಾವದನ್ನು ಓಡಿಸುವ ಪ್ರಯತ್ನವನ್ನು ಕೈಬಿಟ್ಟೆವು. ಸುಮಾರು ಒಂದು ತಾಸು ಅಲ್ಲೇ ನಿಂತಿದ್ದು ಮತ್ತೆ ಈಚೆಗೆ ಬಂತು. ಸಣ್ಣ ಮಕ್ಕಳಿಗೆ ಬುದ್ಧಿ ಹೇಳುವಂತೆ ನಮ್ಮ ಲೀಡರ್ ಶ್ರೀ ಅಡಿಗರು ತಮ್ಮದೇ ಆದ ವಿಶಿಷ್ಟ ನೃತ್ಯ ಶೈಲಿಯಲ್ಲಿ ಅದಕ್ಕೆ ಮರಳಿ ಕಾಡಿನೊಳಗೆ ಹೋಗುವಂತೆ ತಿಳಿಹೇಳಿದರು. ನಂತರ ನಾವದನ್ನು ಅದರಷ್ಟಕ್ಕೆ ಬಿಟ್ಟುಬಿಟ್ಟೆವು.

ಅಂದು ಕಳೆದ ರಾತ್ರಿ ಅವಿಸ್ಮರಣೀಯವಾಗಿತ್ತು. ಶೃಂಗದ ಮೇಲಿರುವ ಮಳೆಕಾಡಿನ ನಡುವೆ ತೊರೆಯೊಂದು ಹರಿಯುವ ಸ್ಥಳದಲ್ಲಿ ನಾವು ಡೇರೆ ಹಾಕಿದ್ದೆವು. ರಾತ್ರಿ 12ರ ಸುಮಾರಿಗೆ ಡೇರೆ ಬಳಿ ಏನೋ ಸುಳಿದಾಡಿದಂತೆ. ಎಲ್ಲರೂ ಹೆದರಿ ದೊಡ್ಡ ದೊಡ್ಡ ಕಣ್ಣು ಮಾಡಿ ಕುಳಿತಿದ್ದರು. ಹತ್ತು ನಿಮಿಷ ಹಾಗೆ ಕುಳಿತ ಬಳಿಕ, ಉಮಾನಾಥ್ ಧೈರ್ಯ ಮಾಡಿ ಡೇರೆಯಿಂದ ತಲೆ ಹೊರಗೆ ಹಾಕಿ ಟಾರ್ಚ್ ಬಿಟ್ಟರೆ ಮತ್ತದೇ ಕಾಡುಕೋಣ! ನಂತರ ಶುರುವಾಯ್ತು ಒಂದೊಂದೇ ಸದ್ದು. ಅಲ್ಲೊಂದು ಕೂಗು, ಇಲ್ಲೊಂದು ಚೀರಾಟ, ಮತ್ತೆ ಆ ಕಡೆ ಎಲ್ಲೋ ಘರ್ಜನೆ, ಅದರ ಬಳಿಕ ಊಳಿಡುವ ಸದ್ದು. ರಾತ್ರಿ 12.30ರಿಂದ ಮುಂಜಾನೆ 4ರ ವರೆಗೆ ವಿವಿಧ ಸದ್ದುಗಳು. ಅದ್ಯಾವ ಪ್ರಾಣಿ, ಇದ್ಯಾವ ನಿಶಾಚರಿ ಪಕ್ಷಿ ಎಂದು ನಿದ್ರೆ ಮರೆತು ಮಾತನಾಡುತ್ತ ಕಾಲ ಕಳೆದೆವು. ಮುಂಜಾನೆ 5ರ ನಂತರ ಶುರುವಾಯಿತು ಹಕ್ಕಿಗಳ ಕಲರವ. ಶಾಮನ ಇಂಪಾದ ಸೀಟಿ ಹೊಡೆತದಿಂದ ಆರಂಭವಾದ ಹಕ್ಕಿ ಪಕ್ಕಿಗಳ ಇಂಚರದ ನಡುವೆ ನಮ್ಮ ಮುಂಜಾನೆಯ ಕೆಲಸಗಳು ನಡೆದಿದ್ದವು.

ಡೆಸೆಂಬರ್ 2006ರಂದು ಮತ್ತೆ ಹೊರಟೆವು ಕುದುರೆಮುಖಕ್ಕೆ. ಕಳೆದೆರಡು ವರ್ಷಗಳಿಂದ ಕುದುರೆಮುಖದಲ್ಲಿ ಚಾರಣಕ್ಕೆ ಅವಕಾಶವಿರಲಿಲ್ಲವಾದ್ದರಿಂದ ಮತ್ತು ತೊಳಲಿಯಲ್ಲಿ ವಾಸವಿದ್ದ ಜನರನ್ನು ಖಾಲಿ ಮಾಡಿಸಿದ್ದರಿಂದ, ಜನ ಮತ್ತು ಸಾಕುಪ್ರಾಣಿಗಳ ಸಂಚಾರವಿಲ್ಲದೆ, ಕೆಲವು ಕಾಡುಪ್ರಾಣಿಗಳು ಕಾಣಬಹುದು ಮತ್ತು ಹುಲಿಯ ಎಟ್ಲೀಸ್ಟ್ ಪಗ್ಮಾರ್ಕ್ ಆದರೂ ನೋಡಲು ಸಿಗಬಹುದು ಎಂದು ಆಸಕ್ತಿಯಿಂದಲೇ ಹೊರಟೆವು. ಆದರೆ ಅರಣ್ಯ ಇಲಾಖೆ ನಮಗೆ ಶೃಂಗದಲ್ಲಿ ರಾತ್ರಿ ಕಳೆಯಲು ಅವಕಾಶವನ್ನು ನೀಡಲೇ ಇಲ್ಲ.

ನಮ್ಮಲ್ಲೊಬ್ಬರಿದ್ದಾರೆ ರಾಘವೇಂದ್ರ ಎಂದು. 50ರ ಆಸುಪಾಸಿನ ವಯಸ್ಸಿನ ಬ್ರಹ್ಮಚಾರಿ. ಒಬ್ಬರೇ ಎಲ್ಲೆಲ್ಲೋ ಚಾರಣಗೈಯುವುದು ಕಳೆದ 25 ವರ್ಷಗಳಿಂದಲೂ ಇವರ ಹವ್ಯಾಸ. 20 ವರ್ಷಗಳ ಹಿಂದೆ ಕುದುರೆಮುಖದ ಮಳೆಕಾಡೊಂದರಲ್ಲಿ ಕೇವಲ 30ಅಡಿ ದೂರದಲ್ಲಿ ಹುಲಿ ಕಂಡ ಅದೃಷ್ಟ ಇವರದ್ದು. ಅದನ್ನು ನಮಗೆ ಹೇಳಿ ಹೇಳಿ ಹೊಟ್ಟೆ ಉರಿಸುವುದು ಅವರಿಗೆ ಟೈಮ್ ಪಾಸ್. ಐದಾರು ವರ್ಷಗಳ ಹಿಂದೆ ಕವಲೇದುರ್ಗಕ್ಕೆ ತೆರಳಿದಾಗ ಪ್ರಥಮ ದ್ವಾರದಲ್ಲೇ ಹುಲಿ ಅರ್ಧ ತಿಂದು ಹೋಗಿದ್ದ ದನದ ಶವವೊಂದು ಇವರನ್ನು ಸ್ವಾಗತಿಸಿತ್ತು.

ಅದೊಂದು ದಿನ 'ಚಿರತೆ(ಚಿಟ್ಟೆ ಹುಲಿ)ಯೊಂದು ತನ್ನೆರಡು ಮರಿಗಳೊಂದಿಗೆ ಇಲ್ಲೇ ಅಲೆದಾಡುತ್ತಿದೆ' ಎಂದು ಆಗುಂಬೆಯಿಂದ ಫೋನ್ ಬಂದಾಗ ಆ ಶನಿವಾರ ರಾತ್ರಿ 10ಕ್ಕೆ ರಾಜೇಶ್ ನಾಯಕ್ (ನಾನಲ್ಲ) ರವರ ಕ್ವಾಲಿಸ್ ವಾಹನದಲ್ಲಿ ಹೊರಟೆವು. ರಾತ್ರಿ ಘಟ್ಟದಲ್ಲಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ರಸ್ತೆ ಬದಿಯಲ್ಲೇ ಈ ಚಿರತೆ ಮತ್ತದರ ಮರಿಗಳನ್ನು ನೋಡಿದವರಿದ್ದರು. 'ಲೆಟ್ಸ್ ಗೆಟ್ ಲಕ್ಕಿ' ಎಂದು ನಾವೂ ರಾತ್ರಿ ಹೊರಟೆವು. ಘಟ್ಟದ ಕೆಳಗಿರುವ ಸೋಮೇಶ್ವರದಿಂದ ಮೇಲೆ ಆಗುಂಬೆ ತನಕ ನಂತರ ಮರಳಿ ಕೆಳಗೆ ಸೋಮೇಶ್ವರಕ್ಕೆ ಹೀಗೆ 7 ಬಾರಿ ಘಟ್ಟ ಹತ್ತಿ ಕೆಳಗಿಳಿದೆವು. ರಾತ್ರಿ 11.30ರಿಂದ ಬೆಳಗ್ಗಿನ ಜಾವ 3.30ರವರೆಗೆ ಇದೇ ಕೆಲಸ. ಸೋಮೇಶ್ವರ ಟು ಆಗುಂಬೆ ಮತ್ತೆ ಆಗುಂಬೆ ಟು ಸೋಮೇಶ್ವರ. ಆದರೂ ಆ ಚಿರತೆ ಕಾಣಸಿಗಲಿಲ್ಲ. ನಿರಾಸೆಯಿಂದ ಉಡುಪಿಗೆ ಹಿಂತಿರುಗಿದೆವು. ನಾವು ಹಿಂತಿರುಗಿದ ಕೇವಲ ಅರ್ಧ ಗಂಟೆಯ ಬಳಿಕ ಅಂದರೆ 4 ಗಂಟೆಗೆ ಘಟ್ಟದ 12ನೇ ತಿರುವಿನ ಬಳಿ ಆ ಚಿರತೆ ತನ್ನೆರಡು ಮರಿಗಳೊಂದಿಗೆ 20 ನಿಮಿಷ ಕುಳಿದಿತ್ತು ಎಂದು ಮರುದಿನ ತಿಳಿದಾಗ ಆದ ನಿರಾಸೆ...

ಕಳೆದ ವರ್ಷ ಬೆಂಗಳೂರಿನಿಂದ ಗೆಳೆಯ ರಾಘವೇಂದ್ರ ಮತ್ತು ಗೌರಿ ಕೂಡ್ಲುಗೆ ಬಾ ಎಂದು ಕರ್ಕೊಂಡು ಹೋದಾಗ, ಎಷ್ಟೋ ಸಲ ಕೂಡ್ಲುಗೆ ಹೋಗಿದ್ದೇನೆ ಎಂದು ಕ್ಯಾಮರಾ ಒಯ್ಯಲಿಲ್ಲ. ನಂತರ ಸಮಯವಿದ್ದುದರಿಂದ ಆಗುಂಬೆಗೆ ತೆರಳಿದೆವು. ನಾಲ್ಕನೇ ತಿರುವಿನಲ್ಲಿ ಅಪರೂಪದ 'ಲಯನ್ ಟೇಯ್ಲ್ಡ್ ಮಕ್ಯಾಕ್' ಜಾತಿಯ ಮಂಗ ರಸ್ತೆ ಬದಿಯಲ್ಲೇ ಕೂತಿತ್ತು, ನಾನು ಆ 'ಲಯನ್ ಟೇಯ್ಲ್ಡ್ ಮಕ್ಯಾಕ್' ಮಂಗವನ್ನು ನೋಡಿ ಸಂತೋಷದಿಂದ ಕೂಗಾಡಿದ ಪರಿ ನೋಡಿ ಗಾಬರಿಗೊಂಡ ಗೌರಿ, ಧಡಕ್ಕನೆ ಬೊಲೇರೊ ನಿಲ್ಲಿಸಿಬಿಟ್ಟಳು. ನಿಧಾನವಾಗಿ ನಮ್ಮಲ್ಲಿ ಬಂದ ಆ ಮಂಗ, ಒಳಗೆ ಮೂತಿ ತೂರಿ ಏನಾದರೂ ತಿನ್ನಲು ಸಿಗುತ್ತೋ ಎಂದು ಮುದ್ದಾಗಿ ಕೈ ಚಾಚುತ್ತಿತ್ತು. ದಷ್ಟಪುಷ್ಟವಾಗಿ ಬೆಳೆದ, ಆರೋಗ್ಯಕರ ಯುವ ಗಂಡು ಮಂಗ. ಅದು ಎಷ್ಟು ಸುಂದರವಾಗಿತ್ತೆಂದರೆ ಸುಮಾರು ೧೦ ನಿಮಿಷ ನೋಡುತ್ತ ನಿಂತೆವು. ಎಲ್ಲಿ ಸಿಗುತ್ತೆ 'ಲಯನ್ ಟೇಯ್ಲ್ಡ್ ಮಕ್ಯಾಕ್' ನೋಡಲು? ನಮ್ಮ ಅದೃಷ್ಟ. ಅದರಲ್ಲೂ ವರ್ಷಕ್ಕೆ ಒಂದೆರಡು ಚಾರಣ ಮಾಡುವ ಗೌರಿ ಮತ್ತು ರಾಘವೇಂದ್ರ ಇಬ್ಬರದ್ದಂತೂ ನಸೀಬು. ಆದರೇನು? ಆ ದಿನ ನಾನು ಕ್ಯಾಮಾರಾನೇ ಒಯ್ದಿರಲಿಲ್ಲ. ನಂತರ ಇದುವರೆಗೂ ನಮ್ಮಲ್ಲಿ ಯಾರಿಗೂ ಆ ಮಂಗ ಕಾಣಸಿಕ್ಕಿದ್ದಿಲ್ಲ.

ಇತ್ತೀಚೆಗೊಂದು 'ಟೈಗರ್ ಅಟ್ಯಾಕ್' ಎಂಬ ಸಣ್ಣ ವಿಡಿಯೋ ಅಂತರ್ಜಾಲದಲ್ಲಿ ಎಲ್ಲರಿಗೂ ಫಾರ್ವರ್ಡ್ ಆಗ್ತಾ ಇದೆ. ಅದ್ಭುತವಾದ ವಿಡಿಯೋ. ಹುಲಿ ಅದ್ಯಾವ ಮಟ್ಟಕ್ಕೆ ಹೋಗಬಲ್ಲದು ವ್ಯಗ್ರವಾಗಿದ್ದರೆ ಎಂದು ತಿಳಿಯುವುದು ಈ ವಿಡಿಯೋ ನೋಡಿದರೆ. ಇದನ್ನು ನೋಡಿಯೇ ಹುಲಿ ಅಷ್ಟು ಎತ್ತರಕ್ಕೆ ಹಾರಬಲ್ಲುದು ಎಂದು ತಿಳಿದುಕೊಂಡೆ. 'ಯು ಟ್ಯೂಬ್' ನಲ್ಲಿ 'tiger attack' ಎಂದು ಹುಡುಕಾಡಿದರೆ ಈ ವಿಡಿಯೋ ಸಿಗುತ್ತೆ.


ಆಶಾವಾದಿಗಳಾಗಿ ಇದ್ದೇವೆ, ಯಾವಾಗಾದರೂ ಒಂದು ಚಿರತೆ ಅಥವಾ ಹುಲಿ ಎಲ್ಲಾದರೂ ಕಾಣಸಿಗಬಹುದು ಎಂದು...ಅಫ್ ಕೋರ್ಸ್ ಅವುಗಳನ್ನು ಅಷ್ಟರವರೆಗೆ ಬದುಕಲು ಬಿಟ್ಟರೆ ಮಾತ್ರ!

12 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ಹ್ಹ ಹ್ಹ ಹ್ಹಾ... ನಿಮ್ಮ ಹುಚ್ಚು ಸಿಕ್ಕಾಪಟ್ಟೆ ಚೆನ್ನಾಗಿದೆ.. ಇಂಟರೆಸ್ಟಿಂಗ್.. ಹುಚ್ಚು ಮನದ ಲಹರಿಯ ಜೊತೆಗೆ ವಿಷಯ ಸಂಪನ್ನತೆಯನ್ನ ಸೇರಿಸಿ ನೇಯ್ದ ಬರವಣಿಗೆ. ಓದಲು ಖುಷಿಯೆನಿಸುತ್ತದೆ. ಅಡಿಗ ಸರ್ ಅವರ ನರ್ತನವಂತೂ ಎಕ್ಸಲೆಂಟ್.

ಇಡೀ ಪ್ರಪಂಚವೇ ಪ್ರಕೃತಿಯನ್ನ ಮಣಿಸಿಯೇ ತೀರುತ್ತೇನೆ ಅಂತ ಹೊರಟರೂ, ಜಯಶಾಲಿಯಾಗುವುದು ಅವಳೇ, ಪ್ರಕೃತಿಯೇ.. ನಿಮಗೆ (ಬಹುಶಃ ನನಗೂ ಕೂಡ) ಖಂಡಿತ ಹುಲಿ,ಚಿರತೆ ಮತ್ತು ಇತರ ವನ್ಯಜೀವಿಗಳು ನಿಸರ್ಗದ ಮಡಿಲಲ್ಲೇ ನೋಡಲು ಕಾಣಸಿಗುತ್ತವೆ. ಅಂತ ಅವಕಾಶಗಳು ಹೆಚ್ಚಿಗೆಯಾಗಲಿ ಅಂತ ಆಶಿಸುತ್ತೇನೆ.

ರಾಜೇಶ್ ನಾಯ್ಕ ಹೇಳಿದರು...

ಸಿಂಧು,

ಮೆಚ್ಚುಗೆಗೆ ಧನ್ಯವಾದಗಳು.

ಪ್ರಕೃತಿ ಮಾತೆಯ ಮುಂದೆ ನಾವೆಲ್ಲಿ? ನಮ್ಮೆಲ್ಲಾ ಕೊಳಕನ್ನು ತನ್ನ ಒಡಲಲ್ಲಿ ಬಚ್ಚಿಟ್ಟೂ ನಮ್ಮನ್ನು ಪೋಷಿಸುವ ಅದರ ಮುಂದೆ ನಮ್ಮದೆಲ್ಲ ಗೌಣ.

Annapoorna Daithota ಹೇಳಿದರು...

ಹೌದು... ಈ ಅದೃಷ್ಟ ನಿಮ್ಮೊಂದಿಗೆ ನನಗೂ ಸಿಗಲಿ ಎನ್ನುವ ಸ್ವಾರ್ಥಿ ನಾನೂ ಕೂಡ....
ಬಹಳ ಚೆನ್ನಾಗಿ ಬರೆದಿದ್ದೀರಿ ರಾಜೇಶ್ :)

ರಾಜೇಶ್ ನಾಯ್ಕ ಹೇಳಿದರು...

ಅನ್ನಪೂರ್ಣ,

ಇಂತಹ ವಿಷಯಗಳಲ್ಲಿ ಸ್ವಾರ್ಥಿ ಅಗಿರಲೇಬೇಕು.

Srik ಹೇಳಿದರು...

What a wonderful narration!!

You are one of the lucky guys to have happened to go on such treks, at least.
I found your blog thru thatskannada and happened to read all of the treklogs at a shot.

What a great chance of being in such treks and not to mention your commitment in bringing them to us. Kudos friend.

I'm taking a cue from these blogs and am packing my bags ready for all of these, of cource, one at a time.

Hope its ok with you if I keep pinging you for advice.

ರಾಜೇಶ್ ನಾಯ್ಕ ಹೇಳಿದರು...

ಶ್ರೀಕಾಂತ್ (ಶ್ರಿಕ್ ಅಂದರೆ ಶ್ರಿಕಾಂತ್ ಅಂತ ತಿಳಿದುಕೊಂಡಿರುವೆ),

ತಮ್ಮ ಹೊಗಳಿಕೆಗೆ ಧನ್ಯವಾದಗಳು. ಯಾವಾಗ ಬೇಕಾದರೂ ನನ್ನನ್ನು r26n@yahoo.co.in ಇಲ್ಲಿ ಸಂಪರ್ಕಿಸಿ. ನನಗೆ ಗೊತ್ತಿದಷ್ಟು ಮಾಹಿತಿ ನೀಡುವೆ.

ಮತ್ತೊಮ್ಮೆ ಧನ್ಯವಾದಗಳು.

Shiv ಹೇಳಿದರು...

ರಾಜೇಶ್,

ಹುಲಿ ಹುಚ್ಚು ನಿಮಗೆ ಸರಿ ಹಿಡಿದಿದೆ :)

ಬೇಗ ನಿಮಗೆ ಹುಲಿ ದರ್ಶನ ನೀಡಲಿ !
ಚೆನ್ನಾಗಿದೆ ನಿಮ್ಮ ಹುಲಿ ಹುಡುಕಾಟದ ಪರಿ

ರಾಜೇಶ್ ನಾಯ್ಕ ಹೇಳಿದರು...

ಶಿವ್,
ನೀವಂದಂತೆ ಆದರೆ ನನ್ನ ಭಾಗ್ಯ.

Srik ಹೇಳಿದರು...

ಹೌದು. ಶ್ರಿಕ್ ಎಂದ್ರೆ ಶ್ರೀಕಾಂತ್.
ತಮ್ಮ ರೆಪ್ಲೈ ಗಾಗಿ ಧನ್ಯವಾದಗಳು.

ಅನಾಮಧೇಯ ಹೇಳಿದರು...

Hi rajesh,


tumba chennagi bardidderi, atuyuttama baraha,.

hoda varsha kabini alli, 'chirate" nodidvi, adu rasteya pakkadalle.. gadi tumba bega odisidare nayi ankondu hoguva ashtu hatradalli..

anda hage kamataru yawa cameradalli aa pictures na togondiddu ???


Cheers
Chinmay bhat

ರಾಜೇಶ್ ನಾಯ್ಕ ಹೇಳಿದರು...

ಚಿನ್ಮಯ,

ನಿಮ್ಮ ಅದೃಷ್ಟ ಕಣ್ರೀ, ಚಿರತೆ ನೋಡ್ಲಿಕ್ಕೆ ಸಿಕ್ತು ನಿಮ್ಗೆ.
ಕಾಮತರು ಒಬ್ಬ ವೃತ್ತಿಪರ ಫೋಟೋಗ್ರಾಫರ್. ಅದ್ಯಾವುದೋ ಹೈ ಎಂಡ್ ಡಿಜಿಟಲ್ ಕ್ಯಾಮರಾವನ್ನು ಅವರು ಬಳಸುತ್ತಾರೆ.

ಅನಾಮಧೇಯ ಹೇಳಿದರು...

ರಾಜೇಶ್ ಸಾರ್,
ನಿಮ್ಮ ಬ್ಲಾಗ್ ಓದ್ತಾ ಇದ್ರೆ ಪ್ರಪಂಚನೆ ಮರೆತು (ಮರಹತ್ತಿ) ಹೋಗತ್ತೆ. ಬೆಂಗಳೂರು ಬಿಟ್ಟು ಬಂದ್ಬಿಡ್ಲ ಅನ್ಸುತ್ತೆ. ಎನ್ಮಾಡೊದು ಹೊಟ್ಟೆಪಾಡು.
ನಾಗರಹೊಳೆ ಅಭಯಾರಣ್ಯದಲ್ಲಿ ಹುಲಿರಾಯನ ದರ್ಶನ ನಮ್ಗಾಗಿತ್ತು. ನಿಜ್ವಾಗ್ಲು ಸಾರ್ ಕಾಡಿನ ಹುಲಿ ಅಂದ್ರೆ ಅಬ್ಬ !! ರುದ್ರ ಭಯಂಕರನೆ. ಅದರ ಆಕಾರ ದೂರದಿಂದಲೆ ಭಯ ಹುಟ್ಟಿಸುತ್ತಿತ್ತು. ಕಡವೆಯನ್ನು ಭೇಟೆಯಾಡುವುದಕ್ಕೆ ಹೊಂಚು ಹಾಕ್ತಾ ಇದ್ದಾಗ ಆ ಕಡವೆ ತನ್ನ ಮರಿಯೊಂದಿಗೆ ಕೂಗಿಕೊಂಡ ಸದ್ದು ನಮ್ಮ ಗೈಡ್ ಮಹಶಯನಿಗೆ ಸುಳಿವು ದೊರೆಯಿತು. ಸುಮಾರು ೧೫೦ ಅಡಿ ದೂರದಲ್ಲಿದ್ದ ಹುಲಿಯನ್ನು ನನ್ನ ವಿಡಿಯೋ ಕ್ಯಾಮೆರದಲ್ಲಿ ಸೆರೆ ಹಿಡಿದಿದ್ದೇನೆ. ಸುಮಾರು ೧೫ ನಿಮಿಷಗಳ ಕಾಲ ಅಲ್ಲೆ ಅಡ್ಡಾಡಿ ಮಲಗಿ ಎದ್ದು ಒಮ್ಮೆ ಹೊರಬಂದು ಮತ್ತೆ ಪೊದೆಯೊಳಗೆ ಮರೆಯಾಗಿ ಬೇಟೆಯಾಡಲು ಅದು ಹೊಂಚು ಹಾಕುತ್ತಿದ್ದ ಪರಿ ಓಹ್! ಆದರೆ ನಿಧಾನವಾಗಿ ತನ್ನ ಮರಿಯನ್ನು ಕರೆದು ಕೊಂಡು ಹೊರಟ ಕಡವೆ, ಹುಲಿ ಕೂಡ ನಮ್ಮಿಂದ ಮರೆಯಾಗುವಂತೆ ಮಾಡಿತು. ಮಾರ್ಗದರ್ಶಕ ಅದೆಶ್ಟು ಖುಷಿಯಾಗಿದ್ದ ಅಂದ್ರೆ, ಸಾರ್ ಕಳೆದ ೨ ವರ್ಷದಿಂದ ಹುಲಿ ಕಾಣಿಸಿರ್ಲಿಲ್ಲ ಸಾರ್! ಅಂತ ಕುಣಿದಾಡ್ತ ಇದ್ದ. ನಮ್ಮ ಅನುಭವ ಕೇಳಿದ ಕೆಲವು ಪ್ರವಾಸಿಗರು ಮತ್ತು ಅರಣ್ಯಾಧಿಕಾರಿಗಳು ನಾವು ಹೇಳಿದ ಜಾಗಕ್ಕೆ ತಕ್ಷಣವೇ ಹೊದರು ಅವರಿಗೆ ಅದು ಕಾಣಸಿಗಲಿಲ್ಲ.