ಮಂಗಳವಾರ, ಡಿಸೆಂಬರ್ 26, 2006

ಕುದುರೆಮುಖ


ಈ ಬಾರಿಯ ಚಾರಣ ಕುದುರೆಮುಖಕ್ಕೆ. ಈಗ್ಗೆ ೧೫ ದಿನಗಳ ಹಿಂದೆ ಕುದುರೆಮುಖದಲ್ಲಿ ಚಾರಣಕ್ಕೆ ತೆರಳಲು ಅನುಮತಿಯನ್ನು ನೀಡಲು ಶುರುಮಾಡಿದ್ದರು. 2 ವರ್ಷಗಳಿಂದ 'ನಕ್ಸಲೈಟ್' ಎಂಬ ಶಬ್ದವನ್ನು ಮುಂದಿಟ್ಟು ಚಾರಣಕ್ಕೆ ಅನುಮತಿ ನೀಡಲಾಗುತ್ತಿರಲಿಲ್ಲ. 23 ಡಿಸೆಂಬರ್ ರಾತ್ರಿ ೭.೩೦ಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮೊದಲಿರುವ ಕೊನೆಯ ಮನೆಯಾಗಿರುವ ರಾಜಪ್ಪ ಗೌಡರ ಮನೆ ತಲುಪಿ ಅಲ್ಲೇ ರಾತ್ರಿ ಕಳೆದು, ಮರುದಿನ ಮುಂಜಾನೆ ೯.೦೦ಕ್ಕೆ ಕೆಪೀಕ್(ಕುದುರೆಮುಖ ಪೀಕ್)ಗೆ ಚಾರಣ ಆರಂಭ. ರಾಜಪ್ಪ ಗೌಡರ ಮನೆಯಿಂದ ಕೆಪೀಕ್ 8ಕಿಮಿ ದೂರ.

3 ಕಿಮಿ ಕ್ರಮಿಸಿದ ಬಳಿಕ ಸಿಗುವುದು ಲೋಬೊನ ಮನೆ. ರಾಷ್ಟ್ರೀಯ ಉದ್ಯಾನ ಆಗುವ ಮೊದಲು ಲೋಬೊ ಇಲ್ಲಿದ್ದ. ನಂತರ ಬೆಳ್ತಂಗಡಿಗೆ ತನ್ನ ಸಂಸಾರವನ್ನು 'ಶಿಫ್ಟ್' ಮಾಡಿದ. ಲೋಬೊ ಅಣ್ಣ ತಮ್ಮಂದಿರ ಪಾಳುಬೀಳುತ್ತಿರುವ ೩ ಮನೆಗಳಿಲ್ಲಿವೆ. ಚಾರಣಿಗರು ರಾತ್ರಿ ಇಲ್ಲಿ ತಂಗುವುದು ಸಾಮಾನ್ಯ. ತಂಡದ 3 ಸದಸ್ಯರು ಬಹಳ ಹಿಂದೆ ಇದ್ದ ಕಾರಣ, ಅವರು ಬರುವುದನ್ನು ಖಾತ್ರಿಗೊಳಿಸಿದ ಮೇಲೆ ತಾವು ಬರುತ್ತೇವೆ ಎಂದು ಜಗದೀಶ್ ಹಾಗೂ ಶತ್ರುಘ್ನ 3ನೇ ಲೋಬೊ ಮನೆ ಬಳಿ ನಿಂತರೆ ಉಳಿದವರು ಮುನ್ನಡೆದೆವು.

ಲೋಬೊ ಮನೆಯ ಬಳಿಕ ಸಿಗುವುದೇ ಕಠಿಣ ಚಡಾವು ಇರುವ ಏರು ಹಾದಿ. ಈ ಬೆಟ್ಟದ ಮೇಲೆ ತಲುಪಿದ ಬಳಿಕ ಹಿಂತಿರುಗಿ ನೋಡಿದರೆ, ಜಗದೀಶ್ ಹಾಗೂ ಶತ್ರುಘ್ನ ಬಂದ ದಾರಿಯಲ್ಲಿ ವಾಪಾಸು ಓಡುತ್ತಿದ್ದರು!

ಲೋಬೊ ಮನೆಗಳು ಸಿಗುವ ಸ್ವಲ್ಪ ಮೊದಲು ಕವಲೊಡೆಯುವ ಹಾದಿಗೆ 'ನಾವೂರು ಕ್ರಾಸ್' ಎಂದು ಹೆಸರು. ಇಲ್ಲಿ ನೇರವಾಗಿ ನಡೆದರೆ ಕೆಪೀಕ್. ಎಡಕ್ಕೆ ತಿರುಗಿ ಸ್ಪಷ್ಟವಾಗಿ ಕಾಣುವ ಕಾಲುಹಾದಿಯಲ್ಲಿ ತೆರಳಿದರೆ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಸಮೀಪವಿರುವ ನಾವೂರಿಗೆ ೬-೭ ಕಿಮಿ. ಕೆಪೀಕ್-ಗೆ ತೆರಳುವ ಕಾಲುಹಾದಿಗಿಂತ ನಾವೂರಿಗೆ ತೆರಳುವ ಹಾದಿ ಸ್ಪಷ್ಟವಾಗಿ ಕಾಣುತ್ತಿದ್ದರಿಂದ ಪ್ರಥಮ ಬಾರಿ ಕೆಪೀಕ್-ಗೆ ಬರುತ್ತಿದ್ದ ನಿಶಾಂತ್ ನಾವೂರಿನ ದಾರಿಯಲ್ಲಿ ತೆರಳಿದರು. ನಿಶಾಂತ್-ಗಿಂತ ಒಂದೆರಡು ನಿಮಿಷ ಹಿಂದಿದ್ದ ಗುರುದತ್ ಮತ್ತು ನಿಹಾಲ್, ಸರಿಯಾದ ದಾರಿಯಲ್ಲಿ ಬಂದರು. ೩ನೇ ಲೋಬೊ ಮನೆ ಬಳಿ ಕಾಯುತ್ತಿದ್ದ ಜಗದೀಶ್ ಮತ್ತು ಶತ್ರುಘ್ನ ದೂರದಲ್ಲಿ ಇಬ್ಬರೇ ಬರುತ್ತಿರುವುದನ್ನು ಕಂಡು 'ನಿಶಾಂತ್ ಎಲ್ಲಿ' ಎಂದು ಜೋರಾಗಿ ಕೂಗಿ ಕೇಳಿದಾಗ, 'ಮುಂದೆ ಹೋಗಿದ್ದಾರೆ' ಎಂಬ ಉತ್ತರ ಬಂದಾಗಲೇ ನಿಶಾಂತ್ ದಾರಿ ತಪ್ಪಿದ್ದಾರೆ ಎಂದು ಅವರನ್ನು ಹುಡುಕಲು ವಾಪಾಸು ಬಂದ ದಾರಿಯಲ್ಲೇ ಓಡುವುದನ್ನು ನಾವು 6 ಮಂದಿ ಗಮನಿಸಿದ್ದು ಲೋಬೊ ಮನೆಯ ಹಿಂದಿರುವ ಬೆಟ್ಟದ ಮೇಲಿನಿಂದ. ಸುಮಾರು ೪೫ ನಿಮಿಷಗಳ ಹುಡುಕಾಟದ ಬಳಿಕ ನಿಶಾಂತ್ ನಾವೂರು ಹಾದಿಯಲ್ಲಿ ಬರುವ ಮೊದಲ ಮಳೆಕಾಡಿನ ನಡುವೆ 'ಯಾರೂ ಕಾಣುತ್ತಿಲ್ಲವಲ್ಲ. ಎಲ್ಲಿ ಮಾಯವಾದರು?' ಎಂದು ಯೋಚಿಸುತ್ತ ನಿಂತ ಸ್ಥಿತಿಯಲ್ಲಿ ಸಿಕ್ಕಿದರು.

೩ನೇ ಲೋಬೊ ಮನೆಯ ಹಿಂದಿರುವ 2 ಬೆಟ್ಟಗಳನ್ನು ಹತ್ತಿದರೆ ನಂತರ 3ಕಿಮಿ, ಆಚೀಚೆ ಇರುವ ಅದ್ಭುತ ದೃಶ್ಯವನ್ನು ಕಣ್ತುಂಬ ನೋಡಿ, ಸವಿದು ನಿಧಾನ ನಡೆಯುವ ಸುಲಭದ ಹಾದಿ. ಈ ೩ ಕಿಮಿ ದೂರದ ಚಾರಣ, ಕುದುರೆಮುಖ ಶ್ರೇಣಿಯ ಅದ್ಬುತ ಸೌಂದರ್ಯವನ್ನು ಕಣ್ಣಿಗೆ ಕುಕ್ಕುವಂತೆ ಪ್ರದರ್ಶಿಸುತ್ತದೆ. ಎಲ್ಲಾ ದಿಕ್ಕುಗಳಲ್ಲೂ ಬೆಟ್ಟ ಶ್ರೇಣಿಗಳು, ಕಣಿವೆಗಳು, ಮಳೆಕಾಡುಗಳು. ಕೊನೆಯ ೧.೫ ಕಿಮಿ ಹಾದಿ ಕೆಪೀಕ್-ನ 'ರಿಡ್ಜ್' ಮೇಲೆ ನಡೆದು ಹೋಗುವ ದಾರಿ. ಈ ೧.೫ಕಿಮಿ ಹಾದಿಯುದ್ದಕ್ಕೂ ಕಾಣುವ ದೃಶ್ಯ ರಮಣೀಯ. ಯಾಕೆ 'ಕುದ್ರೆಮುಖ ಇಸ್ ಎ ಗಿಫ್ಟೆಡ್ ಪ್ಲೇಸ್, ವಿ ಶುಡ್ ಸೇವ್ ಇಟ್' ಎನ್ನುತ್ತಾರೆ ಎಂದು ಇಲ್ಲಿ ಭೇಟಿ ನೀಡಿದರೆ ತಿಳಿಯುತ್ತದೆ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Hi naanobba vaidya(Surgeon). Naaneega Japan nalli iddene. Yelle idru namma Karnaatakavannu bahala miss maadkotini,especially when abroad. nimma fotos na nodi tusu khushiyaaytu, u guys must have had a great time over there.. Hope i too get more time in life in the future - Karnaatakavannu chennagi sutthhalikke... keep trekking and enjoy.

ರಾಜೇಶ್ ನಾಯ್ಕ ಹೇಳಿದರು...

ಅನಾಮಧೇಯ,
ಧನ್ಯವಾದ.