ಮಂಗಳವಾರ, ನವೆಂಬರ್ 07, 2006

'ಹ್ಹಿ ಹ್ಹಿ'ಯ ಶಾಶ್ವತ ನಿರ್ಗಮನ

ಮೊನ್ನೆ ದೀಪಾವಳಿಯಂದು ೪ ದಿನ ರಜಾ ಇದ್ದರೂ ಎಲ್ಲೂ ಚಾರಣ ಮಾಡಲು ಸಾಧ್ಯವಾಗಲಿಲ್ಲ. ಅಲ್ಲಿ ಇಲ್ಲಿ ಹೋಗಬೇಕೆಂಬ 'ಪ್ಲ್ಯಾನ್'ಗಳೆಲ್ಲಾ ಹಾಗೇ ಉಳಿದುಹೋದವು. ಕಾಡು ಮೇಡು ಅಲೆದಾಡುವುದು ಸಾಕು, ಹಬ್ಬದಂದಾದರೂ ಮನೆಯಲ್ಲಿರು ಎಂದು ಮನೆಯಲ್ಲಿ ಅಪ್ಪಣೆ. ೩ ದಿನ ಮನೆಯಲ್ಲೇ ಕೂತು 'ಫುಲ್ ಬೋರ್' ಹೊಡೆಸಿಕೊಂಡು, ನಾಲ್ಕನೇ ದಿನ ಸೋಮವಾರ ೨೩ ಅಕ್ಟೊಬರ್-ರಂದು 'ನಡೀಪ್ಪಾ ಮಾರಾಯ, ಆಗುಂಬೆಗಾದರೂ ಹೋಗಿಬರೋಣು' ಎಂದು ಯಮಾಹ ಏರಿದೆ.

ರಜಾದಿನವಾಗಿದ್ದರಿಂದ 'ಸನ್ ಸೆಟ್ ವ್ಯೂ ಪಾಯಿಂಟ್'ನಲ್ಲಿ ಜನಜಂಗುಳಿ. ಸ್ವಲ್ಪ ಮುಂದೆ ಸಾಗಿ ನೋಡಿದರೆ ಪಡಿಯಾರ್-ನ ಅಂಗಡಿಯಲ್ಲಿ 'ಫುಲ್ ರಶ್'. ತಲೆ ಮೇಲೆತ್ತಿ ನೋಡಲು ಕೂಡಾ ಪುರುಸೊತ್ತಿಲ್ಲದೆ, ಚಟ್ಟಂಬಡೆ ಕರಿಯಲು ಬಿಡುತ್ತಾ, ಜನ ಹೆಚ್ಚಾದಂತೆ ಹಾಲಿಗೆ ಇನ್ನಷ್ಟು ನೀರು ಬೆರೆಸುತ್ತಾ ಚಹಾ/ಕಾಫಿ/ಕಷಾಯ ಮಾಡುವುದರಲ್ಲಿ ಪಡಿಯಾರ್ ಮಗ್ನನಾಗಿದ್ದ. ಸ್ವಲ್ಪ ಸಮಯದ ಬಳಿಕ ನನ್ನನ್ನು ನೋಡಿ 'ಅರೆ ನಾಯ್ಕ್ರೆ, ಯಾವಾಗ ಬಂದ್ರಿ? ಬಹಳ ಜನ ಇವತ್ತು' ಎಂದು ಮತ್ತೆ ತನ್ನ ಕಾಯಕದಲ್ಲಿ ನಿರತನಾದ. ನನ್ನ ಕಣ್ಣುಗಳು 'ಹ್ಹಿ ಹ್ಹಿ' ಯನ್ನೇ ಹುಡುಕುತ್ತಿದ್ದವು. ವಿಪರೀತ ಜನಜಂಗುಳಿಯಿದ್ದರೆ 'ಹ್ಹಿ ಹ್ಹಿ'ಗೆ ಸಂಭ್ರಮ - ತಿನ್ನಲು ಹೆಚ್ಚು ಸಿಗತ್ತದೆಂದು. ಆತ ಎಲ್ಲೂ ಕಾಣುತ್ತಿರಲಿಲ್ಲ.

ಹಾಗೆ ಮುಂದಿರುವ 'ಚೆಕ್-ಪೋಸ್ಟ್' ದಾಟುವಾಗ ಅಲ್ಲಿನ ಸಿಬ್ಬಂದಿ ಹೊಸಬರಾಗಿದ್ದರಿಂದ ಅವರಲ್ಲಿ 'ಹ್ಹಿ ಹ್ಹಿ' ಯ ಬಗ್ಗೆ ಕೇಳುವುದು ಸಮಂಜಸವೆನಿಸಲಿಲ್ಲ. ಹಿಂತಿರುಗುವಾಗ ಪಡಿಯಾರ್-ಗೆ ಕೆಲಸದಲ್ಲಿ ಸ್ವಲ್ಪ ಬಿಡುವಾದರೆ ಅವನಲ್ಲೇ ಕೇಳಿದರಾಯಿತು ಎಂದು 'ಗೆಸ್ಟ್-ಹೌಸ್' ಕಡೆಗೆ ತೆರಳಿದೆ. ಮರಳಿ 'ಚೆಕ್-ಪೋಸ್ಟ್' ಬಳಿ ಬಂದಾಗ ಪಡಿಯಾರ್ ವಾಸ್ ಸ್ಟಿಲ್ ಬಿಝಿ. ಆಚೀಚೆ ನೋಡಿದರೆ 'ಹ್ಹಿ ಹ್ಹಿ' ಯ ಪತ್ತೆಯಿಲ್ಲ. ೧೦ ನಿಮಿಷ ಕಾದು ಉಡುಪಿಗೆ ಹಿಂತಿರುಗಿದೆ.

ನವೆಂಬರ್ ೧ ರಂದು ಮತ್ತೊಂದು ರಜೆ, ಹಾಗೇನೇ ಮತ್ತೆ ಆಗುಂಬೆಗೆ ಪಯಣ. ಈ ಬಾರಿ ಪಡಿಯಾರ್ ವಾಸ್ ನಾಟ್ ಬಿಝಿ ಎಟ್ ಆಲ್. ಕೂತು ನೊಣ ಓಡಿಸುತ್ತಿದ್ದ ಪಡಿಯಾರ್ ನನ್ನನ್ನು ನೋಡಿದ ಕೂಡಲೇ 'ಮೊನ್ನೆ ನೀವು ಯಾವಾಗ ಬಂದ್ರಿ, ಯಾವಾಗ ಹೋದ್ರಿ ಅನ್ನೋದೆ ಗೊತ್ತಾಗ್ಲಿಲ್ಲ' ಅನ್ನುತ್ತಾ ತಿನ್ನಲು ನೀಡಿದ. 'ಹ್ಹಿ ಹ್ಹಿ' ಎಲ್ಲಿ ಎಂದು ಕೇಳಲು, 'ಹೋಯ್ತ್ರಿ ಅದು, ತ್ಚ್ ತ್ಚ್ ತ್ಚ್ ಬಹಳ ಮುದ್ದಿನ ನಾಯಿ, ಎಷ್ಟು ಪ್ರೀತಿ ಮಾಡ್ತಿತ್ತು....' ಅಂದಾಗ ಆತ ನೀಡಿದ ತಿಂಡಿಗೆ ಟೇಸ್ಟೇ ಇಲ್ಲವೆನಿಸಿತು. ವರ್ಷಕ್ಕೆ ಕನಿಷ್ಟ ೧೦-೧೨ ಜಾನುವಾರುಗಳನ್ನು ಆಗುಂಬೆಯಲ್ಲಿ ಬಲಿ ತೆಗೆದುಕೊಳ್ಳುವ ಉಡುಪಿಯಿಂದ ಶಿವಮೊಗ್ಗ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಇತ್ಯಾದಿ ಊರುಗಳಿಗೆ ತೆರಳುವ ಮಿನಿ ಬಸ್ಸುಗಳೊಂದಕ್ಕೆ 'ಹ್ಹಿ ಹ್ಹಿ' ಬಲಿಯಾಗಿದ್ದ.

'ಗೆಸ್ಟ್-ಹೌಸ್' ಬಳಿ ತೆರಳಲು ಮನಸಾಗದೆ ಅಲ್ಲಿಂದಲೇ ಉಡುಪಿಗೆ ಹಿಂತಿರುಗಿದೆ. ಪಡಿಯಾರ್, 'ಹ್ಹಿ ಹ್ಹಿ' ಯ ಗೆಳೆಯನಾಗಿದ್ದ ಇನ್ನೊಂದು ನಾಯಿಗೆ 'ಹೆಚ್ ಹಚ್ಯಾ.. ಬದಿಗ್ ನಡಿ, ಯಾವಾಗ್ ನೋಡಿದ್ರು ರಸ್ತೆ ಮಧ್ಯದಲ್ಲೇ ಅಡ್ಡಾಡೋದು... ಮೊನ್ನೆ ಒಬ್ಬ ಹೋದ, ಈಗ ಇಂವ ಹೋಗ್ಲಿಕ್ಕೆ ತಯಾರಿ ಮಾಡ್ತಿದ್ದಾನೆ..ಬದಿಗ್ ಹೋಗ್' ಎಂದು ಬೈಯುತ್ತಾ ಉಳಿದು ಹೋಗಿದ್ದ ಇಡ್ಲಿ ಚೂರುಗಳನ್ನು ಅದಕ್ಕೆ ನೀಡುತ್ತಿದ್ದ.

6 ಕಾಮೆಂಟ್‌ಗಳು:

VENU VINOD ಹೇಳಿದರು...

ರಾಜೇಶ್,
ನಿಜಕ್ಕೂ ಬೇಸರದ ವಿಷಯ ಬರೆದಿದ್ದೀರಿ. ನ್ಯಾಷನಲ್ ಹೈವೇ ಉದ್ದಕ್ಕೂ ದಿನನಿತ್ಯ ಅದೆಷ್ಟೋ ಹಿಹ್ಹಿಗಳು ವಾಹನಗಳ ಅಡಿಗೆ ಸಿಲುಕಿ ಚಿಂದಿಯಾಗುತ್ತಿವೆ. ನಾವೇನಿದ್ದರೂ ಎರಡು ಹನಿ ಕಣ್ಣೀರು ಸುರಿಸಬೇಕಷ್ಟೇ.

ಅನಾಮಧೇಯ ಹೇಳಿದರು...

ರಾಜೇಶ್,
ಹಿ ಹಿ ಹೋದ ವಿಷಯ ತಿಳಿದು ಬಹಳ ದುಖ ಆಯಿತು. ನಮ್ಮ ಮನೆಯ ನಾಯಿಯೂ ಕೂಡ ಮೊನ್ನೆ ಹೀಗೆ ಬಲಿ ಆಯಿತಂತೆ. ಬಹಳ ಬೇಸರದ ಸಂಗತಿ
ತಮ್ಮ ಬ್ಲೋಗ್ ಬಹಳ ಚೆನ್ನಾಗಿ ಮೂಡಿ ಬರ್ತಿದೆ.
ಧನ್ಯವಾದಗಳು.

ವಿಶ್ವನಾಥ ಶೆಟ್ಟಿಗಾರ

ರಾಜೇಶ್ ನಾಯ್ಕ ಹೇಳಿದರು...

ಧನ್ಯವಾದಗಳು ವಿಶ್ವನಾಥ್. ಬ್ಲಾಗ್-ಗೆ ಭೇಟಿ ನೀಡುತ್ತಾ ಇರಿ.
..ರಾಜೇಶ್ ನಾಯ್ಕ.

Annapoorna Daithota ಹೇಳಿದರು...

ನಮಸ್ತೆ,
ದಾರಿಯಲ್ಲಿ ಹೋಗುವಾಗ ಪ್ರಕೃತಿ ಸೌಂದರ್ಯ ಹೆಚ್ಚಿರುವಲ್ಲೆಲ್ಲಾ ನಿಂತು ಅನುಭವಿಸಿ ಹೋಗುವುದು ನನ್ನ ಅಭ್ಯಾಸ. ಅಂತೆಯೇ ನಿಮ್ಮ ಬ್ಲಾಗಿನಲ್ಲಿರುವ ಹಸಿರನ್ನು ನಿಮ್ಮ ಪರವಾನಿಗೆ ಇಲ್ಲದೆ ಸವಿದೆ, ಧನ್ಯಳಾದೆ.

ಹ್ಹಿ ಹ್ಹಿ ಬಗ್ಗೆ....
ಹೀಗೇ... ಜೀವನದಲ್ಲಿ ಕೆಲವೊಂದು ಜೀವಗಳು ಅದು ಹೇಗೋ ಬಹಳ ಆತ್ಮೀಯವಾಗಿಬಿಡುತ್ತವೆ....
ಕಳೆಯುವವರಿಗೆ ಒಂದು ಜೀವ ಹತ್ತೊರೊಡನೆ ಹನ್ನೊಂದು ಅಷ್ಟೆ, ಆದರೆ ಕಳಕೊಂಡವರಿಗೆ !!
ನಿಮ್ಮ ಈ ಹಿಂದಿನ ಬರಹದಲ್ಲಿ `ಹ್ಹಿ ಹ್ಹಿ' ನನಗೂ ಆತ್ಮೀಯವಾಗಿತ್ತು. ಅದರ ದಾರುಣ ಅಂತ್ಯದಿಂದ ಮನಸ್ಸಿಗೆ ತುಂಬಾ ನೋವೆನಿಸಿತು.

ಜೀವ ಶಾಶ್ವತವಲ್ಲ, ಇಂದು ಇದ್ದು ನಾಳೆ ಹೋಗುವಂಥದ್ದು ಆದರೆ ಅದು ಸಹಜವಾಗಿ ಹೋದಾಗಿನ ನೋವಿಗೂ, ಬೇಜವಾಬ್ದಾರಿಯಿಂದ ಅಥವಾ ಬಲವಂತವಾಗಿ ಕಿತ್ತೆಸೆದಾಗಿನ ನೋವಿಗೂ ಬಹಳ ವ್ಯತ್ಯಾಸವಿದೆ.....

ರಾಜೇಶ್ ನಾಯ್ಕ ಹೇಳಿದರು...

ನಮಸ್ತೆ ಅನ್ನಪೂರ್ಣರವರಿಗೆ,

ನಿಮಗೆ ಪರವಾನಿಗೆ ಯಾಕೆ ಬೇಕು ಇಲ್ಲಿರುವ ಹಸಿರನ್ನು ಸವಿಯಲು? ಮನಸಾರೆ ಸವಿಯಿರಿ.

ಹ್ಹಿ ಹ್ಹಿ ಈಗೇನಿದ್ದರೂ ಬರೀ ಫೋಟೊದಲ್ಲಿ ಮಾತ್ರ. ಸಹಜವಾದ ಸಾವು ಮತ್ತು ಬೇಜವಾಬ್ದಾರಿಯಿಂದ ಕಿತ್ತೊಗೆದ ಜೀವ.... ಅರ್ಥಪೂರ್ಣವಾದ ಮಾತನ್ನು ಹೇಳಿದ್ದೀರಾ.

prasca ಹೇಳಿದರು...

ರಾಜೇಶ್ ಸಾರ್,
ಹ್ಹಿ ಹ್ಹಿ ಬಗ್ಗೆ ಓದಿ ತುಂಬಾ ಬೇಜಾರಾಯ್ತು. ಅಭಿವೃದ್ಧಿಯು ಎಶ್ಟೆಲ್ಲ ಅನಾಹುತಗಳಿಗೆ ಎಡೆ ಮಾಡಿಕೊಡ್ತಾ ಇದೆ ಅಲ್ವ? ೨ ತಿಂಗಳ ಹಿಂದೆಯಶ್ಟೆ ನಮ್ಮ ಮನೆಯ ’ಗುಂಡ’ ಪೊಮೆರಿಯನ್ ಔಷದ ಹಾಕ್ತಿವಲ್ಲ ಅನ್ನ ಕೋಪಕ್ಕೆ ಮನೆ ಬಿಟ್ಟು ಹೊದವನು ಮತ್ತೆ ಬರಲೇ ಇಲ್ಲ.
ಮೈಸೂರಿನಿಂದ ಬರುವ ದಾರಿಯಲ್ಲಿ ಅಯ್ಯಪ್ಪ ಭಕ್ತರ ಗಾಡಿಗೆ ಸಿಕ್ಕು ಮೃತಪಟ್ಟ ಎತ್ತು ನನ್ನ ಮನವನ್ನೆ ಕಲಕಿತು. ಛೆ!! ಮುಗ್ಧ ಪ್ರಾಣಿಗಳ ಮಾರಣಹೋಮಕ್ಕೆ ಕೊನೆಯೇ ಇಲ್ಲವೆ?